Bakrid 2023: ತ್ಯಾಗ–ಬಲಿದಾನ ಸ್ಮರಿಸುವ ಮಹತ್ವದ ಹಬ್ಬ ಬಕ್ರೀದ್; ಬಕ್ರೀದ್ ಮತ್ತು ಹಜ್ ಯಾತ್ರೆ ಹಿನ್ನಲೆ, ಮಹತ್ವ ಏನು?
Feast of Sacrifice: ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ.
ಬಕ್ರೀದ್ 2023: ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ. ಈ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಯಾತ್ರೆಯನ್ನು ನೆರವೇರಿಸುತ್ತಾರೆ.
ಉಳಿದ ದಿನಗಳಲ್ಲಿ ಪವಿತ್ರ ಮೆಕ್ಕಾ-ಮದೀನಾಗಳನ್ನು ಸಂದರ್ಶಿಸುವುದು `ಉಮರಾ' ಎಂದು ಕರೆಯಿಸಿಕೊಂಡರೆ, ಬಕ್ರೀದ್ ಸಂದರ್ಭದಲ್ಲಿ ಈ ಪವಿತ್ರ ಕ್ಷೇತ್ರಗಳ ದರ್ಶನ ಹಜ್ ಎನಿಸಿಕೊಳ್ಳುತ್ತದೆ. ಇಸ್ಲಾಂ ಧರ್ಮದ ಐದು ಕರ್ತವ್ಯಗಳಲ್ಲಿ, ಸ್ಥಿತಿವಂತ ಮುಸ್ಲಿಂರಿಗೆ ಕಡ್ಡಾಯವಾಗಿರುವ ಐದನೇಯ ಕರ್ತವ್ಯ ಹಜ್ ಆಗಿದೆ.
ಸಕಲ ಜವಾಭ್ದಾರಿ ಪೂರೈಸಿರುವ, ಆರ್ಥಿಕವಾಗಿ ಸಶಕ್ತರಾಗಿರುವ ಮುಸ್ಲಿಂರಿಗೆ ಈ ಹಜ್ ಯಾತ್ರೆ ಕಡ್ಡಾಯವಾಗಿದೆ, ಆರ್ಥಿಕವಾಗಿ ಹೊರೆ ಮಾಡಿಕೊಂಡು ಹಜ್ ಯಾತ್ರೆ ಮಾಡುವ ಅವಕಾಶವಿಲ್ಲ. ಬಕ್ರೀದ್ ಸಂದರ್ಭದಲ್ಲಿ ಹಜ್ ಯಾತ್ರೆಗೆ ಭಾರತ, ನೇಪಾಳ, ಬಾಂಗ್ಲಾದೇಶ, ದಕ್ಷಿಣ ಆಫ್ರೀಕಾ, ನ್ಯೂಜಿಲೆಂಡ್, ಅಮೇರಿಕೆ, ಆಸ್ಟ್ರೆಲಿಯಾ ಸೇರಿದಂತೆ ಜಗತ್ತಿನ ಸಕಲ ರಾಷ್ಟ್ರಗಳ ಮುಸ್ಲಿಂ ಭಕ್ತಾದಿಗಳು ಒಂದೆಡೆ ಸೇರುತ್ತಾರೆ. ಪವಿತ್ರ `ಕಾಬಾ' (ಕಪ್ಪು ಕಲ್ಲಿನ ಮಸೀದಿ)ಯನ್ನು ಕೇಂದ್ರಿಕರಿಸಿ ನಮಾಜ್ ಹಾಗೂ ಹಜ್ ಯಾತ್ರೆಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು ಪುನೀತರಾಗುತ್ತಾರೆ. ಕೋಟಿ ಕೋಟಿ ಸಂಖ್ಯೆಯಲ್ಲಿ ಹಜ್ ಯಾತ್ರಿಕರು ಏಕಕಾಲಕ್ಕೆ ವ್ಯವಸ್ಥಿತವಾಗಿ ನಮಾಜ್ ಮಾಡುವ ನಿಟ್ಟಿನಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿರುತ್ತದೆ.
ಬಕ್ರೀದ್ ಹಬ್ಬದ ಐತಿಹಾಸಿಕ ಹಿನ್ನೆಲೆ
ಹಜರತ್ ಇಬ್ರಾಹಿಂ (ಸ.ಅ) ಅವರ ತ್ಯಾಗವನ್ನು ಈ ಬಕ್ರೀದ್ ಸಾಂಕೇತಿಕರಿಸುತ್ತದೆ, ಹೀಗಾಗಿ ಪ್ರವಾದಿ ಹಜರತ್ ಇಬ್ರಾಹಿಂ ಅವರ ಜೀವನ, ತತ್ವಗಳನ್ನು ಹಾಗೂ ಅವರಲ್ಲಿನ ಭಕ್ತವಂತ ದೈವ ನಿಷ್ಠೆ ಹಾಗೂ ತ್ಯಾಗಗುಣದೊಂಧಿಗೆ ಬಕ್ರೀದ್ ಹಬ್ಬ ಬೆಸೆದುಕೊಂಡಿದೆ.
ಪ್ರವಾದಿ ಇಬ್ರಾಹಿಂರು ಇರಾಕ್ ದೇಶದಲ್ಲಿ ಜನಿಸಿದರು. ಅವರ ತಂದೆ ಮೂರ್ತಿಗಳನ್ನು ತಯಾರಿಸಿ ಮಾರುವ ಪ್ರಖ್ಯಾತ ಉದ್ಯೋಗಿಯಾಗಿದ್ದರು. ನಮ್ರೂದ್ ರಾಜನ ಆಸ್ಥಾನದಲ್ಲಿ ಪ್ರತಿಷ್ಟಿತ ಸ್ಥಾನ ಪಡೆದಿದ್ದರು. ತನ್ನ ಮುಂದೆಯೇ ತಯಾರಾಗುತ್ತಿದ್ದ ವಿವಿಧ ಮೂರ್ತಿಗಳನ್ನು ಕಂಡು ಇಬ್ರಾಹಿಂರು ಆಕ್ಷೇಪಿಸಿದ್ದರು, ಆಗ ತಂದೆಯು ನೀನು ನನ್ನ ನಂತರ ನನ್ನ ಈ ಸ್ವತ್ತು ಸಂಪತ್ತು, ಐಶ್ವರ್ಯಗಳ ಒಡೆಯನಾಗಲಾರೆಯೋ ಎಂದು ಪ್ರವಾದಿ ಇಬ್ರಾಹಿಂ ಅವರನ್ನು ಹೊರಗೆ ಕಳುಹಿಸುತ್ತಾರೆ. ಏಕದೇವೋಪಾಸನೆಗಾಗಿ ಸಮಸ್ತ ಐಶ್ವರ್ಯವನ್ನು ಹಜರತ್ ಇಬ್ರಾಹಿಂರು ತ್ಯಾಗ ಮಾಡುತ್ತಾರೆ, ಏಕದೇವೋಪಾಸನೆಯ ಕರೆಯನ್ನು ಮೊಳಗಿಸುತ್ತಾ ಸಾಗುತ್ತಾರೆ.
ಒಮ್ಮೆ ಹಲವಾರು ಮೂರ್ತಿಗಳಿರುವ ಆರಾಧನಾಲಯದೊಳೊಕ್ಕೆ ಯಾರೂ ಇಲ್ಲದಾಗ ಬಾಲಕ ಇಬ್ರಾಹಿಂ ಹೊಕ್ಕಿ, ಮೂರ್ತಿಗಳೆಲ್ಲವನ್ನು ತುಂಡು ತುಂಡಾಗಿಸಿ, ಕೊಡಲಿಯನ್ನು ದೊಡ್ಡ ಮೂರ್ತಿಯ ಕೈಯಲ್ಲಿರುಸುತ್ತಾನೆ. ಈ ಕೆಲಸ ಅಬ್ರಹಾಮ ಅಲ್ಲದೆ ಯಾರದೂ ಅಲ್ಲವೆಂದರಿತ ಗ್ರಾಮಸ್ಥರು ಆತನನ್ನು ಹಿಡಿದು ತರುತ್ತಾರೆ. ಇದು ಯಾರು ಮಾಡಿದ್ದೆಂದು ಆತನಲ್ಲಿ ಕೇಳಿದಾಗ, ಕೊಡಲಿ ಹಿಡಿದು ಕೊಂಡಿರುವ ದೊಡ್ಡ ಮೂರ್ತಿಯನ್ನೇ ಕೇಳಿರಿಯೆನ್ನುತ್ತಾರೆ. ಅದು ಮಾತನಾಡುವುದಿಲ್ಲವೆಂದಾಗ ಹಾಗಾದರೆ ತನ್ನ ಮೇಲೆ ಕುಳಿತ ನೊಣವನ್ನೂ ಓಡಿಸಲಾಗದ, ನಿಮ್ಮ ಕೈಗಳಿಂದಲೇ ರಚಿಸಿದವುಗಳನ್ನೇಕೆ ಪೂಜಿಸುತ್ತೀರೆ ಎಂದು ಮರುಪ್ರಶ್ನೆ ಹಾಕುತ್ತಾರೆ. ಹೀಗಾಗಿ ಬಾಲ್ಯದಲ್ಲಿಯೇ ಹಜರತ್ ಇಬ್ರಾಹಿಂರು ವೈಚಾರಿಕತೆಗೆ ಸಾಕ್ಷಿಯಾಗಿದ್ದರು.
ನೂರೆಂಟು ವಿಘ್ನ - ಹಲವಾರು ತೊಂದರೆ
ಏಕದೇವೋಪಾಸನೆಯ ತತ್ವ ಸಾರಲು ಹಜರತ್ ಇಬ್ರಾಹಿಂ ಮುಂದುವರೆಯುತ್ತಾರೆ. ಈ ನಿಟ್ಟಿನಲ್ಲಿ ಅನೇಕ ವಿಘ್ನಗಳು ಎದುರಿಸಿದರೂ ಅವರು ತಮ್ಮ ತತ್ವ ಬಿಡಲಿಲ್ಲ.
ನಮ್ರೂದ್ ಸ್ವೇಚ್ಛಾಧಿಪತಿಯು ಬೃಹತ್ತಾದ ಅಗ್ನಿಕುಂಡವನ್ನು ಹೊತ್ತಿಸುವಂತೆ ತನ್ನ ಜನರಿಗೆ ಆಜ್ಞೆ ನೀಡುತ್ತಾನೆ. ಏಕ ದೇವತ್ವದ ಕರೆಯಿಂದ ಇಬ್ರಾಹಿಮರನ್ನು ಬೆದರಿಸುವ ತಂತ್ರಗಳ ಮೂಲಕ ತಡೆಯುವ ಪ್ರಯತ್ನ ಮಾಡಲಾಗುತ್ತದೆ. ತನ್ನ ಪ್ರಾಣಕ್ಕಿಂತಲೂ ಏಕೈಕ ದೇವನ ಸಂಪ್ರೀತಿಯೇ ಮುಖ್ಯವೆಂಬುದು ಇಬ್ರಾಹಿಮರ ನಂಬಿಕೆಯಾಗಿತ್ತು. ತನ್ನ ಕರ್ತವ್ಯವನ್ನು ಮುಂದುವರಿಸುತ್ತಿರುತ್ತಾರೆ. ಇಬ್ರಾಹಿಮರನ್ನು ಧಗಿಸುತ್ತಿರುವ ಅಗ್ನಿಕುಂಡಕ್ಕೆಸೆಯಲಾಗುತ್ತದೆ. ದೇವಾಜ್ಞೆಯಂತೆ ಬೆಂಕಿ ಆಶ್ಚರ್ಯಕರವಾಗಿ ತಣ್ಣಗಾಗುತ್ತದೆ. ಇಬ್ರಾಹಿಮರು ರಕ್ಷಿಸಲ್ಪಡುತ್ತಾರೆ.
ಮುಂದುವರೆದು ಹಜರತ್ ಇಬ್ರಾಹಿಂ ಅವರಿಗೆ ಮನೆ, ಸಮಾಜ ಮತ್ತು ನಾಡಿನಿಂದಲೇ ಹೊರಹಾಕಲಾಗುತ್ತದೆ. ಅಸಾಮಾನ್ಯ ಸಹನಾ ಶಕ್ತಿಯ ಮೂಲಕ ದೇಶ ಪ್ರದೇಶ ಅಲೆಯುತ್ತಾರೆ. ಕಲ್ಲು ಮುಳ್ಳು ಬೆಟ್ಟ, ಮರುಭೂಮಿಗಳ ದುರ್ಗಮ ಹಾದಿ, ಭಯಾನಕ ಪ್ರಾಣಿಗಳ ಅಪಾಯಕಾರಿ ಕಾಡುಗಳು, ಹಿಡಿದುಕೊಂಡು ಹೋಗಿ ಗುಲಾಮರಾಗಿಸಬಹುದಾದವರ ಭಯ ಇನ್ನೊಂದೆಡೆ. ಏಕೈಕ ದೇವನು ನೀಡಿರುವ ಸತ್ಯದ ಮಾರ್ಗದ ದೌತ್ಯದ ಪ್ರಜ್ಞ, ಒಂದೇ ಛಲದ ಅಸಾಮಾನ್ಯ ಗುಣದ ಪ್ರವಾದಿ ಏನು ಸಹಿಸಲೂ ಸಿದ್ಧ. ಈಮಧ್ಯೆ ಹಾಜಿರಾರನ್ನು ಮದುವೆ ಆಗುತ್ತಾರೆ. ಈ ನಡುವೆ ಮಕ್ಕಳಿಲ್ಲದ ಕೊರಗು, ನಿರಂತರ ವಿವಿಧ ರೀತಿಯ ಪರೀಕ್ಷೆಗಳು, ತನ್ನ ಕಾರ್ಯದಲ್ಲಿ ಸಹಕಾರಕ್ಕಾಗಿ ಮತ್ತು ಮುಂದುವರಿಸಲಿಕ್ಕಾಗಿ ಓರ್ವ ಮಗನ ಕೊರತೆಯೆಂದು ಮನಗಾಣುತ್ತಾರೆ. ಪ್ರಾರ್ಥನೆಯನ್ನು ಆಲಿಸಿ ದೇವನು ಅವರ ಮುದಿ ವಯಸ್ಸಿನಲ್ಲಿ ಓರ್ವ ಮಗ ದಯಪಾಲಿಸುತ್ತಾನೆ.
ಮಡದಿ ಮತ್ತು ಹಸುಳೆಯನ್ನು ಮರುಭೂಮಿಯಲ್ಲಿ ಬಿಡಬೇಕೆಂಬ ಆಜ್ಞೆ
ಅದೇ ಇನ್ನೊಂದು ಪರೀಕ್ಷೆಗೆ ಕಾರಣವಾಗುತ್ತದೆ. ಎಳೆಕೂಸು ಮತ್ತು ಮಡದಿಯನ್ನು ಮರುಭೂಮಿಯಲ್ಲಿ ಬಿಟ್ಟು ಬರುವಂತೆ ದೇವಾಜ್ಞೆಯಾಗುತ್ತದೆ. ಪ್ರವಾದಿಯವರು ಮರು ಯೋಚಿಸದೆ ಶಿರಸಾ ಪಾಲಿಸುತ್ತಾರೆ. ಏಕಾಏಕಿ ಈ ವರ್ತನೆಯನ್ನು ಕಂಡು ಮಡದಿ ಇದೇನು ದೇವಾಜ್ಞೆಯೇ ಎಂದು ಕೇಳುತ್ತಾರೆ. ಹೌದೆಂದು ತಲೆಯಾಡಿಸಿದಾಗ ಸುಮ್ಮನಾಗುತ್ತಾರೆ. ಬೇಡಿ ಮುದಿ ವಯಸ್ಸಿನಲ್ಲಿ ಪಡೆದ, ತನಗೆ ಶಕ್ತಿ, ಆಸರೆ ಆಯಿತೆಂದುಕೊಂಡು ಹಲ ಆಕಾಂಕ್ಷೆಗಳಿಂದ ಪುಳಕಿತರಾಗುವಾಗಲೇ ಈ ಪರೀಕ್ಷೆಯೂ ಕಠಿಣವೇ ಆಗಿತ್ತು.
ಹಾಜಿರಾರಲ್ಲಿದ್ದ ಖರ್ಜೂರ ಮತ್ತು ನೀರು ಕೆಲವೇ ದಿನಗಳಲ್ಲಿ ಮುಗಿಯುತ್ತದೆ. ಮಗುವಿಗೆ ಬಾಯಾರಿಕೆಯಾಗಿರುತ್ತದೆ. ತಾಯಿ ಹೃದಯ ತಲ್ಲಣಗೊಳ್ಳುತ್ತದೆ. ಆಚೀಚೆ ಓಡಾಡುತ್ತಿರುತ್ತಾರೆ. ಒಮ್ಮೆ ಸಫಾ ಇನ್ನೊಮ್ಮೆ ಮರ್ವಾವೆಂಬ ಬೆಟ್ಟಗಳ ಮಧ್ಯೆ ಓಡಾಡುತ್ತಾ, ಏರುತ್ತಾ ಯಾವುದಾದರೂ ವ್ಯಾಪಾರತಂಡ ಕಾಣುವುದೋ ನೋಡುತ್ತಾರೆ. ನಿರಾಶರಾಗಿ ಮಗುವಿನ ಕಡೆಗೆ ಮರಳಿದಾಗ ಒಂದು ಅದ್ಭುತ ಕಾದಿರುತ್ತದೆ. ಮಗು ಕಾಲುಗಳ ಅಪ್ಪಳಿಸಿದ ಸ್ಥಳದಲ್ಲೇ ನೀರಿನ ಚಿಲುಮೆಯೊಂದನ್ನು ಕಂಡು ಸಂತೋಷವೂ ಅಶ್ಚರ್ಯವೂಗೊಳ್ಳುತ್ತಾರೆ. ಬೇಕಾದಷ್ಟು ನೀರನ್ನು ಸಂಗ್ರಹಿಸಿ ಝಮ್ ಝಮ್ (ನಿಲ್ಲಿಸು) ಎಂದು ಬಿಡುತ್ತಾರೆ.
ಮಗನ ಅರ್ಪಣೆಯ ಪರೀಕ್ಷೆ
ಇಲ್ಲಿಗೆ ಪರೀಕ್ಷೆ ಮುಗಿಯಲಿಲ್ಲ. ಮುಂದೆ ಇದಕ್ಕಿಂತ ಭಯಾನಕ ಪರೀಕ್ಷೆ. ಬೆಳೆದ ಮಗ ಇಸ್ಮಾಯಿಲರನ್ನು ಬಲಿ ಕೊಡಬೇಕೆಂಬ ಆಜ್ಞೆ ಆಗುತ್ತದೆ. ದೇವಾಜ್ಞೆಯಿಂದ ಎಂದೂ ಹಿಂಜರಿಯದ ಇಬ್ರಾಹಿಮರು ಈ ವಿಷಯವನ್ನು ಕೂಡಲೇ ಮಗನಿಗೆ ತಿಳಿಸುತ್ತಾರೆ. ಉಕ್ಕಿನ ಮನುಷ್ಯನಂತಹ ಇಬ್ರಾಹೀಮರ ತರಬೇತಿಯಲ್ಲಿ ಪಳಗಿದ ತಂದೆಗೆ ತಕ್ಕ ಮಗ, ದೇವಾಜ್ಞೆಯಾಗಿದ್ದರೆ ಸದಾ ಸಿದ್ಧನೆನ್ನುತ್ತಾರೆ.
ಮಗನನ್ನು ಮಲಗಿಸುತ್ತಾರೆ. ಪುತೃವಾತ್ಸಲ್ಯ ತಡೆಯಾಗದಿರಲಿಯೆಂದು ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ಹರಿತವಾದ ಕತ್ತಿಯನ್ನು ಕರುಳ ಕುಡಿಯ ಕತ್ತಿನ ಮೇಲೆ ಚಲಿಸಿಯೇ ಬಿಡುತ್ತಾರೆ. ದೇವನು ನಿಷ್ಠೆ ಮತ್ತು ನಿಸ್ವಾರ್ಥದ ತನ್ನ ದಾಸನ ಆಜ್ಞಾ ಪಾಲನೆಯನ್ನು ಸ್ವೀಕರಿಸಿಯೇ ಬಿಡುತ್ತಾನೆ. ಮಗನ ಬದಲಿಗೆ ಕತ್ತು ಕೊಯ್ಯಲ್ಪಟ್ಟ ಟಗರು ಬಿದ್ದು ಕೊಂಡಿತ್ತು . ಇಸ್ಮಾಯಿಲರು ಜೀವಂತ ಎದ್ದು ಮುಗುಳ್ನಗುತ್ತಾ ನಿಂತಿದ್ದರು. ಇಲ್ಲೂ ಪರೀಕ್ಷೆಯಲ್ಲಿ ಇಬ್ರಾಹೀಮ ಮತ್ತು ಇಸ್ಮಾಯೀಲ ಇಬ್ಬರೂ ವಿಜಯಿಗಳಾಗುತ್ತಾರೆ.
ಹಜ್ಜ್ ಯಾತ್ರೆಯ ಪವಿತ್ರ ಬಕ್ರೀದ್
ಬಕ್ರೀದ್ ಹಬ್ಬ ಎಂದರೆ ಹಜ್ ಯಾತ್ರೆಯ ಸಂಭ್ರಮ. ಈ ಹಬ್ಬದ ಶುಭ ಸಂದರ್ಭದಲ್ಲಿಯೇ ಹಜ್ ಯಾತ್ರೆ ಭಕ್ತಿ ವೈಭವದಿಂಧ ನಡೆಯುತ್ತದೆ. ಆರೋಗ್ಯ ಹಾಗೂ ಆರ್ಥಿಕವಾಗಿ ಯೋಗ್ಯನಾಗಿರುವ ವ್ಯಕ್ತಿ ಜೀವನದಲ್ಲೊಮ್ಮೆ ಹಜ್ಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋಪಲಕ್ಷ ಮುಸ್ಲಿಮರು ವರ್ಷಕ್ಕೊಮ್ಮೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೆಕ್ಕಾ ನಗರದಲ್ಲಿ ಹೇಗೆ ಒಟ್ಟುಗೂಡುತ್ತಾರೆ, ಬಡವ, ಬಲ್ಲಿದ, ರಾಜ, ಮಂತ್ರಿ, ಸಚಿವ ಎಂಬ ಯಾವ ಬೇಧವೂ ಅಲ್ಲಿಲ್ಲ, ಅಲ್ಲಿ ಕೇವಲ ಎರಡು ತುಂಡು ಶುಭ್ರವಾದ ಶ್ವೇತ ಬಟ್ಟೆ (ಪವಿತ್ರ ಎಹರಾಮ್) ಧರಿಸಿ ಹಜ್ ಧಾರ್ಮಿಕ ವಿಧಾನದಲ್ಲಿ ಪಾಲ್ಗೊಳ್ಳುತ್ತಾರೆ.
ಕಾಬಾ ಬಳಿಯಲ್ಲೇ ಇರುವ ಎಂದೂ ಕಡಿಮೆಯಾಗದೆ ಸದಾ ಹರಿಯುತ್ತಲೇ ಇರುವ ಮರುಭೂಮಿಯ ಬುಗ್ಗೆಯೇ ಝಮಝಮ್ ನ ಬಾವಿ. ಅತ್ಯದ್ಭುತ ಗುಣಗಳುಳ್ಳ ಇದರ ನೀರನ್ನು ಲೋಕದ ಮೂಲೆ ಮೂಲೆಗೆ ಮಕ್ಕಾ ಯಾತ್ರಿಗಳು ಕೊಂಡೊಯ್ಯುತ್ತಾರೆ. ಇಬ್ರಾಹೀಮ ಮತ್ತು ಇಸ್ಮಾಯೀಲರು ಕೂಡಿ ಅಲ್ಲಾಹನ ಆಜ್ಞೆಯಂತೆ ಭೂಮಂಡಲದ ಕೇಂದ್ರ ಭಾಗದಲ್ಲಿ ನಿರ್ಮಿಸಿದ, ಮುಸ್ಲಿಮರೆಲ್ಲರೂ ನಮಾಝಿಗೆ ಅಭಿಮುಖವಾಗಿಸುವ ಕಾಬಾ ಭವನಕ್ಕೆ ಪ್ರದಕ್ಷಿಣೆಯಿಂದ ಹಿಡಿದು, ಹಾಜಿರಾರು ನೀರಿಗಾಗಿ ಓಡಾಡಿದ ಸಫಾ ಮರ್ವ ಬೆಟ್ಟಗಳಿಗೆ ಏರುವ ಎಲ್ಲಾ ವಿಧಿಗಳೂ ಹಜ್ಜ್ ನ ಭಾಗಗಳಾಗಿವೆ..
ಹಜ್ ಯಾತ್ರ ನಿರ್ವಹಣೆ ಸಂದರ್ಭದಲ್ಲಿ ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ರೋದಿಸಿ ಕ್ಷಮೆಯಾಚಿ ಪ್ರಾರ್ಥಿಸಿದರೆ ದೇವನು ಪ್ರಾಥನೆಯನ್ನು ಸ್ವೀಕರಿಸಿ ಪರಿಶುದ್ಧಗೊಳಿಸುತ್ತಾನೆಯೆಂದು ಪ್ರವಾದಿ ನುಡಿದಿರುತ್ತಾರೆ. ವಿವಿಧ ವಿಧಿಗಳ ಮೂಲಕ ತನ್ನನ್ನು ಸಂಸ್ಕರಿಸಿ, ದೇವವಿಶ್ವಾಸ ಮತ್ತು ದೇವ ಭಯ ವೃದ್ಧಿಸಿ ಹೊಸ ಜೀವನ ಆರಂಭಿಸುವ ಬದ್ಧತೆಯೊಂದಿಗೆ ಹಾಜಿಗಳು ಮರಳುತ್ತಾರೆ.