Mysuru Dasara 2023: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ ವೈಭವ: ಎಂಟನೇ ಬಾರಿ ಸಿಂಹಾಸನ ಏರಿದ ರಾಜವಂಶಸ್ಥ ಯದುವೀರ್‌ ಒಡೆಯರ್‌
ಕನ್ನಡ ಸುದ್ದಿ  /  ಕರ್ನಾಟಕ  /  Mysuru Dasara 2023: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ ವೈಭವ: ಎಂಟನೇ ಬಾರಿ ಸಿಂಹಾಸನ ಏರಿದ ರಾಜವಂಶಸ್ಥ ಯದುವೀರ್‌ ಒಡೆಯರ್‌

Mysuru Dasara 2023: ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ ವೈಭವ: ಎಂಟನೇ ಬಾರಿ ಸಿಂಹಾಸನ ಏರಿದ ರಾಜವಂಶಸ್ಥ ಯದುವೀರ್‌ ಒಡೆಯರ್‌

Mysuru palace rituals ಮೈಸೂರು ದಸರಾದೊಂದಿಗೆ ಯದುವಂಶಜರಾದ ಮೈಸೂರು ಸಂಸ್ಥಾನದ ಖಾಸಗಿ ದರ್ಬಾರ್‌ ಕೂಡ ಸೇರಿಕೊಂಡಿದೆ. ಶತಮಾನಗಳಿಂದ ನಡೆಯುತ್ತಿರುವ ಖಾಸಗಿ ದರ್ಬಾರ್‌ ಭಾನುವಾರ ಆರಂಭಗೊಂಡಿದೆ. ರಾಜವಂಶಸ್ಥ ಯದುವೀರ್‌ ಒಡೆಯರ್‌(Yaduveer Krishnadatta Chamaraja Wadiyar)ಸಿಂಹಾಸನಾರೂಢವಾಗುವ ಮೂಲಕ ಈ ಬಾರಿ ಖಾಸಗಿ ದರ್ಬಾರ್‌ ಆರಂಭಿಸಿದರು. ಅದರ ವಿವರ ಇಲ್ಲಿದೆ.

ಮೈಸೂರಿನ ಅರಮನೆಯಲ್ಲಿ ಖಾಸಗಿ ದರ್ಬಾರ್‌ ಅನ್ನು ಯದುವೀರ್‌ ಅವರು ಆರಂಭಿಸಿದರು.
ಮೈಸೂರಿನ ಅರಮನೆಯಲ್ಲಿ ಖಾಸಗಿ ದರ್ಬಾರ್‌ ಅನ್ನು ಯದುವೀರ್‌ ಅವರು ಆರಂಭಿಸಿದರು.

ಮೈಸೂರು: ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ, ಮೈಸೂರು ಅರಮನೆಯಲ್ಲಿ ಖಾಸಗಿ ದಸರಾ ಸಡಗರ ಶುರುವಾಗಿದೆ.

ಶತಮಾನಕ್ಕೂ ಮಿಗಿಲಾಗಿ ಇತಿಹಾಸ ಹೊಂದಿರುವ ಮೈಸೂರಿನ ರಾಜವೈಭವವನ್ನು ಬಿಂಬಿಸುವ ಖಾಸಗಿ ದರ್ಬಾರ್‌ ಮುಂದಿನ ಒಂಬತ್ತು ದಿನ ಇರಲಿದೆ. ಭಾನುವಾರ ಬೆಳಿಗ್ಗೆಯಿಂದಲೇ ಮೈಸೂರು ಅರಮನೆಯಲ್ಲಿ ಖಾಸಗಿ ದಸರಾದ ವೈಭವವೂ ಕಳೆಗಟ್ಟಿದೆ.

ಎಂಟನೇ ಬಾರಿಗೆ ಖಾಸಗಿ ದರ್ಬಾರ್‌ ನಡೆಸುತ್ತಿರುವ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪೂಜೆಗಳಲ್ಲಿ ಭಾನುವಾರ ಬೆಳಿಗ್ಗೆ ಭಾಗಿಯಾದರು ಬೆಳಗ್ಗೆ 5ರಿಂದಲೇ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭವಾಗಿವೆ. ಚಂಡಿಕಾಹೋಮ, ಲಲಿತಾ ಸಹಸ್ರನಾಮ ಸಹಿತ ನಾನಾ ಪೂಜೆಗಳು ನೆರವೇರಿದವು.

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ತ್ರಿಷಿಕಾ ಕುಮಾರಿ ಹಾಗೂ ಸಂಸ್ಥಾನದವರು, ಅರಸು ಮನೆತನಗಳ ಹಿರಿಯರು ಇಡೀ ಚಟುವಟಿಕೆಯಲ್ಲಿ ಭಾಗಿಯಾದರು.

ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ನಡೆಯಿತು.ಬೆಳಗ್ಗೆ 07.05 ರಿಂದ 7.45ರ ಶುಭ ಲಗ್ನದಲ್ಲಿ ವಾಣಿವಿಲಾಸ ಅರಮನೆಯಲ್ಲಿ ಕಂಕಣಧಾರಣೆ ನೆರವೇರಿಸಲಾಯಿತು.

ಇನ್ನು ಬೆಳಗ್ಗೆ 9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನವಾದವು. ಬೆಳಗ್ಗೆ 10.15ಕ್ಕೆ ಕಳಸ‌ ಪೂಜೆ, ಸಿಂಹಾಸನ‌ ಪೂಜೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಸಿಂಹಾಸನಾರೂಢರಾದ ಯದುವೀರ್‌ 11.50ರವರೆಗೆ ಖಾಸಗಿ ದರ್ಬಾರ್ ಮುಂದುವರೆಸಿದರು. ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ನಂತರ ವೇದ ಘೋಷಗಳೊಂದಿಗೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನ್ನು ಯದುವೀರ್‌ ನೆರವೇರಿಸಿದರು. ಮೈಸೂರಿನ ರಾಜ ಪರಂಪರೆಯಂತೆ ಖಾಸಗಿ ದರ್ಬಾರ್ ನೆರವೇರಿತು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಗಾಂಭೀರ್ಯದಿಂದ ಸಿಂಹಾನದ ಕಡೆ ಹೆಜ್ಜೆ ಇಡುತ್ತಿದ್ದಂತೆ ವಂಧಿ ಮಾಗಧರು ರಾಜಾಧಿರಾಜ, ರಾಜ ಮಾರ್ತಾಂಡ, ರಾಜ ಕುಲತಿಲಕ, ರಾಜ ಮಾರ್ತಾಂಡ, ಯದುವೀರ್ ಮಹಾರಾಜ್‌ ಕೀ ಬಹು ಪರಾಕ್, ಬಹು ಪರಾಕ್ ಎಂದು ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಕೆಲವೇ ಕ್ಷಣಗಳಲ್ಲಿ ಬಹುಪರಾಕ್ ಹೇಳಿದರು. ಇದಕ್ಕೆ ಅಲ್ಲಿದ್ದವರೂ ದನಿಗೂಡಿದರು. ನಂತರ ಮೈಸೂರು ರಾಜ್ಯ ಗೀತೆಯನ್ನು ನುಡಿಸಲಾಯಿತು,. ಈ ವೇಳೆ ರತ್ನ ಖಚಿತ ಸಿಂಹಾಸನದ ಮೇಲೆ ನಿಂತ ಯದುವೀರ್ ಸೆಲ್ಯೂಟ್ ಮಾಡಿ ರಾಜ್ಯ ಗೀತೆಗೆ ಗೌರವ ಸಲ್ಲಿಸಲಿಸಿದರು.

ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರ್‌ ಮಾದರಿಯಲ್ಲೇ ಇಂದಿಗೂ ದಸರೆಯ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ. ಸಿಂಹಾಸನದ ಬಳಿ ತೆರಳಿದ ಯದುವೀರ್ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿದರು.

ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ, ನಂತರ ಅವರು ಸಿಂಹಾಸನಾರೂಢರಾದರು. ಇದೇ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಯದುವೀರ್ ಪಾದಗಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿಸಿ ವಂದಿಸುವ ಚಟುವಟಿಕೆಗಳೂ ನಡೆದವು.

ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ 33 ದೇವಾಲಯಗಳಿಂದ ತಂದ ತೀರ್ಥ ಪ್ರಸಾದ ಸೇವಿಸಿದ ನಂತರ ಸಿಂಹಾಸನಾರೂಢ ಚಟುವಟಿಕೆಗಳು ಮುಗಿದವು. ಮಧ್ಯಾಹ್ನ 1.45 ರಿಂದ 02.05 ತಾಯಿ ಚಾಮುಂಡೇಶ್ವರಿ ಫೋಟೋ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆಯಾಗಲಿದೆ. ಇದಾದ ಬಳಿಕ ಮೊದಲ ದಿನ ಸಂಜೆ ಖಾಸಗಿ ದರ್ಬಾರ್‌ ನಡೆಯಲಿದೆ. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಅರಮನೆ ಪ್ರವೇಶಕ್ಕೆ ನಿರ್ಬಂಧವಿತ್ತು. ಇದಲ್ಲದೇ ಸೋಮವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.

Whats_app_banner