ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್‌ Vs ಲಕ್ನೋ ಸೂಪರ್‌ ಜೈಂಟ್ಸ್‌ ಮಾಡು ಇಲ್ಲವೇ ಮಡಿ ಪಂದ್ಯ: ಸಂಭಾವ್ಯ ತಂಡ, ಡೆಲ್ಲಿ ಪಿಚ್ ಹಾಗೂ ಹವಾಮಾನ ವರದಿ

ಡೆಲ್ಲಿ ಕ್ಯಾಪಿಟಲ್ಸ್‌ vs ಲಕ್ನೋ ಸೂಪರ್‌ ಜೈಂಟ್ಸ್‌ ಮಾಡು ಇಲ್ಲವೇ ಮಡಿ ಪಂದ್ಯ: ಸಂಭಾವ್ಯ ತಂಡ, ಡೆಲ್ಲಿ ಪಿಚ್ ಹಾಗೂ ಹವಾಮಾನ ವರದಿ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಎದುರಾಗುತ್ತಿವೆ. ಪಂದ್ಯದಲ್ಲಿ ಸೋಲುವ ತಂಡವು ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಹೀಗಾಗಿ ಎರಡೂ ತಂಡಗಳಿಗೆ ಪಂದ್ಯದಲ್ಲಿ ಬೃಹತ್‌ ಅಂತರದ ಗೆಲುವು ಅನಿವಾರ್ಯವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ vs ಲಕ್ನೋ ಸೂಪರ್‌ ಜೈಂಟ್ಸ್‌ ಮಾಡು ಇಲ್ಲವೇ ಮಡಿ ಪಂದ್ಯ
ಡೆಲ್ಲಿ ಕ್ಯಾಪಿಟಲ್ಸ್‌ vs ಲಕ್ನೋ ಸೂಪರ್‌ ಜೈಂಟ್ಸ್‌ ಮಾಡು ಇಲ್ಲವೇ ಮಡಿ ಪಂದ್ಯ

ಐಪಿಎಲ್‌ 2024ರಲ್ಲಿ ಮೇ 14ರ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಡಿಸಿ ತವರು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ರಿಷಬ್‌ ಪಂತ್‌ ನೇತೃತ್ವದ ಡಿಸಿ, ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆಯಲು ಮುಂದಿನ ಪಂದ್ಯವನ್ನು ಬೃಹತ್ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯದಲ್ಲಿದೆ. ಇದೇ ವೇಳೆ ಕೆಎಲ್‌ ರಾಹುಲ್‌ ನೇತೃತ್ವದ ಎಲ್ಎಸ್‌ಜಿ ತಂಡವು ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ತಂಡದ ಮುಂದಿನ ಎರಡೂ ಪಂದ್ಯಗಳಲ್ಲಿ ಉತ್ತಮ ಅಂತರದಿಂದ ಗೆದ್ದರಷ್ಟೇ, ರಾಹುಲ್ ಪಡೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಇಲ್ಲಿ ಉಭಯ ತಂಡಗಳು ಕೂಡಾ ಇತರ ತಂಡಗಳ ಸೋಲು ಗೆಲುವನ್ನು ನೆಚ್ಚಿಕೊಂಡಿವೆ.

ಟ್ರೆಂಡಿಂಗ್​ ಸುದ್ದಿ

ಡೆಲ್ಲಿ ಹಾಗೂ ಲಕ್ನೋ ತಂಡಗಳು ಈವರೆಗೆ ಐಪಿಎಲ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಡಿಸಿ ಕೇವಲ ಒಂದು ಪಂದ್ಯದಲ್ಲಿ‌ ಮಾತ್ರ ಗೆದ್ದಿದೆ. ಅದು ಪ್ರಸಕ್ತ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ. ಉಳಿದ ಮೂರು ಪಂದ್ಯಗಳಲ್ಲಿ ಲಕ್ನೋ ಗೆದ್ದು ಬೀಗಿದೆ.

ಅರುಣ್‌ ಜೇಟ್ಲಿ ಸ್ಟೇಡಿಯಂ ಪಿಚ್‌ ವರದಿ

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಪ್ರಸಕ್ತ ಆವೃತ್ತಿಯಲ್ಲಿ ದೆಹಲಿಯಲ್ಲಿ ಈವರೆಗೆ ನಡೆದಿರುವ ಪಂದ್ಯಗಳಲ್ಲಿ ರನ್‌ ಮಳೆ ಹರಿದಿರುವುದೇ ಇದಕ್ಕೆ ಸಾಕ್ಷಿ. ಮೈದಾನದ ಬೌಂಡರಿಗಳು ಸಣ್ಣದಾಗಿವೆ. ಹೀಗಾಗಿ ರನ್‌ ಗಳಿಸಲು ಈ ಪಿಚ್‌ ಸಹಕಾರಿ. ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 221 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 201 ರನ್ ಗಳಿಸಲಷ್ಟೇ ಶಕ್ತವಾಯ್ತು.

ಡೆಲ್ಲಿ ಹವಾಮಾನ ವರದಿ

ಪಂದ್ಯದ ದಿನ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಾಪಮಾನವು ಸುಮಾರು 34 ಡಿಗ್ರಿಗಳಷ್ಟು ಇರುವ ಮುನ್ಸೂಚನೆ ಇದೆ. ಅಕ್ಯೂವೆದರ್ ಪ್ರಕಾರ, ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯುವ ನಿರೀಕ್ಷೆ ಇದೆ.

ಆಡುವ ಬಳಗ ಹೀಗಿರಲಿದೆ

ಆರ್‌ಸಿಬಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಡಿದಂತೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಡೇವಿಡ್ ವಾರ್ನರ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಭಿಷೇಕ್ ಪೊರೆಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಕಳೆದ ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದ ನಾಯಕ ರಿಷಬ್ ಪಂತ್ ತಂಡ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ | ಸತತ 5 ಪಂದ್ಯಗಳಲ್ಲಿ ಗೆದ್ದ ಆರ್‌ಸಿಬಿ; ಈ ಹಿಂದೆ ‌2 ಬಾರಿ ಹೀಗಾಗಿದ್ದಾಗ ರನ್ನರ್‌ ಅಪ್‌ ಆಗಿತ್ತು, ಆದರೆ ಈ ಬಾರಿ…

ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್, ಗೆಲ್ಲಲೇ ಬೇಕಾದ ಅನಿವಾರ್ಯ ಇರುವ ಪಂದ್ಯಕ್ಕಾಗಿ ತಂಡದಲ್ಲಿ ಹೆಚ್ಚೇನೂ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಸಿದರೆ, ಮಾರ್ಕಸ್ ಸ್ಟೊಯ್ನಿಸ್ ಮತ್ತು ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

ಡೆಲ್ಲಿ ಸಂಭಾವ್ಯ ತಂಡ

ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ & ವಿಕೆಟ್‌ ಕೀಪರ್), ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ರಸಿಖ್ ಸಲಾಂ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹಮದ್ (ಇಂಪ್ಯಾಕ್ಟ್‌ ಆಟಗಾರ).

ಲಕ್ನೋ ಸಂಭಾವ್ಯ ತಂಡ

ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್‌ ಕೀಪರ್), ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯ್ನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ದೀಪಕ್ ಹೂಡಾ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯಶ್ ಠಾಕೂರ್, ಯುಧ್ವೀರ್ ಸಿಂಗ್ ಚರಕ್‌, (ಇಂಪ್ಯಾಕ್ಟ್‌ ಆಟಗಾರ).

IPL_Entry_Point