ಭಕ್ತರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ; ದ್ವಾರಕ, ಪುರಿ ಜಗನ್ನಾಥ, ದಕ್ಷಿಣ ತೀರ್ಥಯಾತ್ರೆಗಳಿಗೆ ಸಬ್ಸಿಡಿ ಘೋಷಣೆ, ಹೀಗಿದೆ ಪ್ಯಾಕೇಜ್
ಐಆರ್ ಸಿಟಿಸಿ ಮೂಲಕ ತೀರ್ಥಯಾತ್ರೆ ಕೈಗೊಳ್ಳುವ ಕರ್ನಾಟಕದ ಭಕ್ತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮೂರು ತೀರ್ಥಯಾತ್ರೆಗಳಿಗೆ ಸಹಾಯಧವನ್ನು ಘೋಷಣೆ ಮಾಡಿದೆ. ಪುರಿ ಜಗನ್ನಾಥ - ಗಂಗಾಸಾಗರ್ ದರ್ಶನ್, ದ್ವಾರಕ ದರ್ಶನ ಹಾಗೂ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯ ಸಬ್ಸಿಡಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದಿಂದ ತೀರ್ಥಯಾತ್ರೆಗೆ ಹೋಗುವ ಭಕ್ತರಿಗೆ ರಾಜ್ಯ ಸರ್ಕಾರ ಹೊಸ ವರ್ಷದ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಸರ್ಕಾರ ಐಆರ್ ಸಿಟಿಸಿಯ ಸಹಯೋಗದಲ್ಲಿ ಮೂರು ತೀರ್ಥಯಾತ್ರೆ ಪ್ಯಾಕೇಜ್ ಗಳಿಗೆ ಸಹಾಯಧನವನ್ನು ಘೋಷಣೆ ಮಾಡಿದೆ. ಸಬ್ಸಿಡಿ ಬಳಿಕ ಯಾವ ಟೂರ್ ಪ್ಯಾಕೇಜ್ ಗೆ ಎಷ್ಟು ಮೊತ್ತವಿದೆ. ಯಾವೆಲ್ಲಾ ಧಾರ್ಮಿಕ ತಾಣಗಳನ್ನು ನೋಡಬಹುದು ಹಾಗೂ ದಿನಾಂಕ ಸೇರಿದಂತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಪುರಿ ಜಗನ್ನಾಥ - ಗಂಗಾಸಾಗರ್ ದರ್ಶನ್
ಐಆರ್ ಸಿಟಿಸಿಯವರ ಸಹಯೋಗದೊಂದಿಗೆ ಸರ್ಕಾರವು 8 ದಿನಗಳ ಪುರಿ ಜಗನ್ನಾಥ-ಗಂಗಾಸಾಗರ್ ದರ್ಶನ್ ಪ್ಯಾಕೇಜ್ ಘೋಷಣೆ ಮಾಡಿದೆ. 8 ದಿನಗಳ ಟೂರ್ ಪ್ಯಾಕೇಜ್ ಗೆ ಒಬ್ಬ ವ್ಯಕ್ತಿ 20,000 ರೂಪಾಯಿಗಳಿದ್ದು, ಸರ್ಕಾರ 5 ಸಾವಿರ ರೂಪಾಯಿ ಸಬ್ಸಿಡಿ ಬಳಿಕ ಕೇವಲ 15,000 ರೂಪಾಯಿ ಮಾತ್ರ ಪಾವತಿ ಮಾಡಬೇಕಾಗುತ್ತದೆ.
8 ದಿನಗಳ ಟೂರ್ ಪ್ಯಾಕೇಜ್ ನಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತದೆ. ಪುರಿ, ಕೋನಾರ್ಕ್, ಗಂಗಾಸಾಗರ್ ಹಾಗೂ ಕೋಲ್ಕತ್ತಾದಲ್ಲಿನ ಯಾತ್ರಿಕ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಪ್ರವಾಸದ ವಿವರಗಳನ್ನು ನೋಡುವುದಾದರೆ ಬೆಂಗಳೂರಿನಿಂದ ಹೊರಟು ಪುರಿ ಜಗನ್ನಾಥ ದೇವಾಲಯ, ಕೋನಾರ್ಕ್ ನ ಸೂರ್ಯ ದೇವಾಲಯ, ಗಂಗಾಸಾಗರ ಹಾಗೂ ಕಾಳಿ ದೇವಸ್ಥಾನವನ್ನು ನೋಡಿಕೊಂಡು ಮತ್ತೆ ಬೆಂಗಳೂರಿಗೆ ವಾಪಸ್ ಬರುವುದಾಗಿದೆ.
ಬೋರ್ಡಿಂಗ್ ಪಾಯಿಂಟ್ ಗಳು - ಬೆಂಗಳೂರಿನ ಸರ್ ಎಂವಿ ವಿಶ್ವೇಶ್ವರಯ್ಯ ಟರ್ಮಿನಲ್, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿ ರೈಲು ನಿಲುಗಡೆ ಇರುತ್ತದೆ. 2025ರ ಫೆಬ್ರವರಿ 3 ರಂದು ಈ ಪ್ರವಾಸ ಆರಂಭವಾಗುತ್ತದೆ.
ದ್ವಾರಕ ದರ್ಶನ
ಐಆರ್ ಸಿಟಿಸಿ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿನ ಮತ್ತೊಂದು ತೀರ್ಥಯಾತ್ರೆಯ ಪ್ಯಾಕೇಜ್ ಹೆಸರು ದ್ವಾರಕ ದರ್ಶನ. 8 ದಿನಗಳ ಈ ಪ್ಯಾಕೇಜ್ ನಲ್ಲಿ ದ್ವಾರಕದ ಜೊತೆಗೆ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬರುವ ಮೂರು ಪ್ರಮುಖ ಜ್ಯೋತಿರ್ಲಿಂಗಗಳಾದ ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರವನ್ನು ತೋರಿಸಲಾಗುತ್ತದೆ. ಪ್ಯಾಕೇಜ್ ನಲ್ಲಿ ಒಬ್ಬ ವ್ಯಕ್ತಿಗೆ 20,000 ರೂಪಾಯಿಗಳಿದ್ದು, ಸರ್ಕಾರದ 5,000 ರೂಪಾಯಿಗಳ ಸಹಾಯಧನವನ್ನು ನೀಡುತ್ತಿದೆ. ಆ ಬಳಿಕ ಒಬ್ಬರು 15,000 ರೂಪಾಯಿ ಪಾವತಿಸಬೇಕು.
ಬೆಂಗಳೂರಿನಿಂದ ಹೊರಟು ದ್ವಾರಕ ದೇವಾಲಯ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ಜ್ಯೋತಿರ್ಲಿಂಗಗಳನ್ನು ನೋಡಿಕೊಂಡು ಬೆಂಗಳೂರಿಗೆ ವಾಪಸ್ ಬರಲಾಗುತ್ತದೆ. ಬೆಂಗಳೂರಿನ ಸರ್ ಎಂವಿ ವಿಶ್ವೇಶ್ವರಯ್ಯ ಟರ್ಮಿನಲ್, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ರೈಲು ನಿಲುಗಡೆ ಇರುತ್ತದೆ. ಈ ಬೋರ್ಡಿಂಗ್ ಪಾಯಿಂಟ್ ಗಳಿಂದ ಭಕ್ತರನ್ನು ಕರೆದೊಯ್ಯಲಾಗುತ್ತದೆ. 2025ರ ಜನವರಿ 2 ರಿಂದ ಈ ಯಾತ್ರೆ ಆರಂಭವಾಗುತ್ತದೆ.
ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ
2025ರ ಹೊಸ ವರ್ಷದಲ್ಲಿ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಐಆರ್ ಸಿಟಿಸಿ ಘೋಷಣೆ ಮಾಡಿರುವ ಮತ್ತೊಂದು ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯಾಗಿದೆ. 6 ದಿನಗಳ ಟೂರ್ ಪ್ಯಾಕೇಜ್ ಇದಾಗಿದ್ದು, ಓರ್ವ ವ್ಯಕ್ತಿಗೆ 15,000 ರೂಪಾಯಿ ವೆಚ್ಚವಾಗಲಿದೆ. ಆದರೆ ಸರ್ಕಾರ 5,000 ಸಹಾಯ ಧನ ನೀಡುತ್ತಿದೆ. ಸಬ್ಸಿಡಿ ಬಳಿಕ ಕೇವಲ 10,000 ರೂಪಾಯಿ ಮಾತ್ರ ಪಾವತಿ ಮಾಡಬೇಕು.
ಈ ಪ್ಯಾಕೇಜ್ ನಲ್ಲಿ ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ, ಮಧುರೈ ಧಾರ್ಮಿಕ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ಸರ್ ಎಂವಿ ವಿಶ್ವೇಶ್ವರಯ್ಯ ಟರ್ಮಿನಲ್, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಬೀರೂರು ಹಾಗೂ ತುಮಕೂರಿನಲ್ಲಿ ಬೋರ್ಡಿಂಗ್ ಪಾಯಿಂಟ್ ಇರಲಿದೆ. 2025ರ ಜನವರಿ 25 ರಂದು ಟೂರ್ ಪ್ಯಾಕೇಜ್ ಆರಂಭವಾಗುತ್ತದೆ.