ಕಂದಾಯ ಇಲಾಖೆ ಸೇವೆಯಲ್ಲಿ ಮೈಸೂರು ಕಳಪೆಯಲ್ಲಿ ಕಳಪೆ: ಸಿಎಂ ಸಿದ್ದರಾಮಯ್ಯ ತವರು ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣಬೈರೇಗೌಡ
ಕನ್ನಡ ಸುದ್ದಿ  /  ಕರ್ನಾಟಕ  /  ಕಂದಾಯ ಇಲಾಖೆ ಸೇವೆಯಲ್ಲಿ ಮೈಸೂರು ಕಳಪೆಯಲ್ಲಿ ಕಳಪೆ: ಸಿಎಂ ಸಿದ್ದರಾಮಯ್ಯ ತವರು ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣಬೈರೇಗೌಡ

ಕಂದಾಯ ಇಲಾಖೆ ಸೇವೆಯಲ್ಲಿ ಮೈಸೂರು ಕಳಪೆಯಲ್ಲಿ ಕಳಪೆ: ಸಿಎಂ ಸಿದ್ದರಾಮಯ್ಯ ತವರು ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣಬೈರೇಗೌಡ

ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರು ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆ ಕಂದಾಯ ಇಲಾಖೆ ಕಳಪೆ ಕಾರ್ಯಸಾಧನೆಗೆ ಅಸಮಾಧಾನ ಹೊರ ಹಾಕಿದ್ದಾರೆ.

ಕಂದಾಯ ಸಚಿವ ಕೃಷ್ಣಬೈರೇಗೌಡ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಬೆಂಗಳೂರಿನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಬೆಂಗಳೂರಿನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕೆಲಸವನ್ನೇ ಮಾಡುತ್ತಿಲ್ಲ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸಿಲ್ದಾರರು ಈ ಮಟ್ಟಿಗೆ ಜಡ್ಡುಗಟ್ಟಿ ಹೋಗಿದ್ದಾರೆಯೇ. ಇಂತಹ ಸ್ಥಿತಿಯನ್ನು ತೆರೆದಿಟ್ಟವರು ಖುದ್ದು ಕಂದಾಯ ಸಚಿವ ಕೃಷ್ಣಬೈರೇಗೌಡ. ಮೈಸೂರು ಜಿಲ್ಲೆಯ ತಹಸಿಲ್ದಾರ್‌ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವರು, “ಮೈಸೂರು ಜಿಲ್ಲೆ ಕಳಪೆಯಲ್ಲಿ ಕಳಪೆ ಜಿಲ್ಲೆಯಾಗುತ್ತಿದೆ. ಕೆಲಸ ಮಾಡದ ಅಧಿಕಾರಿಗಳಿಗೆ ಮನುಷ್ಯತ್ವ ಇದೆಯಾ? ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು, ನಾಚಿಕೆ ಆಗಲ್ವ? ಎಂದು ಕಿಡಿಕಾರಿದ್ದೂ ನಡೆಯಿತು. ಬಗರ್ ಹುಕುಂ ಅರ್ಜಿ ವಿಲೇ, ನಮೂನೆ 1-5 ಹಾಗೂ ನಮೂನೆ 6-10 ದುರಸ್ಥಿ ಕೆಲಸ ಹಾಗೂ ತಹಶೀಲ್ದಾರ್ ತಕರಾರು ಅರ್ಜಿ ವಿಲೇ ಕೆಲಸದಲ್ಲೂ ಮೈಸೂರು ಸಾಕಷ್ಟು ಹಿಂದೆ ಬಿದ್ದಿದೆ. ಹೀಗಾಗಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್ ಗಳ ಕಾರ್ಯಶೈಲಿ ವಿರುದ್ದ ಅಸಮಾಧಾನ ಹೊರ ಹಾಕಿದರು.

ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ವಿಕಾಸಸೌಧದಿಂದ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಗರ್ ಹುಕುಂ ಅರ್ಜಿ ವಿಲೇ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಮೈಸೂರಿನ ಸರದಿ ಬಂದಾಗ ಅಲ್ಲಿನ ಅರ್ಜಿ ವಿಲೇವಾರಿ ಸ್ಥಿತಿಗತಿ, ಅಧಿಕಾರಿಗಳ ಮನಸ್ಥಿತಿ ಕಂಡು ಸಚಿವರು ಸಿಟ್ಟಾದರು.

ಕೆಲಸ ಮಾಡದ ಮೈಸೂರಿನ ತಹಶೀಲ್ದಾರರೇ ನಿಮಗೆ ನಾಚಿಕೆ ಆಗಲ್ವ? ನಿಮಗೆ ಮನುಷ್ಯತ್ವ ಇಲ್ವ? ಎಂದು ಅಧಿಕಾರಿಗಳನ್ನು ಇಂದಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಾಲೂರು ತಹಶೀಲ್ದಾರರಿಗೆ ನೊಟೀಸ್

ಬಗರ್ ಹುಕುಂ ಅರ್ಜಿ ವಿಲೇ ಕೆಲಸದಲ್ಲಿ ಅಸಡ್ಡೆ ತೋರಿದ ಮಾಲೂರು ತಾಲೂಕು ತಹಶೀಲ್ದಾರ್ ರಮೇಶ್ ಅವರಿಗೆ ಶೋಕಾಸ್ ನೊಟೀಸ್ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಇಂದಿನ ಸಭೆಯಲ್ಲಿ ಸೂಚಿಸಿದರು.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 10,771 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೆ ಸ್ಥಳ ಪರಿಶೀಲನೆಗೊಂಡಿರುವ ಅರ್ಜಿಗಳ ಸಂಖ್ಯೆ ಕೇವಲ 55 ಮಾತ್ರ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಸಭೆ ಆರಂಭವಾಗುತ್ತಿದ್ದಂತೆ ಸಚಿವ ಕೃಷ್ಣ ಬೈರೇಗೌಡ ಅವರು ಮಾಲೂರು ತಹಶೀಲ್ದಾರ್ ರಮೇಶ್ ಅವರ ಬಳಿ ಮಾತನಾಡಲು ಯತ್ನಿಸಿದರು. ಆದರೆ, ಅವರು ಸಭೆಗೆ ಒಂದು ಗಂಟೆ ತಡವಾಗಿ ಬಂದರು. ಅಲ್ಲದೆ, ಸಚಿವರ ಪ್ರಶ್ನೆಗಳಿಗೆ ಉತ್ತರಿಸಲೂ ತಡವರಿಸಿದರು. ಹೀಗಾಗಿ ಅವರಿಗೆ ಕೂಡಲೇ ಶೋಕಾಸ್ ನೊಟೀಸ್ ನೀಡುವಂತೆ ಸಚಿವರು ಸೂಚಿಸಿದರು.

ಮುಂಡಗೋಡು, ಶಿರಸಿ ಬೆಸ್ಟ್‌

ಇಂದಿನ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಶೇಖರ್ ಮುಂದಲಮನಿ ಹಾಗೂ ಮುಂಡಗೋಡು ತಾಲೂಕು ತಹಶೀಲ್ದಾರ್ ಮುಂಡಗೋಡು ಶಂಕರ್ ಗೌಡಿ ಅವರ ಪ್ರಶಂಸಿಸಿದ ಸಚಿವರು, “ಹಲವರು ಕೆಲಸ ಮಾಡಿ ಅಂದ್ರೆ ಬಗರ್ ಹುಕುಂ ಆ್ಯಪ್ ಸಹಕರಿಸುತ್ತಿಲ್ಲ, ನೆಟ್ವರ್ಕ್ ಇಲ್ಲ ಎಂದು ಇಲ್ಲ ಸಲ್ಲದ ಕಾರಣ ನೀಡುತ್ತಾರೆ. ಆದರೆ, ನೆಟ್ವರ್ಕೆ ಇಲ್ಲ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಹೇಗೆ ಶೇ.80ರಷ್ಟು ಬಗರ್ ಹುಕುಂ ಅರ್ಜಿ ವಿಲೇ ಮಾಡಲು ಸಾಧ್ಯವಾಯಿತು?

ಇಲ್ಲಿ ಸಾಧ್ಯವಾಗುವುದಾದರೆ ಬೇರೆ ತಾಲೂಕುಗಳಲ್ಲೂ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನೆ ಮಾಡಿದ ಸಚಿವರು ಬಗರ್ ಹುಕುಂ ವಿಚಾರದಲ್ಲಿ ಉತ್ತಮ ಸೇವೆ ಸಲ್ಲಿಸುವ ಕಾಲಮಿತಿಯೊಳಗೆ ಅರ್ಜಿ ವಿಲೇಗೊಳಿಸುವ ಅಧಿಕಾರಿಗಳನ್ನು ಬೆಂಗಳೂರಿಗೆ ಖುದ್ದಾಗಿ ಕರೆದು ಮುಂದಿನ ತಿಂಗಳ ಸಭೆಯಲ್ಲಿ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಗುವುದು” ಎಂದು ಭರವಸೆ ನೀಡಿದರು.

ಸಚಿವರ ಸೂಚನೆ ಏನೇನು

  • ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಡವರಿಗೆ ಭೂ ಮಂಜೂರುಗೊಳಿಸುವ “ಬಗರ್ ಹುಕುಂ” ಅರ್ಜಿಗಳ ಪೈಕಿ ಅರ್ಹ-ಅನರ್ಹ ಅರ್ಜಿಗಳನ್ನುಎಲ್ಲಾ ತಹಶೀಲ್ದಾರರೂ ಈ ತಿಂಗಳ 25 ರ ಒಳಗೆ ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತಪ್ಪಿದರೆ ಎಲ್ಲರಿಗೂ ಶೋಕಾಸ್ ನೊಟೀಸ್ ನೀಡಲಾಗುವುದು. ಎಲ್ಲಾ ಜಿಲ್ಲಾಧಿಕಾರಿಗಳು 26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು
  • ರಾಜ್ಯಾದ್ಯಂತ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 14ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅನರ್ಹ ಅರ್ಜಿಗಳ ಸಂಖ್ಯೆಯೇ ಅಧಿಕವಾಗಿದೆ. ಹೀಗಾಗಿ ಅರ್ಜಿಗಳನ್ನು ಅನರ್ಹ ಎಂದು ನಿರ್ಧರಿಸಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
  • ಅರ್ಜಿದಾರರು ನಿರ್ದಿಷ್ಟ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿಲ್ಲ, ನಿರ್ದಿಷ್ಟ ಪ್ರದೇಶದಲ್ಲಿ ಗೋಮಾಳ ಭೂಮಿ ಅಧಿಕ ಇಲ್ಲ, ಅರಣ್ಯ ಭೂಮಿಯನ್ನು ಕೋರಿ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದರೆ, ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ 4.38 ಎಕರೆಗೂ ಅಧಿಕ ಜಮೀನು ಇದ್ದರೆ, ಅರ್ಜಿದಾರರು ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ್ರದೇಶದಲ್ಲಿ ವಾಸ ಇಲ್ಲದಿದ್ದರೆ, ಅರ್ಜಿಯೇ ನಕಲು ಆಗಿದ್ದರೆ ಅಥವಾ ಅರ್ಜಿದಾರರು ಅಧಿಕಾರಿಗಳ ಕೈಗೆ ಸಿಗದಿದ್ದರೆ ಅಂತಹ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗುವುದು. ಇದರ ಹೊರತಾಗಿ ಬೇರೆ ಸ್ವರೂಪದ ಸಮಸ್ಯೆಗಳು ಕಂಡುಬಂದರೆ ಅದನ್ನೂ ಸಹ ಪಟ್ಟಿಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು
  • ಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ ವ್ಯಯಕ್ತಿಕವಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದೇನೆ. ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ಸರಿಯಲ್ಲಿ
  • ಬಗರ್ ಹುಕುಂ ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಭೂ ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ. ಈ ಬಗ್ಗೆ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ದ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಉತ್ತರದಾಯಿತ್ವ ನನ್ನ ಮೇಲೂ ಇದೆ.
  • ಬಡವರ ಕೆಲಸದ ಬಗ್ಗೆ ಅಧಿಕಾರಿ ವರ್ಗದಿಂದ ಈ ಮಟ್ಟದ ಅಸಡ್ಡೆಯನ್ನು ನಾನು ನಿರೀಕ್ಷಿಸಿರಲಿಲ್ಲ. ರಾಜ್ಯದ ಒಟ್ಟಾರೆ 14 ಲಕ್ಷ ರೈತರು ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳ ಪೈಕಿ ಅರ್ಹ ಅರ್ಜಿ ಯಾವುದು? ಅನರ್ಹ ಅರ್ಜಿ ಯಾವುದು? ಎಂದು ಪರಿಶೀಲಿಸಲು ಅಧಿಕಾರಿಗಳಿಗೆ ಒಂದೂವರೆ ವರ್ಷ ಬೇಕಾ?

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.

Whats_app_banner