Mahindra Cars: ಮಹೀಂದ್ರ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಸ್ವಾಗತ, ರಸ್ತೆಗಳಿಯಲು ಸರದಿಯಲ್ಲಿವೆ 5 ಎಲೆಕ್ಟ್ರಿಕ್ ಎಸ್‌ಯುವಿ, ಇಲ್ಲಿದೆ ವಿವರ
Upcoming Mahindra Cars: ದೇಶದ ರಸ್ತೆಯಲ್ಲಿ ಸದ್ದು ಮಾಡುವ ಪೆಟ್ರೋಲ್ ಡೀಸೆಲ್ ಕಾರುಗಳು ಬದಿಗೆ ಸರಿಯಲಿದ್ದು, ಸೈಲೆಂಟಾಗಿ ಸಾಗುವ ಎಲೆಕ್ಟ್ರಿಕ್ ವಾಹನಗಳು ಹೆಚ್ಚಲಿವೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಎಕ್ಸ್‌ಯುವಿ ಮತ್ತು ಬಿಇ ಎಂಬ ಎರಡು ಹೊಸ ಬ್ರಾಂಡ್‌ಗಳ ಮೂಲಕ ಐದು ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮುಂದಿನ ದಿನಗಳಲ್ಲಿ ರಸ್ತೆಗಿಳಿಸಲಿದೆ.
ಬೆಂಗಳೂರು: ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ದೇಶದ ಕಾರು ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಉದ್ದೇಶಿಸಿದೆ. ಈಗಾಗಲೇ ಮಹೀಂದ್ರ ರೇವಾದ ಮೂಲಕ ಇವಾಹನ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಮಾಡಿರುವ ಕಂಪನಿಯು ಭವಿಷ್ಯದ ಇವಿ ಹೂಡಿಕೆ ಕುರಿತು ದೊಡ್ಡ ಕನಸುಗಳನ್ನು ಹೊಂದಿದೆ. ಆದರೆ, ಮುಂದಿನ ಕಂಪನಿಯ ಯೋಜನೆಗಳು ಇನ್ನಷ್ಟು ದೊಡ್ಡದಾಗಿವೆ. ಎಲೆಕ್ಟ್ರಿಕ್ ಸ್ಪೋರ್ಟ್ ಯುಟಿಲಿಟಿ ವಾಹನ (ಎಸ್‌ಯುವಿ)ಗಳನ್ನು ಹೊರತರುವ ಯೋಜನೆ ಕಂಪನಿಗೆ ಇದೆ.
"ಇವಿ ಮಾರುಕಟ್ಟೆಯ ಬದಲಾವಣೆಗಳನ್ನು ಮುನ್ನಡೆಸುವ ಯೋಜನೆ ಮತ್ತು ಎಸ್‌ಯುವಿ ವಿಭಾಗಗಳಲ್ಲಿ ಹೊಸ ಬದಲಾವಣೆ ಕ್ರಮೇಣವಾಗಿ ನಡೆಯಲಿದೆ" ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂದಿನ ಎಸ್‌ಯುವಿ ಖರೀದಿದಾರರು ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಗೆ ಆದ್ಯತೆ ನೀಡಲಿದ್ದಾರೆ ಎನ್ನುವುದು ನಮ್ಮ ಆಂತರಿಕ ಸಂಶೋಧನೆಯಿಂದ ತಿಳಿದುಬಂದ ವಿಚಾರ. "ನಮ್ಮ ಆಂತರಿಕ ರಿಸರ್ಚ್ ಪ್ರಕಾರ ಈಗ ಅಸ್ತಿತ್ವದಲ್ಲಿರುವ ಎಸ್‌ಯುವಿ ಖರೀದಿದಾರರಲ್ಲಿ ಶೇಕಡ 25ರಷ್ಟು ಜನರು ತಮ್ಮ ಮುಂದೆ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ಉದ್ದೇಶಿಸಿದ್ದಾರೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ರೀತಿಯ ಬದಲಾವಣೆಗಳು, ಸ್ಥಿತ್ಯಂತರವನ್ನು ನಾವು ಕಾಣಲಿದ್ದೇವೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ" ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಕಾರ್ಯನಿರ್ವಾಹಕ ನಿರ್ದೇಶಕ (ಆಟೋ ಮತ್ತು ಫಾರ್ಮ್ ವಲಯಗಳು) ರಾಜೇಶ್ ಜೆಜುರಿಕರ್ ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಮಹೀಂದ್ರ ಕಂಪನಿಯ ಒಟ್ಟು ಎಸ್‌ಯುವಿಗಳಲ್ಲಿ ಶೇಕಡ 20-30 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಹೊಂದುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಐದು ಎಲೆಕ್ಟ್ರಿಕ್ ಎಸ್‌ಯುವಿಗಳು
ಮಹೀಂದ್ರ ಕಂಪನಿಯು ಐದು ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಶೀಘ್ರದಲ್ಲಿ ಹೊರತರುವ ಯೋಜನೆ ಹೊಂದಿದೆ. ಇವುಗಳಲ್ಲಿ ನಾಲ್ಕು ಎಸ್‌ಯುವಿಗಳು 2024- 2026ರ ನಡುವೆ ರಸ್ತೆಗಿಳಿಯಲಿದೆ. ಎಕ್ಸ್‌ಯುವಿ ಮತ್ತು ಬಿಇ ಎಂಬ ಎರಡು ಬ್ರಾಂಡ್‌ಗಳಡಿ ಐದು ಎಲೆಕ್ಟ್ರಿಕ್ ಎಸ್‌ಯುವಿ ಮಾಡೆಲ್‌ಗಳನ್ನು ರಸ್ತೆಗಿಳಿಸಲು ಮಹೀಂದ್ರ ಯೋಜಿಸಿದೆ. ಹಳೆಯ ಎಸ್‌ಯುವಿಗಳ ಎಲೆಕ್ಟ್ರಿಕ್ ರೂಪಾಂತರವು ಎಕ್ಸ್‌ಯುವಿ ಬ್ರಾಂಡ್‌ನಡಿ ಆಗಮಿಸಲಿದೆ. ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳು ಬಿಇ ಬ್ರಾಂಡ್‌ನಡಿ ರಸ್ತೆಗಿಳಿಯಲಿದೆ.
ಯಾಕೆ ಎಸ್‌ಯುವಿ? ಸಣ್ಣ ಎಲೆಕ್ಟ್ರಿಕ್ ಕಾರು ಯಾಕಿಲ್ಲ?
ಮಹೀಂದ್ರ ಕಂಪನಿಯು ಎಸ್‌ಯುವಿ ವಿಭಾಗದಲ್ಲಿಯೇ ಎಲೆಕ್ಟ್ರಿಕ್ ವಾಹನಗಳನ್ನು ಏಕೆ ಹೊರತರಲಿದೆ ಎಂಬ ಪ್ರಶ್ನೆಗೆ ರಾಜೇಶ್ ಜೆಜುರಿಕರ್ ಉತ್ತರಿಸಿದ್ದಾರೆ. ಅವರ ಪ್ರಕಾರ ಹೆಚ್ಚು ಹಣ ಕೊಟ್ಟು ಕಾರು ಖರೀದಿಸುವ ಖರೀದಿದಾರರು ಕೇವಲ ಕುಟುಂಬ ಪ್ರಯಾಣದ ಸಾಮಾನ್ಯ ಕಾರು ಖರೀದಿಸಲು ಬಯಸುವುದಿಲ್ಲ. ಅವರು ಎಂಟ್ರಿ ಅಥವಾ ಮಧ್ಯಮ ಗಾತ್ರದ ಕಾರುಗಳಿಗಿಂತ ಎಸ್‌ಯುವಿ ಖರೀದಿಸಲು ಆದ್ಯತೆ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಮಹೀಂದ್ರ ಕಂಪನಿಯು ಈಗಾಗಲೇ ಎಕ್ಸ್‌ಯುವಿ 400 ಎಂಬ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಅನಾವರಣ ಮಾಡಿದೆ.
(ಪೂರಕ ಮಾಹಿತಿ: ಪಿಟಿಐ)