ಸಂಪಾದಕೀಯ: ಹಿಂದುಳಿದ ಜಾತಿಗಳಲ್ಲಿ ಮೂಲೆಗುಂಪಾದವರಿಗೆ ಮೀಸಲಾತಿ ಮರುಹಂಚಿಕೆಯಿಂದ ಅನುಕೂಲ, ಸುಪ್ರೀಂಕೋರ್ಟ್ ಮಹತ್ವದ ತೀರ್ಪು-editorial supreme court landmark judgement on reservation redistribution will help reservation to reach most backward ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಪಾದಕೀಯ: ಹಿಂದುಳಿದ ಜಾತಿಗಳಲ್ಲಿ ಮೂಲೆಗುಂಪಾದವರಿಗೆ ಮೀಸಲಾತಿ ಮರುಹಂಚಿಕೆಯಿಂದ ಅನುಕೂಲ, ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಂಪಾದಕೀಯ: ಹಿಂದುಳಿದ ಜಾತಿಗಳಲ್ಲಿ ಮೂಲೆಗುಂಪಾದವರಿಗೆ ಮೀಸಲಾತಿ ಮರುಹಂಚಿಕೆಯಿಂದ ಅನುಕೂಲ, ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Editorial: ಮೀಸಲಾತಿ ಕೋಟಾದೊಳಗಿನ ಕೋಟಾಗಳ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಮೀಸಲಾತಿಯು ಅತ್ಯಂತ ಹಿಂದುಳಿದವರನ್ನು ತಲುಪಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಮಾದರಿಗಳು ಹೊರಹೊಮ್ಮುತ್ತವೆ.

ಸಂಪಾದಕೀಯ: ಹಿಂದುಳಿದ ಜಾತಿಗಳಲ್ಲಿ ಮೂಲೆಗುಂಪಾದವರಿಗೆ ಮೀಸಲಾತಿ ಮರುಹಂಚಿಕೆಯಿಂದ ಅನುಕೂಲ, ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಸಂಪಾದಕೀಯ: ಹಿಂದುಳಿದ ಜಾತಿಗಳಲ್ಲಿ ಮೂಲೆಗುಂಪಾದವರಿಗೆ ಮೀಸಲಾತಿ ಮರುಹಂಚಿಕೆಯಿಂದ ಅನುಕೂಲ, ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಮಾನತೆಯನ್ನು ಸಾಧಿಸುವ ಗುರಿಯ ಹೊರತಾಗಿಯೂ ಮೀಸಲಾತಿಯ ಲಾಭಗಳ ಹಂಚಿಕೆಯಲ್ಲಿ ಅಸಮಾನತೆ ಹೆಚ್ಚಾಗಿದೆ. ವಿವಿಧ ಕಾರಣಗಳಿಂದಾಗಿ ಕೆಲವೇ ಗುಂಪುಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ. ಈ ಪ್ರಕ್ರಿಯೆಯು ಸಾಮಾಜಿಕವಾಗಿ ಹಿಂದುಳಿದಿರುವ, ತಾರತಮ್ಯ ಅನುಭವಿಸುತ್ತಿರುವ, ಅಂಚಿನಲ್ಲಿರುವ ಜಾತಿಗಳಲ್ಲಿಯೂ ಎದ್ದು ಕಾಣುತ್ತದೆ. ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಕೋಟಾಗಳಲ್ಲಿ ಉಪ-ವರ್ಗೀಕರಣವನ್ನು ಎತ್ತಿಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಈ ಮೀಸಲಾತಿಯಲ್ಲಿ ಇರುವ ಸಮಸ್ಯೆಗಳಲ್ಲಿ ಪರಿಹರಿಸಲು ಪ್ರಯತ್ನಿಸಿದೆ. ಇದೇ ವೇಳೆ ಸುಪ್ರೀಂ ಕೋರ್ಟ್‌ 2004ರಲ್ಲಿ ನೀಡಿದ್ದ ‘ಇ.ವಿ.ಚಿನ್ನಯ್ಯ vs ಆಂಧ್ರಪ್ರದೇಶ ರಾಜ್ಯ’ ಪ್ರಕರಣದ ತೀರ್ಪನ್ನು ರದ್ದುಪಡಿಸಿದೆ. ‘ಉಪ ವರ್ಗೀಕರಣವು ಅಸಾಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್‌ ಕಳೆದ ಗುರುವಾರ (ಆಗಸ್ಟ್ 1) ನೀಡಿರುವ 6:1 ಬಹುಮತದ ತೀರ್ಪು ಮೀಸಲು ವರ್ಗಗಳೊಳಗಿನ ವೈವಿಧ್ಯತೆಯನ್ನು ಗುರುತಿಸುತ್ತದೆ. ಸಾಮಾಜಿಕ ಸವಲತ್ತು ಮತ್ತು ರಾಜಕೀಯ ಪ್ರಭಾವ ಪಡೆದುಕೊಂಡಿರುವ ಕೆಲವು ಗುಂಪುಗಳು (ಜಾತಿಗಳು) ಮೀಸಲಾತಿಯ ಬಹುತೇಕ ಎಲ್ಲಾ ಪ್ರಯೋಜನಗಳನ್ನು ಅನುಭವಿಸಲು ಕಾರಣವಾಗಿದೆ. ಈ ಸವಲತ್ತು ಮತ್ತು ಪ್ರಭಾವದ ಅವಕಾಶ ವಂಚಿತರಾದವರು ತಮ್ಮ ಸ್ಥಿತಿಯಿಂದ ಹೊರಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಉದಾಹರಣೆಗಾಗಿ, ಉತ್ತರ ಪ್ರದೇಶದ (ಯುಪಿ) ಜಾಟ್‌ ಮತ್ತು ಮಹಾರಾಷ್ಟ್ರದ ಮಹಾರ್‌ ಜಾತಿಗಳನ್ನು ಗಮನಿಸಬಹುದು. ಈ ರಾಜ್ಯಗಳ ಎಸ್‌ಸಿ ಜನಸಂಖ್ಯೆಯಲ್ಲಿರುವ ಈ ಜಾತಿಗಳು ಮೀಸಲಾತಿಯಲ್ಲಿ ಎದ್ದು ಕಾಣುವ ಫಲಾನುಭವಿಗಳಾಗಿದ್ದಾರೆ. ಅವರ ರಾಜಕೀಯ ಶಕ್ತಿಯು ಅಭಿನಂದನಾರ್ಹ. ಉತ್ತರ ಪ್ರದೇಶದಲ್ಲಿಯೇ ಇರುವ ಪಾಸಿಗಳು ಮತ್ತು ವಾಲ್ಮಿಕಿಗಳು ಮತ್ತು ಮಹಾರಾಷ್ಟ್ರದ ಮಾಂಗ್‌ಗಳಂಥ ಸಣ್ಣ ಗುಂಪುಗಳಿಗೆ ಈವರೆಗೂ ಮೀಸಲಾತಿಯ ಪ್ರಯೋಜನಗಳು ಸಮರ್ಪಕವಾಗಿ ಸಿಕ್ಕಿಲ್ಲ.

ಬುಡಕಟ್ಟು ಜನಾಂಗಗಳ ವಿಚಾರ ಪರಿಶೀಲಿಸುವುದಾದರೆ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಸಂತಾಲ್‌ಗಳು ಮೀಸಲಾತಿಯಿಂದ ಉತ್ತಮ ಲಾಭ ಪಡೆದುಕೊಂಡಿದ್ದಾರೆ. ಸಂತಾಲ್‌ಗಳು ಇತರ ಬುಡಕಟ್ಟು ಗುಂಪುಗಳಿಗಿಂತ ಹೆಚ್ಚಿನ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದಾರೆ. ಅವರು 1960 ರ ದಶಕದಿಂದ ಆಧುನಿಕ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡಗಳಿಗೆ ರಚಿಸಲಾದ ಹಕ್ಕುಗಳು ಮತ್ತು ಪ್ರಯೋಜನಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡಿದ್ದಾರೆ. ಬುಡಕಟ್ಟು ಜನಾಂಗಗಳಿಗೆ ಸೇರಿದ ಇತರ ಜಾತಿಗಳಿಗೆ ಇಷ್ಟು ಅವಕಾಶ ಸಿಗಲಿಲ್ಲ.

ಮೀಸಲಾತಿ ವರ್ಗಗಳಲ್ಲಿ ಇರುವ ಅಸಮಾನತೆಯು ಹಲವು ಹಂತಗಳಲ್ಲಿ ಪ್ರತಿಬಿಂಬಿತವಾಗಿದೆ. ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯವು ಅದನ್ನು ಸಾಮಾಜಿಕ ನ್ಯಾಯದ ಅಡಿಪಾಯವನ್ನಾಗಿ ಮಾಡಿದರೆ, ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಎಸ್‌ಸಿಗಳೇ ಇರುವ ಪಂಜಾಬ್, ಅತ್ಯಂತ ತುಳಿತಕ್ಕೊಳಗಾದ ಎರಡು ಎಸ್‌ಸಿ ಸಮುದಾಯಗಳಿಗೆ ಎಸ್‌ಸಿ ಮೀಸಲಾತಿಯೊಳಗಿನ ಶೇ 50 ರಷ್ಟು ಕೋಟಾ ಘೋಷಿಸಿತು.

ಇಲ್ಲಿಯವರೆಗೆ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪು ಇಂಥ ಪ್ರಯತ್ನಗಳಿಗೆ ಮುಂದಾಗಲು ಬಯಸುತ್ತಿದ್ದ ಇತರ ರಾಜ್ಯ ಸರ್ಕಾರಗಳಿಗೆ ತಡೆಯಾಗಿತ್ತು. ಈ ಹಿನ್ನೆಲೆಯಲ್ಲಿಯೇ ಗುರುವಾರ ಸುಪ್ರೀಂಕೋರ್ಟ್‌ ಕೊಟ್ಟಿರುವ ತೀರ್ಪು ಮಹತ್ವ ಪಡೆಯುತ್ತದೆ. ಅಂಚಿನಲ್ಲಿರುವ, ಮೀಸಲಾತಿಯ ಸೌಲಭ್ಯದಿಂದ ವಂಚಿತವಾಗಿರುವ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವತ್ತ ಗಮನ ಹರಿಸಲು ರಾಜ್ಯಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಪ್ರಾಯೋಗಿಕ ಮತ್ತು ತರ್ಕಬದ್ಧ ಮಾನದಂಡಗಳ ಆಧಾರದ ಮೇಲೆ ಕೋಟಾಗಳಲ್ಲಿ ಕೋಟಾಗಳನ್ನು ವಿಂಗಡಿಸಲು ಇನ್ನು ಮುಂದೆ ಅವಕಾಶವಾಗಲಿದೆ.

ಇಲ್ಲಿಯವರೆಗೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೀಮಿತವಾಗಿದ್ದ ಪರಿಕಲ್ಪನೆಯನ್ನು ಉಳಿದ ಜಾತಿಗಳಿಗೂ ವಿಸ್ತರಿಸಲು ಪ್ರಯತ್ನಿಸುವ ಮೂಲಕ ಎಸ್‌ಸಿ / ಎಸ್‌ಟಿ ಮೀಸಲಾತಿಗೆ ಕೆನೆಪದರ ಮಿತಿಯನ್ನು ನಿಗದಿಪಡಿಸಲು ಈ ಹಿಂದಿನ ತೀರ್ಪುಗಳು ಸಲಹೆ ಮಾಡಿದ್ದವು. ಈ ಬಾರಿ ನ್ಯಾಯಾಲಯವು ಯಾವುದೇ ಕಟ್ಟುನಿಟ್ಟಾದ ಮಾನದಂಡಗಳನ್ನು ರೂಪಿಸದಿದ್ದರೂ, ಮೀಸಲಾತಿಯಲ್ಲಿ ಕೋಟಾ ರೂಪಿಸಲು ಅವಕಾಶ ಮಾಡಿಕೊಟ್ಟಿದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಇನ್ನು ಮುಂದೆ ಮಹತ್ವದ ಪ್ರಯತ್ನಗಳು ಆರಂಭವಾಗಬಹುದು ಎಂಬ ನಿರೀಕ್ಷೆಯಿದ್ದರೂ ಜಾತಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ರಾಜಕೀಯ ಅಡೆತಡೆ ಮತ್ತು ಸಾಮಾಜಿಕ ವಿರೋಧವು ತೀವ್ರವಾಗಿರುತ್ತದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಮೀಸಲಾತಿ ಕೋಟಾ ವಿಚಾರದಲ್ಲಿನ ನ್ಯಾಯಾಲಯದ ಸಲಹೆಯನ್ನು ಪರಿಶೀಲಿಸುವುದು ರಾಜ್ಯಗಳಿಗೆ ಬಿಟ್ಟ ವಿಷಯವಾಗಿದೆ.

ಈ ತೀರ್ಪಿನಿಂದ ಹಲವು ದೂರಗಾಮಿ ಪರಿಣಾಮಗಳು ಉಂಟಾಗಬಹುದು. ಅಭಿವೃದ್ಧಿಯ ಸನಿಹಕ್ಕೂ ಬರಲು ಸಾಧ್ಯವಾಗದ ಅಂಚಿನಲ್ಲಿರುವ ಗುಂಪುಗಳಿಗೆ (ಜಾತಿಗಳಿಗೆ) ಹೆಚ್ಚು ಲಾಭ ಪಡೆಯಲು ಅನುವು ಮಾಡಿಕೊಡುವ ರೀತಿಯಲ್ಲಿ ತೀರ್ಪನ್ನು ಕಾರ್ಯಗತಗೊಳಿಸಬೇಕಾಗಿದೆ, ಆದರೆ ಮೀಸಲಾತಿಯನ್ನು ದೀರ್ಘಕಾಲದಿಂದ ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ ಎಂಬ ವಾಸ್ತವವನ್ನು ನಿರ್ಲಕ್ಷಿಸುವುದು ಕಷ್ಟ. ಈಗಾಗಲೇ, ತೆಲಂಗಾಣದಂತಹ ಕೆಲವು ರಾಜ್ಯಗಳು ಮಾದಿಗರಂತಹ ಸಮುದಾಯಗಳಿಗೆ ಉಪ-ಕೋಟಾ ಸ್ಥಾಪಿಸುವುದಾಗಿ ಹೇಳಿವೆ. ಇಂಥ ಪ್ರಯತ್ನಗಳು ಈ ಸಮುದಾಯಗಳ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುತ್ತದೆ. ಇದೇ ಹೊತ್ತಿಗೆ ಸಣ್ಣಸಣ್ಣ ಜಾತಿಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನು ಮುಂದೆ ಕೋಟಾ ಅವಕಾಶವನ್ನೂ ದಾಳವಾಗಿ ಬಳಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವಿದೆ; ಮುಂದಿನ ದಿನಗಳಲ್ಲಿ ದಲಿತ ಮತಗಳನ್ನು ಸೆಳೆಯುವುದು ಸುಲಭವಾಗಲಾರದು. ದಲಿತ ಮತಗಳ ಕ್ರೋಡೀಕರಣವೂ ರಾಜಕೀಯ ಪಕ್ಷಗಳಿಗೆ ಸವಾಲಾಗಿ ಪರಿಣಮಿಸುತ್ತದೆ.

ಒಬಿಸಿ ಮೀಸಲಾತಿಯ ಉಪ ವರ್ಗೀಕರಣವನ್ನು ಪರಿಶೀಲಿಸಲು ರಚಿಸಲಾದ ನ್ಯಾಯಮೂರ್ತಿ ಜಿ ರೋಹಿಣಿ ಆಯೋಗದ ಬಗ್ಗೆ ಮಾತನಾಡುವಾಗ, ಹೊಸ ರಾಜಕೀಯ ಮಾದರಿಗಳನ್ನು ರಚಿಸುವ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಲಾಗುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್‌ ನೀಡಿರುವ ಈ ತೀರ್ಪು ಸಹ ಮತ್ತಷ್ಟು ಹೊಸ ರಾಜಕೀಯ ಮಾದರಿಯನ್ನು ಸೃಷ್ಟಿಸುವ ಸಾಧ್ಯತೆಯನ್ನ ತೆರೆದಿಟ್ಟಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.