ಕನ್ನಡ ಸುದ್ದಿ  /  ಕರ್ನಾಟಕ  /  Gokarna News: ಗೋಕರ್ಣ ಸಮುದ್ರದಲ್ಲಿ ಬೇಕಾಬಿಟ್ಟಿ ಈಜಾಟ: ಹುಬ್ಬಳ್ಳಿಯ ಏಳು ಮಂದಿ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

Gokarna News: ಗೋಕರ್ಣ ಸಮುದ್ರದಲ್ಲಿ ಬೇಕಾಬಿಟ್ಟಿ ಈಜಾಟ: ಹುಬ್ಬಳ್ಳಿಯ ಏಳು ಮಂದಿ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

Gokarna Beach Alert ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಬೀಚ್‌ ಪ್ರವಾಸೋದ್ಯಮವಿದೆ. ಅದರಲ್ಲೂ ಗೋಕರ್ಣದಲ್ಲಿ ವಿಶಾಲ ಬೀಚ್‌ ಇದ್ದು, ಕೆಲವು ಕಡೆ ಅನಾಹುತ ತಂದೊಡ್ಡುವ ಸನ್ನಿವೇಶವೂ ಇದೆ. ಇದೇರೀತಿ ಸಮುದ್ರಕ್ಕಿಳಿದು ತೊಂದರೆಗೆ ಒಳಗಾದ ಹುಬ್ಬಳ್ಳಿ ಕುಟುಂಬವನ್ನು ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಗೋಕರ್ಣ ಸಮುದ್ರದಲ್ಲಿ ಈಜಲು ಹೋದ ವ್ಯಕ್ತಿಯನ್ನು ಕುಟುಂಬ ಸಮೇತ ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.
ಗೋಕರ್ಣ ಸಮುದ್ರದಲ್ಲಿ ಈಜಲು ಹೋದ ವ್ಯಕ್ತಿಯನ್ನು ಕುಟುಂಬ ಸಮೇತ ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಕಾರವಾರ: ಭಾರೀ ಆಳವಿರುವ ಮಾಹಿತಿ ಫಲಕ ಹಾಕಿದ್ದರೂ ಆಳ ತಿಳಿಯದೆ ಸಮುದ್ರದೊಳಗೆ ಈಜಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬವೊಂದನ್ನು ಗೋಕರ್ಣದ ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗೋಕರ್ಣದ ಮುಖ್ಯ ಕಡಲತೀರಕ್ಕೆ ಪ್ರವಾಸಕ್ಕೆ ಆಗಮಿಸಿದ ಹುಬ್ಬಳ್ಳಿ ಮೂಲದವರು ಕುಟುಂಬ ಸಮೇತರಾಗಿ ಸಮುದ್ರದಲ್ಲಿ ಈಜುತ್ತಿದ್ದರು. ಈ ವೇಳೆ ಜೀವ ರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದರೂ ಕೂಡ ಅವರ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿದು ಈಜಾಡತೊಡಗಿದ್ದರು.

ಕೆಲ ಹೊತ್ತಿನ ಬಳಿಕ ಅಲೆಯ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗುತ್ತಿದ್ದ 7 ಜನರು ಕೊಚ್ಚಿ ಹೋಗುತ್ತಿದ್ದಾಗ ಚೀರಾಡಿಕೊಂಡಿದ್ದು, ತಕ್ಷಣ ಅಲ್ಲಿಯೇ ಕರ್ತವ್ಯ ನಿರತರಾಗಿದ್ದ ಜೀವ ರಕ್ಷಕ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ, ರಕ್ಷಿಸಿದ್ದಾರೆ.

ಇವರಿಗೆ ಜೀವ ರಕ್ಷಕ ಸಿಬ್ಬಂದಿಗಳ ಮೇಲ್ವಿಚಾರಕರಾದ ರವಿ ನಾಯ್ಕ್, ಪ್ರವಾಸಿ ಮಿತ್ರ ರಾಜೇಶ್ ಅಂಬಿಗ, ಓಂ ವಾಟರ್ ಸ್ಪೋರ್ಟ್ಸ್ ಬೋಟಿಂಗ್ ಸಿಬ್ಬಂದಿಗಳಾದ ಬೋಟ್ ಡ್ರೈವರ್ ಭಗವಂತ ಬಿಜಾಪುರ್ ಸಹಾಯ ಮಾಡಿದ್ದಾರೆ. ರಕ್ಷಣೆಗೊಳಗಾದವರನ್ನು ಹುಬ್ಬಳ್ಳಿ ಮೂಲದ ಪರಶುರಾಮ (44) ರುಕ್ಮಿಣಿ (38)ಧೀರಜ್ (14) ಅಕ್ಷರ (14) ಖುಷಿ (13) ದೀಪಿಕಾ (12) ನಂದ ಕಿಶೋರ್ (10) ಗುರುತಿಸಲಾಗಿದೆ.

ಮಕ್ಕಳು ಆಟವಾಡುತ್ತಿದ್ದರು. ಆಳಕ್ಕೆ ಹೋಗದಂತೆ ತಿಳಿಸಿದರೂ ಖುಷಿಯಲ್ಲಿ ಮುಂದೆ ಹೋದರು. ಅವರನ್ನು ಹಿಂಬಾಲಿಸಿಕೊಂಡು ನಾವು ಹೋದೆವು. ಆನಂತರ ಇಲ್ಲಿ ಭಾರೀ ಆಳ ಇರುವುದು ಕಂಡು ಬಂದಿತು. ಮಕ್ಕಳು ಸಮುದ್ರದ ಅಲೆಗೆ ಸಿಲುಕಿಕೊಂಡಿದ್ದರು. ಕೂಗಿಕೊಂಡಿದ್ದರಿಂದ ಅಲ್ಲಿಯೇ ಇದ್ದ ಸಿಬ್ಬಂದಿ ಬಂದು ರಕ್ಷಿಸಿದರು. ಹೋದ ಜೀವ ಬಂದ ಹಾಗಾಯಿತು ಎಂದು ಅಲ್ಲಿನ ಅನುಭವವನ್ನು ಪರುಶರಾಮ ಕುಟುಂಬದವರು ಹೇಳಿಕೊಂಡರು.

ಗೋಕರ್ಣದ ಹಲವು ಕಡೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿ ಆಳದ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಆದರೂ ನೀರು ಹಾಗೂ ಅಲೆ ಕಂಡಾಗ ಜನರ ಭಾವನೆಯೂ ಬದಲಾಗುತ್ತದೆ. ಖುಷಿಯಲ್ಲಿ ನೀರಿಗೆ ಇಳಿದು ಸಂಕಷ್ಟ ತಂದೊಡ್ಡಿಕೊಳ್ಳುತ್ತಾರೆ. ಕುಟುಂಬದವರೂ ಹೀಗೆಯೇ ಸಂಕಷ್ಟಕ್ಕ ಸಿಲುಕಿದರು. ಕೂಡಲೇ ಅವರನ್ನುರಕ್ಷಿಸಲಾಗಿದೆ. ಇಂತ ಪ್ರಕರಣಗಳು ಎಷ್ಟೇ ಎಚ್ಚರ ನೀಡಿದರೂ ಆಗಾಗ ಆಗುತ್ತಲೇ ಇರುತ್ತವೆ. ಮುನ್ನೆಚ್ಚರಿಕೆಯೊಂದೇ ಅನಾಹುತ ತಪ್ಪಿಸುವ ದಾರಿ ಎಂಬುದು ಲೈಫ್‌ ಗಾರ್ಡ್‌ ಸಿಬ್ಬಂದಿ ನುಡಿ.

ಅನಾಹುತದ ಸ್ಥಳ

ಗೋಕರ್ಣದ ಸಮುದ್ರ ತೀರದಲ್ಲಿ ಹಲವಾರು ಬಾರಿ ದುರಂತಗಳು ಸಂಭವಿಸಿವೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಗೋಕರ್ಣಕ್ಕೆ ಬರುತ್ತಾರೆ. ಇಲ್ಲಿನ ದೇಗುಲಕ್ಕೆ ಭೇಟಿ ನೀಡಿದವರು ಸಮುದ್ರದಲ್ಲೂ ಕೆಲ ಹೊತ್ತು ಕಳೆದು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವುದೂ ಇದೆ. ಈ ಕುರಿತು ಜನರಿಗೆ ಎಚ್ಚರಿಕೆ ನೀಡಿದರೂ ಉಮೇದಿನಲ್ಲಿ ಸಂಕಷ್ಟಕ್ಕೆ ಒಳಗಾಗುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಪಿಂಡ ಬಿಡಲು ತೆರಳಿ ನೀರು ಪಾಲಾಗಿದ್ದವನ ರಕ್ಷಣೆ

ಇನ್ನು ಇದೇ ಕಡಲತೀರದಲ್ಲಿ ಪಿಂಡ ಪ್ರಧಾನ ಮಾಡುವ ವೇಳೆ ಹುಬ್ಬಳ್ಳಿ ಮೂಲದ ವ್ಯಕ್ತಿಯೋರ್ವರು ಸಮುದ್ರ ಪಾಲಾಗಿದ್ದ ಘಟನೆ ಕೂಡ ನಡೆದಿದ್ದು, ಇವರನ್ನು ಕೂಡ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಹುಬ್ಬಳ್ಳಿಯ ಎಲ್.ವಿ.ಪಾಟೀಲ್ ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪಿಂಡ ಪ್ರಧಾನ ಮಾಡಲು ಬಂದಿದ್ದ ಇವರು ಸಮುದ್ರಕ್ಕೆ ಇಳಿದಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ರಕ್ಷಣೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿಗೆ ಕೂಗಿಕೊಂಡಿದ್ದು, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವನನ್ನು ರಕ್ಷಣೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

( ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

IPL_Entry_Point

ವಿಭಾಗ