ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Air Defense Missiles: ಚೀನಾ ಗಡಿ ಭಾಗದಲ್ಲಿ ನಿಯೋಜನೆಗೆ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌; ಖರೀದಿ ಪ್ರಸ್ತಾವನೆ ಅಂತಿಮ

Air defense missiles: ಚೀನಾ ಗಡಿ ಭಾಗದಲ್ಲಿ ನಿಯೋಜನೆಗೆ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌; ಖರೀದಿ ಪ್ರಸ್ತಾವನೆ ಅಂತಿಮ

Air defense missiles: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯ ಡಿಫೆನ್ಸ್‌ ಅಕ್ವಿಸಿಷನ್‌ ಕೌನ್ಸಿಲ್‌ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌ ಖರೀದಿ ಪ್ರಸ್ತಾವನೆಯನ್ನು ಅಂಗೀಕರಿಸಿರುವುದಾಗಿ ವರದಿ ಹೇಳಿದೆ.

ಭಾರತ - ಚೀನಾ ಗಡಿ ಪ್ರದೇಶ (ಸಾಂಕೇತಿಕ ಚಿತ್ರ)
ಭಾರತ - ಚೀನಾ ಗಡಿ ಪ್ರದೇಶ (ಸಾಂಕೇತಿಕ ಚಿತ್ರ) (PTI / HT)

ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ಹಾಗೆಯೇ ಮುಂದುವರಿದಿದ್ದು, ತೀವ್ರ ಬಿಕ್ಕಟ್ಟಿನ ಸನ್ನಿವೇಶ ಮೂರನೇ ವರ್ಷಕ್ಕೆ ಕಾಲಿರಿಸಿದೆ. ಇದೇ ಸಂದರ್ಭದಲ್ಲಿ ಭಾರತವು ಚೀನಾದ ಗಡಿಭಾಗದಲ್ಲಿ ಸೇನೆಯ ಬಲವರ್ಧನೆಗಾಗಿ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌ ಖರೀದಿಸಲು ಮುಂದಾಗಿದೆ.

ಟ್ರೆಂಡಿಂಗ್​ ಸುದ್ದಿ

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯ ಡಿಫೆನ್ಸ್‌ ಅಕ್ವಿಸಿಷನ್‌ ಕೌನ್ಸಿಲ್‌ ಈ ಕುರಿತ ಪ್ರಸ್ತಾವನೆಯನ್ನು ಅಂಗೀಕರಿಸಿದೆ ಎಂದು ಸೇನಾ ಪ್ರಕಟಣೆ ಮಂಗಳವಾರ ತಿಳಿಸಿರುವುದಾಗಿ ಸಿಎನ್‌ಬಿಸಿಟಿವಿ18 ವರದಿ ಮಾಡಿದೆ.

ಭಾರತ - ಚೀನಾ ಗಡಿಭಾಗದಲ್ಲಿ ಉದ್ವಿಗ್ನತೆ ಇದ್ದು, ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇದೆ. ಸತತ ಮೂರನೆ ವರ್ಷ ಈ ಪರಿಸ್ಥಿತಿ ಮುಂದುವರಿದ ಕಾರಣ, ರಕ್ಷಣಾ ವ್ಯವಸ್ಥೆ ಬಲಪಡಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯ ಡಿಫೆನ್ಸ್‌ ಅಕ್ವಿಸಿಷನ್‌ ಕೌನ್ಸಿಲ್‌ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌ ಖರೀದಿ ಪ್ರಸ್ತಾವನೆಯನ್ನು ಅಂತಿಮಗೊಳಿಸಿದೆ. ಪರಿಣಾಮ ಸೇನೆ ಇನ್ನು ಅತ್ಯಂತ ಶಾರ್ಟ್‌ ರೇಂಜ್‌ನ ಮಿಸೈಲ್‌ಗಳನ್ನು ಖರೀದಿಸುವುದು ಸಾಧ್ಯವಾಗಲಿದೆ.

ಉತ್ತರ ಗಡಿಭಾಗದಲ್ಲಿನ ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಮನುಷ್ಯರೇ ಕೊಂಡೊಯ್ಯಬಹುದಾದ ಮತ್ತು ಒರಟು ಭೂ ಪ್ರದೇಶದಲ್ಲಿ ಕ್ಷಿಪ್ರವಾಗಿ ನಿಯೋಜಿಸಬಹುದಾದ ಪರಿಣಾಮಕಾರಿ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಹೊಂದಬೇಕಾದ ತುರ್ತು ಇದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಗಳನ್ನು ಕಡಿಮೆ ಎತ್ತರದ ವೈಮಾನಿಕ ಬೆದರಿಕೆಗಳನ್ನು ಸಮೀಪ ವ್ಯಾಪ್ತಿಯಲ್ಲಿ ತಟಸ್ಥಗೊಳಿಸುವುದಕ್ಕಾಗಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಇದು ಅಮೆರಿಕ ನಿರ್ಮಿತ FIM-92 ಸ್ಟಿಂಗರ್‌ ಸರ್ಫೇಸ್‌ ಟು ಸರ್ಫೇಸ್‌ ಮಿಸೈಲ್‌ನ ಮಾದರಿಯನ್ನೇ ಹೋಲುತ್ತದೆ. ಇತ್ತೀಚಿನ ಸಂಘರ್ಷಗಳಲ್ಲಿ ಇಂತಹ ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ. ರಷ್ಯಾದ ವಾಯು ದಾಳಿಯನ್ನು ಹಿಮ್ಮೆಟ್ಟಿಸಲು ಪೆಂಟಗನ್ ಉಕ್ರೇನ್‌ಗೆ ಕನಿಷ್ಠ 1,600 ಸ್ಟಿಂಗರ್ ಕ್ಷಿಪಣಿ ವ್ಯವಸ್ಥೆಗಳನ್ನು ಒದಗಿಸಿದೆ.

ಎರಡು ಏಷ್ಯನ್‌ ರಾಷ್ಟ್ರಗಳ ನಡುವೆ ಗಡಿ ವಿಚಾರವಾಗಿ 2020ರ ಜೂನ್‌ ತಿಂಗಳ ಸಂಘರ್ಷದ ಬಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಕಳೆದ 4 ದಶಕಗಳ ಅವಧಿಯಲ್ಲಿ ಇದು ಅತ್ಯಂತ ಕೆಟ್ಟ ಸಂಘರ್ಷವಾಗಿತ್ತು. ಇದರಲ್ಲಿ ಕನಿಷ್ಠ 20 ಭಾರತೀಯ ಯೋಧರು ಮತ್ತು ಅಸಂಖ್ಯ ಚೀನೀ ಯೋಧರು ಪ್ರಾಣ ಕಳೆದುಕೊಂಡರು. ಲಡಾಖ್‌ ಭಾಗದಲ್ಲಿ ಈ ಸಂಘರ್ಷ ಸಂಭವಿಸಿತ್ತು. ಈ ಭಾಗದಲ್ಲಿ ಭಾರತ ಮತ್ತು ಚೀನಾ 3,488 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿವೆ.

ಕಳೆದ ತಿಂಗಳು ಕೂಡ ಅರುಣಾಚಲ ಪ್ರದೇಶದ ಭಾರತೀಯ ಗಡಿ ಭಾಗದಲ್ಲಿ ಚೀನೀ ಯೋಧರು ಸಂಘರ್ಷಕ್ಕೆ ಇಳಿದಿದ್ದರು. ಆದರೆ ಅವರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಗಡಿಭಾಗದ ಬಿಕ್ಕಟ್ಟು ಪರಿಹಾರಕ್ಕಾಗಿ ಭಾರತ ಮತ್ತು ಚೀನಾ ಸೇನೆಯ ಉನ್ನತಾಧಿಕಾರಿಗಳ ನಡುವೆ 17 ಸುತ್ತಿನ ಮಾತುಕತೆ ಆಗಿದೆ. ಇದರಲ್ಲಿ ಯಾವುದೇ ಸೂಕ್ತ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಆದರೂ, ಮಾತುಕತೆ ಪ್ರಯತ್ನ ಮುಂದುವರಿದಿದೆ.

ಈ ಸಂಘರ್ಷಮಯ ಸನ್ನಿವೇಶದಲ್ಲಿ ಸೇನೆಯ ಬಲವೃದ್ಧಿಗಾಗಿ ರಕ್ಷಣಾ ಸಚಿವಾಲಯ ಕ್ರಮ ತೆಗೆದುಕೊಂಡಿದೆ. ಈಗಾಗಲೇ ಸ್ಥಳೀಯವಾಗಿ ನಿರ್ಮಿಸಿದ ಟ್ಯಾಂಕ್‌ ನಿರೋಧಕ ಕ್ಷಿಪಣಿ (ಹೆಲಿಕಾಪ್ಟರ್‌ಗಳಲ್ಲಿ ಬಳಸುವುದಕ್ಕೆ) ಮತ್ತು ಯುದ್ಧ ನೌಕೆಗಳಿಗಾಗಿ ಬ್ರಹ್ಮೋಸ್‌ ನೌಕಾ ನಿರೋಧಕ ಕ್ಷಿಪಣಿ ಖರೀದಿ ಪ್ರಸ್ತಾವನೆಯನ್ನು ಸಚಿವಾಲಯ ಅಂತಿಮಗೊಳಿಸಿದೆ. ಈ ಸೇನಾ ಉಪಕರಣಗಳ ಒಟ್ಟು ವೆಚ್ಚ 42.76 ಶತಕೋಟಿ ರೂಪಾಯಿ. ಆದರೆ, ಪ್ರತಿಯೊಂದರ ದರ ಏನು ಎಂಬುದನ್ನು ಸಚಿವಾಲಯ ಬಹಿರಂಗ ಮಾಡಿಲ್ಲ.

IPL_Entry_Point