US Consulate Bangalore: ಜನವರಿಯಿಂದ ಬೆಂಗಳೂರಿನಲ್ಲೇ ದೊರಕಲಿದೆ ಅಮೆರಿಕಾ ವೀಸಾ, ಸಂಸದ ತೇಜಸ್ವಿ ಸೂರ್ಯ ಹರ್ಷ
US Consulate Bangalore: ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗುವ ದೀರ್ಘಕಾಲದ ಬಹುಬೇಡಿಕೆಯ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಜನವರಿ 2025ರಿಂದ ಯುಎಸ್ ಕಾನ್ಸುಲೇಟ್ ಆರಂಭವಾಗುವ ಕುರಿತು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಘೋಷಿಸಿದ್ದಾರೆ.
US Consulate Bangalore: ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗುವ ದೀರ್ಘಕಾಲದ ಬಹುಬೇಡಿಕೆಯ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಅಮೆರಿಕಾ ವೀಸಾಕ್ಕೆ ಕರ್ನಾಟಕದಿಂದ ಬೇಡಿಕೆ ಹೆಚ್ಚಾಗಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೆಟ್ ಆರಂಭವಾಗುವ ಸೂಚನೆಯನ್ನು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ನೀಡಿದ್ದಾರೆ. ಅಮೆರಿಕಾ ವೀಸಾಕ್ಕಾಗಿ ಇಲ್ಲಿಯವರೆಗೆ ಕರ್ನಾಟಕದ ಜನರು ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈಗೆ ಹೋಗಬೇಕಿತ್ತು. ಬೆಂಗಳೂರಿನಲ್ಲಿ ಯುಎಸ್ ರಾಯಭಾರ ಕಚೇರಿ ಆರಂಭವಾದ ಬಳಿಕ ಈ ಕಷ್ಟ ತಪ್ಪಲಿದೆ.
"ಬೆಂಗಳೂರು ಕಾನ್ಸುಲೇಟ್ ತೆರೆಯುವ ಯೋಜನೆಗೆ ನಾವು ಬದ್ಧರಾಗಿದ್ದೇವೆ. 2025ರ ಜನವರಿಯಲ್ಲಿ ಇದು ಸಾಧ್ಯವಾಗಲಿದೆ" ಎಂದು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸಿದ ಗೋಷ್ಠಿಯಲ್ಲಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. "ಯುಎಸ್ ಕಾನ್ಸುಲೇಟ್ ಇಲ್ಲದ ಏಕೈಕ ಪ್ರಮುಖ ಭಾರತೀಯ ನಗರ ಬೆಂಗಳೂರು ಆಗಿದೆ. ಈ ನಗರದಲ್ಲಿ ವಿದೇಶಿ ವಾಣಿಜ್ಯ ಸೇವೆಯ ಉಪಸ್ಥಿತಿಗಾಗಿ ಕಾನ್ಸುಲೆಟ್ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಈಗ ಅಮೆರಿಕದ ರಾಯಭಾರ ಕಚೇರಿಗಳು ಚೆನ್ನೈ, ಹೈದರಾಬಾದ್, ಕೊಲ್ಕೊತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿವೆ. ಬೆಂಗಳೂರು ಮಾತ್ರವಲ್ಲದೆ ಅಹಮಾದಬಾದ್ನಲ್ಲಿಯೂ ಹೊಸ ದೂತವಾಸ ಕಚೇರಿ ತೆರೆಯಲು ಯೋಜಿಸಲಾಗಿದೆ.
ಸಂಸದ ತೇಜಸ್ವಿ ಸೂರ್ಯ ಹರ್ಷ
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೆಟ್ ಆರಂಭಿಸುವ ಕುರಿತು ಎರಿಕ್ ಗಾರ್ಸೆಟ್ಟಿ ಘೋಷಿಸಿರುವುದಕ್ಕೆ ಬೆಂಗಳೂರು ದಕ್ಷಿಣ ಸಂಸದರಾಗಿರುವ ತೇಜಸ್ವಿ ಸೂರ್ಯ ಹರ್ಷ ವ್ಯಕ್ತಪಡಿಸಿದ್ದಾರೆ. "ಹಲವು ವರ್ಷಗಳಿಂದ ಭಾರತಕ್ಕೆ ಶೇಕಡ 40ರಷ್ಟು ಐಟಿ ರೆವೆನ್ಯೂ ನೀಡುತ್ತಿದ್ದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕ ದೂತವಾಸದ ಕೊರತೆಯಿತ್ತು" ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
"ಬೆಂಗಳೂರಿಗೆ ಅಮೆರಿಕ ದೂತವಾಸ ಕಚೇರಿ ಅಗತ್ಯವಿದೆ ಎಂದು 2019ರ ನವೆಂಬರ್ ತಿಂಗಳಲ್ಲಿ ನಾನು ಡಾ. ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದೆ. 2023ರಲ್ಲಿ ಅವರು ಬೆಂಗಳೂರಿಗೆ ಆಗಮಿಸಿದಾಗ ಈ ಕುರಿತು ಭರವಸೆ ನೀಡಿದ್ದರು. 2020ರ ಅಮೆರಿಕ ಭೇಟಿ ಸಮಯದಲ್ಲಿ ಆಗಿನ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರಲ್ಲಿ ಭಾರತ ಅಮೆರಿಕ ಸಂಬಂಧಗಳಲ್ಲಿ ಬೆಂಗಳೂರಿನ ಪಾತ್ರದ ಕುರಿತು ತಿಳಿಸಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಮಯದಲ್ಲಿ ಈ ಕುರಿತು ಅಂತಿಮಗೊಳಿಸಲಾಗಿತ್ತು. ಇದೀಗ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರ ಘೋಷಣೆ ಕೇಳಿ ರೋಮಾಂಚನಗೊಂಡೆ. ದೀರ್ಘಕಾಲದ ಬೇಡಿಕೆ ಅಂತಿಮವಾಗಿ ಕಾರ್ಯರೂಪಕ್ಕೆ ಬಂದಿರುವುದನ್ನು ಕೇಳಿ ಖುಷಿಯಾಗಿದೆ" ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಅಮೆರಿಕ ವೀಸಾಕ್ಕೆ ಅರ್ಜಿ ಸಲ್ಲಿಸುವವರ ಸಂದರ್ಶನದ ಶೆಡ್ಯೂಲ್ ಅನ್ನು ಜನವರಿ 1, 2025ರಿಂದ ಬೆಂಗಳೂರಿಗೆ ವರ್ಗಾಯಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ. ಅಂದರೆ, ಚೆನ್ನೈ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಜನವರಿ ನಂತರ ಸಂದರ್ಶನ ನಿಗದಿಯಾಗಿದ್ದರೆ ಬೆಂಗಳೂರಿಗೆ ವರ್ಗಾಯಿಸಿಕೊಳ್ಳಬಹುದು. ನಿಗದಿತ ಸಂದರ್ಶನ ಸಮಯಕ್ಕೆ ಹೋಗಲಾಗದೆ ಇರುವವರು ಅಥವಾ ಎರಡನೇ ಬಾರಿ ಅರ್ಜಿ ಸಲ್ಲಿಸುವವರು ಮತ್ತೆ ಶುಲ್ಕ ಪಾವತಿಸಬೇಕು ಎಂದು ಯುಎಸ್ ಎಂಬೆಸ್ಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.