ಕನ್ನಡ ಸುದ್ದಿ  /  Karnataka  /  Political Opinion Jds Tried To Awaken The Identity Of Kannada, Karnataka And Kannadigas Karnataka Election 2023 Uks

Opinion: ಕನ್ನಡ, ಕರ್ನಾಟಕ, ಕನ್ನಡಿಗರ ಅಸ್ಮಿತೆ ಜಾಗೃತಗೊಳಿಸುವ ಪ್ರಯತ್ನ ನಡೆಸಿದ ಜೆಡಿಎಸ್‌

Opinion: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಬಹಿರಂಗ ಪ್ರಚಾರ ಸಂಪನ್ನಗೊಂಡಿದೆ. ಮತದಾನಕ್ಕೆ ಕೆಲವು ಗಂಟೆಗಳಷ್ಟೆ ಬಾಕಿ ಇದೆ. ಜೆಡಿಎಸ್‌ ಬಹಿರಂಗ ಪ್ರಚಾರ ಅಭಿಯಾನದ ತಿರುಳೇನು ಎಂಬುದರ ಸಂಕ್ಷಿಪ್ತ ಅವಲೋಕನ ಇಲ್ಲಿದೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಅತಂತ್ರ ಜನಾದೇಶದ ಕಾರಣ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು 2018ರ ಚುನಾವಣೆ ಬಳಿಕ ಸರ್ಕಾರ ರಚಿಸಿದ್ದ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಈ ಸಲವೂ ಅತಂತ್ರ ಜನಾದೇಶವನ್ನೇ ನಿರೀಕ್ಷಿಸುತ್ತಿದ್ದಾರೆ. 2019ರಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಚುನಾವಣೆ ಗೆದ್ದು ಸ್ಪಷ್ಟ ಬಹುಮತದ ಸ್ಥಿರ ಸರ್ಕಾರಕ್ಕೆ ನೆರವಾಗಿದ್ದರು. ಆದರೆ, ಈ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯ ಪ್ರಯೋಜನ ಈ ಬಾರಿ ಪಡೆದುಕೊಳ್ಳಬೇಕು ಎಂದು ವರ್ಷ ಮೊದಲೇ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಘೋಷಿಸಿಕೊಂಡಿದ್ದರು.

ಒಂದು ಹಂತದಲ್ಲಿ ಬಹುಮತದ ಸರ್ಕಾರ ರಚನೆಗೆ ಜೆಡಿಎಸ್‌ಗೆ ಹೆಚ್ಚಿನ ಸ್ಥಾನಗಳನ್ನು ಮತದಾರ ಕರುಣಿಸದೇ ಇದ್ದರೆ, ಪಕ್ಷವನ್ನೇ ವಿಸರ್ಜಿಸುವೆ ಎಂದು ಕೂಡ ಘೋಷಿಸಿದ್ದುಂಟು. ಕೆಲವೆಡೆ, ಮತದಾರರ ನಾಡಿ ಮಿಡಿತ ಅರಿತುಕೊಂಡಿದ್ದೇನೆ. ಮುಂದಿನದ್ದು ಅತಂತ್ರ ಜನಾದೇಶ. ಹೀಗಾಗಿ ಜೆಡಿಎಸ್‌ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಮತದಾರರ ಮನವೊಲಿಸುವ ಪ್ರಯತ್ನ ಶುರುಮಾಡಿದ್ದರು.

ಇದರ ಫಲವೇ ʻಪಂಚರತ್ನ ಯೋಜನೆ" ಘೋಷಣೆ ಮತ್ತು ಪಂಚರತ್ನ ರಥಯಾತ್ರೆ ಆಯೋಜನೆ. ಇದಕ್ಕಾಗಿ “ಇರುವುದೊಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ” ಎಂಬ ಘೋಷಣೆಯನ್ನು ಮುಂದಿಟ್ಟರು. ಜನಮನ ಸೆಳೆಯುವ ಕೆಲಸ ಮಾಡಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಿದರಲ್ಲದೆ, ಕಾಂಗ್ರೆಸ್‌, ಬಿಜೆಪಿ ಬಿಟ್ಟು ಪ್ರಾದೇಶಿಕ ಪಕ್ಷಕ್ಕೇ ಅಧಿಕಾರ ಕೊಡಿ ಎಂದು ಪ್ರತಿಪಾದಿಸಿದರು.

ಇದಲ್ಲದೆ, ಜೆಡಿಎಸ್‌ ಪ್ರಾದೇಶಿಕ ಪಕ್ಷ ಎಂಬುದನ್ನು ಬಿಂಬಿಸುತ್ತ “ಜನತಾದಳಕ್ಕೆ ಮತಹಾಕಿದರೆ ಅದು ಕನ್ನಡಿಗರಿಗೆ ಮತಹಾಕಿದಂತೆ” ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದರು. ಅಕ್ಟೋಬರ್‌ ತಿಂಗಳಲ್ಲೆ ಕನ್ನಡ, ಕನ್ನಡಿಗರ ಅಸ್ಮಿತೆಯನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ ಜೆಡಿಎಸ್‌, “ಕರುನಾಡು ಜನತೆಗೆ ಜೆಡಿಎಸ್‌ ಪರಿಹಾರ” ಎಂಬ ಭಾವನೆ ಮೂಡಿಸಲು ಮುಂದಾಯಿತು. ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಅದು ಜನತಾ ಸರ್ಕಾರ, ಕನ್ನಡಿಗರದ್ದೇ ಸರ್ಕಾರವಾಗಿರಲಿದೆ. ಸುಭದ್ರ ಕರ್ನಾಟಕಕ್ಕಾಗಿ ಜೆಡಿಎಸ್‌ಗೆ ಮತನೀಡಿ ಎಂಬ ಅಭಿಯಾನವನ್ನೂ ನಡೆಸಿ ಬಹಿರಂಗ ಪ್ರಚಾರವನ್ನು ಕೊನೆಗೊಳಿಸಿದೆ ಜೆಡಿಎಸ್‌.

ಜೆಡಿಎಸ್‌ ಪಕ್ಷ ಬಳಸಿದ ಘೋಷ ವಾಕ್ಯಗಳನ್ನು ಒಮ್ಮೆ ಅವಲೋಕಿಸೋಣ. "ಇರುವುದೊಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ. ಜನತಾದಳಕ್ಕೆ ಮತಹಾಕಿದರೆ ಅದು ಕನ್ನಡಿಗರಿಗೆ ಮತಹಾಕಿದಂತೆ. ಸುಭದ್ರ ಕರ್ನಾಟಕಕ್ಕಾಗಿ ಜೆಡಿಎಸ್‌ಗೆ ಮತನೀಡಿ. ಕರುನಾಡು ಜನತೆಗೆ ಜೆಡಿಎಸ್‌ ಪರಿಹಾರ. ಜನತಾ ಸರ್ಕಾರ ಕನ್ನಡಿಗರದ್ದೇ ಅಧಿಕಾರ. ಜನತಾ ಜಲಧಾರೆ ಜನತಾ ಮಿತ್ರ ಪಂಚರತ್ನ ಯೋಜನೆ" ಎನ್ನುವ ಘೋಷ ವಾಕ್ಯಗಳನ್ನು ಜೆಡಿಎಸ್ ಬಳಕೆ ಮಾಡಿತು.

ಇವೆಲ್ಲದರ ಹೊರತಾಗಿ, ಕುಟುಂಬ ರಾಜಕಾರಣದ ಕಾರಣ ಜೆಡಿಎಸ್‌ನ ಪ್ರಚಾರ ಕೊನೆಯ ಹಂತದಲ್ಲಿ ಸೊರಗಿತು. ಹಾಸನ ಮತ್ತು ಕಡೂರು ಟಿಕೆಟ್‌ ಕೊಂಚ ಕಗ್ಗಂಟಾಗಿ ಉಳಿಯಿತು. ಎಚ್.ಡಿ.ರೇವಣ್ಣ ಕುಟುಂಬ ಒಂದೆಡೆ ಪಕ್ಷವನ್ನು ಎಳೆದರೆ, ಎಚ್‌ಡಿ ಕುಮಾರಸ್ವಾಮಿ ಇನ್ನೊಂದೆಡೆ ಎಳೆಯುತ್ತಿದ್ದರು. ವೈ.ಎಸ್‌.ವಿ ದತ್ತಾ ಅವರಿಗೆ ಕಡೂರು ಟಿಕೆಟ್‌ ಕುಮಾರಸ್ವಾಮಿ ನಿರಾಕರಿಸಿದ ಕಾರಣ, ಅವರು ಕಾಂಗ್ರೆಸ್‌ ಪಕ್ಷಕ್ಕೆ ಹೋದರು. ಅಲ್ಲಿ ಟಿಕೆಟ್‌ ಸಿಗದೇ ಇದ್ದಾಗ, ಎಚ್‌.ಡಿ.ರೇವಣ್ಣ ನೀವೇ ಕಡೂರು ಅಭ್ಯರ್ಥಿ ಜೆಡಿಎಸ್‌ಗೆ ಎಂದು ಕರೆತಂದರು.

ಈ ಎಲ್ಲ ಗೊಂದಲಗಳ ನಡುವೆಯೂ, ಜೆಡಿಎಸ್‌ ಪಕ್ಷದ ಒಟ್ಟು ಅಭಿಯಾನವನ್ನು ಗಮನಿಸಿದರೆ, ಮತದಾರರನ್ನು ಸೆಳೆಯುವ ಉದ್ದೇಶದಿಂದ ಪಂಚರತ್ನ ಯೋಜನೆ, ಕಾಂಗ್ರೆಸ್‌ ಪಕ್ಷದವರಂತೆ ಭತ್ಯೆಗಳನ್ನೂ ಜೆಡಿಎಸ್‌ ಘೋಷಿಸಿದೆ. ಆಟೋ ಚಾಲಕರನ್ನು, ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿದ ಯೋಜನೆಗಳು ಗಮನಸೆಳೆದಿವೆ. ಅದೇ ರೀತಿ ಭಾವನಾತ್ಮಕವಾಗಿ ಮತದಾರರನ್ನು ಹಿಡಿದಿಡಲು ವಯೋಸಹಜ ತೊಂದರೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಕನಸು ಈಡೇರಿಸಿ ಎಂಬ ಸಂದೇಶವನ್ನೂ ರವಾನಿಸುವ ಕೆಲಸ ಆಗಿದೆ.

ಇದಕ್ಕೆ ಹೊರತಾಗಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ರಾಜ್ಯದ ಹಿತವನ್ನು ಕಾಪಾಡಲಾರವು. ಎರಡೂ ರಾಷ್ಟ್ರೀಯ ಪಕ್ಷಗಳು. ಅವುಗಳ ನಿಯಂತ್ರಣ ದೆಹಲಿಯಲ್ಲಿದೆ ಎಂಬುದನ್ನು ಬಿಂಬಿಸಲು ಪ್ರಯತ್ನಿಸಿತ್ತು. ಇನ್ನು ಏನಿದ್ದರೂ ಮತದಾರನ ನಿರ್ಧಾರವೇ ಅಂತಿಮ. ಅತಂತ್ರವೋ ಬಹುಮತವೋ ಎಲದಕ್ಕೂ ಉತ್ತರ ಮೇ 10ರ ಮತದಾನ, ಮೇ13ರ ಫಲಿತಾಂಶ ನೀಡಲಿದೆ.

IPL_Entry_Point