ಆರೋಗ್ಯ ವಿಮೆ; ವಯೋಮಿತಿ ತೆರವುಗೊಳಿಸಿದ ಐಆರ್‌ಡಿಎ, ಈಗ 65ರ ಮೇಲ್ಪಟ್ಟವರಿಗೂ ಸಿಗಲಿದೆ ಆರೋಗ್ಯ ವಿಮಾ ರಕ್ಷಣೆ
ಆರೋಗ್ಯ ವಿಮೆ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆ ಆಗಿದ್ದು, ಆರೋಗ್ಯ ವಿಮೆ ಖರೀದಿಗೆ ಇದ್ದ ವಯೋಮಿತಿ ಐಆರ್‌ಡಿಎ ತೆರವುಗೊಳಿಸಿದೆ. ಈಗ 65ರ ಮೇಲ್ಪಟ್ಟವರಿಗೂ ಆರೋಗ್ಯ ವಿಮಾ ರಕ್ಷಣೆ ಸಿಗಲಿದ್ದು, ಇದರ ಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಆರೋಗ್ಯ ವಿಮೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದು, ಆರೋಗ್ಯ ವಿಮೆಗೆ ಸಂಬಂಧಿಸಿದ ವಯೋಮಿತಿ ತೆರವುಗೊಳಿಸಿದ ಐಆರ್‌ಡಿಎ, 65ರ ಮೇಲ್ಪಟ್ಟವರಿಗೂ ಆರೋಗ್ಯ ವಿಮಾ ರಕ್ಷಣೆ ಸಿಗುವಂತೆ ಮಾಡಿದೆ. ಈ ವಯೋಮಿತಿ ತೆರವು ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಹಿಂದೆ, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಲು ಅವಕಾಶವಿರಲಿಲ್ಲ. ಆದರೆ 2024ರ ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ನಿಯಮ ಬದಲಾವಣೆ ಕಾರಣ, ಈಗ ಯಾವುದೇ ವ್ಯಕ್ತಿ ವಯಸ್ಸಿನ ಮಿತಿ ಲೆಕ್ಕಿಸದೆ, ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಬಹುದಾಗಿದೆ.
ಬದಲಾದ ನಿಯಮಗಳ ಪ್ರಕಾರ, ಗರಿಷ್ಠ ವಯೋಮಿತಿ ತೆರವುಗೊಂಡಿರುವ ಕಾರಣ ಹಿರಿಯ ನಾಗರಿಕರು, ಅವರು 80 ಅಥವಾ 90 ವರ್ಷ ವಯಸ್ಸಿನವರಾಗಿದ್ದರೂ, ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಪರಿಗಣಿಸದೆಯೇ ಈಗ ಆರೋಗ್ಯ ವಿಮೆಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದು 65 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರಿಗೆ ಬಹುದೊಡ್ಡ ಕೊಡುಗೆಯಾಗಿ ಕಂಡುಬಂದಿದೆ.
ವಿಮಾ ಕಂಪನಿಗಳು 2024ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಆರೋಗ್ಯ ವಿಮಾ ಪ್ರೀಮಿಯಂ ಆಗಿ 1.09 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿವೆ. ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಒದಗಿಸುವ ಡೇಟಾ ಇದನ್ನು ಖಾತರಿಪಡಿಸಿದ್ದು, ಇದರಲ್ಲಿ ಸರ್ಕಾರಿ ಯೋಜನೆಗಳ ಮೂಲಕ 10,577 ಕೋಟಿ ರೂಪಾಯಿ, ಚಿಲ್ಲರೆ ಗ್ರಾಹಕರ ಮೂಲಕ 42,200 ಕೋಟಿ ರೂಪಾಯಿ ಮತ್ತು ಗ್ರೂಪ್ ಪಾಲಿಸಿಗಳ ಮೂಲಕ 55,020 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಇದುವರೆಗೆ ಆರೋಗ್ಯ ವಿಮಾ ರಕ್ಷಣೆ ಪಡೆಯಲು ಇದ್ದ ವಯಸ್ಸಿನ ಮಿತಿ ಎಷ್ಟು
ಐಆರ್‌ಡಿಎಐ ನಿಯಮ ಪ್ರಕಾರ, ಆರೋಗ್ಯ ವಿಮಾ ಪಾಲಿಸಿ ಖರೀದಿಗೆ ಇದುವರೆಗೆ 65 ವರ್ಷದ ವಯೋಮಿತಿ ಚಾಲ್ತಿಯಲ್ಲಿತ್ತು. ಅದಾಗಿ ಆರೋಗ್ಯ ವಿಮಾ ಪಾಲಿಸಿ ಖರೀದಿ ಬಹಳ ಕಷ್ಟದ ವಿಚಾರವಾಗಿತ್ತು. ಇದರಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ವಿಮಾ ರಕ್ಷಣೆ ನಿರಾಕರಣೆ ಮುಂತಾದ ನಿಯಮ, ನಿಬಂಧನೆಗಳೂ ಇದ್ದವು. ಯಾವ ವ್ಯಕ್ತಿಯಾದರೂ ಆರೋಗ್ಯದ ವಿಚಾರದಲ್ಲಿ ನಿರ್ದಿಷ್ಟ ವಯಸ್ಸಿನ ನಂತರ ವಯೋಸಹಜ ಅನಾರೋಗ್ಯ ಎದುರಿಸುವುದು ಸಾಮಾನ್ಯ. ಹೀಗಾಗಿ ಈ ನಿಬಂಧನೆಗಳು ಚಾಲ್ತಿಯಲ್ಲಿದ್ದವು.
ಹೊಸ ಆರೋಗ್ಯ ವಿಮಾ ನಿಯಮ
ಐಆರ್‌ಡಿಎಐ ತನ್ನ ಅಧಿಸೂಚನೆಯಲ್ಲಿ, ಎಲ್ಲ ವಯೋಮಾನದವರಿಗೆ ಆರೋಗ್ಯ ವಿಮಾ ಉತ್ಪನ್ನಗಳನ್ನು ಒದಗಿಸುವಂತೆ ವಿಮಾದಾರರಿಗೆ ಸೂಚನೆ ನೀಡಿದೆ. ವಿಮಾದಾರರು ಆರೋಗ್ಯ ವಿಮಾ ಪಾಲಿಸಿ ಉತ್ಪನ್ನಗಳನ್ನು ವಿಶೇಷವಾಗಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ ಮತ್ತು ಸಕ್ಷಮ ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಿದ ಯಾವುದೇ ಇತರ ಗುಂಪುಗಳಿಗೆ ವಿನ್ಯಾಸಗೊಳಿಸಬಹುದು ಎಂದು ಅದು ಸ್ಪಷ್ಟಪಡಿಸಿದೆ.
ಐಆರ್‌ಡಿಎಐ ತೆಗೆದುಕೊಂಡ ಈ ನಿರ್ಧಾರದಿಂದಾಗಿ ಭಾರತದಲ್ಲಿ ಆರೋಗ್ಯ ವಿಮಾ ರಕ್ಷಣೆಗೆ ಇನ್ನಷ್ಟು ಜನರನ್ನು ಸೇರಿಸುವ ಉದ್ದೇಶಕ್ಕೆ ಪೂರಕವಾಗಿ ಕಂಡುಬಂದಿದೆ. ಇದರೊಂದಿಗೆ ಇನ್ನು ವಿಮಾ ಪೂರೈಕೆದಾರ ಕಂಪನಿಗಳೂ ತಮ್ಮ ವಿಮಾ ಉತ್ಪನ್ನಗಳ ವೈವಿಧ್ಯವನ್ನು ಹೆಚ್ಚಿಸಲು ಮುಂದಾಗಲಿವೆ.
ಐಆರ್‌ಡಿಎಐ ಪ್ರಕಟಿಸಿದ ಇತ್ತೀಚಿನ ಅಧಿಸೂಚನೆಯಲ್ಲಿ, ಆರೋಗ್ಯ ವಿಮಾ ಪೂರೈಕೆದಾರರು ಕ್ಯಾನ್ಸರ್, ಹೃದಯ ಅಥವಾ ಮೂತ್ರಪಿಂಡ ವೈಫಲ್ಯ ಮತ್ತು ಏಡ್ಸ್ ಸೇರಿದಂತೆ ತೀವ್ರ ವೈದ್ಯಕೀಯ ಪರಿಸ್ಥಿತಿಗಳಿರುವ ವ್ಯಕ್ತಿಗಳಿಗೆ ಪಾಲಿಸಿಗಳನ್ನು ನಿರಾಕರಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ವಿಮಾ ನಿಯಂತ್ರಕರು ವಿಮಾ ಕಾಯುವ ಅವಧಿಯನ್ನು 48 ತಿಂಗಳುಗಳಿಂದ 36 ತಿಂಗಳಿಗೆ ಇಳಿಸಿದೆ ಎಂದು ವರದಿ ಹೇಳಿದೆ.
ಈಗ, ಪಾಲಿಸಿದಾರರು ಅವುಗಳನ್ನು ಆರಂಭದಲ್ಲಿ ಬಹಿರಂಗಪಡಿಸಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ವಿಮಾ ಪಾಲಿಸಿ ಖರೀದಿ ಮಾಡಲಾರಂಭಿಸಿದ 36 ತಿಂಗಳ ನಂತರ, ಅದಕ್ಕೂ ಮೊದಲೇ ಅಸ್ತಿತ್ವದಲ್ಲಿದೆ ಎಂಬ ಕಾರಣಕ್ಕೆ ಯಾವುದೇ ಅನಾರೋಗ್ಯ ಪರಿಸ್ಥಿತಿಗಳ ಆಧಾರದ ಮೇಲೆ ಕ್ಲೈಮ್‌ಗಳನ್ನು ತಿರಸ್ಕರಿಸಲಾಗದು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.