Terrorist Karnataka Link: ದೆಹಲಿ ಬಂಧಿತ ಉಗ್ರನ ನಂಟು ಧಾರವಾಡ, ಬೆಳಗಾವಿಯಲ್ಲಿ: ಎನ್‌ಐಎದಿಂದ ಕರ್ನಾಟಕದಲ್ಲೂ ತನಿಖೆ ಚುರುಕು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Terrorist Karnataka Link: ದೆಹಲಿ ಬಂಧಿತ ಉಗ್ರನ ನಂಟು ಧಾರವಾಡ, ಬೆಳಗಾವಿಯಲ್ಲಿ: ಎನ್‌ಐಎದಿಂದ ಕರ್ನಾಟಕದಲ್ಲೂ ತನಿಖೆ ಚುರುಕು

Terrorist Karnataka Link: ದೆಹಲಿ ಬಂಧಿತ ಉಗ್ರನ ನಂಟು ಧಾರವಾಡ, ಬೆಳಗಾವಿಯಲ್ಲಿ: ಎನ್‌ಐಎದಿಂದ ಕರ್ನಾಟಕದಲ್ಲೂ ತನಿಖೆ ಚುರುಕು

Delhi Terrorist Karnataka Link ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ಉಗ್ರರ ಅಡಗುತಾಣವಾಗುತ್ತಿದೆಯೆ ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಠಿಯಾಗಿ ಇತ್ತೀಚಿಗೆ ಬಂಧಿಸಲಾದ ಮೂವರು ಉಗ್ರರು ಪಶ್ಚಿಮ ಘಟ್ಟಗಳಲ್ಲಿ ಸಮೀಕ್ಷೆ ನಡೆದಿದ್ದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇದಕ್ಕೆ ಸಂಬಂಧಿಸಿ ಕರ್ನಾಟಕ ಪೊಲೀಸರು ದೆಹಲಿ ಪೊಲೀಸರೊಂದಿಗೆ ಮಾಹಿತಿ ಕ್ರೋಢೀಕರಿಸುತ್ತಿದ್ದಾರೆ.

ದೆಹಲಿಯಲ್ಲಿ ಬಂಧಿಸಲಾಗಿರುವ ಶಹನವಾಜ್‌, ಕರ್ನಾಟಕದಲ್ಲೂ ಈತನ ಕುರಿತು ತನಿಖೆ ನಡೆದಿದೆ.
ದೆಹಲಿಯಲ್ಲಿ ಬಂಧಿಸಲಾಗಿರುವ ಶಹನವಾಜ್‌, ಕರ್ನಾಟಕದಲ್ಲೂ ಈತನ ಕುರಿತು ತನಿಖೆ ನಡೆದಿದೆ.

ಬೆಂಗಳೂರು:ರಾಷ್ಟ್ರೀಯ ತನಿಖಾ ದಳ( NIA) ದೆಹಲಿಯಲ್ಲಿ ಬಂಧಿಸಿರುವ ಮೂವರಲ್ಲಿ ಉಗ್ರರಲ್ಲಿ ಒಬ್ಬಾತ ಕರ್ನಾಟಕದಲ್ಲಿಯೇ ಶಿಕ್ಷಣ ಪಡೆದು ಇಲ್ಲಿನ ನಿಕಟ ನಂಟು ಹೊಂದಿರುವುದು ತನಿಖೆಯಿಂದ ಬಯಲಾಗಿದೆ.

ಪಶ್ಚಿಮ ಘಟ್ಟಗಳ ಜತೆಗೆ ಧಾರವಾಡ ಹಾಗೂ ಬೆಳಗಾವಿಯಲ್ಲೂ ಬಂಧಿತ ಉಗ್ರ ನಂಟು ಇಟ್ಟುಕೊಂಡು ಚಟುವಟಿಕೆ ವಿಸ್ತರಿಸುವುದು ತನಿಖೆ ವೇಳೆ ಗೊತ್ತಾಗಿದೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸರೊಂದಿಗೆ ಎನ್‌ಐಎ ತಂಡ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದೆ.

ದೆಹಲಿಯ ಜೈತ್ ಪುರ್ ಎಂಬಲ್ಲಿ 32 ವರ್ಷದ ಶಹನವಾಜ್ ಅಲಿಯಾಸ್ ಶಫಿ ಉಝಮಾ ಎಂಬಾತನನ್ನು ಬಂಧಿಸಲಾಗಿದೆ. ಈತ ಧಾರವಾಡ ಹಾಗೂ ಬೆಳಗಾವಿಯಲ್ಲಿ ನಂಟು ಇರುವ ಹಾಗೂ ಪಶ್ಚಿಮ ಘಟ್ಟ ಭಾಗದಲ್ಲಿ ಸಮೀಕ್ಷೆ ನಡೆಸಿರುವುದು ಎನ್‌ಐಎ ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಇನ್ನಷ್ಟು ನಿಖರ ಮಾಹಿತಿಯನ್ನು ಕರ್ನಾಟಕ ಪೊಲೀಸರು ಕಲೆ ಹಾಕುತ್ತಿದ್ದಾರೆ.

ಏನಿದು ಪ್ರಕರಣ?

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಲೆ ಬೀಸಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್‌ (ಐಎಸ್‌ಐಎಸ್‌) ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಮೂವರು ಉಗ್ರರನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿದ್ದು, ಇದರಲ್ಲಿ ಒಬ್ಬಾತನ ನಂಟು ಕರ್ನಾಟಕಕ್ಕೂ ಇರುವ ಕುರಿತು ತನಿಖೆ ಚುರುಕುಗೊಂಡಿದೆ.

ದೆಹಲಿಯ ಜೈತ್ ಪುರ್ ಎಂಬಲ್ಲಿ ಶಹನವಾಜ್ ಅಲಿಯಾಸ್ ಶಫಿ ಉಝಮಾ ನನ್ನು ಬಂಧಿಸಲಾಗಿದೆ. ಈತನ ಶೋಧಕ್ಕೆ ದೆಹಲಿ ಪೊಲೀಸರ ವಿಶೇಷ ತಂಡ, ಎನ್‌ಐಎ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಈತನ ಸುಳಿವು ನೀಡಿದವರಿಗೆ ಎನ್ಐಎ 3 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಈತನ ಜತೆಗೆ ಮಹಮದ್ ರಿಜ್ವಾನ್ ಅಶ್ರಫ್ (29) ನನ್ನು ಮೊರಾದಾಬಾದ್‌ ಮತ್ತು ಮಹಮದ್ ಅರ್ಷದ್ ವಾರ್ಸಿ 28) ಎಂಬ ಉಗ್ರನನ್ನು ಲಕ್ನೋದಲ್ಲಿ ಬಂಧಿಸಲಾಗಿದೆ. ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇವರಿಂದ ನಿಖರ ಸಾಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ನೀಡಲಾಗಿದೆ

ಕಳೆದ ತಿಂಗಳು ಎನ್ ಐ ಎ ಶಹನವಾಜ್ ಸೇರಿದಂತೆ ನಾಲ್ವರು ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿತ್ತು. ವಿದೇಶಿ ಉಗ್ರಗಾಮಿ ಸಂಘಟನೆಯೊಂದು ಶಹನವಾಜ್ ಮೂಲಕ ದುಷ್ಕೃತ್ಯ ನಡೆಸಲು ಹುನ್ನಾರ ನಡೆದಿತ್ತು. ಈತ ಉಳಿದ ಇನ್ನಿಬ್ಬರು ಉಗ್ರಗಾಮಿಗಳಿಗೆ ನಿರ್ದೇಶನ ನೀಡುವ ಮೂಲಕ ಉಗ್ರ ಚಟುವಟಿಕೆ ನಡೆಸಲು ಸಂಚು ನಡೆಸಿದ್ದ.

ಉತ್ತರ ಭಾರತದಲ್ಲಿ ಸ್ಫೋಟಕ್ಕೆ ಸಂಚು

ಶಹನವಾಜ್, ಅಬ್ದುಲ್ಲಾ ಮತ್ತು ರಿಜ್ವಾನ್ ಐಸಿಸ್ ಕಾರ್ಯಾಚರಣೆಗೆ ಸೇರಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿರುವ ಐಸಿಸ್ ಘಟಕದೊಂದಿಗೆ ಅವರು ಸಂಪರ್ಕ ಹೊಂದಿದ್ದರು. ಇವರು ದೇಶದಲ್ಲಿ ಹಿಂಸಾಚಾರ ನಡೆಸಲು ಬಯಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಎನ್‌ಐಎ ಅಧಿಕಾರಿಗಳು ಮಹಾರಾಷ್ಟ್ರದ ಪುಣೆಯ ಹಲವೆಡೆ ದಾಳಿ ನಡೆಸಿ, ಹಲವು ಆರೋಪಿಗಳನ್ನು ಬಂಧಿಸಿದ್ದರು. ದೇಶದ ಹಲವೆಡೆ ದಾಳಿ ನಡೆಸುವ ಮೂಲಕ ಶಾಂತಿ ಕದಡುವುದು ಇವರ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಪುಣೆ ಪೊಲೀಸ್‌ ಕಸ್ಟಡಿಯಿಂದ ಶಹನವಾಜ್‌ ತಪ್ಪಿಸಿಕೊಂಡು, ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಶಹನವಾಜ್ ನಿವಾಸದಲ್ಲಿ ಪಿಸ್ತೂಲ್ ಮತ್ತು ಸ್ಫೋಟಕಗಳನ್ನು ತಯಾರಿಸಲು ಬೇಕಾಗುವ ರಾಸಾಯನಿಕಗಳು, ಪ್ಲಾಸ್ಟಿಕ್ ಟ್ಯೂಬ್ ಗಳು, ಕಬ್ಬಿಣದ ಪೈಪ್ ಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಎಚ್.ಜಿ.ಎಸ್. ಧಲಿವಾಲ್ ತಿಳಿಸಿದ್ದಾರೆ.

ಕರ್ನಾಟಕದತ್ತಲೂ ಪೊಲೀಸ್‌ ಕಣ್ಣು

ದೆಹಲಿ ಪೊಲೀಸರು ಮೂವರು ಉಗ್ರರನ್ನು ಬಂಧಿಸುತ್ತಿದ್ದಂತೆ ಇವರ ಬಂಧನ ಕುರಿತು ಕರ್ನಾಟಕ ಪೊಲೀಸರು ದೆಹಲಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಇವರು ಉಗ್ರ ಚಟುವಟಿಕೆಗಳನ್ನು ನಡೆಸಲು ಪಶ್ಚಿಮ ಘಟ್ಟಗಳಲ್ಲಿ ಸಮೀಕ್ಷೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಈ ಸಂಗತಿಯನ್ನು ಕರ್ನಾಟಕ ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಉಗ್ರರು ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ತರಬೇತಿ ಪಡೆದಿದ್ದರು ಎಂಬ ಅನುಮಾನವೂ ಇದೆ.

ಶಹನವಾಜ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗಣಿ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ಈತನ ಪತ್ನಿ ಬಸಂತಿ ಪಾಟೀಲ್ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡಿದ್ದು ಮರಿಯಂ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪದವಿ ಪಡೆದಿರುವ ಈತನ ಸಂಪರ್ಕ ಮತ್ತು ಇತರ ಮೂಲಗಳ ರಹಸ್ಯವನ್ನು ಭೇದಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಪಶ್ಚಿಮ ಘಟ್ಟಗಳು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ದಕ್ಷಿಣದ ಅನೇಕ ಭಾಗಗಳು ಮತ್ತು ಗುಜರಾತ್ ನ ಅಹಮದಾಬಾದ್ ನಲ್ಲಿಯೂ ಇವರು ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್, ನಾವು ನಿರಂತರವಾಗಿ ದೆಹಲಿ ಪೊಲೀಸರ ಜತೆ ಸಂಪರ್ಕದಲ್ಲಿ ಇದ್ದೇವೆ. ಈ ಉಗ್ರರು ರಾಜ್ಯದ ಯಾವುದಾದರೂ ಭಾಗದಲ್ಲಿ ತರಬೇತಿ ಪಡೆದಿದ್ದರೆ ಅಥವಾ ಸಂಪರ್ಕ ಇತ್ತೇ ಎಂಬ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ಘಟನಾವಳಿಗಳನ್ನು ಕುರಿತು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

( ವರದಿ: ಎಚ್‌. ಮಾರುತಿ, ಬೆಂಗಳೂರು)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.