Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

ಐಪಿಎಲ್‌ 2024ರಲ್ಲಿ ಆರ್‌ಸಿಬಿಗೆ ಮುಂದೆ ಇರುವುದು ಒಂದು ಪಂದ್ಯ ಮಾತ್ರ. ಅದು ಸಿಎಸ್‌ಕೆ ವಿರುದ್ಧ. ಈ ಪಂದ್ಯದಲ್ಲಿ ಆರ್‌ಸಿಬಿಯು ಭಾರಿ ಅಂತರದಿಂದ ಗೆದ್ದರೆ, ಇತರ ತಂಡಗಳ ಸೋಲಿನ ಆಧಾರದ ಮೇಲೆ ಪ್ಲೇ ಆಫ್‌ ಪ್ರವೇಶ ಪಡೆಯಲಿದೆ. ಆ ಲೆಕ್ಕಾಚಾರ ಹೇಗಿದೆ? ಸ್ಕೋರ್‌ ಹಾಗೂ ಅಂತರ ಎಷ್ಟಿರಬೇಕು ಎಂಬ ವಿವರ ಇಲ್ಲಿದೆ.

ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು?
ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು?

ಐಪಿಎಲ್​ 2024ರ ಆವೃತ್ತಿಯು ಕುತೂಹಲಕಾರಿ ಘಟ್ಟ ತಲುಪುತ್ತಿದೆ. ಲೀಗ್‌ ಹಂತದಲ್ಲಿ ಮುಂದೆ 8 ಪಂದ್ಯಗಳು ಮಾತ್ರವೇ ಬಾಕಿ ಉಳಿದಿದೆ. ಈವರೆಗೆ ಒಂದು ತಂಡ (ಕೆಕೆಆರ್‌) ಮಾತ್ರವೇ ಅಧಿಕೃತವಾಗಿ ಪ್ಲೇಆಫ್‌ ಹಂತಕ್ಕೆ ಲಗ್ಗೆ ಹಾಕಿದೆ. ಇನ್ನುಳಿದ ಮೂರು ಸ್ಥಾನಗಳಿಗೆ 7 ತಂಡಗಳು ಜಿದ್ದಿಗೆ ಬಿದ್ದಿವೆ. ಇದರಲ್ಲಿ ರಾಯಲ್‌ ಚಾಲೆಂಜರ್ಸ್‌‌ ಬೆಂಗಳೂರು ತಂಡ ಕೂಡಾ ಒಂದು. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ, ಪ್ಲೇ ಆಫ್‌ ರೇಸ್‌ನಲ್ಲಿ ತಾನಿನ್ನೂ ಜೀವಂತವಾಗಿರುವುದಾಗಿ ಆರ್‌ಸಿಬಿ ತೋರಿಸಿಕೊಂಡಿದೆ. ಸತತ ಐದು ಗೆಲುವುಗಳೊಂದಿಗೆ ಪ್ರಚಂಡ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡದ ಮುಂದಿರುವುದು ಒಂದು ಪಂದ್ಯ ಮಾತ್ರ. ಹಾಗಿದ್ದರೆ, ತಂಡ ಪ್ಲೇ ಆಫ್‌ಗೆ ಲಗ್ಗೆ ಹಾಕಲು ಮುಂದೆ ಫಾಫ್‌ ಡುಪ್ಲೆಸಿಸ್‌ ಪಡೆಯ ಗೆಲುವಿನ ಅಂತರ ಎಷ್ಟಿರಬೇಕು ಎಂಬುದನ್ನು ನೋಡೋಣ.

ಮೇ 12ರ ಭಾನುವಾರ ನಡೆದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳು ಗೆದ್ದು ಬೀಗಿವೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಆರ್‌ಸಿಬಿ ತಂಡದ ಪ್ಲೇ ಆಫ್‌ ಲೆಕ್ಕಾಚಾರವನ್ನು ತುಸು ಕಷ್ಟವಾಗಿಸಿತು. ಆದರೆ ಅಸಾಧ್ಯವಂತೂ ಆಗಿಲ್ಲ. ಒಂದು ವೇಳೆ ಈ ಪಂದ್ಯದಲ್ಲಿ ರಾಜಸ್ಥಾನ ಗೆದ್ದಿದ್ದರೆ, ಎರಡನೇ ತಂಡವಾಗಿ ಪ್ಲೇ ಆಫ್‌ ಪ್ರವೇಶ ಮಾಡುತ್ತಿತ್ತು. ಇದಕ್ಕೆ ತಡೆ ಬಿದ್ದಿದ್ದು, ಸ್ಯಾಮ್ಸನ್‌ ಪಡೆಯು ಇನ್ನೊಂದು ಪಂದ್ಯ ಕಾದುನೋಡಬೇಕಾಗಿದೆ.

ಟೂರ್ನಿಯಲ್ಲಿ ಕಳಪೆ ಆರಂಭ ಪಡೆದು ಸೋಲುಗಳಿಂದ ಕಂಗೆಟ್ಟಿದ್ದ ಆರ್‌​ಸಿಬಿ ತಂಡವು, ಇದೀಗ ಸತತ ಐದು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸುವ ಫೇವರೆಟ್‌ ತಂಡವಾಗಿದೆ. ತಂಡ ಮುಂದಿನ ಹಂತಕ್ಕೆ ಪ್ರವೇಶಿಸಬೇಕೆಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹಾಗಿದ್ದರೆ, ಡೆಲ್ಲಿ ವಿರುದ್ಧ ಗೆದ್ದ ನಂತರ ಫಾಫ್‌ ಪಡೆಯು ಪ್ಲೇಆಫ್​ ಪ್ರವೇಶಿಸಲು ಆರ್‌ಸಿಬಿ ಮುಂದಿರುವ ಲೆಕ್ಕಾಚಾರಗಳೇನು? ಯಾವ ತಂಡಗಳು ಸೋಲಬೇಕು? ಗೆದ್ದರೆ ಎಷ್ಟು ಅಂತರದಲ್ಲಿ ಗೆಲ್ಲಬೇಕೆಂಬುದನ್ನು ನೋಡೋಣ.

ಸದ್ಯ ಆರ್‌ಸಿಬಿಗೆ ಮುಂದೆ ಇರುವುದು ಒಂದು ಪಂದ್ಯ ಮಾತ್ರ. ಅದು ಸಿಎಸ್‌ಕೆ ವಿರುದ್ಧ. ಅತ್ತ ಸಿಎಸ್‌ಕೆಗೂ ಈ ಒಂದು ಪಂದ್ಯದಲ್ಲಿ ಗೆಲ್ಲಬೇಕಾದ ಅನಿವಾರ್ಯವಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್‌ಸಿಬಿಯು ಗೆಲ್ಲಲೇಬೇಕು. ಹಳದಿ ಆರ್ಮಿ ವಿರುದ್ಧ ಉತ್ತಮ ಅಂತರದಿಂದ ಗೆದ್ದರೆ, ಇತರ ತಂಡಗಳ ಸೋಲಿನ ಆಧಾರದ ಮೇಲೆ ಪ್ಲೇ ಆಫ್‌ ಪ್ರವೇಶ ಪಡೆಯಲಿದೆ.

ಸೋಲಬೇಕು ಚೆನ್ನೈ, ಎಸ್‌ಆರ್‌ಎಚ್‌

ಆರ್‌ಸಿಬಿ ತಂಡವು ಸಿಎಸ್‌​ಕೆಗಿಂತ ನೆಟ್‌ ರನ್‌ ​ರೇಟ್ ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ಚೆನ್ನೈ ಈಗಾಗಲೇ 14 ಅಂಕ ಪಡೆದಿದೆ. ಅತ್ತ ಸನ್‌​ರೈಸರ್ಸ್ ಹೈದರಾಬಾದ್ ಕೂಡಾ 14 ಅಂಕಗಳೊಂದಿಗೆ ನೆಟ್‌ ರನ್‌ರೇಟ್‌ನಿಂದಲೂ ಆರ್‌ಸಿಬಿಗಿಂತ ಮುಂದಿದೆ. ಸದ್ಯ, ಎಸ್‌ಆರ್‌ಎಚ್‌ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಪಿಬಿಕೆಎಸ್ ಹಾಗೂ ಜಿಟಿ ವಿರುದ್ಧ ಸೋಲಬೇಕು. ಇದು ಸಾಧ್ಯವಾದರೆ, ತಂಡದ ನೆಟ್‌ ರನ್‌ ರೇ​ಟ್​ ಕುಸಿಯಲಿದೆ. ಆಗ ಆರ್‌ಸಿಬಿ ಹೈದರಾಬಾದ್‌ಗಿಂತ ಮೇಲೆ ಬರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ | ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ಗೆ ಡಬಲ್ ಆಘಾತ; ವಿಂಡೀಸ್ ಸ್ಟಾರ್ ಆಲ್​ರೌಂಡರ್, ಇಂಗ್ಲೆಂಡ್ ಓಪನರ್ ರೂಲ್ಡ್ ಔಟ್?

ಅತ್ತ ಡೆಲ್ಲಿ ತಂಡವು ಲಕ್ನೋ ವಿರುದ್ಧದ ಮುಂದಿನ ಪಂದ್ಯದಲ್ಲಿ ಸೋಲಬೇಕು. ಅದು ಕೂಡ ಕಡಿಮೆ ಅಂತರದಲ್ಲಿ ಸೋಲಬೇಕು. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂಬೈ ವಿರುದ್ಧ ಸೋಲಬೇಕು. ಕೆಎಲ್‌ ರಾಹುಲ್‌ ಪಡೆಯು ಎರಡರಲ್ಲೂ ಉತ್ತಮ ಅಂತರದಿಂದ ಗೆದ್ದರೆ, 16 ಅಂಕ ಪಡೆದು ಪ್ಲೇಆಫ್​ ಪ್ರವೇಶಿಸಿದರೂ ಅಚ್ಚರಿ ಇಲ್ಲ. ಇಲ್ಲಿ ಒಂದು ಸೋಲು, ಒಂದು ಕಡಿಮೆ ಅಂತರದ ಗೆಲುವು ಸಿಕ್ಕರೂ ಆರ್‌ಸಿಬಿಗೆ ಸಮಸ್ಯೆ ಇಲ್ಲ. ಏಕೆಂದರೆ ಡೆಲ್ಲಿ ಮತ್ತು ಲಕ್ನೋ ತಂಡಗಳಿಗಿಂತ ಆರ್‌​ಸಿಬಿ ತಂಡದ ನೆಟ್‌ ​ರನ್‌ ​ರೇಟ್ ಉತ್ತಮವಾಗಿದೆ.

ಸಿಎಸ್‌ಕೆ ವಿರುದ್ಧ ರನ್‌ ರೇಟ್‌ ಲೆಕ್ಕಾಚಾರ ಹೀಗಿದೆ

ಈಗ ಸಿಎಸ್‌ಕೆ ವಿರುದ್ಧದ ಗೆಲುವಿನ ಅಂತರದ ಲೆಕ್ಕಾಚಾರ ನೋಡೋಣ. ಉಭಯ ತಂಡಗಳಿಗೂ ಒಂದೇ ಪಂದ್ಯ ಬಾಕಿ ಉಳಿದಿದೆ. ಇದರಲ್ಲಿ ಸಿಎಸ್‌ಕೆ ಗೆದ್ದರೆ ಬಹುತೇಕ ಯಾವುದೇ ಲೆಕ್ಕಾಚಾರವೂ ಇಲ್ಲದೇ ಪ್ಲೇ ಆಫ್‌ ಪ್ರವೇಶಿಸುತ್ತದೆ. ಆದರೆ ಆರ್‌ಸಿಬಿಯು ಉತ್ತಮ ಅಂತರದಿಂದ ಗೆದ್ದು ರನ್‌ ರೇಟ್‌ ಹೆಚ್ಚಿಸಿಕೊಳ್ಳಬೇಕು. ಆ ಲೆಕ್ಕಾಚಾರ ನೋಡೋಣ…

ಉದಾಹರಣೆಗೆ, ಫಾಫ್ ಡು ಪ್ಲೆಸಿಸ್ ಪಡೆಯು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ 200 ರನ್ ಗಳಿಸಿತು ಎಂದಿಟ್ಟುಕೊಳ್ಳೋಣ. ಆಗ ಸಿಎಸ್‌ಕೆ ತಂಡವನ್ನು 182 ರನ್‌ ಗಡಿ ದಾಟದಂತೆ ನೋಡಿಕೊಳ್ಳಬೇಕು. ಅಂದರೆ, ಆರ್‌ಸಿಬಿಯು ಕನಿಷ್ಠ 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲಬೇಕು. ಆಗ ಸಿಎಸ್‌ಕೆ ರನ್‌ ರೇಟ್‌ ಅನ್ನು ಮೀರಿ ಆರ್‌ಸಿಬಿ ಮೇಲಿನ ಸ್ಥಾನಕ್ಕೇರಬಹುದು.

11 ಎಸೆತ ಉಳಿಸಿ ಗುರಿ ತಲುಪಬೇಕು

ಒಂದು ವೇಳೆ ಸಿಎಸ್‌ಕೆ ತಂಡವು ಮೊದಲು ಬ್ಯಾಟಿಂಗ್‌ ಮಾಡಿ, ಆರ್‌ಸಿಬಿಗೆ 201 ರನ್‌ ಗುರಿ ನೀಡಿತು ಎಂದಿಟ್ಟುಕೊಳ್ಳೋಣ. ಆಗ ಆರ್‌ಸಿಬಿ ತಂಡವು ವೇಗವಾಗಿ ರನ್‌ ಕಲೆ ಹಾಕಿ, ಎರಡು ಓವರ್‌ ಉಳಿಸಿ ಯಶಸ್ವಿ ರನ್‌ ಚೇಸಿಂಗ್‌ ಮಾಡಬೇಕು. ಕನಿಷ್ಠ ಸರಿಸುಮಾರು 11 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿ ಗೆಲ್ಲಬೇಕಾದ ಅನಿವಾರ್ಯವಿದೆ. ಹೀಗಾದರೆ ಆರ್‌ಸಿಬಿಯು ಸಿಎಸ್‌ಕೆ ರನ್‌ ರೇಟ್‌ ಮೀರಿಸಲಿದೆ.

Whats_app_banner