ಸಿಎಸ್ಕೆ ವಿರುದ್ಧ ಆರ್ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!
RCB Qualification scenario : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ 47 ರನ್ಗಳ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ಏನು ಮಾಡಬೇಕು? ಇಲ್ಲಿದೆ ವಿವರ.
17ನೇ ಆವೃತ್ತಿಯ ಐಪಿಎಲ್ (IPL 2024) ಕೊನೆಯ ಹಂತ ತಲುಪಿದ್ದು, ದಿನದಿಂದ ದಿನಕ್ಕೆ ಕೌತುಕತೆ ಹೆಚ್ಚಿಸುತ್ತಿದೆ. ಪ್ಲೇಆಫ್ ಪ್ರವೇಶಿಸಲು ಏಳು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೇ 12ರಂದು ನಡೆದ ಎರಡು ತಂಡಗಳ ಪೈಕಿ ಒಂದರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK vs RR) ಗೆಲುವು ದಾಖಲಿಸಿದ್ದರೆ, ಮತ್ತೊಂದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ (RCB vs DC) ಗೆಲುವು ಸಾಧಿಸಿತು. ಇದು ಪ್ಲೇಆಫ್ (IPL Playoff) ತೀವ್ರತೆ ಮತ್ತಷ್ಟು ಹೆಚ್ಚಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೊದಲ ತಂಡವಾಗಿ ಐಪಿಎಲ್ ಪ್ಲೇಆಫ್ ಪ್ರವೇಶಿಸಿದೆ. ಆದರೆ, ಉಳಿದ 3 ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ. ಈ ಸ್ಥಾನಗಳಿಗೆ 7 ತಂಡಗಳು ಪೈಪೋಟಿ ನಡೆಸುತ್ತಿದ್ದರೂ ಎಲ್ಲರ ಕಣ್ಣು ಇರುವುದು ಮಾತ್ರ ಆರ್ಸಿಬಿ ಮೇಲೆ. ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಇಡೀ ಜಗತ್ತೇ ಪ್ರಾರ್ಥಿಸುತ್ತಿದೆ. ಹಾಗಿದ್ದ ಮೇಲೆ ಡೆಲ್ಲಿ ವಿರುದ್ಧ ನಂತರ ಪ್ಲೇಆಫ್ ಪ್ರವೇಶಿಸಲು ಆರ್ಸಿಬಿ ಮುಂದಿರುವ ಮಾರ್ಗವೇನು? ಯಾವ ತಂಡಗಳು ಸೋಲಬೇಕು? ಇಲ್ಲಿದೆ ಸವಿವರ.
ಆರ್ಸಿಬಿ ತನ್ನ ಆರಂಭಿಕ 8 ಪಂದ್ಯಗಳಲ್ಲಿ ಗೆದ್ದಿದ್ದೇ ಒಂದು. ಉಳಿದ 7ರಲ್ಲಿ ಘೋರ ಪರಾಭವಗೊಂಡಿತ್ತು. ಆದರೆ, ತದನಂತರ ಸಿಡಿದೆದ್ದ ಬೆಂಗಳೂರು ತಂಡ, 5ಕ್ಕೆ 5 ಗೆಲುವು ಸಾಧಿಸಿ ಪರಾಕ್ರಮ ಮರೆಯುತ್ತಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರೆಡ್ ಆರ್ಮಿ, ಈಗ ಹಂತ ಹಂತವಾಗಿ ಮೇಲೇರುತ್ತಾ, 5ನೇ ಸ್ಥಾನಕ್ಕೆ ತಲುಪಿದೆ. 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲು ಕಂಡು 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ +0.387. ಈಗ ಉಳಿದ ಒಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇದು 2 ತಂಡಗಳಿಗೂ ನಿರ್ಣಾಯಕ ಪಂದ್ಯ.
ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಹೀಗೆ ಜರುಗಬೇಕು!
ಆರ್ಸಿಬಿ ತನ್ನ ಮುಂದಿನ ಸಿಎಸ್ಕೆ ತಂಡವನ್ನು ಸೋಲಿಸಬೇಕು. ದೊಡ್ಡ ಅಂತರದ ಗೆಲುವು ಸಾಧಿಸಿದರೆ ಇನ್ನೂ ಉತ್ತಮ. ಆಗ 14 ಅಂಕ ಪಡೆಯಲಿದೆ. ನೆಟ್ರನ್ರೇಟ್ ಸಿಎಸ್ಕೆಗಿಂತ ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ಚೆನ್ನೈ ಈಗಾಗಲೇ 14 ಅಂಕ ಪಡೆದಿದೆ. ಆದರೆ ಸನ್ರೈಸರ್ಸ್ ಹೈದರಾಬಾದ್ ಎರಡಲ್ಲೂ (ಪಿಬಿಕೆಎಸ್, ಜಿಟಿ ವಿರುದ್ಧ) ಸೋಲಬೇಕು. ಒಂದು ವೇಳೆ ಎರಡರಲ್ಲೂ ಸೋತರೆ ನೆಟ್ರನ್ರೇಟ್ ಕುಸಿಯಲಿದ್ದು, ಆರ್ಸಿಬಿ ಮೇಲೇರಲು ದಾರಿ ಮಾಡಿಕೊಡಲಿದೆ.
ಡೆಲ್ಲಿ ತನ್ನ ಮುಂದಿನ ಪಂದ್ಯದಲ್ಲಿ (ಲಕ್ನೋ ವಿರುದ್ಧ) ಸೋಲಬೇಕು. ಅದು ಕೂಡ ಕಡಿಮೆ ಅಂತರದಲ್ಲಿ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಉಳಿದ ಎರಡಲ್ಲೂ ಸೋಲಬೇಕು. ಏಕೆಂದರೆ 2ರಲ್ಲೂ ಗೆದ್ದರೆ, 16 ಅಂಕ ಪಡೆದು ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿ ಇಲ್ಲ. ಅಥವಾ ಒಂದು ಸೋಲು, ಒಂದು ಗೆಲುವು (ಕಡಿಮೆ ಅಂತರದ) ಕಾಣಬೇಕು. ಏಕೆಂದರೆ ಡಿಸಿ ಮತ್ತು ಲಕ್ನೋ ತಂಡಗಳಿಗೆ ಹೋಲಿಸಿದರೆ ಆರ್ಸಿಬಿ ನೆಟ್ರನ್ರೇಟ್ ಉತ್ತಮವಾಗಿದೆ. ಇದು ಆರ್ಸಿಬಿಗೆ ಲಾಭವಾಗಲಿದೆ.
ಗುಜರಾತ್ ಟೈಟಾನ್ಸ್ ತನ್ನ ಪಂದ್ಯಗಳ ಪೈಕಿ ಕೆಕೆಆರ್ ವಿರುದ್ಧ ಸೋಲಬೇಕು. ಮತ್ತು ಮತ್ತೊಂದು ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಬೇಕು. ಮೇಲಿನ ಎಲ್ಲವೂ ಸಾಧ್ಯವಾದರೆ ಆರ್ಸಿಬಿ ನಾಲ್ಕನೇ ಸ್ಥಾನಕ್ಕಲ್ಲ, ಮೂರನೇ ಸ್ಥಾನಕ್ಕೇರಲಿದೆ. ಕೆಕೆಆರ್ ಪ್ಲೇಆಫ್ ಪ್ರವೇಶಿಸಿದ್ದರೆ, ರಾಜಸ್ಥಾನ್ ರಾಯಲ್ಸ್ ಬಹುತೇಕ ಸ್ಥಾನ ಖಚಿತಪಡಿಸಿದೆ. ಆದರೆ ಎಸ್ಆರ್ಹೆಚ್, ಸಿಎಸ್ಕೆ, ಆರ್ಸಿಬಿ, ಡಿಸಿ, ಲಕ್ನೋ ಮತ್ತು ಜಿಟಿ ತಂಡಗಳ ನಡುವೆ ಉಳಿದ ಎರಡು ಸ್ಥಾನಗಳಿಗೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ಯಾವುದೇ ತಂಡದ ಕೊಂಚ ಯಾಮಾರಿದರೂ ರೇಸ್ನಿಂದ ಹೊರಬೀಳಲಿದೆ.