ಕೂದಲು ಉದುರುವುದು ನಿಂತು, ಬೇಗ ಉದ್ದ ಬೆಳಿಬೇಕು ಅಂದ್ರೆ ಈರುಳ್ಳಿ ಜೊತೆ ಈ ವಸ್ತು ಬೆರೆಸಿ ಎಣ್ಣೆ ತಯಾರಿಸಿ ಬಳಸಿ
ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಹೋಗಿದ್ದೀರಾ, ಕೂದಲು ಉದುರುವುದನ್ನು ನಿಲ್ಲಿಸಲು ಏನೇ ಮಾಡಿದ್ರೂ ಆಗ್ತಾ ಇಲ್ವಾ. ನಿಮಗಾಗಿ ಇಲ್ಲೊಂದು ಮನೆಮದ್ದಿದೆ. ಇದಕ್ಕೆ ನೀವು ಈರುಳ್ಳಿ ಜೊತೆ ಈ ಒಂದು ವಸ್ತುವನ್ನು ಮಿಶ್ರಣ ಮಾಡಿ ಎಣ್ಣೆ ತಯಾರಿಸಬೇಕು. ಇದನ್ನು ನಿರಂತರ ಬಳಸುವುದರಿಂದ ಕೆಲವೇ ದಿನಗಳಲ್ಲಿ ಕೂದಲು ಉದ್ದ ಬೆಳೆಯುವ ಜೊತೆ ಉದುರುವುದು ನಿಲ್ಲುತ್ತದೆ.
ಪ್ರತಿಯೊಬ್ಬ ಮಹಿಳೆಯು ಉದ್ದ, ಸುಂದರ, ನೀಳ ಕೂದಲನ್ನು ಹೊಂದಲು ಬಯಸುತ್ತಾರೆ. ಅವರು ತಮ್ಮ ಕೂದಲು ಆರೋಗ್ಯಕರವಾಗಿ, ದಪ್ಪವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಅಂತಹ ಕೂದಲನ್ನು ಪಡೆಯುವುದು ಕಷ್ಟವಾಗುತ್ತಿದೆ. ಇಂದು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಪ್ರತಿ ಇಬ್ಬರಲ್ಲಿ ಒಬ್ಬರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ದುಬಾರಿ ಉತ್ಪನ್ನಗಳು ಲಭ್ಯವಿವೆ. ಆದರೆ ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಆ ರಾಸಾಯನಿಕಗಳನ್ನು ಬಳಸುವ ಬದಲು ಮನೆಯಲ್ಲಿ ಎಣ್ಣೆಯನ್ನು ತಯಾರಿಸುವುದು ಉತ್ತಮ. ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡುವ ಹೇರ್ ಆಯಿಲ್ ಒಂದು ಇಲ್ಲಿದೆ. ಇದರ ಬಳಕೆಯಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
ಈರುಳ್ಳಿ, ರೋಸ್ಮರಿ ಗಿಡಮೂಲಿಕೆ ಮತ್ತು ಲವಂಗ ಕೂದಲು ಬೆಳವಣಿಗೆಯೊಂದಿಗೆ ಕೂದಲು ಉದುರುವುದನ್ನು ನಿಯಂತ್ರಿಸಲು ಬಹಳ ಪ್ರಯೋಜನಕಾರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಮೂರು ಪದಾರ್ಥಗಳನ್ನು ಸಂಯೋಜಿಸುವ ಮೂಲಕ ಕೂದಲು ಉದುರುವುದನ್ನು ನಿಯಂತ್ರಿಸುವ ತೈಲವನ್ನು ತಯಾರಿಸಬಹುದು.
ಇದನ್ನು ತಯಾರಿಸಲು ನಿಮಗೆ ಒಂದರಿಂದ ಎರಡು ಕಪ್ ಸಾಸಿವೆ ಎಣ್ಣೆ, ಒಂದು ಟೀ ಚಮಚ ಮೆಂತ್ಯ ಬೀಜಗಳು, ಸ್ವಲ್ಪ ರೋಸ್ಮರಿ ಪುಡಿ, ಒಂದು ಈರುಳ್ಳಿ ಮತ್ತು ಲವಂಗ ಮುಷ್ಟಿ, ಬಾದಾಮಿ ಎಂಟು ಬೇಕಾಗುತ್ತದೆ. ಈಗ ಅದನ್ನು ಹೇಗೆ ಮಾಡಬೇಕೆಂದು ನೋಡೋಣ.
ಕೂದಲು ಉದುರುವುದನ್ನು ತಡೆಯುವ ಎಣ್ಣೆ
ಮನೆಯಲ್ಲಿ ಕೂದಲು ಉದುರುವಿಕೆ ನಿಯಂತ್ರಣ ತೈಲ ಮಾಡಲು ಮೊದಲು ಈರುಳ್ಳಿ ತೆಗೆದುಕೊಳ್ಳಬೇಕು. ಈರುಳ್ಳಿ ಜೊತೆ ಲವಂಗ ಸೇರಿಸಿ. ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಸಾಸಿವೆ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಲವಂಗ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಈಗ ಬಾದಾಮಿ ಮತ್ತು ಮೆಂತ್ಯವನ್ನು ಸೇರಿಸಿ ಮತ್ತು ಐದರಿಂದ ಏಳು ನಿಮಿಷ ಚೆನ್ನಾಗಿ ಕುದಿಸಿ. ಇದು ಚೆನ್ನಾಗಿ ಕುದ್ದ ನಂತರ ಮೆಂತ್ಯ ಮತ್ತು ಒಣ ರೋಸ್ಮರಿ ಎಲೆಗಳನ್ನು ಸೇರಿಸಿ. ಅವುಗಳನ್ನು ಮೂರರಿಂದ ನಾಲ್ಕು ನಿಮಿಷ ಪುನಃ ಕುದಿಯಲು ಬಿಡಿ. ಈಗ ಎಣ್ಣೆ ತಣ್ಣಗಾದ ನಂತರ ಸೋಸಿ ಆ ಎಣ್ಣೆಯನ್ನು ಬಾಟಲಿಗೆ ಹಾಕಿ. ಈಗ ಎಣ್ಣೆ ಸಿದ್ಧವಾಗಿದೆ.
ಸ್ನಾನ ಮಾಡುವ ಒಂದು ಗಂಟೆ ಮೊದಲು ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಮಾಡಿ. ಅದರ ನಂತರ ತಲೆ ಸ್ನಾನ ಮಾಡಬೇಕು. ಕೆಲವೇ ತಿಂಗಳುಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ನೋಡುತ್ತೀರಿ. ಕೂದಲು ಉದುರುತ್ತೆ ಅಂತ ಬೇಸರ ಮಾಡಿಕೊಳ್ಳುವವರು ನೀವಾದ್ರೆ ಈ ಎಣ್ಣೆ ಖಂಡಿತ ನಿಮಗೆ ಸಹಾಯ ಮಾಡುತ್ತೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ