ಕೆಕೆಆರ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದರಷ್ಟೇ ಉಳಿಗಾಲ; ಸಂಭಾವ್ಯ ತಂಡ, ಹವಾಮಾನ ವರದಿ, ಪಿಚ್ ರಿಪೋರ್ಟ್ ವಿವರ
GT vs KKR : ಗುಜರಾತ್ ಟೈಟಾನ್ಸ್ ತಂಡವು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ತಯಾರಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದರಷ್ಟೇ ತನ್ನ ಪ್ಲೇಆಫ್ ಆಸೆ ಜೀವಂತವಾಗಿರಲಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿರುವ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್, ಮೇ 13ರಂದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಕಳೆದ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಶುಭ್ಮನ್ ಗಿಲ್, ಲಯಕ್ಕೆ ಮರಳಿರುವುದು ಜಿಟಿಗೆ ಹೆಚ್ಚಿನ ಬಲ ತಂದಿದೆ. ಆದರೆ ಈ ಪಂದ್ಯ ಗೆದ್ದರಷ್ಟೇ ಗುಜರಾತ್ಗೆ ಉಳಿಗಾಲ. ಸೋತರೆ ಪ್ಲೇಆಫ್ನಿಂದ ಅಧಿಕೃತವಾಗಿ ಹೊರಕ್ಕೆ.
ಮತ್ತೊಂದೆಡೆ ಮೂರು ವರ್ಷಗಳ ಬಳಿಕ ಪ್ಲೇಆಫ್ ಪ್ರವೇಶಿಸಿರುವ ಕೆಕೆಆರ್ ತನ್ನ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಈ ಪಂದ್ಯವನ್ನು ಗೆದ್ದು ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿ, ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಆಡಿರುವ 12ರಲ್ಲಿ 9 ಗೆಲುವು, 3 ಸೋಲು ಕಂಡಿರುವ ಕೆಕೆಆರ್ 18 ಅಂಕ ಪಡೆದಿದೆ. ಮೊದಲ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳಲು ಇನ್ನೊಂದು ಗೆಲುವು ಅಗತ್ಯ ಇದೆ.
ಇತ್ತ ಗುಜರಾತ್ ಟೈಟಾನ್ಸ್ಗೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲುವ ಅಗತ್ಯ ಇದೆ. ಅದು ಕೂಡ ದೊಡ್ಡ ಅಂತರದ ಗೆಲುವು ಸಾಧಿಸಬೇಕು. ಈವರೆಗೆ 12 ಪಂದ್ಯಗಳಲ್ಲಿ 5 ಗೆಲುವು, 7 ಸೋಲಿನೊಂದಿಗೆ 10 ಅಂಕ ಪಡೆದಿದೆ. ಆದರೆ ತಂಡವು ಮೈನಸ್ ರನ್ರೇಟ್ (-1.063) ಹೊಂದಿರುವುದು ದೊಡ್ಡ ಹಿನ್ನೆಡೆಗೆ ಕಾರಣವಾಗಿದೆ. ಆದರೆ ಕೆಕೆಆರ್ ಮತ್ತು ಗುಜರಾತ್ ನಡುವೆ ಕಳೆದ ಮೂರು ಮುಖಾಮುಖಿಗಳಲ್ಲಿ ಜಿಟಿ 2 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಉಭಯ ತಂಡಗಳ ಆಟಗಾರರು ಫಾರ್ಮ್ನಲ್ಲಿದ್ದು, ರನ್ ಹೊಳೆ ನಿರೀಕ್ಷಿಸಲಾಗಿದೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI
ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಶಾರುಖ್ ಖಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಆರ್ ಸಾಯಿ ಕಿಶೋರ್.
ಕೆಕೆಆರ್ ಪ್ಲೇಯಿಂಗ್ XI
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಚಕ್ರವರ್ತಿ, ಹರ್ಷಿತ್ ರಾಣಾ.
ಪಿಚ್ ವರದಿ
ಈ ಋತುವಿನಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡವು ಅಹಮದಾಬಾದ್‌ನಲ್ಲಿ 6 ಪಂದ್ಯಗಳಲ್ಲಿ 4 ಗೆದ್ದಿದೆ. ಇಬ್ಬನಿಯು ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಗಳಿಗೆ ಹೆಚ್ಚಾಗಿ ಕಾಡುತ್ತಿದೆ. ಜಿಟಿ ತಮ್ಮ ಕೊನೆಯ ಪಂದ್ಯವನ್ನು ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಸ್ಕೋರ್ ಗಳಿಸಿ ಜಯಿಸಿತು. ಇಲ್ಲಿ ಈ ಋತುವಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 175 ಆಗಿದೆ. ಬ್ಯಾಟರ್ಗಳು ಮತ್ತು ಬೌಲರ್ಗಳಿಗೆ ಸಮನಾದ ಪೈಪೋಟಿ ನೀಡುವ ಪಿಚ್ ಇದಾಗಿದೆ.
ಹವಾಮಾನ ವರದಿ
ಅಹಮದಾಬಾದ್‌ನಲ್ಲಿ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಳಿದಾಡುತ್ತದೆ ಎಂದು ಮುನ್ಸೂಚಿಸಲಾಗಿದೆ. ಗೋಚರಿಸುವ ತಾಪಮಾನವು 31 ಡಿಗ್ರಿ ಸೆಲ್ಸಿಯಸ್‌ನಂತೆ ಇರುತ್ತದೆ. ಆರ್ದ್ರತೆಯ ಮಟ್ಟವು ಸುಮಾರು 44% ಎಂದು ನಿರೀಕ್ಷಿಸಲಾಗಿದೆ. ಮುನ್ಸೂಚನೆಗಳ ಪ್ರಕಾರ ಶೇ.56ರಷ್ಟು ಮಳೆಯಾಗುವ ಸಾಧ್ಯತೆ ಇದೆ.