Mysore Dasara2024: ಮೈಸೂರು ದಸರಾ ದೀಪಾಲಂಕಾರಕ್ಕೆ ಮುಂಬೈ, ಕೋಲ್ಕತ್ತಾ, ಚೀನಾ ತಂತ್ರಜ್ಞಾನದ ನೆರವು; ಒಂದು ಸಾವಿರ ಡ್ರೋನ್‌ ಬಳಸಿ ಚಿತ್ರೀಕರಣ-mysore news mysore dasara 2024 illuminations chescom to get china technology 1000 drones to shoot lighting event kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara2024: ಮೈಸೂರು ದಸರಾ ದೀಪಾಲಂಕಾರಕ್ಕೆ ಮುಂಬೈ, ಕೋಲ್ಕತ್ತಾ, ಚೀನಾ ತಂತ್ರಜ್ಞಾನದ ನೆರವು; ಒಂದು ಸಾವಿರ ಡ್ರೋನ್‌ ಬಳಸಿ ಚಿತ್ರೀಕರಣ

Mysore Dasara2024: ಮೈಸೂರು ದಸರಾ ದೀಪಾಲಂಕಾರಕ್ಕೆ ಮುಂಬೈ, ಕೋಲ್ಕತ್ತಾ, ಚೀನಾ ತಂತ್ರಜ್ಞಾನದ ನೆರವು; ಒಂದು ಸಾವಿರ ಡ್ರೋನ್‌ ಬಳಸಿ ಚಿತ್ರೀಕರಣ

Dasara Illuminations ಮೈಸೂರು ದಸರಾದ ದೀಪಾಲಂಕಾರಕ್ಕೆ ಈ ಬಾರಿ ಹೊಸತನ ಹಾಗೂ ಮೆರಗು ನೀಡಲು ಚಾಮುಂಡೇಶ್ವರಿ ವಿದ್ಯುತ್‌ ಕಂಪೆನಿ ಪ್ರಯತ್ನಗಳನ್ನು ಮಾಡುತ್ತಿದೆ.


ಮೈಸೂರು ದಸರಾ ದೀಪಾಲಂಕಾರಕ್ಕೆ ಈ ಬಾರಿ ಇನ್ನಷ್ಟು ಹೊಳಪು ಸಿಗಲಿದೆ.
ಮೈಸೂರು ದಸರಾ ದೀಪಾಲಂಕಾರಕ್ಕೆ ಈ ಬಾರಿ ಇನ್ನಷ್ಟು ಹೊಳಪು ಸಿಗಲಿದೆ. (Manoj Kumar)

ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು. ದಸರಾ ಅವಧಿಯೂ ಸೇರಿದಂತೆ ಸುಮಾರು ಒಂದು ತಿಂಗಳ ಕಾಲ ಇಡೀ ಮೈಸೂರು ನಗರ ದೀಪಧಾರಿಣಿಯಂತೆ ಕಂಗೊಳಿಸುತ್ತದೆ. ವರ್ಷದಿಂದ ವರ್ಷಕ್ಕೂ ಇದರ ಮಹತ್ವ, ಜನಾಕರ್ಷಣೆ ಹೆಚ್ಚುತ್ತಲೇ ಇದೆ. ಪಾರಂಪರಿಕ ಕಟ್ಟಡ, ವೃತ್ತ,ರಸ್ತೆಗಳಲ್ಲಿ ಅಳವಡಿಸುವ ದೀಪದ ಬಗೆಯಿಂದ ಇದು ಆಕರ್ಷಣೀಯ. ಈ ಬಾರಿ ಇನ್ನಷ್ಟು ವಿಭಿನ್ನವಾಗಿ ದೀಪಾಲಂಕಾರ ಆಯೋಜಿಸುವ ಚಟುವಟಿಕೆಗಳು ಶುರುವಾಗಿವೆ. ಚೀನಾದಲ್ಲಿ ದೀಪಾಲಂಕಾರಕ್ಕೆ ಬಳಸುವ ತಂತ್ರಜ್ಞಾನಗಳನ್ನು ಮೈಸೂರು ದಸರಾ ದೀಪಾಲಂಕರಾದಲ್ಲೂ ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವ ಕುರಿತು ತಂಡಗಳು ಪರಿಶೀಲನೆ ನಡೆಯುತ್ತಿದೆ. ಇದರಿಂದ ಖಂಡಿತವಾಗಿಯೂ ದೀಪಾಲಂಕಾರಕ್ಕೆ ಹೊಸ ಹೊಳಪು ಬರಲಿದೆ ಎನ್ನುವ ನಿರೀಕ್ಷೆಯಿದೆ.

ಎರಡು ದಶಕದ ಹಾದಿ

ಯಾವುದೇ ಉತ್ಸವ, ಹಬ್ಬಗಳಲ್ಲಿ ದೀಪಾಲಂಕಾರಗಳಿಗೆ ಈಗ ಎಲ್ಲಿಲ್ಲದ ಮಹತ್ವ. ಮುಂಬೈನ ಗಣೇಶೋತ್ಸವ, ಕೋಲ್ಕತ್ತಾದ ಕಾಳಿ ಉತ್ಸವ ಸಹಿತ ಭಾರತದ ನಾನಾ ಭಾಗಗಳಲ್ಲೂ ಉತ್ಸವಗಳಿಗೆ ಭಾರೀ ದೀಪಾಲಂಕಾರ ಮಾಡಲಾಗುತ್ತಿದೆ. ಇದರಲ್ಲಿ ಮೈಸೂರಿನ ದಸರಾವೂ ಸೇರಿದೆ.

ಎರಡು ದಶಕದ ಹಿಂದೆ ಆರಂಭಗೊಂಡ ದಸರಾ ದೀಪಾಲಂಕಾರವೂ ಈಗ ಹೊಸ ಆಯಾಮಗಳನ್ನ ಪಡೆದುಕೊಳ್ಳುತ್ತಲೇ ಇದೆ. ಮೊದಲೆಲ್ಲಾ ಸಾಮಾನ್ಯ ಬಲ್ಬ್‌ ಬಳಸಲಾಗುತ್ತಿತ್ತು. ನಂತರ ಎಲ್‌ಇಡಿ, ವಿವಿಧ ಆಕಾರದ ಬಲ್ಬ್‌ಗಳ ಬಳಕೆ ಹೆಚ್ಚಿಸಲಾಯಿತು.

ತಂತ್ರಜ್ಞಾನ ಬಳಸಿಕೊಂಡು ವಿವಿಧ ಬಣ್ಣದ ದೀಪಗಳು ಏಕಕಾಲದಲ್ಲಿಯೇ ನೋಡುವಂತೆ ಮಾಡಲಾಯಿತು. ಈಗಲೂ ಅದಕ್ಕೆ ಇನ್ನಷ್ಟು ಹೊಳಪು- ಹೊಸತನ ನೀಡಲಾಗುತ್ತಿದೆ.ʼ

ತಂಡಗಳ ಪ್ರವಾಸ

ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿಯ ಅಧಿಕಾರಿಗಳ ತಂಡವು ಮುಂಬೈ, ಕೋಲ್ಕತ್ತಾಕ್ಕೂ ಭೇಟಿ ನೀಡಿ ಅಲ್ಲಿನ ಸಂಸ್ಥೆಗಳೊಂದಿಗೆ ಚರ್ಚಿಸಿ ಹಲವಾರು ಮಾದರಿಗಳ ದೀಪಗಳು ಹಾಗೂ ತಂತ್ರಜ್ಞಾನದ ವಿವರ ಪಡೆದುಕೊಂಡು ಬಂದಿದೆ. ಇದೇ ರೀತಿ ಚೀನಾದಲ್ಲಿಯೂ ನಡೆದಿರುವ ಹೊಸ ಪ್ರಯೋಗಗಳು ಆಸಕ್ತಿಕರವಾಗಿದ್ದು. ಅಲ್ಲಿನ ಮಾಹಿತಿಯನ್ನೂ ಪಡೆದುಕೊಳ್ಳಲಾಗುತ್ತಿದೆ. ಇದರಿಂದ ದೀಪಾಲಂಕಾರ ಭಾರತ ಮಟ್ಟವಲ್ಲದೇ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುವಂತೆ ಮಾಡುವುದು ಅಧಿಕಾರಿಗಳ ಉದ್ದೇಶ.

ಈ ಕುರಿತು ಕಂಪೆನಿಯ ತಾಂತ್ರಿಕ ನಿರ್ದೇಶಕರಾದ ಮುನಿಗೋಪಾಲರಾಜು ಹೇಳುವಂತೆ, ಮೈಸೂರು ನಗರದ ಮುಖ್ಯ ರಸ್ತೆಗಳು, ವೃತ್ತಗಳು, ಕಟ್ಟಡ ಹಾಗೂ ಪ್ರಮುಖ ಸ್ಮಾರಕಗಳಿಗೆ ದೀಪಾಲಂಕಾರ ಮಾಡುವ ಕುರಿತು ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿಸಭೆ ನಡೆಸಿ ಯೋಜನೆ ಸಿದ್ಧಪಡಿಸಲಾಗಿದೆ.

ವಿಶೇಷವಾಗಿ, ಅಂಬಾವಿಲಾಸ ಅರಮನೆ ಸುತ್ತಲಿನ ಪ್ರದೇಶ, ಚಾಮುಂಡಿ ಬೆಟ್ಟ, ದೊಡ್ಡಕೆರೆ ಮೈದಾನ ಮತ್ತು ಕೆ.ಆರ್. ವೃತ್ತದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ದೀಪಾಲಂಕಾರವನ್ನು ಸ್ಮರಣೀಯವಾಗಿಸಲು ಅವಿರತ ಶ್ರಮಿಸಲಾಗುತ್ತಿದೆ. ಈ ಬಾರಿ ಹೊಸ ತಂತ್ರಜ್ಞಾನ. ಇತರೆ ಕಡೆಯ ಕೆಲ ಮಾದರಿಗಳೂ ಮೈಸೂರು ದಸರಾದಲ್ಲಿ ಕಾಣಬಹುದು.

ಸಿಬ್ಬಂದಿ ಅವಿರತ ತಯಾರಿ

ಇಡೀ ವಿದ್ಯುತ್‌ ದೀಪಾಲಂಕಾರ ದಸರಾಗೆ ಮೆರಗು ನೀಡಬೇಕು. ಮೈಸೂರು ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಮಿಂಚಬೇಕು ಎನ್ನುವ ಸದುದ್ದೇಶದಿಂದಚೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಸರಾ ದೀಪಾಲಂಕಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದಿನನಿತ್ಯದ ಕೆಲಸಗಳ ಜತೆಗೆ ದಸರಾ ದೀಪಾಲಂಕಾರಕ್ಕೂ ಹೆಚ್ಚುವರಿ ಸಮಯ ವ್ಯಯಿಸುತ್ತಿದ್ದು ತಯಾರಿ ನಡೆಸುತ್ತಿದ್ದಾರೆ. ಈ ವಾರಾಂತ್ಯದ ಹೊತ್ತಿಗೆ ಬಹುತೇಕ ಯೋಜನೆಯ ಸ್ವರೂಪ ಅಂತಿಮವಾಗಬಹುದು. ಮಾಸಾಂತ್ಯಕ್ಕೆ ದೀಪಾಲಂಕಾರ ಅಳವಡಿಕೆಯೂ ಶುರುವಾಗಬಹುದು.

ಡ್ರೋನ್‌ ಶೂಟ್‌

ಮೈಸೂರಿನ ದಸರಾ ದೀಪಾಲಂಕಾರ ಚೆಸ್ಕಾಂನ ಪ್ರಮುಖ ಯೋಜನೆಯಾಗಿ ಪ್ರಸಿದ್ಧವಾಗಿದೆ. ಇದು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ ಮತ್ತು ನಗರವನ್ನು ಸುಂದರ ಹಾಗೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಸಂಜೆಯಾದರೆ ನಾಲ್ಕರಿಂದ ಐದು ಗಂಟೆಗಳ ಕಾಲ ಪ್ರವಾಸಿಗರ ಕಣ್ಣಿಗೆ ಹಬ್ಬವೂ ಹೌದು. ಈ ಸೌಂದರ್ಯವನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸಲು ಈ ಬಾರಿ ಉದ್ದೇಶಿಸಲಾಗಿದೆ. ಏಕ ಕಾಲಕ್ಕೆ ಒಂದು ಸಾವಿರ ಡ್ರೋನ್‌ ಗಳನ್ನು ಬಳಸಿ 135ಕಿ.ಮೀ ಉದ್ದದ ದೀಪಾಲಂಕಾರದ ದೃಶ್ಯ ವೈಭವನ್ನು ಸೆರೆ ಹಿಡಿಯಲು ಚಿಂತಿಸಲಾಗುತ್ತಿದೆ. ಆದರೆ ಸದ್ಯಕ್ಕೆ ಇದಕ್ಕಾಗಿ ಯಾವುದೇ ಹಣ ಮೀಸಲಿಟ್ಟಿಲ್ಲ. ಹಾಗಾಗಿ ಪ್ರಾಯೋಜಕರ ಸಹಾಯದಿಂದ ಈ ಯೋಜನೆ ಜಾರಿಗೆ ತರಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮುನಿಗೋಪಾಲರಾಜು ಹೇಳಿದ್ದಾಗಿ ಜಸ್ಟ್‌ ಕನ್ನಡ ವರದಿ ಮಾಡಿದೆ.

mysore-dasara_Entry_Point