ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget Session: ಸಂಸತ್‌ ಅಧಿವೇಶನ ಇಂದಿನಿಂದ, ನಾಳೆ ಮಧ್ಯಂತರ ಬಜೆಟ್‌ ಮಂಡನೆಗೆ ಸಿದ್ದತೆ

Budget Session: ಸಂಸತ್‌ ಅಧಿವೇಶನ ಇಂದಿನಿಂದ, ನಾಳೆ ಮಧ್ಯಂತರ ಬಜೆಟ್‌ ಮಂಡನೆಗೆ ಸಿದ್ದತೆ

ಸಂಸತ್ತಿನ ಬಜೆಟ್‌ ಅಧಿವೇಶನ ಬುಧವಾರ ಆರಂಭಗೊಳ್ಳಲಿದೆ. ಮೊದಲ ದಿನ ರಾಷ್ಟ್ರಪತಿಗಳ ಭಾಷಣ, ಗುರುವಾರ ಬಜೆಟ್‌ ಮಂಡನೆ, ಶುಕ್ರವಾರದಿಂದ ಚರ್ಚೆಗಳು ಶುರುವಾಗಲಿವೆ.

ಸಂಸತ್ತಿನ ಬಜೆಟ್‌ ಅಧಿವೇಶನ ಬುಧವಾರ ಆರಂಭಗೊಳ್ಳಲಿದೆ.
ಸಂಸತ್ತಿನ ಬಜೆಟ್‌ ಅಧಿವೇಶನ ಬುಧವಾರ ಆರಂಭಗೊಳ್ಳಲಿದೆ.

ದೆಹಲಿ: ಲೋಕಸಭೆಯ ಬಹುತೇಕ ಸದಸ್ಯರ ಮುಂದಿನ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಈ ಅವಧಿಯ ಸಂಸತ್ತಿನ ಕೊನೆಯ ಅಧಿವೇಶನ ಬುಧವಾರದಿಂದ ಆರಂಭಗೊಳ್ಳಲಿದೆ. ಇದು ಬಜೆಟ್‌ ಅಧಿವೇಶನ ಕೂಡ. ಚುನಾವಣೆ ಇನ್ನೇನು ಘೋಷಣೆಗೆ ದಿನಗಣನೆ ಶುರುವಾಗಿರುವುದರಿಂದ ಮಧ್ಯಂತರ ಬಜೆಟ್‌ ಅನ್ನು ಮಾತ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದು, ಇದಕ್ಕೆ ಸಿದ್ದತೆ ಪೂರ್ಣಗೊಂಡಿದೆ. ಗುರುವಾರ ಬೆಳಿಗ್ಗೆ 11 ಕ್ಕೆ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ. ಇದರಲ್ಲಿ ಹೊಸದೇನೂ ಇರುವುದಿಲ್ಲ ಎಂದು ಈಗಾಗಲೇ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರಿಂದ ಈ ಸಾಲಿನ ಬಜೆಟ್‌ ಬಗ್ಗೆ ಬಹಳಷ್ಟು ಕುತೂಹಲವೇನೂ ಉಳಿದಿಲ್ಲ. ವಿದಾಯ ಭಾಷಣಗಳಿಗೆ ಈ ಬಾರಿ ಹೆಚ್ಚಿನ ಒತ್ತು ಸಿಗಬಹುದು.

ಟ್ರೆಂಡಿಂಗ್​ ಸುದ್ದಿ

ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಭಾಷಣ ಮಾಡುವರು. ಕೇಂದ್ರ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಕೈಗೊಂಡ ಕ್ರಮಗಳು, ಸರ್ಕಾರದ ಸಾಧನೆಗಳನ್ನು ದ್ರೌಪದಿ ಮುರ್ಮು ಅವರು ಬಿಂಬಿಸಲಿದ್ಧಾರೆ.

ಗುರುವಾರ ಬಜೆಟ್‌ ಮಂಡನೆಯಾಗಲಿದೆ. ಶುಕ್ರವಾರದಂದು ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಅರ್ಪಿಸುವ ನಿರ್ಣಯದ ಮೇಲಿನ ಚರ್ಚೆ ಶುರುವಾಗಲಿದ. ಇದಕ್ಕೆ ಉಭಯ ಸದನಗಳಲ್ಲಿ ಪ್ರಧಾನಿಯವರು ಉತ್ತರ ನೀಡಿದ ನಂತರ, ಬಜೆಟ್ ಮೇಲೆ ಚರ್ಚೆಯಾಗಬಹುದು.

ಈಗಾಗಲೇ ಬಜೆಟ್‌ ತಯಾರಿ ಪ್ರಕ್ರಿಯೆಗಳು ತಿಂಗಳಿನಿಂದಲೇ ನಡೆದಿವೆ. ಪ್ರತಿ ವರ್ಷವೂ ಫೆಬ್ರವರಿ ಮೊದಲ ವಾರದಲ್ಲಿಯೇ ಬಜೆಟ್‌ ಮಂಡನೆಯಾಗುತ್ತಿದ್ದು, ಈ ಬಾರಿಯೂ ಇದಕ್ಕಾಗಿ ತಯಾರಿಯಾಗಿದೆ. ಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗಿನ ಮೂರು ತಿಂಗಳ ವೇತನ ಸೇರಿದಂತೆ ಕೆಲವು ಸೀಮಿತ ಗುರಿ ಇಟ್ಟುಕೊಂಡು ಬಜೆಟ್‌ ಮಂಡನೆಯಾಗಲಿದೆ. ಚುನಾವಣೆ ಮುಗಿದು ಜೂನ್‌ ನಲ್ಲಿ ಹೊಸ ಸರ್ಕಾರ ಆದ ನಂತರ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಯಾಗಲಿದೆ. ಆಗ ಹೊಸ ತೆರಿಗೆ, ಯೋಜನೆಗಳ ಘೋಷಣೆಯಾಗಬಹುದು. ಅದನ್ನು ಹೊರತುಪಡಿಸಿದರೆ ಕೃಷಿ, ಕೈಗಾರಿಕೆ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಕೆಲವು ಕ್ಷೇತ್ರಗಳಿಗೆ ಸೀಮಿತ ಘೋಷಣೆಗಳನ್ನು ಈ ಬಾರಿ ಬಜೆಟ್‌ನಲ್ಲಿ ಮಾಡಬಹುದು. ಹಿಂದಿನ ವರ್ಷದ ಆರ್ಥಿಕ ಸ್ಥಿತಿಗತಿ, ಕೋವಿಡ್‌ ನಂತರ ಭಾರತದ ಆರ್ಥಿಕ ಸುಧಾರಣೆಗಳ ಕ್ರಮಗಳನ್ನು ಉಲ್ಲೇಖಿಸಬಹುದು. ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಚುನಾವಣೆ ಗುರಿಯಾಗಿಟ್ಟುಕೊಂಡು ಬಿಂಬಿಸಬಹುದು.

ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಮೂಡ್‌ನಲ್ಲಿವೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆ ನೆಪದಲ್ಲಿಯೇ ರಾಜ್ಯಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಫೆಬ್ರವರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಅವರು ಚುನಾವಣೆ ಅಖಾಡಕ್ಕೆ ಧುಮುಕಲಿದ್ದಾರೆ. ಇದಕ್ಕೂ ಮುನ್ನ ಬಜೆಟ್‌ ಅಧಿವೇಶದಲ್ಲಿ ಮೋದಿ ಅವರು ಹತ್ತು ವರ್ಷಗಳ ಎನ್‌ಡಿಎ ಹಾದಿ, ಕಳೆದ ಐದು ವರ್ಷದಲ್ಲಿ ಕೈಗೊಂಡಿರುವ ಪ್ರಮುಖ ನಿರ್ಧಾರಗಳು ಹಾಗೂ ಅವುಗಳ ಅನುಷ್ಠಾನದ ಕುರಿತು ವಿಸ್ತೃತವಾಗಿ ಚರ್ಚಿಸಬಹುದು. ಅಭಿವೃದ್ದಿ ಚಟುವಟಿಕೆಗಳ ಮೇಲೆ ಪ್ರತಿಪಕ್ಷಗಳಿಗೆ ಉತ್ತರ ನೀಡಬಹುದು. ರಾಮಮಂದಿರ ನಿರ್ಮಾಣದ ಅಡೆತಡೆಗಳು, ಅದರ ನಡುವೆಯೂ ಉದ್ಘಾಟನೆಯ ವಿಷಯವನ್ನು ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಬಹುದು.

ಕಾಂಗ್ರೆಸ್‌ ಈಗಾಗಲೇ ಈಶಾನ್ಯ ಭಾಗದಿಂದ ಭಾರತ್‌ ಜೋಡೊ ಆರಂಭಿಸಿದೆ. ರಾಹುಲ್‌ ಗಾಂಧಿ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತರೆ ರಾಜಕೀಯ ಪಕ್ಷಗಳೂ ಕೂಡ ಚುನಾವಣೆಗೆ ಭರ್ಜರಿ ತಯಾರಿಯನ್ನೇ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಸಹಿತ ಬಹುತೇಕ ಹಿರಿಯ ನಾಯಕರು ಈ ಅಧಿವೇಶನಕ್ಕೆ ಗೈರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅದೇ ರೀತಿ ಪ್ರಮುಖ ರಾಜಕೀಯ ಪಕ್ಷಗಳ ಸದಸ್ಯರು ಬಜೆಟ್‌ ದಿನ ಹಾಜರಿದ್ದು ಆನಂತರ ಗೈರು ಹಾಜರಾಗಬಹುದು ಎನ್ನಲಾಗುತ್ತಿದೆ. ಅದರೂ ಎನ್‌ಡಿಎ ಸರ್ಕಾರ ನಡುವಳಿಕೆಗಳು, ಪ್ರತಿ ಪಕ್ಷಗಳ ಮೇಲೆ ನಡೆಸಿದ ಇಡಿ ಸಹಿತ ಕೇಂದ್ರ ಸಂಸ್ಥೆಗಳ ದಾಳಿ, ಸೇಡಿನ ಕ್ರಮಗಳ ಬಗ್ಗೆ ಪ್ರತಿಪಕ್ಷಗಳು ಆಕ್ರೋಶವನ್ನು ಉಭಯ ಸದನದಲ್ಲಿ ಹೊರ ಹಾಕಬಹುದು.

ಬಜೆಟ್‌ ಅಧಿವೇಶನ ಸುಸೂತ್ರವಾಗಿ ಆಯೋಜಿಸುವ ನಿಟ್ಟಿನಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಈಗಾಗಲೇ ಸರ್ವಪಕ್ಷಗಳ ಸಭೆ ನಡೆಸಿದ್ದು, ಹಿರಿಯ ನಾಯಕರು ಪಾಲ್ಗೊಂಡಿದ್ದರು. ಪ್ರಧಾನಿ ಅನುಪಸ್ಥಿತಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್‌ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಆಯೋಜನೆಗೊಂಡಿತ್ತು.

IPL_Entry_Point