ನಿವೃತ್ತಿ ಮರುದಿನವೇ ತವರಿಗೆ ಮರಳಿದ ಆರ್‌ ಅಶ್ವಿನ್; ಚೆನ್ನೈ ನಿವಾಸದಲ್ಲಿ ಅಪ್ಪನ ಅಪ್ಪುಗೆ-ಅಮ್ಮ ಭಾವುಕ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ನಿವೃತ್ತಿ ಮರುದಿನವೇ ತವರಿಗೆ ಮರಳಿದ ಆರ್‌ ಅಶ್ವಿನ್; ಚೆನ್ನೈ ನಿವಾಸದಲ್ಲಿ ಅಪ್ಪನ ಅಪ್ಪುಗೆ-ಅಮ್ಮ ಭಾವುಕ -Video

ನಿವೃತ್ತಿ ಮರುದಿನವೇ ತವರಿಗೆ ಮರಳಿದ ಆರ್‌ ಅಶ್ವಿನ್; ಚೆನ್ನೈ ನಿವಾಸದಲ್ಲಿ ಅಪ್ಪನ ಅಪ್ಪುಗೆ-ಅಮ್ಮ ಭಾವುಕ -Video

ನಿವೃತ್ತಿ ಘೋಷಣೆ ನಂತರ ಮೊದಲ ಬಾರಿಗೆ ಮನೆಗೆ ಬಂದ ಆರ್ ಅಶ್ವಿನ್ ಅವರನ್ನು ತಬ್ಬಿಕೊಂಡ ತಾಯಿ ಕಣ್ಣೀರು ಒರೆಸಿಕೊಂಡರು. ತಂದೆ ಕೂಡಾ ಬೆಚ್ಚನೆ ಅಪ್ಪುಗೆ ನೀಡಿ ಭಾವುಕರಾದರು. ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೂರನೇ ಟೆಸ್ಟ್‌ ಮುಗಿದ ಬೆನ್ನಲ್ಲೇ‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರವಿಚಂದ್ರನ್ ಅಶ್ವಿನ್‌ ನಿವೃತ್ತಿ ಘೋಷಿಸಿದರು.

ತವರಿಗೆ ತವರಿಗೆ ಮರಳಿದ ಆರ್‌ ಅಶ್ವಿನ್; ಚೆನ್ನೈ ನಿವಾಸದಲ್ಲಿ ಅಪ್ಪನ ಅಪ್ಪುಗೆ-ಅಮ್ಮ ಭಾವುಕ
ತವರಿಗೆ ತವರಿಗೆ ಮರಳಿದ ಆರ್‌ ಅಶ್ವಿನ್; ಚೆನ್ನೈ ನಿವಾಸದಲ್ಲಿ ಅಪ್ಪನ ಅಪ್ಪುಗೆ-ಅಮ್ಮ ಭಾವುಕ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮರುದಿನವೇ (ಡಿಸೆಂಬರ್‌ 19) ಭಾರತ ತಂಡದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಚೆನ್ನೈಗೆ ಬಂದಿಳಿದಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ವದೇಶಕ್ಕೆ ಮರಳಿದ ಅವರು, ನೇರವಾಗಿ ಚೆನ್ನೈನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್‌ಗಾಗಿ ತಂಡದೊಂದಿಗೆ ಮೆಲ್ಬೋರ್ನ್‌ಗೆ ಪ್ರಯಾಣಿತ್ತಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗುರುವಾರ ಬ್ರಿಸ್ಬೇನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಅದರಂತೆಯೇ ಆಶ್‌ ಭಾರತಕ್ಕೆ ಬಂದಿದ್ದಾರೆ.

ಇಂದು ಬೆಳಗ್ಗೆ ಚೆನ್ನೈನ ಮದ್ರಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ ಅಶ್ವಿನ್‌ ಕಾಣಿಸಿಕೊಂಡರು. ಬಿಗಿ ಭದ್ರತೆಯ ನಡುವೆ ಅವರು ವಿಮಾನ ನಿಲ್ದಾಣದಿಂದ ಹೊರಬಂದರು. ಈ ವೇಳೆ ಮಾಧ್ಯಮದವರು ಸುತ್ತುವರಿದಿದ್ದರು. ತಮ್ಮ ಕಾರನ್ನು ಪ್ರವೇಶಿಸುವ ಮೊದಲು, ತನಗೆ ಸ್ವಲ್ಪ ಖಾಸಗಿತನಕ್ಕೆ ಅವಕಾಶ ನೀಡುವಂತೆ ಅಶ್ವಿನ್ ಮಾಧ್ಯಮದವರಲ್ಲಿ ವಿನಂತಿಸಿದರು. ನಿವೃತ್ತಿ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಈ ಕುರಿತು ಮತ್ತೊಮ್ಮೆ ಮಾಧ್ಯಮದವರನ್ನು ಕರೆದು ಮಾತನಾಡುವುದಾಗಿ ಹೇಳಿದರು. ಅಲ್ಲದೆ ತಮ್ಮ ಭಾವನೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದರು.

ವಿಮಾನ ನಿಲ್ದಾಣದಿಂದ ಕಾರಿನ ಮೂಲಕ ಚೆನ್ನೈನ ತಮ್ಮ ನಿವಾಸಕ್ಕೆ ತೆರಳಿದ ಅಶ್ವಿನ್‌ಗೆ ಅವರ ಮನೆಯ ಬಳಿ ಅದ್ಧೂರಿ ಸ್ವಾಗತ ನೀಡಲಾಯಿತು. ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಸಾಂಪ್ರದಾಯಿಕವಾಗಿ ಹೂಮಾಲೆಗಳನ್ನು ಹಾಕಿ ಆದರಿಸಲಾಯ್ತು. ಈ ವೇಳೆ ಅಶ್ವಿನ್‌ ಹೆತ್ತವರು ಅಪ್ಪುಗೆಯೊಂದಿಗೆ ಮಗನನ್ನು ಬರಮಾಡಿಕೊಂಡರು.

ಚೆನ್ನೈ ಏರ್‌ಪೋರ್ಟ್‌ಗೆ ಬಂದ ಅಶ್ವಿನ್

ಅಪ್ಪನ ಅಪ್ಪುಗೆ ಅಮ್ಮನ ಪನ್ನೀರು

ಅಶ್ವಿನ್ ಅವರ ತಂದೆ ಮೊದಲು ಮಗನನ್ನು ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು. ತಾಯಿ ಮಗನನ್ನು ತಬ್ಬಿಕೊಳ್ಳುವಾಗ ಅವರ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಕೆನ್ನೆಗಳಿಂದ ಜಾರಿಕೊಳ್ಳುತ್ತಿದ್ದ ಕಣ್ಣೀರನ್ನು ಒರೆಸಿಕೊಂಡರು. ಪತ್ನಿ ಮತ್ತು ಹೆಣ್ಣುಮಕ್ಕಳೊಂದಿಗೆ ನಿವಾಸಕ್ಕೆ ಪ್ರವೇಶಿಸುತ್ತಿದ್ದಂತೆ ನೆರೆಹೊರೆಯವರು, ಆಪ್ತ ಸ್ನೇಹಿತರು ಹಾಗೂ ಅಭಿಮಾನಿಗಳು ಆಟೋಗ್ರಾಫ್‌ ಕೇಳಿ ಪಡೆದರು. ಹಲವರಿಂದ ಅಪ್ಪುಗೆ ಸಿಕ್ಕಿತು.

ನವೆಂಬರ್ 2011ರಿಂದಲೂ ಭಾರತ ಕ್ರಿಕೆಟ್‌ ತಂಡದ ಅವಿಭಾಜ್ಯ ಅಂಗವಾಗಿದ್ದ ಅಶ್ವಿನ್, ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರನಾಗದ್ದರು. ಹಲವು ಟೆಸ್ಟ್‌ ಸರಣಿಗಳಲ್ಲಿ ಟೀಮ್‌ ಇಂಡಿಯಾ ಗೆಲುವಿನ ರೂವಾರಿಯಾಗಿದ್ದರು. ನಿವೃತ್ತಿ ಸಮಯದಲ್ಲಿ ವಿಶ್ವದ ಎರಡನೇ ಅತ್ಯುತ್ತಮ ಶ್ರೇಯಾಂಕದ ಆಲ್‌ರೌಂಡರ್‌ ಆಗಿ ಸ್ಥಾನ ಪಡೆದಿದ್ದಾರೆ.

ಕಳೆದ ನಾಲ್ಕು-ಐದು ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನ ತುಂಬಾ ಸೊಗಸಾಗಿತ್ತು ಎಂದು ಅಶ್ವಿನ್ ಹೇಳಿದ್ದಾರೆ. “ನಾನು ನನ್ನ ವೃತ್ತಿಜೀವನವನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಕಳೆದ ನಾಲ್ಕು-ಐದು ವರ್ಷಗಳಲ್ಲಿ ತಂಡದಲ್ಲಿ ಉತ್ತಮ ಸಂಬಂಧ ಮತ್ತು ಸ್ನೇಹವನ್ನು ಬೆಳೆಸಿಕೊಂಡಿದ್ದೇನೆ. ನನ್ನೊಂದಿಗೆ ಆಡುತ್ತಿರುವ ನನ್ನ ಕೆಲವು ಸಹ ಆಟಗಾರರನ್ನು ನಾನು ಬಿಟ್ಟು ಹೋಗುತ್ತಿದ್ದೇನೆ”‌ ಎಂದು ಬಿಸಿಸಿಐ ಜೊತೆಗೆ ಭಾವುಕರಾಗಿ ನುಡಿದಿದ್ದಾರೆ.

“ನನ್ನೊಳಗಿನ ಕ್ರಿಕೆಟಿಗ, ಭಾರತೀಯ ಕ್ರಿಕೆಟಿಗ, ಅಂತರಾಷ್ಟ್ರೀಯ ಕ್ರಿಕೆಟಿಗ ಕೊನೆಗೊಂಡಿರಬಹುದು. ಆದರೆ ನನ್ನಲ್ಲಿರುವ ಕ್ರಿಕೆಟ್‌ ಎಂದಿಗೂ ಕೊನೆಗೊಳ್ಳುವುದಿಲ್ಲ. ನಿಮಗೆ ಏನಾದರೂ ನನ್ನ ಅಗತ್ಯವಿದ್ದರೆ, ನನಗೆ ಒಂದು ಕರೆ ಮಾಡಿ ಅಷ್ಟೇ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು,” ಎಂದು ಅಶ್ವಿನ್ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಹೇಳಿದ್ದಾರೆ.

“ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಹಲವು ನೆನಪುಗಳೊಂದಿಗೆ ನಾನು ನಿವೃತ್ತಿ ಹೇಳುತ್ತಿದ್ದೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ನೆನೆಪುಗಳಿವೆ. ಬಿಸಿಸಿಐ, ನನ್ನ ಸಹ ಆಟಗಾರರು, ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಆದರೆ ನಾನು ಕ್ಲಬ್ ಕ್ರಿಕೆಟ್ ಆಡುತ್ತೇನೆ,” ಎಂದು ಅಶ್ವಿನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Whats_app_banner