Earthquake: ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ, ಹೈದರಾಬಾದ್‌ನಲ್ಲೂ ಕಂಪನ, ಎಚ್ಚರದಿಂದ ಇರುವಂತೆ ಜನರಿಗೆ ಸೂಚನೆ
Telangana earthquake today: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.3 ದಾಖಲಾಗಿದೆ. ಇಂದು ಬೆಳಗ್ಗೆ 7.27 ಗಂಟೆಯ ವೇಳೆಗೆ ಭೂಕಂಪವಾಗಿದೆ.
ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.3 ದಾಖಲಾಗಿದೆ. ಇಂದು ಬೆಳಗ್ಗೆ 7.27 ಗಂಟೆಯ ವೇಳೆಗೆ ಭೂಕಂಪವಾಗಿದೆ. ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕಂಪನಗಳು ವರದಿಯಾಗಿವೆ. ತೆಲಂಗಾಣದಲ್ಲಿ ಭೂಕಂಪದ ಸಂದರ್ಭದಲ್ಲಿ ಭೂಮಿ ಲಘುವಾಗಿ ನಡುಗುವ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಹಾನಿಯ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜನರು ಜಾಗೃತೆಯಿಂದ ಇರುವತೆ ಸೂಚಿಸಲಾಗಿದೆ. ಭೂಕಂಪಗಳ ಸಮಯದಲ್ಲಿ ಕಿಕ್ಕಿರಿದ ಸ್ಥಳಗಳಲ್ಲಿ ಅಥವಾ ಅಸುರಕ್ಷಿತ ಕಟ್ಟಡಗಳು ಇರುವ ಸ್ಥಳಗಳಲ್ಲಿ ನಿಲ್ಲಬೇಡಿ ಎಂದು ಸಲಹೆ ನೀಡಲಾಗಿದೆ.
ತೆಲಂಗಾಣದಲ್ಲಿ ಭೂಕಂಪನವಾಗುವುದು ಅಪರೂಪ. ಇದು ಭೂಕಂಪನ ಹೆಚ್ಚಿರುವ ಪ್ರದೇಶವಲ್ಲ. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿಯ ಭೂಕಂಪನವಾಗಿದೆ. ಮಹಾರಾಷ್ಟ್ರದ ನಾಗ್ಪುರ, ಗಡ್ಚಿರೋಲಿ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆ ನೆರೆಯ ತೆಲಂಗಾಣದ ಮುಲುಗುವಿನಲ್ಲಿ ಭೂಕಂಪ ಸಂಭವಿಸಿದ ಆಸುಪಾಸಿನ ಕಂಪನದ ಅನುಭವವಾಗಿದೆ.
ತೆಲಂಗಾಣಕ್ಕೆ ಸಮೀಪದಲ್ಲಿರುವ ಗಡ್ಚಿರೋಲಿಯಲ್ಲಿಯೂ ಲಘು ಭೂಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂಲಗಳು ಮತ್ತು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಚಂದ್ರಾಪುರ, ನಗರದ ಕೆಲವು ಭಾಗಗಳು, ಬಲ್ಲಾರ್‌ಪುರ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಹಸಿಲ್‌ಗಳಲ್ಲಿಯೂ ಲಘು ಕಂಪನದ ಅನುಭವವಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ 4 ಭೂಕಂಪ ವಲಯಗಳು
ಭಾರತದಲ್ಲಿ ನಾಲ್ಕು ಭೂಕಂಪನ ವಲಯಗಳಿವೆ. ವಲಯ II, ವಲಯ III, ವಲಯ IV, ಮತ್ತು ವಲಯ V ಎಂದು ಅವುಗಳನ್ನು ವರ್ಗೀಕರಿಸಲಾಗಿದೆ. ವಲಯ V ಅತ್ಯಧಿಕ ಮಟ್ಟದ ಭೂಕಂಪನ ಪ್ರದೇಶವಾಗಿದೆ. ಆದರೆ ವಲಯ II ಅತ್ಯಂತ ಕಡಿಮೆ ಮಟ್ಟದ ಭೂಕಂಪನವಾಗುವ ಪ್ರದೇಶವಾಗಿದೆ. ತೆಲಂಗಾಣವನ್ನು ವಲಯ II ರಲ್ಲಿ ವರ್ಗೀಕರಿಸಲಾಗಿದೆ, ಇದು ಕಡಿಮೆ ತೀವ್ರತೆಯ ವಲಯವಾಗಿದೆ.
"ಕಳೆದ 20 ವರ್ಷಗಳಲ್ಲಿ ಮೊದಲ ಬಾರಿಗೆ, ತೆಲಂಗಾಣದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಮುಲುಗುನಲ್ಲಿ 5.3 ತೀವ್ರತೆಯ ಭೂಕಂಪನದ ಕೇಂದ್ರಬಿಂದುವಾಗಿದೆ." ಎಂದು ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಹೈದರಾಬಾದ್ ಸೇರಿದಂತೆ ಇಡೀ ತೆಲಂಗಾಣವು ಕಂಪನವನ್ನು ಅನುಭವಿಸಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.