Parenting Tips: ಮಕ್ಕಳು ಅಂಕ ತೆಗೆದಿಲ್ಲ ಅಂತ ವಿನಾಕಾರಣ ನಿಂದಿಸಬೇಡಿ, ಶಾಲೆಯಲ್ಲಿ ಅವರ ಪರಿಸ್ಥಿತಿ ಹೇಗಿರಬಹುದು? -ಮನದ ಮಾತು-parenting tips information and remedies for children struggle in schools how to understand my child dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಕ್ಕಳು ಅಂಕ ತೆಗೆದಿಲ್ಲ ಅಂತ ವಿನಾಕಾರಣ ನಿಂದಿಸಬೇಡಿ, ಶಾಲೆಯಲ್ಲಿ ಅವರ ಪರಿಸ್ಥಿತಿ ಹೇಗಿರಬಹುದು? -ಮನದ ಮಾತು

Parenting Tips: ಮಕ್ಕಳು ಅಂಕ ತೆಗೆದಿಲ್ಲ ಅಂತ ವಿನಾಕಾರಣ ನಿಂದಿಸಬೇಡಿ, ಶಾಲೆಯಲ್ಲಿ ಅವರ ಪರಿಸ್ಥಿತಿ ಹೇಗಿರಬಹುದು? -ಮನದ ಮಾತು

ಮಕ್ಕಳು ಸರಿಯಾಗಿ ಅಂಕ ತೆಗೀತಿಲ್ಲ ಅಂತ ಅಪ್ಪ-ಅಮ್ಮ ದೂರೋದು ಸಾಮಾನ್ಯ. ಆದರೆ ಇಂಥ ಮಕ್ಕಳ ಪರಿಸ್ಥಿತಿ ಎಷ್ಟು ಅಪ್ಪ-ಅಮ್ಮನಿಗೆ ಸರಿಯಾಗಿ ಗೊತ್ತಿರುತ್ತೆ. ನಿಮ್ಮ ಮಕ್ಕಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಹಲವು ಮಾಹಿತಿಯನ್ನು ಈ ಬರಹದಲ್ಲಿ ಹಂಚಿಕೊಂಡಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್. -how to understand my child

ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್
ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್

ಪ್ರಶ್ನೆ: ನನ್ನ ಮಗಳು ಈಗ 3ನೇ ಕ್ಲಾಸ್ ಓದ್ತಿದ್ದಾಳೆ. ಅವಳು ಬುದ್ಧಿವಂತೆ, ಆದರೆ ಓದಿನ ಕಡೆಗೆ ನಿಗಾ ಕಡಿಮೆ. ಸ್ಕೂಲಲ್ಲಿ ಏನು ಪಾಠ ಮಾಡ್ತಾರೆ ಅಂತ ಸರಿಯಾಗಿ ಹೇಳಲ್ಲ, ಕ್ಲಾಸ್ ವರ್ಕ್ ಕೂಡ ಸರಿಯಾಗಿ ಬರೆದುಕೊಂಡು ಬರಲ್ಲ. ಬೈದು, ಹೊಡೆದು ಮಾಡಿದ್ರೂ ಪ್ರಯೋಜನವಾಗಿಲ್ಲ. ಏನು ಮಾಡಲಿ? ನನಗೆ ಇವಳದ್ದೇ ದೊಡ್ಡ ಚಿಂತೆಯಾಗಿದೆ. ದಯವಿಟ್ಟು ದಾರಿ ತೋರಿಸಿ ಮೇಡಂ. - ರಾಧಾ, ರಾಯಚೂರು

ಉತ್ತರ: ಮಕ್ಕಳನ್ನು ಸ್ಕೂಲಿಗೆ ಸೇರಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಎಷ್ಟೋ ಪೋಷಕರು ಭಾವಿಸುತ್ತಾರೆ. ಕೆಲವರು ಮಾತ್ರ ಶಾಲೆಯಲ್ಲಿ ಮಕ್ಕಳ ವರ್ತನೆ ಹೇಗಿದೆ? ಶಿಕ್ಷಕಿ / ಶಿಕ್ಷಕರು ಮಕ್ಕಳೊಂದಿಗೆ ಹೇಗೆ ವರ್ತಿಸುತ್ತಾರೆ ಎಂದು ಪರಿಶೀಲಿಸುತ್ತಾರೆ. ಇದು ಜವಾಬ್ದಾರಿಯುತ ಪೋಷಕರ ಲಕ್ಷಣವಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು ಅಥವಾ ಅವರಿಗಾಗಿ ಖರ್ಚು ಮಾಡುವುದು ಎಲ್ಲ ಸಮಸ್ಯೆಗಳಿಗೂ ಉತ್ತರ ಅಲ್ಲ. ನೀವು ಮನೆಯಲ್ಲಿ ಹೀಗೆ ಮಾತನಾಡಿದರೆ ಮಕ್ಕಳ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಅದರ ಬದಲು ನೀವು ಮಕ್ಕಳ ಪರಿಸ್ಥಿತಿಯನ್ನು ಅರಿತುಕೊಳ್ಳಲು, ಸ್ಪಂದಿಸಲು ಪ್ರಯತ್ನಿಸಬೇಕು. ಮಕ್ಕಳಿಗೆ ಶಾಲೆಗಳಲ್ಲಿಯೂ ಹಲವು ರೀತಿಯ ಸಮಸ್ಯೆ ಇರಬಹುದು. ಅಂಥ ಕೆಲ ವಿಚಾರಗಳ ವಿವರ ಇಲ್ಲಿದೆ. ನಿಧಾನವಾಗಿ ಓದಿಕೊಳ್ಳಿ, ನಿಮ್ಮ ಮಗುವಿನೊಂದಿಗೆ ಚರ್ಚಿಸಿ. (children struggle in schools)

1) ವೈಯಕ್ತಿಕ ಗಮನದ ಕೊರತೆ (lack of individual attention): ಬಹುತೇಕ ಮಕ್ಕಳಿಗೆ ಶಿಕ್ಷಕರಿಂದ ಪ್ರತ್ಯೇಕ ಅಥವಾ ವೈಯಕ್ತಿಕ ಗಮನದ ಅಗತ್ಯವಿರುತ್ತದೆ. ಆದರೆ ಇಂಥ ಮಕ್ಕಳಿಗೆ ಶಿಕ್ಷಕರಿಂದ ಗಮನ ಸಿಗದಿದ್ದಾಗ, ಮಕ್ಕಳಿಗೆ ತಮ್ಮ ಅನಿಸಿಕೆ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಮಕ್ಕಳ ಆಸಕ್ತಿ, ಸಾಮರ್ಥ್ಯ, ಪ್ರತಿಭೆ, ಸಮಸ್ಯೆ, ದೌರ್ಬಲ್ಯಗಳು ಶಿಕ್ಷಕರ ಗಮನಕ್ಕೆ ಸಾಮಾನ್ಯವಾಗಿ ಬರುವುದಿಲ್ಲ. ಒಂದು ಪಕ್ಷ ಗಂಭೀರ ಸಮಸ್ಯೆಗಳಿದ್ದರೆ, ಯಾರ ಗಮನಕ್ಕೂ ಬರದೇ ಮಕ್ಕಳು ಮೌನವಾಗಿ ಒಬ್ಬರೇ ಎದುರಿಸಬೇಕಾಗಬಹುದು ಮತ್ತು ಅದರ ಪರಿಣಾಮವಾಗಿ ಬೇರೆ ಸಮಸ್ಯೆಗಳನ್ನೂ ಎದುರಿಸಬಹುದು.

2) ಶೈಕ್ಷಣಿಕ ಸಮಸ್ಯೆಗಳು: ಕೆಲವು ಮಕ್ಕಳಿಗೆ ಓದಿನ ವಿಷಯದಲ್ಲಿ ಒಟ್ಟಾರೆ ನಿರಾಸಕ್ತಿ ⁠ಗ್ರಹಿಕೆ - ಪಾಠ ಮಾಡುವುದನ್ನು ಗ್ರಹಿಸಿ ಅರ್ಥಮಾಡಿಕೊಳ್ಳುವ ಕೊರತೆ ⁠ಏಕಾಗ್ರತೆಯ ಕೊರತೆ ⁠ಗಮನದ ಕೊರತೆ (lack of attention)⁠ನಿಧಾನ ಕಲಿಕೆ (slow learning) ಈ ಕಾರಣಗಳಿಂದಾಗಿ ತರಗತಿಯಲ್ಲಿ ಪಾಠದ ಮೇಲೆ ಗಮನ ಹರಿಸದಿರಬಹುದು. ತೀಟೆ ಮಾಡಬಹುದು, ಮಂಕಾಗಬಹುದು ಇತ್ಯಾದಿ. ಪರೀಕ್ಷೆಯಲ್ಲಿ ಅಂಕ ಕಡಿಮೆ ಗಳಿಸಬಹುದು ಅಥವಾ ಬೇರೆ ಚಟುವಟಿಕೆಗಳಲ್ಲಿ ಆಸಕ್ತಿಯಿದ್ದು ಅದರ ಮೇಲೆ ಹೆಚ್ಚು ಗಮನ ಹರಿಸಬಹುದು.

3) ಅನಾರೋಗ್ಯಕರ ಹೋಲಿಕೆ: ಶಿಕ್ಷಕರು ಮಕ್ಕಳನ್ನು ಸಹಪಾಠಿಗಳೊಂದಿಗೆ ಅನಾರೋಗ್ಯಕರ ಹೋಲಿಕೆ ಮಾಡುವುದರಿಂದ, ಮಕ್ಕಳನ್ನು ಹೆಚ್ಚು ನಿಂದಿಸುವುದರಿಂದ, ಕೀಳು ಮಾಡುವುದರಿಂದ ಅಥವಾ ತಾರತಮ್ಯ ಮಾಡುವುದರಿಂದ ಮಕ್ಕಳು ತಮ್ಮ ಮೇಲೆ ಕೀಳು ಭಾವನೆ ಬೆಳೆಸಿಕೊಳ್ಳುತ್ತಾರೆ. ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ , ಇದರಿಂದ ಆತ್ಮ ವಿಶ್ವಾಸದ ಕೊರತೆಯೂ ಸಹ ಪ್ರಾರಂಭವಾಗುತ್ತದೆ. ಕೆಲವು ಮಕ್ಕಳು ಮಂಕಾಗುತ್ತಾರೆ. ಇನ್ನೂ ಕೆಲವರು ಶಾಲೆಗೆ ಚೆಕ್ಕರ್ ಹಾಕುತ್ತಾರೆ, ಇನ್ನೂ ಕೆಲವರು ಆಕ್ರಮಣಕಾರಿ ನಡುವಳಿಕೆ ಬೆಳೆಸಿಕೊಳ್ಳುತ್ತಾರೆ.

4) ಪರೀಕ್ಷೆಯ ಒತ್ತಡ ಮತ್ತು ಆತಂಕ: ಇತ್ತೀಚೀನ ಬಹುತೇಕ ಮಕ್ಕಳಿಗೆ ಪರೀಕ್ಷೆಯ ಆತಂಕ ಮತ್ತು ಒತ್ತಡ ಹೆಚ್ಚಾಗುತ್ತಿದೆ. ಹೆಚ್ಚು ಅಂಕಗಳಿಗೋಸ್ಕರ ವಿಪರೀತ ಪೈಪೋಟಿಗಳು ನಡೆಯುತ್ತಿದ್ದು ಪರೀಕ್ಷೆಯ ಆತಂಕ ಅಧಿಕವಾಗುತ್ತಿದೆ. ಎಷ್ಟೇ ಶ್ರಮಪಟ್ಟು ಓದಿದರೂ, ಪರೀಕ್ಷೆಯ ಒತ್ತಡ ಮಕ್ಕಳಿಗೆ ಆತಂಕ ಉಂಟುಮಾಡುತ್ತಿದೆ. ಈ ಒಂದು ಭಯದಿಂದ ಮಕ್ಕಳ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಕುಸಿಯುತ್ತಿದೆ. ಪರೀಕ್ಷೆಯಲ್ಲಿ ಓದಿದೆಲ್ಲವನ್ವೂ ಮರೆತು, ಏನೂ ತೋಚದೆ, ಬರೆಯದೇ ಹಾಗೆೇ ಎದ್ದು ಬಂದಿರುವ ಘಟನೆಯ ದಾಖಲೆಗಳೂ ಇವೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಭಾರಿ ಪ್ರಮಾಣದ ಪ್ರಭಾವ ಬೀರುತ್ತಿದೆ.

5) ಓದುವ ಮತ್ತು ಬರೆಯುವ ಸಮಸ್ಯೆಗಳು (reading and writing disability): ಬಹಳ ಮಕ್ಕಳಿಗೆ ಬರವಣಿಗೆಯ ಸಮಸ್ಯೆ ಇರುತ್ತದೆ. ಸ್ಪಷ್ಟವಾದ, ಚೊಕ್ಕವಾದ ಮತ್ತು ವೇಗವಾದ ಬರವಣಿಗೆ ಇರುವುದಿಲ್ಲ. ಪಾಠ ಅರ್ಥವಾದರೂ ವೇಗವಾಗಿ ಅಥವ ಸ್ಪಷ್ಟವಾಗಿ ಬರೆಯುವುದಕ್ಕೆ ಬರುವುದಿಲ್ಲ. ಇದರಿಂದಾಗಿ ಮಕ್ಕಳ ನೋಟ್ಸ್‌ ಮತ್ತು ಹೋಮ್‌ವರ್ಕ್ ಅಪೂರ್ಣವಾಗಿರುತ್ತದೆ. ಇನ್ನು ಕೆಲವು ಮಕ್ಕಳಿಗೆ ಓದುವ ಸಮಸ್ಯೆಯಿರುತ್ತದೆ. ಅಕ್ಷರಗಳನ್ನು ಕೂಡಿಸಿ ಗ್ರಹಿಸಿ ವೇಗವಾಗಿ ಓದಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳಿರುವ ಮಕ್ಕಳಿಗೆ ಸ್ವಲ್ಪ ಸಮಯ ಹಾಗೂ ಗಮನ ಕೊಟ್ಟು ಕಲಿಸುವ ಅಗತ್ಯವಿರುತ್ತದೆ. ಶಿಕ್ಷಕರಿಗೆ ಸಮಯದ ಕೊರತೆಯಿಂದಾಗಿ ಇಂಥಹ ಮಕ್ಕಳಿಗೆ ಹೆಚ್ಚು ಗಮನಕೊಟ್ಟು ಅಭ್ಯಾಸ/ ರೂಢಿ ಮಾಡಿಸುವುದಕ್ಕೆ ಸಾಧ್ಯವಾಗದು. ಆದರೆ ಈ ಮಕ್ಕಳ್ಳನ್ನು ಉಳಿದ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಮಕ್ಕಳಿಗೆ ಹೋಲಿಸಿ ನಿಂದಿಸುವ, ಹೀಯಾಳಿಸುವ ಸಾಧ್ಯತೆ ಇರುತ್ತದೆ.

6) ಸಹಪಾಠಿಗಳಿಂದ ಬೆದರಿಸುವಿಕೆ, ದೌರ್ಜನ್ಯಕ್ಕೆ ಒಳಗಾಗುವ ಸಮಸ್ಯೆ (bullying): ಶಾಲೆಯು ಮಕ್ಕಳಿಗೆ ಸುರಕ್ಷಿತವಾಗಿರಬೇಕು . ಆಗ ಮಾತ್ರ ಕಲಿಕೆ, ಆಟ ಪಾಠವೆಲ್ಲವೂ ಚೆನ್ನಾಗಿರುತ್ತವೆ. ವಿದ್ಯಾರ್ಥಿಗಳು ಸುರಕ್ಷಿತವಾಗಿರಲು ಶಾಲೆಯಲ್ಲಿ ಸಕಾರಾತ್ಮಕ ವಾತಾವರಣದ ಅಗತ್ಯವಿದೆ. ಆದರೆ ಕೆಲವು ಮಕ್ಕಳ್ಳು ಶಾಲೆಯ ಸ್ನೇಹಿತರಿಂದ ದೈಹಿಕ ಅಥವಾ ಮಾನಸಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಆಗ ಮಕ್ಕಳಿಗೆ ಶಾಲೆ ಸುರಕ್ಷಿತವಲ್ಲವೆನಿಸಿ ಶಾಲೆಗೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ. ಬಹುತೇಕ ಮಕ್ಕಳು ಮನೆಯಲ್ಲೂ ಈ ಸಮಸ್ಯೆಯನ್ನು ಹಂಚಿಕೊಳ್ಳುವುದಿಲ್ಲ. ನಂತರ ಒಂಟಿಯಾಗಿ ಎದುರಿಸಲು ಆಗದೆ ಮಾನಸಿಕ ಒತ್ತಡ ಮತ್ತು ಆನಾರೋಗ್ಯಕ್ಕೆ ತುತ್ತಾಗುತ್ತಾರೆ.

7) ಗೆಳೆಯರ ಒತ್ತಡ (peer pressure): ಮಕ್ಕಳಿಗೆ ತನ್ನ ಸ್ನೇಹಿತರು ಇಷ್ಟಪಡುವ ಅಥವಾ ಗೌರವಿಸುವ ಸಲುವಾಗಿ ಅದೇ ಕೆಲಸಗಳನ್ನು ಮಾಡಬೇಕು ಎಂಬ ಭಾವನೆ ಇರುತ್ತದೆ. ಕಲವೊಮ್ಮೆ ಬಲವಂತವಾಗಿ ಸ್ನೇಹಿತರು ಅವರ ಇಷ್ಟಗಳನ್ನು ತಮ್ಮ ಸ್ನೇಹಿತರ ಮೇಲೆ ಒಡ್ಡುತ್ತಾರೆ, ಇನ್ನೂ ಕೆಲವರು ತಾವೇ ಸ್ವ ಇಚ್ಛೆಯಿಂದ ಸ್ನೇಹಿತರನ್ನು ಅನುಸರಿಸುವ ಒತ್ತಡವನ್ನು ಸೃಷ್ಟಿಸಿಕೊಳ್ಳುತ್ತಾರೆ. ಈ ಎರಡು ಸನ್ನಿವೇಶದಲ್ಲೂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ.

8) ಶಿಕ್ಷಕರಿಂದ ಶಿಕ್ಷೆ: ಕೆಲವೊಮ್ಮೆ ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ತಿದ್ದುವುದರ ಬದಲು ಸಣ್ಣಪುಟ್ಟ ಶಿಕ್ಷೆಯನ್ನು ವಿಧಿಸುತ್ತಾರೆ. ಆಗಲೂ ಮಕ್ಕಳಿಗೆ ಎಲ್ಲರ ಮುಂದು ಮುಜುಗರ ಮತ್ತು ಅವಮಾನವಾಗುತ್ತದೆ. ಇನ್ನು ಶಿಕ್ಷೆ ವಿಪರೀತವಾಗಿ ಮರುಕಳಿಸಿದಾಗ ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಮಾನಸಿಕವಾಗಿ ಬಳಲುತ್ತಾರೆ.

9) ಭಾಷೆ ಮತ್ತು ಸಂವಹನ ಸಮಸ್ಯೆಗಳು: ಬಹುತೇಕ ಮಕ್ಕಳಿಗೆ ತಮ್ಮ ಅಗತ್ಯ, ನಿರೀಕ್ಷೆ, ಅನಿಸಿಕೆ, ಭಾವನೆಗಳನ್ನು ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಲು ಬರುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿರುವ ಸಂವಹನದ ಕೊರತೆ. ಈ ಕಾರಣದಿಂದ ಅವರ ಆತ್ಮವಿಶ್ವಾಸವೂ ಕಡಿಮೆಯಾಗಬಹುದು. ಇದರಿಂದ ಶಿಕ್ಷಕರ ಮತ್ತು ಮಕ್ಕಳ ನಡುವೆ ಹಾಗೂ ಸ್ನೇಹಿತರ ಬಳಿಯೂ ಅಂತರ ಬೆಳೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವುದು ಕಷ್ಟವಾಗಬಹುದು. ಅವರ ಶೈಕ್ಷಣಿಕ ಬೆಳವಣಿಗೆಯೂ ಇದರಿಂದ ಕುಂಠಿತವಾಗಬಹುದು

10) ದೈಹಿಕ ಬೆಳವಣಿಗೆ ಮತ್ತು ಅನಾರೋಗ್ಯ: ಮಕ್ಕಳಿಗೆ ದೈಹಿಕ ಅನಾರೋಗ್ಯ, ಕಾಯಿಲೆ ಅಥವಾ ಪೌಷ್ಟಿಕಾಂಶದ ಕೊರತೆ, ಸೂಕ್ತ ಬೆಳವಣಿಗೆಯಿಲ್ಲದಿದ್ದರೂ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯು ಕುಂಠಿತವಾಗಬಹುದು. ಮಕ್ಕಳ ಪರಸ್ಪರ ಸಂಬಂಧಗಳ ಮೇಲೆಯೂ ಪರಿಣಾಮ ಉಂಟಾಗಬಹುದು. ಪ್ರೌಢಾವಸ್ಥೆಯ ದೈಹಿಕ ಬೆಳವಣಿಗೆಯಿಂದಾಗಿಯೂ ಕೂಡ ಮಕ್ಕಳ ನಡುವಳಿಕೆಯಲ್ಲಿ ಸಮಸ್ಯೆಗಳು ಕಂಡುಬರಬಹುದು.

11) ಮನೆಯ ವಾತಾವರಣ ಮತ್ತು ಆರ್ಥಿಕ ಪರಿಸ್ಥಿತಿ: ಮನೆಯಲ್ಲಿ ಹೆಚ್ಚು ಜಗಳಗಳು ಮತ್ತು ಸಮಸ್ಯೆಗಳಿದ್ದು, ವಾತಾವರಣ ಅಹಿತಕರವಾಗಿದ್ದರೆ ಮಕ್ಕಳು ಓದಿನಲ್ಲಿ ನಿರಾಸಕ್ತಿ ತೋರಿಸಬಹುದು, ಮಂಕಾಗಬಹುದು ಅಥವಾ ಆಕ್ರಮಣಕಾರಿ ಮನೋಭಾವ ಹೊಂದಬಹುದು. ಮನೆಯಲ್ಲಿ ಒಂದು ವೇಳೆ ಆರ್ಥಿಕ ಸಮಸ್ಯೆಗಳಿದ್ದರೂ ಮಕ್ಕಳ ವರ್ತನೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ.

12) ಪೋಷಕರ ಅಗಲುವಿಕೆ: ಕೆಲವೊಮ್ಮೆ ಮಕ್ಕಳು ಪೋಷಕರಿಂದ ದೂರವಿದ್ದರೆ, ಹಾಸ್ಚೆಲ್ ಅಥವ ಬಂಧು ಬಳಗದ ಮನೆಯಲ್ಲಿದ್ದು ಓದುತ್ತಿದ್ದರೂ ಮಾನಸಿಕ ಸಮಸ್ಯೆಯನ್ನು ಎದುರಿಸಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ.

---

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

mysore-dasara_Entry_Point