Tumkur News: ಚುಚ್ಚುಮದ್ದು ಪಡೆದ ಬಳಿಕ ಮಗು ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಆಸ್ಪತ್ರೆಗೆ ಸಾರ್ವಜನಿಕರ ಮುತ್ತಿಗೆ
ವೈದ್ಯರ ನಿರ್ಲಕ್ಷ್ಯದಿಂದ ಹಸುಗೂಸು ಮೃತಪಟ್ಟಿದೆ ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಹಬ್ಬಿದೆ. ಹೀಗಾಗಿ ಮೃತ ಮಗುವಿನ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೊಯ್ಸಳಕಟ್ಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಜಮಾಯಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ತುಮಕೂರು: ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರನ್ನು ಅಮಾನತು ಮಾಡುವಂತೆ ಒತ್ತಾಯಿಸಿದ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆದಿದೆ. (ತುಮಕೂರು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಸೋಮನಹಳ್ಳಿ ಗ್ರಾಮದ ಮಧು ಮತ್ತು ಶ್ರುತಿ ದಂಪತಿಯ 2 ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಆಸ್ಪತ್ರೆಗೆ ಬರುವ ಮುನ್ನ ಆರೋಗ್ಯವಾಗಿದ್ದ ಮಗು ಚುಚ್ಚುಮದ್ದು ಪಡೆದ ನಂತರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಸಾವನ್ನಪ್ಪಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಗುವಿನ ತಂದೆ ಮಧು ಆರೋಪಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಹಾಲುಗಲ್ಲದ ಹಸುಗೂಸು ಮೃತಪಟ್ಟಿದೆ ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಹೀಗಾಗಿ ಮೃತ ಮಗುವಿನ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂದೆ ಜಮಾಯಿಸಿದರು. ವೈದ್ಯರು ಮತ್ತು ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ಕೂಡಿ ಹಾಕಿ ಅವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೇ ಫೋನ್ ಬಳಸುತ್ತಾರೆ. ಪ್ರತಿ ರೋಗಿಯ ಬಳಿ ಚಿಕಿತ್ಸೆ ನೀಡಲು 20 ರಿಂದ 100 ರೂಪಾಯಿಯವರೆಗೂ ಲಂಚ ಪಡೆಯುತ್ತಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ವೈದ್ಯರ ವಿರುದ್ಧ ಧಿಕ್ಕಾರ ಕೂಗಿ, ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು.
ಘಟನೆಯ ಮಾಹಿತಿ ಪಡೆದ ಶಾಸಕ ಸಿಬಿ ಸುರೇಶ್‌ಬಾಬು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಗು ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿಆರ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಈಗಿರುವ ವೈದ್ಯ ಮಧು ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬದಲಾಯಿಸಿ ವೈದ್ಯ ಸ್ವರೂಪ್‌ರನ್ನು ನಿಯೋಜಿಸಲಾಗಿದೆ. ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗುತ್ತಾರೆ ಹಾಗೂ ಒಬ್ಬ ಆಶಾ ಕಾರ್ಯಕರ್ತರನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶವಪರೀಕ್ಷೆ ನಂತರ ಸತ್ಯ ಬಯಲಿಗೆ
ದೇಶಾದ್ಯಂತ ಸಣ್ಣ ಮಕ್ಕಳಿಗೆ ಅನೇಕ ಚುಚ್ಚುಮದ್ದು ನೀಡಲಾಗುತ್ತಿದೆ. ಎಲ್ಲಿಯೂ ಚುಚ್ಚುಮದ್ದು ಪಡೆದು ಮಕ್ಕಳು ಸಾವನ್ನಪ್ಪಿರುವ ವರದಿಯಾಗಿಲ್ಲ. ಅಲ್ಲದೆ ರಿಯಾಕ್ಷನ್ ಆಗಿ ಸಣ್ಣ ತೊಂದರೆಯಾದ ನಿದರ್ಶನವೂ ಇಲ್ಲ. ಸೋಮನಹಳ್ಳಿಯ ಮಗು ಹೇಗೆ ಸಾವನ್ನಪ್ಪಿದೆ ಎಂಬುದು ಶವಪರೀಕ್ಷೆಯ ನಂತರವಷ್ಟೆ ತಿಳಿಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಿಆರ್ ಮೋಹನ್ ತಿಳಿಸಿದ್ದಾರೆ.
10 ಮಕ್ಕಳಿಗೆ ಚುಚ್ಚುಮದ್ದು ಕೊಡಲಾಗಿದೆ
ಗುರುವಾರ ಒಂದೇ ದಿನ 10 ಮಕ್ಕಳಿಗೆ ಚುಚ್ಚುಮದ್ದು ಕೊಡಲಾಗಿದೆ. ಚುಚ್ಚುಮದ್ದು ಪಡೆದ ಇತರ ಮಕ್ಕಳು ಆರೋಗ್ಯದಿಂದಿದ್ದಾರೆ. ಈ ಮಗು ಸಾವನ್ನಪ್ಪಿರುವ ಸುದ್ದಿ ಆಶ್ಚರ್ಯವಾಗಿದೆ. ಈ ಮಗುವಿಗೆ ಚುಚ್ಚುಮದ್ದು ಹಾಕಿಸಲು ಮಗುವಿನ ಅಜ್ಜಿ ಮತ್ತು ಮಾವ ಬಂದಿದ್ದರು. ಚುಚ್ಚುಮದ್ದು ಕೊಟ್ಟ ತಕ್ಷಣ ಹೋಗಬೇಡಿ. ಬಿಸಿಲಿದೆ ಕಾಲು ಗಂಟೆ ಇಲ್ಲೇ ಇದ್ದು ಹೋಗಿ ಎಂದು ಹೇಳಿದರೂ ಸಹ ಕೇಳದೆ ಇಂಜೆಕ್ಷನ್ ಪಡೆದ ತಕ್ಷಣ ಊರಿಗೆ ಹೋದರು ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ವಿಭಾಗ