ಕನ್ನಡ ಸುದ್ದಿ  /  ಕರ್ನಾಟಕ  /  Ramadan2024: ಬಡವರ ಹಸಿವಿನ ನೋವು ತಿಳಿಸುವ ರಂಜಾನ್‌ ಉಪವಾಸ, ಏನು ರೋಜಾ ವಿಶೇಷ

Ramadan2024: ಬಡವರ ಹಸಿವಿನ ನೋವು ತಿಳಿಸುವ ರಂಜಾನ್‌ ಉಪವಾಸ, ಏನು ರೋಜಾ ವಿಶೇಷ

ಈ ಬಾರಿಯ ರಮಜಾನ್‌(Ramadan2024) ಹಬ್ಬದ ಚಟುವಟಿಕೆಗಳು ಚಂದ್ರದರ್ಶನದ ನಂತರ ಶುರುವಾಗಲಿದೆ. ಕಲವು ದೇಶದಲ್ಲಿ ಭಾನುವಾರವೇ ಉಪವಾಸ ಶುರುವಾದರೆ, ಇನ್ನಷ್ಟು ಕಡೆ ಸೋಮವಾರದಿಂದ ಆರಂಭವಾಗಲಿದೆ. ರಮಜಾನ್ ಉಪವಾಸ ಕುರಿತು ವಿವರಣೆ ಇಲ್ಲಿದೆ.-ಸಮೀವುಲ್ಲಾ ಉಸ್ತಾದ, ವಿಜಯಪುರ

ಈ ಬಾರಿಯ ರಮಜಾನ್‌ ಹಬ್ಬದ ಒಂದು ತಿಂಗಳ ಉಪವಾಸಗಳು ಆರಂಭಗೊಳ್ಳಲಿವೆ.
ಈ ಬಾರಿಯ ರಮಜಾನ್‌ ಹಬ್ಬದ ಒಂದು ತಿಂಗಳ ಉಪವಾಸಗಳು ಆರಂಭಗೊಳ್ಳಲಿವೆ.

ವಿಜಯಪುರ: ಬಡವರ ಹಸಿವಿನ ಮಹತ್ವ, ಆತ್ಮಶುದ್ಧಿ, ಇಂದ್ರಿಯ ನಿಗ್ರಹ, ಅನುಪಮ ಜೀವನ ನೀಡಿದ ಅಲ್ಲಾಹನ ಕರುಣೆಗೆ ಪಾತ್ರರಾಗಲು ನಮಾಜ್, ಬಡವರಿಗೆ ಸಹಾಯ ಮಾಡುವ ಜಕಾತ್ ಮೊದಲಾದ ಪವಿತ್ರ ಕಾರ್ಯ ನಿರ್ವಹಣೆಯ ಮಹತ್ವ ಸಾರುವ ರಂಜಾನ್ ಮುಸ್ಲಿಂ ಬಾಂಧವರ ಪವಿತ್ರ ಮಾಸ. ಪವಿತ್ರ ರೋಜಾ (ಉಪವಾಸ), ಅಲ್ಲಾಹನ ಸ್ಮರಣೆ ಹಾಗೂ ರಾತ್ರಿ ಸಮಯದಲ್ಲಿ ಪವಿತ್ರ ಕುರ್‌ಆನ್ ಶ್ಲೋಕಗಳುಳ್ಳ ವಿಶೇಷ ತರಾವ್ಹಿ ನಮಾಜ್ ಹೀಗೆ ರಂಜಾನ್ ಹಬ್ಬದಲ್ಲಿ ಹಲವಾರು ಧಾರ್ಮಿಕ ಆಚರಣೆಗಳ ಮೂಲಕ ಮುಸ್ಲಿಂ ಬಾಂಧವರು ಆಚರಿಸುತ್ತಾರೆ, ಸ್ಥಿತಿವಂತ ಮುಸ್ಲಿಂರಿಗೆ ಕಡ್ಡಾಯ ಕರ್ತವ್ಯವಾಗಿರುವ ಬಡವರಿಗೆ ಸಹಾಯ ಹಸ್ತ ನೀಡುವ ಜಕಾತ್ ಕರ್ತವ್ಯವನ್ನು ಇದೇ ಮಾಸದಲ್ಲಿ ಕೈಗೊಳ್ಳುವುದು ರೂಢಿ. ವಿವಿಧ ಪ್ರವಾದಿ ವಚನಗಳಲ್ಲಿ ಬರುವ ಜೀವನ ವೃತ್ತಾಂತಗಳ ಪ್ರಕಾರ, ಚಂದ್ರನ ದರ್ಶನದ ಆಧಾರದಲ್ಲಿ ಈ ತಿಂಗಳು 29 ಅಥವಾ 30 ದಿನಗಳ ಕಾಲ ಇರುತ್ತದೆ. ಮಾರ್ಚ್‌11ರಿಂದ ಉಪವಾಸ ಆರಂಭಗೊಂಡು ಏಪ್ರಿಲ್‌ 9ರವರೆಗೆ ಇರಲಿದೆ.

ಟ್ರೆಂಡಿಂಗ್​ ಸುದ್ದಿ

ಹಲವು ಮಹತ್ವಗಳ ರೋಜಾ

ರೋಜಾ ರಂಜಾನ್ ಹಬ್ಬದ ಆದ್ಯ ಕರ್ತವ್ಯ, ರಮಜಾನ್ ಮಾಸದ ಹೃದಯ ಎಂದೂ ಹೇಳಬಹುದಾಗಿದೆ. ರೋಜಾ ಎಂದರೆ ಕೇವಲ ಉಪವಾಸಕ್ಕಷ್ಟೇ ಸೀಮಿತವಲ್ಲ. ಬಡವರು ತುತ್ತು ಅನ್ನಕ್ಕಾಗಿ ಪರಿತಪಿಸುವ ರೀತಿ ಶ್ರೀಮಂತರು ಅನುಭವಿಸಬೇಕು, ಆ ಮೂಲಕ ಅವರಿಗೆ ನೆರವಾಗಬೇಕು ಎಂಬ ಸಂದೇಶ ಅದರಲ್ಲಿ ಅಡಗಿದೆ, ಇಂದ್ರೀಯಗಳ ನಿಗ್ರಹವೂ ಸಹ ರೋಜಾ ಭಾಗ, ಕೇವಲ ಉಪವಾಸ ಮಾಡಿ ಇಂದ್ರಿಯಗಳಿಂದ ಅಶ್ಲೀಲ ದೃಶ್ಯ ನೋಡುವುದು, ಅಶ್ಲೀಲ ಮಾತುಗಳನ್ನಾಡಿದರೆ ರೋಜಾ ಸಿಂಧುವಾಗುವುದಿಲ್ಲ. ಹೀಗಾಗಿ ಇಂದ್ರೀಯ ನಿಗ್ರಹವೂ ಸಹ ರೋಜಾನ ಒಂದು ಅನುಪಮ ಭಾಗವಾಗಿ ಪರಿಗಣಿತವಾಗಿದೆ.

ಉಪವಾಸದ ಶಬ್ದಾರ್ಥವು, ಆಹಾರ, ಪಾನೀಯ, ಲೈಂಗಿಕ ಕ್ರಿಯೆ, ಧೂಮಪಾನ ಮತ್ತು ಎಲ್ಲಾ ರೀತಿಯ ಕೆಟ್ಟ ಮತ್ತು ಭೌತಿಕವಾದ ಆಸೆ ಆಮಿಷಗಳಿಗೆ ಬಲಿಯಾಗುವುದರಿಂದ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರೋಜಾ ಪ್ರಧಾನ ಪಾತ್ರ ವಹಿಸುತ್ತದೆ.ಇಸ್ಲಾಮಿನ ಒಂಬತ್ತನೇ ತಿಂಗಳಾದ ರಂಜಾನ್ ಅವಧಿಯಲ್ಲಿ ಸಂಪೂರ್ಣ ತಿಂಗಳು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಇದೇ ರೀತಿ ವ್ರತ ಆಚರಿಸಬೇಕು.

ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ ಅವರು ಹೇಳಿದಂತೆ, ಯಾವ ವ್ಯಕ್ತಿ ಸುಳ್ಳಾಡುವುದನ್ನು ಮತ್ತು ಅದರಂತೆ ವರ್ತಿಸುವುದನ್ನು ವರ್ಜಿಸುವುದಿಲ್ಲವೋ ಅಂಥವನು ಹಸಿವು ಮತ್ತು ಬಾಯಾರಿಕೆಯಿಂದಿರುವುದು ಅಲ್ಲಾಹನಿಗೇನೂ ಬೇಕಾಗಿಲ್ಲ.

ಹಗಲಿನಲ್ಲಿ ಮುಸ್ಲಿಮರು ಉಪವಾಸ ವ್ರತವನ್ನು ಆಚರಿಸುತ್ತಾರೆ. ಸೂರ್ಯನ ಕಿರಣಗಳು ಇನ್ನೂ ಹೊರಡದಿರುವ ಸಮಯದಿಂದ ಹಿಡಿದು ಸೂರ್ಯಾಸ್ತದ ತನಕ ಜನರು ಅನ್ನ, ಪಾನೀಯಗಳನ್ನು ತೊರೆಯುತ್ತಾರೆ.

ರೋಜಾ ಆಚರಣೆಯ ಪ್ರಯೋಜನ

ರೋಜಾ ಆಚರಣೆಯಿಂದ ದೈಹಿಕ ಆರೋಗ್ಯ ವೃದ್ಧಿ, ಮನಶಾಂತಿ, ದೇವನ ಮೇಲೆ ಭಕ್ತಿ, ಬಡವರ ನೋವು ಗೊತ್ತಾಗುತ್ತದೆ, ಅದೇ ತೆರನಾಗಿ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಉಪವಾಸವು ಅಲ್ಲಾಹನ ಸೇವೆಯನ್ನು ಮಾಡಲು ಮುಸ್ಲಿಮರನ್ನು ಸಜ್ಜುಗೊಳಿಸುವ ಒಂದು ತಿಂಗಳ ಆಧ್ಯಾತ್ಮಿಕ ತರಬೇತಿಯಾಗಿ ರೂಪಿತವಾಗಿದೆ, ಉಪವಾಸ ಮಾನವನಲ್ಲಿ ಜಾಗೃತಿ ಮತ್ತು ಆರೋಗ್ಯಕರ ಮನಸಾಕ್ಷಿಯನ್ನು ಬೆಳೆಸುತ್ತದೆ. ಯಾಕೆಂದರೆ ಉಪವಾಸವನ್ನು ರಹಸ್ಯವಾಗಿಯೂ, ಸಾರ್ವಜನಿಕವಾಗಿಯೂ ಆಚರಿಸಲಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಒಬ್ಬಾತನ ಗುಣನಡತೆಯನ್ನು ಪರಿಶೀಲಿಸಲು ಅಥವಾ ಉಪವಾಸ ಹಿಡಿಯುವಂತೆ ಒತ್ತಾಯಿಸಲು ಯಾರಿಗೂ ಅಧಿಕಾರ ಇಲ್ಲ.

ಉಪವಾಸವು ಸ್ವಾರ್ಥ, ಅತಿಯಾಸೆ ಮತ್ತು ಸೋಮಾರಿತನವನ್ನು ನಿವಾರಿಸಿ ಸ್ವಯಂ ನಿಯಂತ್ರಣ ಉಂಟು ಮಾಡುತ್ತದೆ. ಹಸಿವು ಮತ್ತು ಬಾಯಾರಿಕೆಯ ಅನುಭವವನ್ನು ಕಲಿಸುತ್ತದೆ. ಹಸಿವೆಯ ತೀವ್ರತೆಯನ್ನು ನಾವು ಉಪವಾಸದ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ. ಪ್ರತಿನಿತ್ಯ ಹಸಿವೆಯಿಂದ ಬಳಲುವ ಲಕ್ಷಾಂತರ ಬಡವರ ಪರಿಸ್ಥಿತಿ ಹೇಗಿರಬಹುದು ಎಂಬುವುದನ್ನು ಅರಿತುಕೊಳ್ಳಬಹುದಾಗಿದೆ.

ಉಪವಾಸವು ಮಾನವನಿಗೆ ಪಾರದರ್ಶಕವಾದ ಆತ್ಮ, ಆಲೋಚಿಸಲು ಶುಭ್ರವಾದ ಮನಸ್ಸು, ಅತ್ತಿತ್ತ ಚಲಿಸಿ ಕಾರ್ಯನಿರ್ವಹಿಸಲು ಹಗುರವಾದ ದೇಹವನ್ನು ಸಜ್ಜುಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿರುವುದು ಈ ಎಲ್ಲಾ ಫಲಿತಾಂಶಗಳನ್ನು ನೀಡುತ್ತದೆ. ವೈದ್ಯಕೀಯ ಸಲಹೆಗಳು, ಜೀವಶಾಸ್ತ್ರದ ನಿಯಮಗಳು ಮತ್ತು ಬೌದ್ಧಿಕ ಅನುಭವಗಳು ಇದನ್ನು ಪುಷ್ಟೀಕರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

-ಸಮೀವುಲ್ಲಾ ಉಸ್ತಾದ, ವಿಜಯಪುರ

IPL_Entry_Point

ವಿಭಾಗ