ಕನ್ನಡ ಸುದ್ದಿ  /  ಜೀವನಶೈಲಿ  /  Upsc Fail: ಯುಪಿಎಸ್‌ಸಿ ಫೇಲ್ ಆಯ್ತು ಅಂತ ಕೊರಗಬೇಡಿ, ಹೆಚ್ಚು ಚಿಂತಿಸದೇ ಇಲ್ಲಿರುವ 10 ಆಯ್ಕೆಗಳನ್ನೊಮ್ಮೆ ನೋಡಿ

UPSC Fail: ಯುಪಿಎಸ್‌ಸಿ ಫೇಲ್ ಆಯ್ತು ಅಂತ ಕೊರಗಬೇಡಿ, ಹೆಚ್ಚು ಚಿಂತಿಸದೇ ಇಲ್ಲಿರುವ 10 ಆಯ್ಕೆಗಳನ್ನೊಮ್ಮೆ ನೋಡಿ

ಯುಪಿಎಸ್‌ಸಿ ಪಾಸ್ ಮಾಡಲು ಆಗಲಿಲ್ಲವೆಂದು ಹತಾಶರಾಗಿ ಕೂರುವ ಬದಲು ಇಲ್ಲಿರುವ 10 ಆಯ್ಕೆಗಳಲ್ಲಿ ನಿಮಗೆ ಸರಿ ಹೊಂದುವದನ್ನು ಆರಿಸಿಕೊಂಡು ಉತ್ತಮ ಸಾಧನೆ ಮಾಡಬಹುದು. ಈ ಸಲಹೆಗಳು ಪದವೀಧರರಿಗೂ ನೆರವಾಗಬಲ್ಲದು. ಪದವೀಧರರು ಇವುಗಳನ್ನು ನೇರವಾಗಿಯೇ ಆಯ್ಕೆ ಮಾಡಿಕೊಳ್ಳಬಹುದು.

ಯುಪಿಎಸ್‌ಸಿ ಪೇಲ್ ಆದವರಿಗೂ ಹಲವು ಅವಕಾಶಗಳಿವೆ
ಯುಪಿಎಸ್‌ಸಿ ಪೇಲ್ ಆದವರಿಗೂ ಹಲವು ಅವಕಾಶಗಳಿವೆ

ಈಗಿನ ಕಾಲದಲ್ಲಿ ಪದವಿ ಶಿಕ್ಷಣ ಮುಗಿಯುತ್ತಿದ್ದಂತೆ ಕಂಪನಿಗಳಿಗೋ ಅಥವಾ ಸರ್ಕಾರಿ ನೌಕರಿಗಾಗಿಯೋ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವರು ಕಂಪನಿ ಕೆಲಸಗಳನ್ನು ಇಷ್ಟಪಟ್ಟರೆ, ಇನ್ನು ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಯಶಸ್ಸು ಕಾಣಬೇಕೆಂದು ಹಂಬಲಿಸುತ್ತಾರೆ. ಭಾರತ ಸರ್ಕಾರ ನಡೆಸುವ ಅತ್ಯುನ್ನತ ಪರೀಕ್ಷೆಯೆಂದರೆ ಯುಪಿಎಸ್‌ಸಿ. ಜಗತ್ತಿನ ಅತಿ ಕಠಿಣ ಪರೀಕ್ಷೆಗಳಲ್ಲಿ ಇದೂ ಒಂದು. ಪರೀಕ್ಷೆ ಎದುರಿಸಿ, ಕೆಲಸ ಗಿಟ್ಟಿಸಿ ಕೊಳ್ಳಬೇಕೆಂಬುದು ಅದೆಷ್ಟೋ ವಿದ್ಯಾರ್ಥಿಗಳ ಕನಸು ಕೂಡಾ ಹೌದು. ಆ ಕನಸಿನ ಬೆನ್ನೇರಿ ಹಗಲಿರುಳು ಪ್ರಯತ್ನ ಪಡುತ್ತಾರೆ.

ಎರಡು ಮೂರು ವರ್ಷ ತಪಸ್ಸು ಮಾಡುತ್ತಾರೆ. ಹಲವಾರು ಪುಸ್ತಕ, ಪತ್ರಿಕೆಗಳನ್ನು ಓದಿ, ಕೋಚಿಂಗ್‌ ಸೆಂಟರ್‌ಗೆ ಸೇರಿಕೊಂಡು ತಯಾರಿ ನಡೆಸುತ್ತಾರೆ. ಆದರೆ ಅದರಲ್ಲಿ ಕೆಲವರಿಗೆ ಯಶಸ್ಸು ಸಿಕ್ಕರೆ ಇನ್ನು ಕೆಲವರಿಗೆ ಸ್ವಲ್ಪದರಲ್ಲಿ ಕೈ ತಪ್ಪಿ ಹೋಗುತ್ತದೆ. ಹಾಗೆಂದು ಅವರಲ್ಲಿ ಕ್ಷಮತೆಯಿಲ್ಲವೆಂದಲ್ಲ. ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಲು ಆಗಲಿಲ್ಲವೆಂದು ಚಿಂತಿಸುವ ಅವಶ್ಯಕತೆಯಿಲ್ಲ. ಅದರ ಬದಲಿಗೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಬಹುದು.

ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಒಂದೇ ರೀತಿಯದ್ದಾಗಿರುತ್ತದೆ. ಬರೀ ಐಎಎಸ್‌, ಐಪಿಎಸ್‌ಗಳೊಂದೇ ಅಲ್ಲ. ಸ್ಟೇಟ್‌ ಪಿಎಸ್‌ಸಿ ಪರೀಕ್ಷೆ (ಕೆಪಿಎಸ್‌ಸಿ), ಬ್ಯಾಂಕ್‌, ರೈಲ್ವೆ ಇತ್ಯಾದಿ ಪರೀಕ್ಷೆಗಳನ್ನೂ ಇವರು ಎದುರಿಸಬಹುದು. ಯುಪಿಎಸ್‌ಸಿ ಪಾಸು ಮಾಡಲು ಆಗಲಿಲ್ಲವೆಂದು ಹತಾಶರಾಗಿ ಕೂರುವ ಬದಲು ಇಲ್ಲಿ ಹೇಳಿರುವ 10 ಆಯ್ಕೆಗಳಲ್ಲಿ ನಿಮಗೆ ಸರಿ ಹೊಂದುವದನ್ನು ಆರಿಸಿಕೊಂಡು ಉತ್ತಮ ಸಾಧನೆ ಮಾಡಬಹುದು. ಈ ಸಲಹೆಗಳು ಪದವೀಧರರಿಗೂ ನೆರವಾಗಬಲ್ಲದು. ಪದವೀಧರರು ಇವುಗಳನ್ನು ನೇರವಾಗಿಯೇ ಆಯ್ಕೆ ಮಾಡಿಕೊಳ್ಳಬಹುದು.

ಯುಪಿಎಸ್‌ಸಿ ಕೈತಪ್ಪಿ ಹೋದಲ್ಲಿ ಈ ಕೆಳಗಿನವುಗಳನ್ನು ಆಯ್ದುಕೊಳ್ಳಬಹುದು.

1) ಸ್ಟೇಟ್‌ ಪಿಎಸ್‌ಸಿ ಪರೀಕ್ಷೆಗಳು

ಪ್ರತಿಯೊಂದು ರಾಜ್ಯವೂ ತನ್ನ ವ್ಯಾಪ್ತಿಯಲ್ಲಿ ಬರುವ ಸರಕಾರಿ ನೌಕರಿಗಾಗಿ ಪಬ್ಲಿಕ್‌ ಸರ್ವೀಸ್‌ ಕಮಿಷನ್‌ ಪರೀಕ್ಷೆ ನಡೆಸುತ್ತದೆ. ಅದು ಯುಪಿಎಸ್‌ಸಿ ಪರೀಕ್ಷೆಯಂತೆಯೇ ಇರುತ್ತದೆ. ಆದರೆ ಆಯಾ ರಾಜ್ಯಕ್ಕೆ ಸಂಬಂಧಿಸಿರುತ್ತದೆ. ಮುಂದೆ ಕೆಲಸ ಸಿಕ್ಕ ನಂತರ ಆ ರಾಜ್ಯದ ಒಳಗೆ ಕೆಲಸ ನಿಭಾಯಿಸಬೇಕಾಗುತ್ತದೆ.

2) ಸರ್ಕಾರಿ ಕಂಪನಿಗಳು (ಪಬ್ಲಿಕ್‌ ಸೆಕ್ಟರ್‌ ಅಂಡರ್‌ಟೇಕಿಂಗ್ಸ್‌ PSUs):

ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳು ಯುಪಿಎಸ್‌ಸಿ ಥರದ ರಾಷ್ಟ್ರಮಟ್ಟದ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳುತ್ತವೆ. ಆ ಕಂಪನಿಗಳು ಉತ್ತಮ ಕೆಲಸದ ಜೊತೆಗೆ ಕೈತುಂಬ ಸಂಬಳ, ಹಲವು ಸವಲತ್ತುಗಳನ್ನೂ ನೀಡುತ್ತವೆ.

3) ಬ್ಯಾಂಕಿಂಗ್‌ ಕ್ಷೇತ್ರ

ಭಾರತದಲ್ಲಿ ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಮತ್ತು ವಿದೇಶಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್‌ನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಿಬ್ಬಂದಿ ಅವಶ್ಯಕತೆಯಿರುತ್ತದೆ. ಕೆಲ ಬ್ಯಾಂಕ್‌ಗಳು ತಮ್ಮದೇ ಆದ ಪರೀಕ್ಷೆಗಳನ್ನು ನಡೆಸಿದರೆ, ಇನ್ನು ಕೆಲವು ಐಬಿಪಿಎಸ್‌ ಮುಖಾಂತರ ಭರ್ತಿ ಮಾಡಿಕೊಳ್ಳುತ್ತವೆ. ಬ್ಯಾಂಕ್ ಕೆಲಸಗಳಿಗೂ ನಿಯಮಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ.

4) ಸ್ಟಾಫ್‌ ಸೆಲೆಕ್ಷನ್‌ ಕಮೀಷನ್‌ (ಎಸ್‌ಎಸ್‌ಸಿ)

ಇದು ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ಹುದ್ದೆಗಳಿಗಾಗಿ ಪರೀಕ್ಷೆಗಳನ್ನು ನಡೆಸುತ್ತದೆ. ಇದು ಸರ್ಕಾರಿ ನೌಕರಿಗೆ ಸೇರುವವರಿಗೆ ಇರುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

5) ರೈಲ್ವೆ ರಿಕ್ರೂಟ್‌ಮೆಂಟ್‌ ಬೋರ್ಡ್‌ (ಆರ್‌ಆರ್‌ಬಿ)

ಭಾರತೀಯ ರೈಲ್ವೆಯು ತನಗೆ ಅಗತ್ಯವಿರುವ ಸಿಬ್ಬಂದಿ ಭರ್ತಿಗಾಗಿ ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ. ಸರ್ಕಾರಿ ನೌಕರಿ ಆಕಾಂಕ್ಷಿಗಳು ಆರ್‌ಆರ್‌ಬಿ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ರೈಲ್ಚೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು.

6) ಶಿಕ್ಷಕ ವೃತ್ತಿ

ಜಗತ್ತಿನಲ್ಲಿ ಜ್ಞಾನವನ್ನು ಹಂಚುವ ಬಹು ದೊಡ್ಡ ಕೆಲಸವೆಂದರೆ ಅದು ಶಿಕ್ಷಕ ವೃತ್ತಿ. ಇದು ಗೌರವಾನ್ವಿತ ಕೆಲಸವೂ ಹೌದು. ಅನೇಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಪರೀಕ್ಷೆಯ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತದೆ. ಉನ್ನತ ಶಿಕ್ಷಣ ಪೂರ್ಣಗೊಳಿಸಿದ್ದರೆ ಕಾಲೇಜುಗಳಲ್ಲಿಯೂ ಉಪನ್ಯಾಸಕರಾಗಬಹುದು.

7) ಕಾನೂನು ವೃತ್ತಿ

ನೀವು ಕಾನೂನು ಪದವೀಧರರಾಗಿದ್ದರೆ ನಿಮಗಾಗಿ ಅನೇಕ ಅವಕಾಶಗಳ ಬಾಗಿಲು ತೆರೆದಿವೆ ಎಂದು ತಿಳಿದುಕೊಳ್ಳಿ. ವಿವಿಧ ರೀತಿಯ ಕೇಸುಗಳನ್ನು ನಿರ್ವಹಿಸಬಹುದು, ಕಾರ್ಪೋರೇಟ್‌ ಕಂಪನಿಗಳಿಲ್ಲಿ ಸಲಹೆಗಾರರಾಗಬಹುದು, ಅಥವಾ CLAT ಅಥವಾ AILET ಪರೀಕ್ಷೆಗಳನ್ನು ಪಾಸುಮಾಡುವುದರ ಮೂಲಕ ಕಾನೂನು ಪದವಿ ಕಾಲೇಜುಗಳಲ್ಲಿ ವೃತ್ತಿ ಆರಂಭಿಸಬಹುದು.

8) ಮ್ಯಾನೇಜ್‌ಮೆಂಟ್‌ ಕೆಲಸ

ನೀವು ಎಂಬಿಎ ಪದವೀಧರರಾಗಿದ್ದರೆ, ಒಳ್ಳೆಯ ಮ್ಯಾನೇಜರ್‌ ಆಗಬಹುದು. ಈಗಿನ ಕಾಲದಲ್ಲಿ ಕಂಪನಿಗಳನ್ನು ನಿರ್ವಹಿಸಲು ಮ್ಯಾನೇಜರ್‌ಗಳ ಅವಶ್ಯಕತೆಯಿದೆ. ಹಾಗಾಗಿ ಎಂಬಿಎ ಪದವೀಧರರಿಗೆ ವಿಪುಲ ಅವಕಾಶಗಳಿವೆ. ಅದಲ್ಲದೇ ಪ್ರತಿಷ್ಠಿತ ವಾಣಿಜ್ಯ ಶಾಲೆಗಳಲ್ಲಿ ಬೋಧಕರಾಗಿಯೂ ಸೇರಿಕೊಳ್ಳಬಹುದು.

9) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ

ನಿಮಗೆ ಬರವಣಿಗೆ ಮತ್ತು ಸಂವಹನದಲ್ಲಿ ಆಸಕ್ತಿಯಿದ್ದರೆ ಪ್ರತಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಳ್ಳಬಹುದು. ಅನೇಕ ಮೀಡಿಯಾ ಕಂಪನಿಗಳು ಪತ್ರಕರ್ತರನ್ನು ನೇಮಕ ಮಾಡಿಕೊಳ್ಳುತ್ತದೆ. ಕೆಲ ಮಾಧ್ಯಮ ಸಂಸ್ಥೆಗಳು ಪ್ರವೇಶ ಪರೀಕ್ಷೆಗಳನ್ನು ನಡೆಸಿ ಅರ್ಹತೆಯ ಆಧಾರದ ಮೇಲೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತವೆ.

10) ಉದ್ಯಮಶೀಲತೆ

ನಿಮಗೆ ಹೊಸಹೊಸ ವ್ಯಾಪಾರದ ಐಡಿಯಾ ಮತ್ತು ಉದ್ಯಮಗಳನ್ನು ಯಶಸ್ಸಿನತ್ತ ಕೊಂಡೊಯ್ಯುವ ಚಾಕಚಕ್ಯತೆ ಇದ್ದರೆ ಉದ್ಯಮಶೀಲತೆ ಉತ್ತಮ ಆಯ್ಕೆಯಾಗಬಲ್ಲದು. ಇತ್ತೀಚಿನ ದಿನಗಳಲ್ಲಿ ಉದ್ಯಮಶೀಲತೆಗೆ ಹೆಚ್ಚು ಬೇಡಿಕೆ ಇರುವುದನ್ನು ಕಾಣಬಹುದು. ಸರ್ಕಾರವೂ ಸಹ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಮೂಲಕ ಸ್ಟಾರ್ಟ್‌ಅಪ್‌ಗೆ ಪ್ರೋತ್ಸಾಹ ನೀಡುತ್ತಿದೆ. ಈ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಉದ್ಯಮಿಗಳಾಗಿ ನೀವು ಸ್ವತಂತ್ರವಾಗಿ ಬೆಳೆಯಬಹುದು.

(ಬರಹ: ಅರ್ಚನಾ ವಿ.ಭಟ್)