Arvind Kejriwial: ವಡೋದರಾದಲ್ಲಿ "ಜೈ ಶ್ರೀ ರಾಮ್" ಎಂದ ಕೇಜ್ರಿವಾಲ್: ಭ್ರಷ್ಟರ ಕತೆ ಮುಗಿಸುವುದಾಗಿ ವಾಗ್ದಾನ!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು(ಅ.08-ಶನಿವಾರ) ಗುಜರಾತ್‌ನ ವಡೋದರಾದಲ್ಲಿ ನಡೆದ ಆಮ್ ಆದ್ಮಿ ಪಕ್ಷದ (ಆಪ್) ಕಾರ್ಯಕ್ರಮದಲ್ಲಿ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿದರು. ಅಲ್ಲದೇ ತಮ್ಮ ಚುನಾವಣಾ ಪೋಸ್ಟರ್‌ಗಳನ್ನು ಕಿತ್ತೆಸೆದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.
ವಡೋದರಾ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು(ಅ.08-ಶನಿವಾರ) ಗುಜರಾತ್‌ನ ವಡೋದರಾದಲ್ಲಿ ನಡೆದ ಆಮ್ ಆದ್ಮಿ ಪಕ್ಷದ (ಆಪ್) ಕಾರ್ಯಕ್ರಮದಲ್ಲಿ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿದರು. ಅಲ್ಲದೇ ತಮ್ಮ ಚುನಾವಣಾ ಪೋಸ್ಟರ್‌ಗಳನ್ನು ಕಿತ್ತೆಸೆದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ನಡೆದಿದ್ದ ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರವಾಗುವ ಕಾರ್ಯಕ್ರಮದಲ್ಲಿ, ಸಚಿವ ರಾಜೇಂದ್ರ ಪಾಲ್ ಗೌತಮ್ ಹಿಂದೂ ದೇವರುಗಳನ್ನು ನಿರಾಕರಿಸುವ ಪ್ರತಿಜ್ಞೆ ಕೈಗೊಂಡಿದ್ದರು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ, ವಡೋದರಾದಲ್ಲಿ ಕೇಜ್ರಿವಾಲ್ ಆಗಮನಕ್ಕೂ ಮುನ್ನ ಪೋಸ್ಟರ್‌ಗಳನ್ನು ಕಿತ್ತು ಎಸೆದಿತ್ತು.
ಆದರೆ ಕೇಜ್ರಿವಾಲ್ ಆಗಮನಕ್ಕೂ ಮುನ್ನ ಮತ್ತೆ ಪೋಸ್ಟರ್‌ಗಳನ್ನು ಅಂಟಿಸಿದ ಆಪ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದ ಆಪ್ ವಿರೋಧಿ ಪೋಸ್ಟರ್‌ಗಳನ್ನು ಕಿತ್ತೆಸೆದರು. ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ವಿರುದ್ಧ ಕಿಡಿಕಾರಿದರು.
ಅವರು ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಹೇಳುತ್ತಿದ್ದಾರೆ, ನಾನು ಹೆದರುವುದಿಲ್ಲ. ಆದರೆ ಅವರು ನನ್ನನ್ನು ದ್ವೇಷಿಸುತ್ತಾರೆ, ಈ ದ್ವೇಷ ಅವರನ್ನು ಕುರುಡರನ್ನಾಗಿಸಿದೆ. ಅವರು ದೇವರನ್ನೂ ಅವಾಮನಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಬಿಜೆಪಿಗೆ ಗುಜರಾತ್‌ನಲ್ಲಿ ಸೋಲುವ ಭಯ ಕಾಡುತ್ತಿದೆ. ರಾಜ್ಯದಲ್ಲಿ ಆಪ್‌ನ ಬೆಲವಣಿಗೆ ಕಂಡು ಬಿಜೆಪಿ ಕಂಗಾಲಾಗಿದೆ. ರಾಜಕೀಯ ಅಖಾಡದಲ್ಲಿ ನಮ್ಮನ್ನು ಎದುರಿಸಲಾಗದ ಬಿಜೆಪಿ, ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಆಪ್ ಯಾವ ಧರ್ಮದ ವಿರುದ್ಧವೂ ಇಲ್ಲ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮ, ನಂಬಿಕೆಗಳನ್ನೂ ಆಪ್ ಗೌರವಿಸುತ್ತದೆ ಎಂದು ಕೇಜ್ರಿವಾಲ್ ಇದೇ ವೇಳೆ ನುಡಿದರು.
"ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿದ ಕೇಜ್ರಿವಾಲ್, ನಾವೂ ಕೂಡ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡವರೇ ಎಂದು ಸ್ಪಷ್ಟಪಡಿಸಿದರು. ಆದರೆ ಬಿಜೆಪಿ ಅನ್ಯ ಕೋಮುಗಳ ವಿರುದ್ಧ ಸಮಾಜದಲ್ಲಿ ದ್ವೇಷ ಭಾವನೆ ಬೆಳೆಸುತ್ತಿದೆ. ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದೆ. ಆದರೆ ನಾವು ಎಲ್ಲ ಧರ್ಮ ಮತ್ತು ನಂಬಿಕೆಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದರು.
ನಾನು ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದೆ ಮತ್ತು ಕಂಸನ ವಂಶಸ್ಥರಾದ ಭ್ರಷ್ಟರು ಮತ್ತು ಗೂಂಡಾಗಳನ್ನು ಮುಗಿಸಲು ದೇವರು ನನ್ನನ್ನು ವಿಶೇಷ ಕಾರ್ಯದೊಂದಿಗೆ ಕಳುಹಿಸಿದ್ದಾನೆ. ದೇವರು ನೀಡಿದ ಈ ಕಾರ್ಯವನ್ನು ನಾವೆಲ್ಲರೂ ಪೂರೈಸುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೇ ವೇಳೆ ಗುಡುಗಿದರು.
ದೆಹಲಿಯ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಹಿಂದೂ ದೇವತೆಗಳನ್ನು ನಿಂದಿಸಲಾಗಿದೆ ಎಂದು ಹೇಳಲಾದ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೀಡಿಯೊ ವೈರಲ್ ಆಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಮತ್ತು ಹಿಂದೂ ದೇವತೆಗಳನ್ನು ದೇವರೆಂದು ಪರಿಗಣಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು ಎಂದು ಆರೋಪಿಸಲಾಗಿದೆ.
ರಾಜೇಂದ್ರ ಪಾಲ್ ಗೌತಮ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಬಿಜೆಪಿ, ಕೇಜ್ರಿವಾಲ್ ಈ ಕೂಡಲೇ ರಾಜೇಂದ್ರ ಪಾಲ್ ಗೌತಮ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿತ್ತು.
ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪ್ರಸ್ತುತ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ವಿಭಾಗ