ISRO Proba-3: ಇಸ್ರೋದಿಂದ ಇಂದು ಪ್ರೊಬಾ-3 ಉಡ್ಡಯನ, ಸೌರ ಕರೋನಾ ಅಧ್ಯಯನಕ್ಕೆ ಹೊಸ ಭರವಸೆ, ಇದು ಇಎಸ್‌ಎ ಮಿಷನ್
ISRO ESA Proba-3 mission: ಯರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ)ಯ ಪ್ರೊಬಾ 3 ಬಾಹ್ಯಾಕಾಶ ನೌಕೆಯನ್ನು ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್ ಇಂದು (ಡಿಸೆಂಬರ್ 4) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ. ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್ ಕೊಡುಗೆ ನೀಡಲಿದೆ.
ISRO Proba-3 mission: ಭಾರತೀಯ ಬಾಹ್ಯಾಕಾಶ ಸಂಶೋಧನೆಯು ಡಿಸೆಂಬರ್ 4ರಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ (ಇಎಸ್‌ಎ) ಪ್ರೊಬಾ 3 ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4:08 ಗಂಟೆಗೆ ಉಡ್ಡಯನ ನಡೆಯಲಿದೆ. ಇದು ಇಸ್ರೋದ ವಾಣಿಜ್ಯ ಉದ್ದೇಶದ ಕಾರ್ಯಕ್ರಮವಾಗಿದೆ. ಈ ಐತಿಹಾಸಿಕ ಮಿಷನ್‌ಗಾಗಿ ಈಗಾಗಲೇ ಕೌಂಟ್‌ಡೌನ್ ಆರಂಭವಾಗಿದೆ. ಮಂಗಳವಾರ ಅಪರಾಹ್ನ 3:08 ಗಂಟೆಗೆ ಕೌಂಟ್‌ಡೌನ್ ಆರಂಭಿಸಲಾಗಿದೆ.
ಇಎಸ್‌ಇ ಜತೆ ಒಪ್ಪಂದವನ್ನು ಪಡೆದುಕೊಂಡಿರುವ ಇಸ್ರೋ ಈ ಮಿಷನ್ ಅನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್)ನ ವಾಣಿಜ್ಯ ವಿಭಾಗದ ಅಡಿಯಲ್ಲಿ ಲಾಂಚ್ ಮಾಡುತ್ತಿದೆ. ಇದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ ರಾಕೆಟ್)ನ 61ನೇ ಹಾರಾಟವಾಗಿದೆ. ಹೆಚ್ಚು ತೂಕದ ಬಾಹ್ಯಾಕಾಶ ಮಿಷನ್ ಕೈಗೊಳ್ಳುವಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಹೆಸರುವಾಸಿಯಾಗಿದೆ.
ಈ ಮಿಷನ್‌ನಡಿ ಕರೋನಾಗ್ರಾಫ್ ಮತ್ತು ಆಕಲ್ಟರ್ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ನಭಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.
ಪ್ರೊಬಾ 3ಯು ವಿನೂತನ ಪ್ರಪ್ರಥಮ ಮಿಷನ್ ಆಗಿದೆ. ಎರಡು ಬಾಹ್ಯಾಕಾಶ ನೌಕೆಗಳು ಒಂದೇ ಸಂಯೋಜಿತ ಘಟಕಗಳಾಗಿ ಒಟ್ಟಿಗೆ ಹಾರುವ ಮಿಷನ್ ಇದಾಗಿದೆ. ಸೌರ ಕರೋನಾಗ್ರಾಫ್ ರಚಿಸಲು ಈ ಎರಡು ಬಾಹ್ಯಾಕಾಶ ನೌಕೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ವಿಜ್ಞಾನಿಗಳಿಗೆ ಸೂರ್ಯನ ಕರೋನಾವನ್ನು-ಅದರ ವಾತಾವರಣದ ಹೊರಗಿನ ಪದರವನ್ನು ಅಭೂತಪೂರ್ವ ವಿವರವಾಗಿ ಅಧ್ಯಯನ ಮಾಡಲು ಇದು ನೆರವಾಗಲಿದೆ. ಪ್ರೋಬಾ ಎಂಬ ಲ್ಯಾಟಿನ್ ಪದದ ಅರ್ಥ "ಪ್ರಯತ್ನಿಸೋಣ" ಎಂದಾಗಿದೆ.
ಮಿಷನ್‌ನ ಉದ್ದೇಶ
ಆಕಲ್ಟರ್ ಬಾಹ್ಯಾಕಾಶ ನೌಕೆಯು ಸೌರ ಡಿಸ್ಕ್ ಅನ್ನು ನಿರ್ಬಂಧಿಸುತ್ತದೆ. ಕರೋನಾಗ್ರಾಫ್ ಸೂರ್ಯನ ಕರೋನವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ರೀತಿ ಸೂರ್ಯನ ವಾತಾವರಣವನ್ನು ನೋಡಲು ಗ್ರಹಣ ಸಮಯದಲ್ಲಿ ಮಾತ್ರ ಸಾಧ್ಯ. ಆದರೆ, ಈ ನೌಕೆಗಳು ಗ್ರಹಣವಿಲ್ಲದೆ ಇದ್ದಾಗಲೂ ತಮ್ಮ ವಿನೂತನ ರಚನೆಯಿಂದಾಗಿ ಸೂರ್ಯನ ಅಧ್ಯಯನ ಮಾಡಲು ನೆರವಾಗಲಿದೆ. ಪ್ರೋಬಾ 3 ಮೂಲಕ ವಿಜ್ಞಾನಿಗಳು ಸೌರ ಕರೋನಾವನ್ನು ಈ ಹಿಂದಿಗಿಂತ ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡಲಿದ್ದಾರೆ. ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಮತ್ತು ಇತರ ಸೌರ ವಿದ್ಯಮಾನಗಳಿಗೆ ಅಮೂಲ್ಯವಾದ ಮಾಹಿತಿ ಇದರಿಂದ ದೊರಕಲಿದೆ.
ಈ ಯೋಜನೆಯಲ್ಲಿ ಇಸ್ರೋ ಪಾತ್ರ
ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಪ್ರೊಬಾ-3 ಮಿಷನ್‌ನ ವೈಜ್ಞಾನಿಕ ಅಂಶಗಳನ್ನು ಮುನ್ನಡೆಸುತ್ತದೆ. ಈ ಯೋಜನೆಯ ಉಡಾವಣೆ ಯಶಸ್ಸಿಗೆ ಇಸ್ರೋ ಪಾಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಯೋಜನೆಗಾಗಿ ಇಸ್ರೋ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಅನ್ನು ಒದಗಿಸುತ್ತದೆ. ನಿಗದಿತ ಕಕ್ಷೆಗೆ 500 ಕೆಜಿವರೆಗಿನ ಪೇಲೋಡ್‌ಗಳನ್ನು ಕೊಂಡೊಯ್ಯುವ ವಿಷಯದಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಹೆಸರುವಾಸಿಯಾಗಿದೆ. ಈ ಬಾಹ್ಯಾಕಾಶ ನೌಕೆಗಳನ್ನು ನಿಗದಿಪಡಿಸಿದ ಕಕ್ಷೆಗೆ ನಿಯೋಜಿಸುವಲ್ಲಿ ಇಸ್ರೋದ ಪಾತ್ರ ಮಹತ್ವದ್ದಾಗಿದೆ.
ಈಗಾಗಲೇ ಭಾರತವು ಸೌರ ಮಿಷನ್ ಕೈಗೊಂಡಿದೆ. ಆದಿತ್ಯ-L1 ಅನ್ನು ಸೆಪ್ಟೆಂಬರ್ 2023 ರಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ. ಇಸ್ರೋದ ಈ ಪರಿಣತಿಯನ್ನು ಮನಗಂಡು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಈ ಮಹತ್ವದ ಕೆಲಸವನ್ನು ನೀಡಿದೆ.