ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ಉಳಿತಾಯ ಖಾತೆಯ ಬಡ್ಡಿ ಮೇಲೆ ತೆರಿಗೆ ಹೇಗೆ ಲೆಕ್ಕ ಹಾಕುತ್ತಾರೆ?

Explainer: ಉಳಿತಾಯ ಖಾತೆಯ ಬಡ್ಡಿ ಮೇಲೆ ತೆರಿಗೆ ಹೇಗೆ ಲೆಕ್ಕ ಹಾಕುತ್ತಾರೆ?

Explainer: ಉಳಿತಾಯ ಖಾತೆಯ ಮೂಲಕ ಖಾತೆದಾರರಿಗೆ ಸಿಗುವ ಬಡ್ಡಿ ಆದಾಯ ವಾರ್ಷಿಕವಾಗಿ ಅಂದರೆ ಆಯಾ ಹಣಕಾಸು ವರ್ಷದಲ್ಲಿ 10,000 ರೂಪಾಯಿ ಮೀರದೇ ಇದ್ದರೆ ಆಗ ಅದು ತೆರಿಗೆಯ ವ್ಯಾಪ್ತಿಗೆ ಬರುವುದಿಲ್ಲ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (livemint)

ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿಯೇ ಹೊಂದಿರುತ್ತಾರೆ. ಹೆಚ್ಚು ಹಣ ಉಳಿತಾಯವಾದರೆ ಅಂತಹ ಖಾತೆಗೆ ಅಥವಾ ಉಳಿಸಿದ ವ್ಯಕ್ತಿಗೆ ಹೆಚ್ಚಿನ ಬಡ್ಡಿ ಆದಾಯವೂ ಸಿಗುತ್ತದೆ. ಅನೇಕ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಹಲವು ಉಳಿತಾಯ ಖಾತೆಗಳನ್ನು ಹೊಂದಿರುವುದು ಸರ್ವೇ ಸಾಮಾನ್ಯ. ಇಂತಹ ಸನ್ನಿವೇಶದಲ್ಲೂ ಉಳಿತಾಯದ ಮೇಲಿನ ಬಡ್ಡಿ ಹೆಚ್ಚಾಗಬಹುದು.

ಟ್ರೆಂಡಿಂಗ್​ ಸುದ್ದಿ

ಅದೇನೇ ಇದ್ದರೂ, ಉಳಿತಾಯ ಖಾತೆಯ ಮೂಲಕ ಖಾತೆದಾರರಿಗೆ ಸಿಗುವ ಬಡ್ಡಿ ಆದಾಯ ವಾರ್ಷಿಕವಾಗಿ ಅಂದರೆ ಆಯಾ ಹಣಕಾಸು ವರ್ಷದಲ್ಲಿ 10,000 ರೂಪಾಯಿ ಮೀರದೇ ಇದ್ದರೆ ಆಗ ಅದು ತೆರಿಗೆಯ ವ್ಯಾಪ್ತಿಗೆ ಬರುವುದಿಲ್ಲ.

ಪ್ರತಿ ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಯ ಬಡ್ಡಿ ಹಣಕ್ಕೆ 10,000 ರೂಪಾಯಿ ಮಿತಿಯಲ್ಲಿದ್ದರೆ ತೆರಿಗೆ ವಿನಾಯಿತಿ ಇದೆ. ಇಲ್ಲದೇ ಹೋದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಟಿಟಿಎ ಪ್ರಕಾರ ತೆರಿಗೆ ಕಡಿತವಾಗುತ್ತದೆ. ಇದು ವ್ಯಕ್ತಿಗೆ ಮತ್ತು ಹಿಂದು ಅವಿಭಜಿತ ಕುಟುಂಬಕ್ಕೂ ಅನ್ವಯ.

ಗಮನಿಸಬೇಕಾದ ಒಂದು ಅಂಶ ಇದು - ಲಭ್ಯವಿರುವ ಕಡಿತವು ಬ್ಯಾಂಕ್ ಖಾತೆಯ ಪ್ರಕಾರ ಅಲ್ಲ. ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳಲ್ಲಿ ಗಳಿಸಿದ ಒಟ್ಟು ಬಡ್ಡಿಯ ಮೇಲೆ ಈ ಕಡಿತ ಉಂಟಾಗುವುದು ಎಂಬುದನ್ನು ಗಮನಿಸಬೇಕು.

ಉಳಿತಾಯ ಖಾತೆಯ ಬಡ್ಡಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ?

ನಿಮ್ಮ ಉಳಿತಾಯ ಖಾತೆಯಿಂದ ಗಳಿಸಿದ ಬಡ್ಡಿಯನ್ನು ಎಲ್ಲ ಇತರ ಮೂಲಗಳಿಂದ ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ. ನಂತರ ನಿಮ್ಮ ಒಟ್ಟು ಆದಾಯದ ಮೇಲೆ ಸಂಬಂಧಿತ ತೆರಿಗೆ ಬ್ರಾಕೆಟ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. ಆ ಅವಧಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಅವಲಂಬಿಸಿ ಪ್ರತಿ ಹಣಕಾಸು ವರ್ಷದಲ್ಲಿ ಇದು ಬದಲಾಗುತ್ತದೆ.

ಕೆಲವು ಉಳಿತಾಯ ಖಾತೆಗಳಿಗೆ ಮಾಸಿಕ ಶುಲ್ಕವನ್ನು ತಪ್ಪಿಸಲು ಕನಿಷ್ಠ ಬ್ಯಾಲೆನ್ಸ್ ಅಗತ್ಯವಿರುತ್ತದೆ. ಆದರೆ ಇತರ ಕೆಲವು ಖಾತೆಗೆ ಕನಿಷ್ಠ ಬ್ಯಾಲೆನ್ಸ್ ಅಗತ್ಯವಿಲ್ಲ.

ಸೆಕ್ಷನ್‌ 80 ಟಿಟಿಎ

ಎಚ್‌ಡಿಎಫ್‌ಸಿ ಲೈಫ್‌ ಪ್ರಕಾರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಟಿಟಿಎ ಎಂಬುದು ಉಳಿತಾಯ ಖಾತೆಯಲ್ಲಿ ಜಮೆಮಾಡಿದ ಹಣದ ಮೇಲಿನ ಬಡ್ಡಿಗೆ ವಿಧಿಸುವ ತೆರಿಗೆಗೆ ಸಂಬಂಧಿಸಿದ್ದು. ಅರವತ್ತು ವರ್ಷ ಒಳಗಿನ ವ್ಯಕ್ತಿಗಳಿಗೆ ಮತ್ತು ಹಿಂದು ಅವಿಭಜಿತ ಕುಟುಂಬಕ್ಕೆ ಅನ್ವಯವಾಗುವ ಸೆಕ್ಷನ್‌ ಇದು.

ಸೆಕ್ಷನ್‌ 80ಟಿಟಿಎ ಎಂಬುದು ಕೇವಲ ಉಳಿತಾಯ ಖಾತೆಗೆ ಅನ್ವಯವಾಗುವುದೇ ಹೊರತು, ಅವಧಿ ಠೇವಣಿ, ನಿಶ್ಚಿತ ಠೇವಣಿ ಅಥವಾ ರಿಕರಿಂಗ್‌ ಡೆಪಾಸಿಟ್‌ಗಳಿಗೆ ಅನ್ವಯವಾಗುವುದಿಲ್ಲ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80TTA ನಿಮಗೆ ಅಂಚೆ ಕಚೇರಿ, ಬ್ಯಾಂಕ್ ಅಥವಾ ಸಹಕಾರಿ ಸೊಸೈಟಿಯಲ್ಲಿ ಇರುವ ಉಳಿತಾಯ ಖಾತೆಗಳ ಠೇವಣಿಗಳ ಮೇಲಿನ ಕಡಿತಗಳಿಗೆ ಮಾತ್ರ ಅನ್ವಯ. ಈ ಯಾವುದೇ ಮೂಲಗಳಿಂದ 10,000 ರೂಪಾಯಿ ಮೀರಿ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.

ಸೆಕ್ಷನ್‌ 80 ಟಿಟಿಬಿ

ಆದಾಯ ತೆರಿಗೆ ಈ ಸೆಕ್ಷನ್‌ ಹಿರಿಯ ನಾಗರಿಕರಿಗೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿಗೆ ವಾರ್ಷಿಕ 50,000 ರೂಪಾಯಿವರೆಗೆ ಕಡಿತವನ್ನು ನೀಡುತ್ತದೆ.

ಉಳಿತಾಯ ಬ್ಯಾಂಕ್ ಖಾತೆ, ಸ್ಥಿರ ಠೇವಣಿ ಖಾತೆ, ಮರುಕಳಿಸುವ ಠೇವಣಿ ಖಾತೆ ಇತ್ಯಾದಿ ಎಲ್ಲ ರೀತಿಯ ಠೇವಣಿಗಳ ಮೇಲೆ ಈ ಸೆಕ್ಷನ್‌ ಅನ್ವಯಿಸಬಹುದು.

HDFC ಲೈಫ್ ಪ್ರಕಾರ, ಉಳಿತಾಯ ಖಾತೆಯಿಂದ ಬರುವ ಬಡ್ಡಿ ಆದಾಯವು ನಿರ್ದಿಷ್ಟವಾಗಿ ಅಸೋಸಿಯೇಟ್ ಆಫ್ ಪರ್ಸನ್ಸ್ (ಎಒಪಿ), ಸಂಸ್ಥೆ ಅಥವಾ ವ್ಯಕ್ತಿಗಳ ಸಂಸ್ಥೆ ಒಡೆತನದಲ್ಲಿದ್ದರೆ, ಅಂತಹ ಸಂಸ್ಥೆಯ ಪಾಲುದಾರರಿಗೆ ಅಥವಾ ಎಒಪಿಯ ಯಾವುದೇ ಸದಸ್ಯರಿಗೆ ಸೆಕ್ಷನ್ 80TTB ಪ್ರಕಾರದ ಕಡಿತವು ಲಭ್ಯವಿರುವುದಿಲ್ಲ.

ಹಿರಿಯ ನಾಗರಿಕರನ್ನು ಹೊರತುಪಡಿಸಿ ವ್ಯಕ್ತಿಗಳು ಮತ್ತು ಹಿಂದು ಅವಿಭಜಿತ ಕುಟುಂಬಗಳು ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಪಡೆಯಲು ಸಾಧ್ಯವಿಲ್ಲ. ಅನಿವಾಸಿ ಭಾರತೀಯರು ಕೂಡ 80TTB ಕಡಿತಗಳಿಗೆ ಅರ್ಹರಲ್ಲ.

IPL_Entry_Point