ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಶಿರಾಡಿ ಘಾಟ್‌ನಲ್ಲಿ ಅಕ್ಕಿ ಸಾಗಾಟದ ಲಾರಿ ಬೆಂಕಿಗಾಹುತಿ, ಪರ್ಕಳದ ಹೆದ್ದಾರಿಯಲ್ಲಿ ಬೈಕ್ ಅಪಘಾತ

Mangaluru News: ಶಿರಾಡಿ ಘಾಟ್‌ನಲ್ಲಿ ಅಕ್ಕಿ ಸಾಗಾಟದ ಲಾರಿ ಬೆಂಕಿಗಾಹುತಿ, ಪರ್ಕಳದ ಹೆದ್ದಾರಿಯಲ್ಲಿ ಬೈಕ್ ಅಪಘಾತ

ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಅಕ್ಕಿ ಸಾಗಾಟದ ಲಾರಿ ಇದು. ಶಿರಾಡಿ ಘಾಟಿಯ ಡಬಲ್ ಟರ್ನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಲಾರಿ ಚಾಲಕ, ಕ್ಲೀನರ್ ಲಾರಿಯನ್ನು ನಿಲ್ಲಿಸಿದ್ದಾರೆ.

ಶಿರಾಡಿ ಘಾಟ್‌ನಲ್ಲಿ ಅಕ್ಕಿ ಸಾಗಾಟದ ಲಾರಿ ಬೆಂಕಿಗಾಹುತಿ, ಪರ್ಕಳದ ಹೆದ್ದಾರಿಯಲ್ಲಿ ಬೈಕ್ ಅಪಘಾತ
ಶಿರಾಡಿ ಘಾಟ್‌ನಲ್ಲಿ ಅಕ್ಕಿ ಸಾಗಾಟದ ಲಾರಿ ಬೆಂಕಿಗಾಹುತಿ, ಪರ್ಕಳದ ಹೆದ್ದಾರಿಯಲ್ಲಿ ಬೈಕ್ ಅಪಘಾತ

ಮಂಗಳೂರು: ಮಂಗಳೂರು ಬೆಂಗಳೂರು ಸಂಪರ್ಕದ ಶಿರಾಡಿ ಘಾಟ್ ನಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಅಕ್ಕಿ ಸಾಗಾಟದ ಲಾರಿಯೊಂದು ಬೆಂಕಿಗಾಹುತಿಯಾಗಿದೆ. ಶಿರಾಡಿ ಘಾಟಿಯ ಡಬಲ್ ಟರ್ನ್ ನಲ್ಲಿ ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಅಕ್ಕಿ ಸಾಗಾಟದ ಲಾರಿ ಇದು. ಶಿರಾಡಿ ಘಾಟಿಯ ಡಬಲ್ ಟರ್ನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಲಾರಿ ಚಾಲಕ, ಕ್ಲೀನರ್ ಲಾರಿಯನ್ನು ನಿಲ್ಲಿಸಿದ್ದಾರೆ. ಕೆಳಗಿಳಿದು, ಬೆಂಕಿ ನಂದಿಸುವ ಪ್ರಯತ್ನಕ್ಕೆ ಉಳಿದ ವಾಹನದವರ ಬಳಿ ಕೋರಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಹಾಸನದಿಂದ ಆಗಮಿಸಿದ ಅಗ್ನಿಶಾಮಕದಳದ ಸಿಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಲಾರಿ ಮತ್ತು ಅದರಲ್ಲಿದ್ದ ಅಕ್ಕಿ ಸಂಪೂರ್ಣ ಸುಟ್ಟುಹೋಗಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಕೆಲ ಹೊತ್ತು ಅಡಚಣೆ ಉಂಟಾಗಿತ್ತು. ಬಳಿಕ ತೆರವು ಕಾರ್ಯಾಚರಣೆ ನಡೆಯಿತು.

ಟ್ರೆಂಡಿಂಗ್​ ಸುದ್ದಿ

ಹಿರಿಯಡ್ಕ: ಬೈಕ್ ಸಹಿತ ಹಣ ಸುಲಿಗೆ ಆರೋಪಿ ಬಂಧನ

ಉಡುಪಿ ಜಿಲ್ಲೆಯ ಹಿರಿಯಡ್ಕ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದಲ್ಲಿ ಬೈಕಿನಲ್ಲಿದ್ದ ವ್ಯಕ್ತಿಯ ಹಣವನ್ನು ಬೈಕ್ ಸಹಿತ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಸೂರಜ್ ಕೋಟ್ಯಾನ್ ಎಂಬಾತನನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಡಬೆಟ್ಟು ಗ್ರಾಮದ ಸಂದೀಪ ನಾಯ್ಕ ಅವರು ಅಕ್ಟೋಬರ್ 17ರಂದು ತನ್ನ ಬೈಕ್ ಅನ್ನು ಕಲ್ಲಂಬೆಟ್ಟು ಸೇತುವೆ ಬಳಿ ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತ ಇಬ್ಬರು ಹಿಂಬದಿಯಿಂದ ಬಂದು ಒಮ್ಮೆಲೆ ಸಂದೀಪ್ ಅವರನ್ನು ದೂಡಿ, ಸುಮಾರು 25 ಸಾವಿರ ರೂ ಮೌಲ್ಯದ ಬೈಕ್ ಅನ್ನು ಅಪಹರಿಸಿದ್ದರು.

ಸೇತುವೆಯಲ್ಲಿ ಕುಸಿದುಬಿದ್ದ ಸಂಚಾರತಡೆ ರಾಡ್: ತಪ್ಪಿದ ಭಾರಿ ಅಪಾಯ

ಬ್ರಿಟಿಷರ ಕಾಲದ ಪಾಣೆಮಂಗಳೂರು ಹಳೆಯ ಸೇತುವೆ ರಸ್ತೆಯಲ್ಲಿ ಬಿರುಕು ಕಂಡ ಕಾರಣ, ಘನಗಾತ್ರದ ವಾಹನಗಳು ಸಂಚಾರ ಮಾಡಬಾರದು ಎಂದು ಹಾಕಲಾಗಿದ್ದ ಕಬ್ಬಿಣದ ತಡೆ ವಾಹನವೊಂದು ಡಿಕ್ಕಿ ಹೊಡೆದು ಶನಿವಾರ ಬೆಳಗ್ಗೆ ಕುಸಿದುಬಿದ್ದಿದೆ.

1914ರಲ್ಲಿ ನಿರ್ಮಿಸಲಾದ ಪಾಣೆಮಂಗಳೂರು ಸೇತುವೆಯ ರಸ್ತೆಯ ಮಧ್ಯ ಭಾಗದಲ್ಲಿ ಸಣ್ಣದಾದ ಬಿರುಕು ಕಂಡ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಲಾರಿ ಸಹಿತ ಇತರ ಘನವಾಹನಗಳು ಸಂಚಾರ ಮಾಡದಂತೆ ಬಂಟ್ವಾಳ ಪುರಸಭೆ ಸೇತುವೆಯ ಎರಡು ಬದಿಗಳಲ್ಲಿ ಕಬ್ಬಿಣದ ಪಿಲ್ಲರ್ ಗಳನ್ನು ಹಾಕಿ ಅದರ ಮೇಲೆ ಅಡ್ಡಲಾಗಿ ರಾಡ್ ಹಾಕುವ ಕಾರ್ಯ ಮಾಡಿತ್ತು. ಆದರೆ ಸೇತುವೆ ಪ್ರವೇಶಕ್ಕೆ ಮೊದಲು ಘನಗಾತ್ರದ ವಾಹನಗಳ ನಿರ್ಬಂಧ ಮಾಡಲಾಗಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದ ಕಾರಣ, ಗೂಡ್ಸ್ ಟೆಂಪೋ ವೊಂದು ಸೇತುವೆಯಲ್ಲಿ ಸಂಚಾರ ಮಾಡಿದ ಸಂದರ್ಭ ರಾಡ್ ಕೆಳಕ್ಕುರಳಿ ಬಿದ್ದಿದೆ. ಅದೃಷ್ಟವಶಾತ್ ರಾಡ್ ಬೀಳುವ ವೇಳೆ ಹಿಂಬದಿಯಿಂದ ವಾಹನವಿಲ್ಲದ ಕಾರಣಕ್ಕಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನದ ಮೇಲ್ಬಾಗ ಡಿಕ್ಕಿಯಾದ ಪರಿಣಾಮ ರಾಡ್ ಕೆಳಗುರುಳಿದೆ. ಈ ಸಂದರ್ಭ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಮತ್ತೆ ರಾಡ್ ನ್ನು ಮೇಲಕ್ಕೆ ಸಿಕ್ಕಿಸಿದ್ದಾರೆ.

ಪರ್ಕಳದಲ್ಲಿ ಹೆದ್ದಾರಿಯಲ್ಲಿ ಬೈಕ್ ಅಪಘಾತ: ಬಾಣಸಿಗ ಮೃತ್ಯುವಶ

ಉಡುಪಿ ಜಿಲ್ಲೆಯ ಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಬಾಣಸಿಗನೋರ್ವ ಸಾವನ್ನಪ್ಪಿದ್ದಾರೆ. ಮೃತ ಯುವಕನನ್ನು ಹಿರಿಯಡ್ಕದ ನಿವಾಸಿ ಅಕ್ಷಯ ಭಟ್ (26) ಎಂದು ಗುರುತಿಸಲಾಗಿದೆ.

ಯುವಕ ಅವಿವಾಹಿತನಾಗಿದ್ದು, ಅಡುಗೆ ವೃತ್ತಿ ಮಾಡಿಕೊಂಡಿದ್ದರು. ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸಾರ್ವಜನಿಕ ಅನ್ನಸಂತರ್ಪಣೆಯ ಅಡುಗೆ ಕೆಲಸ ನಿರ್ವಹಿಸಲು ಮನೆಯಿಂದ ಬರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ: ದೇವರಿಗೆ ಅವಮಾನ ಆಡಿಯೊ ಬಹಿರಂಗ ಮಾಡಿದ ವ್ಯಕ್ತಿಯೇ ಆತ್ಮಹತ್ಯೆಗೆ ಶರಣು

ಎಲಿಷಾ ಎಲಕಪಾಟಿ ಎಂಬವರು ದೇವರಿಗೆ ಅವಮಾನ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಹಿರಂಗ ಮಾಡಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾಗಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರವಾಡದ ಮಾರುತಿ ನಾಯ್ಕ (35) ಸಾವನ್ನಪ್ಪಿದವರು. ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ, ಮಕ್ಕಳು ಹೊರಗೆ ಆಟವಾಡುತ್ತಿದ್ದ ಸಂದರ್ಭ ಮನೆಯಲ್ಲೇ ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಕುರಿತು ಆಡಿಯೊ ಬಹಿದಂಗಗೊಂಡ ಸಂದರ್ಭ ಹಿಂದು ಸಂಘಟನೆಗಳು ಕಾರವಾರದಲ್ಲಿ ಎಲಿಷಾ ಎಲಕಪಾಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ಹಿಂದೂ ಧರ್ಮ, ಹಿಂದೂ ದೇವತೆ ಮತ್ತು ವಾಲ್ಮೀಕಿ ಮಹರ್ಷಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾಗಿ ಆರೋಪಿಸಲಾಗಿತ್ತು.

ಎಲಿಷಾ ಎಲಕಪಾಟಿ ಅವರ ಆಡಿಯೋವನ್ನು ಬಹಿರಂಗಪಡಿಸಿದ್ದಾಗಿ ಹೇಳಲಾದ ಮಾರುತಿ ನಾಯ್ಕ ಅವರೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ಬಂದ ಪತ್ನಿ ಪತಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ನೀಡುವಾಗಲೇ ಮಾರುತಿ ನಾಯ್ಕ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದರು. ಈತ ಕೆಲ ದಿನಗಳಿಂದ ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಹರೀಶ್‌ ಮಾಂಬಾಡಿ)

IPL_Entry_Point