ಕನ್ನಡ ಸುದ್ದಿ  /  Lifestyle  /  Women Health Reason Behind Most Girls Suffer From Leg Pain During Periods Along With Stomach Pain Rsa

Women health: ಕಿಬ್ಬೊಟ್ಟೆ, ಸೊಂಟ ನೋವು ಮಾತ್ರವಲ್ಲ ಋತುಚಕ್ರದ ಸಮಯದಲ್ಲಿ ಬಹಳ ಹೆಣ್ಣುಮಕ್ಕಳನ್ನು ಕಾಡಲಿದೆ ಕಾಲು ನೋವು; ಕಾರಣವೇನು?

Women health: ಋತುಚಕ್ರದ ಸಮಯದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಬಹುತೇಕರಿಗೆ ಕಿಬ್ಬೊಟ್ಟೆ ನೋವಿನ ಜೊತೆಯಲ್ಲಿ ಕಾಲು ನೋವು ಕೂಡ ಇರುತ್ತದೆ. ಮುಟ್ಟಿಗೂ ಕಾಲು ನೋವಿಗೂ ಇರುವ ಸಂಬಂಧವೇನು..? ಇಲ್ಲಿದೆ ಮಾಹಿತಿ

ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಕಾಲು ನೋವು ಉಂಟಾಗುವುದು ಏಕೆ?
ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಕಾಲು ನೋವು ಉಂಟಾಗುವುದು ಏಕೆ?

Women health: ಬಹುತೇಕ ಮಹಿಳೆಯರಿಗೆ ಋತುಸ್ರಾವ ಎಂದರೆ ಕೇವಲ ಕಿಬ್ಬೊಟ್ಟೆ ನೋವು ಮಾತ್ರ ಆಗಿರುವುದಿಲ್ಲ. ಸ್ತನಗಳು, ಬೆನ್ನು ನೋವು ಸಹ ಕಾಣಿಸಿಕೊಳ್ಳುತ್ತದೆ. ಈ ಮುಟ್ಟಿನ ನೋವು ಕೆಲವೊಮ್ಮೆ ಕಾಲುಗಳವರೆಗೂ ವಿಸ್ತರಿಸುತ್ತದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರ ಹಾರ್ಮೋನ್‌ಗಳಲ್ಲಿ ವಿಪರೀತವಾದ ಬದಲಾವಣೆಗಳು ಉಂಟಾಗುವ ಹಿನ್ನೆಲೆಯಲ್ಲಿ ಕಾಲು ನೋವಿನಂತ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿರುತ್ತದೆ.

ಆದರೆ ಕಾಲುಗಳಲ್ಲಿ ನೋವು ಅಸಹನೀಯವಾಗಿ ಉಂಟಾಗುತ್ತಿದ್ದರೆ ಇದು ನಿಮಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂಬುದರ ಸಂಕೇತ ಕೂಡಾ ಆಗಿರಬಹುದು. ಮುಟ್ಟಿನ ಸಂದರ್ಭದಲ್ಲಿ ಬರುವ ಕಾಲು ನೋವಿನಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಋತುಚಕ್ರದ ಅವಧಿಯಲ್ಲಿ ಕಾಲು ನೋವು ಉಂಟಾಗಲು ಕಾರಣವೇನು..?

ಋತುಚಕ್ರದ ಸಂದರ್ಭದಲ್ಲಿ ಪ್ರೊಸ್ಟ್‌ಗ್ಲಾಂಡಿನ್ ಸ್ರವಿಸುವಿಕೆ ಪ್ರಮಾಣ ಹೆಚ್ಚಾಗಿರುತ್ತದೆ. ಪ್ರೊಸ್ಟಗ್ಲಾಂಡಿನ್ ಗರ್ಭಾಶಯದ ಸ್ನಾಯುಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಪ್ರೊಸ್ಟ ಗ್ಲಾಂಡಿನ್ಗಳು ಗರ್ಭಾಶಯದ ಸಂಕೋಚನ ಹಾಗೂ ಎಂಡೊಮೆಟ್ರಿಯಮ್‌ಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಪ್ರೊಸ್ಟಗ್ಲಾಂಡಿನ್ ದೇಹದಲ್ಲಿ ಉರಿಯೂತ ಉಂಟಾಗಲು ಕಾರಣವಾಗುತ್ತದೆ. ಇದರಿಂದಾಗಿ ಬೆನ್ನುಗಳು, ಕಾಲುಗಳು ಹಾಗೂ ಕೆಳಭಾಗದಲ್ಲಿ ನೋವು ಉಂಟಾಗುತ್ತದೆ.

ಇದನ್ನು ಹೊರತುಪಡಿಸಿ ಕೆಲವು ಸಂದರ್ಭಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಅತೀ ಕಾಲು ನೋವು ನಿಮ್ಮ ದೇಹದಲ್ಲಿ ಯಾವುದೋ ಸಮಸ್ಯೆ ಇದೆ ಎಂದು ಹೇಳುವುದರ ಸಂಕೇತ ಕೂಡ ಆಗಿರಬಹುದು.

ಫೈಬ್ರಾಯ್ಡ್‌ ಕಾಲುಗಳಲ್ಲಿ ನೋವುಂಟಾಗಲು ಕಾರಣವಾಗಿರಬಹುದು.ಇದು ಋತುಸ್ರಾವದ ಅವಧಿಯಲ್ಲಿ ತೀವ್ರವಾಗಿರುತ್ತದೆ. ಎಂಡೊಮೆಟ್ರಿಯೊಸಿಸ್ ಎಂಬುದು ಆರೋಗ್ಯ ಸಮಸ್ಯೆಯಾಗಿದ್ದು ಇದರದಲ್ಲಿ ಗರ್ಭಾಶಯದ ಒಳ ಪದರವು ಗರ್ಭಾಶಯದ ಹೊರಗೆ ಬೆಳೆಯಲು ಆರಂಭಿಸುತ್ತದೆ. ಇದು ಕೂಡಾ ಕಾಲು ನೋವಿಗೆ ಕಾರಣವಾಗಬಹುದು. 2018ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಸಿಯಾಟಿಕ್ ನರಗಳ ಮೇಲೆ ಎಂಡೊಮೆಟ್ರಿಯಾಟಿಕ್ ಬೆಳವಣಿಗೆಯು ಸೊಂಟ ಹಾಗೂ ಕಾಲುಗಳಲ್ಲಿ ನೋವಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

ಅತಿ ಬಿಗಿಯಾದ ಉಡುಪುಗಳನ್ನು ಧರಿಸುವುದರಿಂದ ರಕ್ತದ ಹರಿವಿಗೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಆದಷ್ಟು ಆರಾಮದಾಯಕ ಉಡುಪನ್ನು ಧರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಮುಟ್ಟಿನ ಸಂದರ್ಭದಲ್ಲಿ ಬರುವ ಕಾಲು ನೋವು ಸಾಮಾನ್ಯ ಸ್ನಾಯು ನೋವಿನಿಂದ ಹೇಗೆ ಭಿನ್ನವಾಗಿರುತ್ತದೆ..?

ಋತುಚಕ್ರದ ಸಮಯದಲ್ಲಿ ಅಥವಾ ಋತುಚಕ್ರಕಕ್ಕೂ ಸ್ವಲ್ಪ ಸಮಯ ಮುಂಚೆಯೇ ಈ ನೋವು ಆರಂಭಗೊಳ್ಳುತ್ತದೆ. ಕೆಲವೊಂದು ಬಾರಿ ಮುಟ್ಟಿನ ಒಂದು ದಿನದ ಮೊದಲು ಕೂಡ ಈ ನೋವು ಕಾಣಿಸಿಕೊಳ್ಳಬಹುದು. ಈ ನೋವಿಗೆ ಯಾವುದೇ ವೈದ್ಯಕೀಯ ಸಹಾಯದ ಅಗತ್ಯವಿರುವುದಿಲ್ಲ. ಮನೆ ಮದ್ದುಗಳ ಸಹಾಯದಿಂದ ವಾಸಿಯಾಗುವ ಯಾವುದೇ ನೋವನ್ನು ಸಾಮಾನ್ಯ ನೋವು ಎಂದೇ ಹೇಳಬಹುದು. ಇದನ್ನು ಹೊರತುಪಡಿಸಿ, ಮುಟ್ಟಿನ ಒಂದು ವಾರಕ್ಕೂ ಮುಂಚೆಯೇ ಆರಂಭಗೊಳ್ಳುವ ನೋವನ್ನು ಸಾಮಾನ್ಯ ನೋವು ಎಂದು ಹೇಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನೀವು ವೈದ್ಯರನ್ನು ಕಾಣುವುದು ಒಳ್ಳೆಯದು.

ಮುಟ್ಟಿನ ಸಂದರ್ಭದಲ್ಲಿ ಬರುವ ಸಾಮಾನ್ಯ ಕಾಲು ನೋವಿನಿಂದ ಪಾರಾಗಲು ನೀವು ಹಾಟ್ ಬ್ಯಾಗ್‌ಗಳನ್ನು ಬಳಕೆ ಮಾಡಬಹುದು. ಇದು ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಆದರೆ 30 ನಿಮಿಷಗಳ ಕಾಲ ನಿಧಾನವಾಗಿ ವಾಕಿಂಗ್ ಮಾಡಲು ಯತ್ನಿಸಿ. ಹೆಚ್ಚು ಆಯಾಸವನ್ನು ನೀಡದ ಸುಲಭವಾದ ಆಸನಗಳನ್ನು ಮಾಡಿ. ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿದೂಗಿಸಿಕೊಳ್ಳಲು ಎಳನೀರು ಸೇವಿಸಿ. ಇದಲ್ಲದಿದ್ದರೆ ಇನ್ನಿತರ ಯಾವುದೇ ಆರೋಗ್ಯಯುತ ಪಾನೀಯಗಳ ಸೇವನೆ ಮಾಡಬಹುದು.

ಋತುಚಕ್ರಕ್ಕೆ ಕನಿಷ್ಠ ಒಂದು ವಾರಗಳ ಮೊದಲು ಉಪ್ಪು, ಮಸಾಲೆ ಹಾಗೂ ಸಕ್ಕರೆಯಂಶಯುಕ್ತ ಆಹಾರ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಸ್ನಾಯುಗಳಲ್ಲಿನ ನೋವು ಕಡಿಮೆಯಾಗುತ್ತದೆ. ಹೀಗಾಗಿ ನೀವು ಮುಟ್ಟಿನ ಸಮಯದಲ್ಲಿ ಸ್ವಲ್ಪ ನಿರಾಳ ಭಾವ ಅನುಭವಿಸಬಹುದಾಗಿದೆ. ಋತುಚಕ್ರದ ಸಂದರ್ಭದಲ್ಲಿ ತೀವ್ರವಾದ ನೋವು ನಿಮ್ಮನ್ನು ಕಾಡುತ್ತಿದ್ದು ಆ ನೋವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದಾದಲ್ಲಿ ನೀವು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.