Temple wall Collapse: ದೇವಸ್ಥಾನದ ಗೋಡೆ ಕುಸಿದು 9 ಮಂದಿ ಸಾವು, ಧಾರ್ಮಿಕ ಕಾರ್ಯಕ್ರಮ ವೇಳೆ ದುರ್ಘಟನೆ, ಮಕ್ಕಳೇ ಅಧಿಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Temple Wall Collapse: ದೇವಸ್ಥಾನದ ಗೋಡೆ ಕುಸಿದು 9 ಮಂದಿ ಸಾವು, ಧಾರ್ಮಿಕ ಕಾರ್ಯಕ್ರಮ ವೇಳೆ ದುರ್ಘಟನೆ, ಮಕ್ಕಳೇ ಅಧಿಕ

Temple wall Collapse: ದೇವಸ್ಥಾನದ ಗೋಡೆ ಕುಸಿದು 9 ಮಂದಿ ಸಾವು, ಧಾರ್ಮಿಕ ಕಾರ್ಯಕ್ರಮ ವೇಳೆ ದುರ್ಘಟನೆ, ಮಕ್ಕಳೇ ಅಧಿಕ

ಮಧ್ಯಪ್ರದೇಶದಲ್ಲಿ( Madhya pradesh Tragedy) ದೇಗುಲದ ಗೋಡೆ ಕುಸಿದು 9 ಭಕ್ತರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಭಾನುವಾರದಂದು ನಡೆದಿದೆ.

ಮಧ್ಯಪ್ರದೇಶದಲ್ಲಿ ನಡೆದ ದೇಗುಲ ದುರಂತದ ಸ್ಥಳ.
ಮಧ್ಯಪ್ರದೇಶದಲ್ಲಿ ನಡೆದ ದೇಗುಲ ದುರಂತದ ಸ್ಥಳ. (ndtv)

ಭೋಪಾಲ್‌: ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದ ವೇಳೆ ಗೋಡೆ ಕುಸಿದು ಬಿದ್ದು 9 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರಾಜ್ಯದ ಸಾಗರ ಜಿಲ್ಲೆಯ ಶಹಾಪುರ ಎಂಬಲ್ಲಿನ ಹರ್ದುಲ್‌ ಬಾಬಾ ದೇಗುಲದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಹಲವರ ಸ್ಥಿತಿ ಗಂಭೀರವಾಗಿದೆ. ಇವರಲ್ಲಿ ಕೆಲವು ಮಕ್ಕಳೂ ಸೇರಿದ್ದಾರೆ. ಕೆಲವರು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕುಸಿದು ಬಿದ್ದಿರುವ ದೇವಸ್ಥಾನದ ಗೋಡೆಯ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯವೂ ಭರದಿಂದ ಸಾಗಿದೆ.ಮೃತಪಟ್ಟವರ ಕುಟುಂಬಗಳಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಪರಿಹಾರ ಘೋಷಿಸಿದ್ದು. ಘಟನೆ ಕುರಿತು ವಿಚಾರಣೆಗೆ ಆದೇಶ ಹೊರಡಿಸಲಾಗಿದೆ.

ಸಾಗರ ಜಿಲ್ಲಾ ಕೇಂದ್ರದಿಂದ ಸ್ವಲ್ಪವೇ ದೂರದಲ್ಲಿರುವ ಹರ್ದುಲ್‌ ಬಾಬಾ ದೇಗುಲದಲ್ಲಿ ಭಾನುವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ ನಿಗದಿಯಾಗಿತ್ತು. ಈ ವೇಳೆ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇಗುಲದ ಬಳಿ ಸೇರಿದ್ದರು. ಆದರೆ ಮಳೆ ಬಂದಿದ್ದರಿಂದ ದೇಗುಲದ ಒಂದು ಗೋಡೆ ಶಿಥಿಲಗೊಂಡಿತ್ತು. ಈ ವೇಳೆ ಶಿಥಿಲಗೊಂಡ ಗೋಡೆ ಕುಸಿದು ಬಿದ್ದಿದ್ದರಿಂದ ಅಲ್ಲಿಯೇ ಇದ್ದವರ ಮೇಲೆ ಉರುಳಿತು. ಈ ವೇಳೆ ಮಣ್ಣಿನಡಿ ಹಲವರು ಸಿಲುಕಿದರು. ಜನಜಂಗುಳಿ ಹೆಚ್ಚಾಗಿದ್ದರಿಂದ ತೊಂದರೆಯೂ ಆಯಿತು. ಕೂಡಲೇ ಅಲ್ಲಿದ್ದವರನ್ನು ಹೊರ ತೆಗೆಯುವ ಪ್ರಯತ್ನ ಮಾಡಲಾಯಿತು. ಈ ವೇಳೆ ಕೆಲವರು ಮೃತಪಟ್ಟಿದ್ದರೆ , ಇನ್ನೂ ಕೆಲವರು ಮಾರ್ಗಮಧ್ಯೆದಲ್ಲಿ ಮೃತಪಟ್ಟರು.

10-15 ವರ್ಷ ವಯೋಮಾನದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಷಯ ತಿಳಿದು ಸಂತಾಪ ವ್ಯಕ್ತಪಡಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌, ಮೃತರ ಕುಟುಂಬಗಳಿಗ ತಲಾ ನಾಲು ಲಕ್ಷ ರೂ. ಘೋಷಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಂತೆಯೂ ಆದೇಶಿಸಿದ್ದಾರೆ.

ಎರಡು ದಿನದ ಹಿಂದೆಯಷ್ಟೇ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ಕು ಮಕ್ಕಳು ಮೃತಪಟ್ಟಿದ್ದರು.ಶಾಲೆಯಿಂದ ವಾಪಾಸ್‌ ಬಂದಾಗ ಗೋಡೆ ಕುಸಿದು ದುರ್ಘಟನೆ ಸಂಭವಿಸಿತ್ತು. ಈಗ ಮತ್ತೊಂದು ದುರ್ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.

ದೇವಸ್ಥಾನ ಸಮಿತಿಯವರ ವಿರುದ್ದ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದ್ದು. ದೇಗುಲ ಸಮಿತಿಯವರನ್ನು ಬಂಧಿಸುವ ಸಾಧ್ಯತೆಯಿದೆ. ಈ ಕುರಿತು ತನಿಖೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.

ಮಧ್ಯಪ್ರದೇಶದಲ್ಲಿ ಎರಡು ವಾರದಿಂದ ಸುರಿದ ಭಾರೀ ಮಳೆಗೆ ಅನಾಹುತ ಸಂಭವಿಸಿ ಈವರೆಗೂ200 ಜನ ಮೃತಪಟ್ಟಿದ್ದು. ಹಲವರು ಗಾಯಗೊಂಡಿದ್ದಾರೆ. ಮನೆಗಳು ಕುಸಿತ ಕಂಡಿವೆ. ಸಾಕಷ್ಟು ದುರಂತಗಳು ವರದಿಯಾಗುತ್ತಲೇ ಇವೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.