New Honda Amaze: ಡಿಸೈರ್ ಪ್ರಿಯರನ್ನು ಕೆರಳಿಸಲಿದೆ ಹೊಸ ಹೋಂಡಾ ಅಮೇಜ್: ಇಂದು ಬಿಡುಗಡೆ ಆಗಲಿದೆ ಹೊಸ ಕಾರು
ಹೋಂಡಾ ಅಮೇಜ್ ನವೀಕರಿಸಿದ ಮಾದರಿಯು ಸಾಕಷ್ಟು ಹೊಸತನದಿಂದ ಆಗಮಿಸಲಿದೆ. ಲೈಟ್‌ಗಳು ಮತ್ತು ಬಂಪರ್‌ಗಳು ಸೇರಿದಂತೆ ಗ್ರಿಲ್‌ಗಳಲ್ಲಿ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಅಳವಡಿಸಲಾಗಿದೆ.
All New Honda Amaze: ಹೋಂಡಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಸೆಡಾನ್ ಪ್ರಿಯರಿಗೆ ಪ್ರೀಮಿಯಂ ನೋಟವನ್ನು ನೀಡುವಲ್ಲಿ ಯಾವುದೇ ಹಿಂಜರಿಕೆ ಮಾಡಿಲ್ಲ. ಇದರ ಭಾಗವಾಗಿ ಡಿಸೆಂಬರ್ 4ರಂದು ನವೀಕರಿಸಿದ ಹೊಸ ಅಮೇಜ್ ಅನ್ನು ಬಿಡುಗಡೆ ಮಾಡಲಿದೆ. ಅಲ್ಲದೆ, ಮೂರನೇ ತಲೆಮಾರಿನ ಅಮೇಜ್ ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುವ ಸಾಧ್ಯತೆಯಿದೆ. ಇದರಿಂದಾಗಿ ತನ್ನ ಪ್ರತಿಸ್ಪರ್ಧಿ ಸೆಡಾನ್ ಕಾರುಗಳ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದು. ಈಗ ಹೋಂಡಾ ಅಮೇಜ್ ಸೆಡಾನ್‌ಗೆ ವಾಹನ ಮಾರುಕಟ್ಟೆಯಲ್ಲಿ ಅತಿದೊಡ್ಡ ಪ್ರತಿಸ್ಪರ್ಧಿ ಹೊಸ ಮಾರುತಿ ಸುಜುಕಿ ಡಿಜೈರ್ ಆಗಿದೆ.
ಅಮೇಜ್ ಸೆಡಾನ್‌ನ ನವೀಕರಿಸಿದ ಮಾದರಿಯ ಲೈಟ್‌ಗಳು, ಬಂಪರ್‌ಗಳು ಸೇರಿದಂತೆ ಗ್ರಿಲ್‌ಗಳಲ್ಲಿ ಸಂಪೂರ್ಣ ಹೊಸ ವಿನ್ಯಾಸ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಮೂರನೇ ತಲೆಮಾರಿನ ಅಮೇಜ್‌ನಲ್ಲಿ ಹೊಸ ಬಣ್ಣದ ಆಯ್ಕೆಗಳು ಸಹ ಲಭ್ಯವಿರುತ್ತವೆ. ನವೀಕರಿಸಿದ ದೊಡ್ಡ ಗ್ರಿಲ್ ಸಾಕಷ್ಟು ಬಲಿಷ್ಠವಾಗಿದೆಯಂತೆ. ಅಲ್ಲದೆ, ವಿವಿಧ ಸ್ಥಳಗಳಲ್ಲಿ ಕ್ರೋಮ್ ನಿಯೋಜನೆ ಮಾಡಲಾಗಿದ್ದು, ಇದು ತುಂಬಾ ಸುಂದರವಾಗಿ ಕಾಣುತ್ತದೆ.
ಹೋಂಡಾ ಅಮೇಜ್ ಹೊಸ ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್ ಜೊತೆಗೆ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಪ್ರೊಜೆಕ್ಟರ್ ಫಾಗ್ ಲ್ಯಾಂಪ್‌ಗಳು, ಹೊಸ ಬಂಪರ್, ಹೊಸ ಟೈಲ್‌ಲೇಟ್ ಸೆಟಪ್, ಹೊಸ ವಿನ್ಯಾಸದ ಅಲಾಯ್ ವೀಲ್‌ಗಳು , ಹಿಂಭಾಗದಲ್ಲಿ ಹೊಸ ಬಂಪರ್, ಶಾರ್ಕ್ ಫಿನ್ ಆಂಟೆನಾ ಸೇರಿದಂತೆ ಕಾರಿನ ಹೊರಗೆ ಸಾಕಷ್ಟು ಆಕರ್ಷಣೆಗಳನ್ನು ಗುರುತಿಸಬಹುದು.
ಅಮೇಜ್ ಫೇಸ್‌ಲಿಫ್ಟ್ ಸೆಡಾನ್‌ನ ಒಳಭಾಗದಲ್ಲಿ ಕೂಡ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಇದು ಹೊಸ ಸ್ಟಿಯರಿಂಗ್ ವೀಲ್, ಹೊಸ ಡ್ಯಾಷ್‌ಬೋರ್ಡ್ ವಿನ್ಯಾಸ ಮತ್ತು ಸೆಂಟರ್ ಕನ್ಸೋಲ್, ಸ್ಟಾಂಡರ್ಡ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಇದು ಹಳೆಯ ಮಾದರಿಗಿಂತ ದೊಡ್ಡದಾಗಿದೆ, ಅಂದರೆ ಈ ಬಾರಿ 10.25 ಇಂಚುಗಳ ಸ್ಕ್ರೀನ್ ಅನ್ನು ನೀಡಲಾಗಿದೆ.
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಏಸಿ ವೆಂಟ್‌ಗಳು ಮತ್ತು ಚಾರ್ಜರ್ ಸೆಟಪ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳು, ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್‌ಗಳನ್ನು ಹೋಂಡಾ ಅಮೇಜ್ ಕಾರಿನಲ್ಲಿ ನೋಡಬಹುದು.
ಎಂಜಿನ್ ಮತ್ತು ಶಕ್ತಿಯ ಬಗ್ಗೆ ನೋಡೋಣ. ಹೊಸ ಹೋಂಡಾ ಅಮೇಜ್ ಫೇಸ್ ಲಿಫ್ಟ್ 1.2 ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ. ಹಳೆಯ ಮಾದರಿಯ ಅದೇ 1.2-ಲೀಟರ್ 4-ಸಿಲಿಂಡರ್ SOHC i-VTEC ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ. ಈ ಎಂಜಿನ್ 90PS ಗರಿಷ್ಠ ಶಕ್ತಿ ಮತ್ತು 110Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ MT ಮತ್ತು CVT ಸ್ವಯಂಚಾಲಿತ ಆಯ್ಕೆ ಇದೆ. ಇದು ಹಳೆಯ ಮಾದರಿಗಿಂತ ಉತ್ತಮ ಮೈಲೇಜ್ ನೀಡುತ್ತದಂತೆ.
ಭಾರತದಲ್ಲಿ ಹೊಸ ಹೋಂಡಾ ಅಮೇಜ್ ಬೆಲೆ 7.25 ಲಕ್ಷ ದಿಂದ 10.50 ಲಕ್ಷ (ಎಕ್ಸ್ ಶೋ ರೂಂ) ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.
- ವರದಿ: ವಿನಯ್ ಭಟ್