ಡೊನಾಲ್ಡ್ ಟ್ರಂಪ್ ಮನೆ ಕಾಯುತ್ತಿದೆ ರೋಬೋಟ್ ನಾಯಿ; ಬಿಗಿಯಾಯಿತು ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ- ವೈರಲ್ ವಿಡಿಯೋ
ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೋ ನಿವಾಸಕ್ಕೆ ಸಿಕ್ಕಿರುವ ಬಿಗಿ ಭದ್ರತೆ ಈಗ ಜನಮನಸೆಳೆದಿದೆ. ಅವರ ಮನೆಯ ಸುತ್ತ ಪಹರೆ ನಡೆಸುತ್ತಿರುವ ರೋಬೋಟ್ ನಾಯಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ವಿವರ ಇಲ್ಲಿದೆ.
ನವದೆಹಲಿ: ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಗೆಲುವು ದಾಖಲಿಸಿರುವ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್ ಮನೆ ಕಾಯುತ್ತಿರುವುದು ಈಗ ರೋಬೋಟ್ ನಾಯಿ. ಎಸ್ಟೇಟ್ ಸುತ್ತ ಚಲಿಸುತ್ತಿರುವ ರೋಬೋಟ್ ನಾಯಿಯ ಪಹರೆ ಈಗ ಜಗತ್ತಿನ ಗಮನಸೆಳೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಕೊಲಿನ್ ರಗ್ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದು, “ಡೊನಾಲ್ಡ್ ಟ್ರಂಪ್ ಅವರು ಮಾರ್-ಎ-ಲಾಗೊದಲ್ಲಿ ತಮ್ಮ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಈಗ ಎಸ್ಟೇಟ್ ಪಹರೆಗೆ ರೋಬೋಟ್ ನಾಯಿಯನ್ನು ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ರೊಬೊಟಿಕ್ ನಾಯಿಯ ಕಾಲುಗಳ ಮೇಲೆ ”ಡು ನಾಟ್ ಪೆಟ್" ಎಂಬ ಬರೆಹ ಇದೆ.
ಸಾಕು ನಾಯಿ ಅಲ್ಲ, ರೋಬೋಟ್ ನಾಯಿ
"ಬೋಸ್ಟನ್ ಡೈನಾಮಿಕ್ಸ್ ಕಂಪನಿ ಈ ರೋಬೋಟ್ ನಾಯಿಯನ್ನು ನಿರ್ಮಿಸಿದೆ. ಇದರಲ್ಲಿ ಸರ್ವೇಕ್ಷಣಾ ತಂತ್ರಜ್ಞಾನ ಮತ್ತು ಸವಲತ್ತುಗಳಿವೆ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಕೊಲಿನ್ ರಗ್ ಬರೆದುಕೊಂಡಿದ್ದಾರೆ. ರಾಯ್ಟರ್ಸ್ ಪ್ರಕಾರ, ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನೆಯ ಹೊರಗೆ ಈ ರೋಬೋಟ್ ನಾಯಿ ಪತ್ತೆಯಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ರೋಬೋಟ್ ನಾಯಿ ತನ್ನದೇ ವೇಗದಲ್ಲಿ ಮನೆಯ ಲಾನ್ನಲ್ಲಿ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯವಿದೆ.
"ಚುನಾಯಿತ ಅಧ್ಯಕ್ಷರ ರಕ್ಷಣೆ ಪ್ರಮುಖ ಆದ್ಯತೆಯಾಗಿದೆ" ಎಂದು ಯುನೈಟೆಡ್ ಸ್ಟೇಟ್ಸ್ ರಹಸ್ಯ ಸೇವೆಯ ವಕ್ತಾರರು ನ್ಯೂಯಾರ್ಕ್ ಪೋಸ್ಟ್ಗೆ ತಿಳಿಸಿದ್ದು, ರೋಬೋಟ್ಗಳು ಈಗ ಏಜೆನ್ಸಿ ಸೇವೆಯಲ್ಲಿವೆ ಎಂದು ದೃಢಪಡಿಸಿದರು. "ನಾವು ನಿರ್ದಿಷ್ಟ ಸಾಮರ್ಥ್ಯಗಳನ್ನು ಹೊಂದುವುದು ಸಾಧ್ಯವಾಗದಿದ್ದರೂ, ರೋಬೋಟ್ ನಾಯಿಗಳು ಕಣ್ಗಾವಲು ತಂತ್ರಜ್ಞಾನವನ್ನು ಹೊಂದಿವೆ ಮತ್ತು ನಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸುಧಾರಿತ ಸಂವೇದಕಗಳ ಒಂದು ಶ್ರೇಣಿಯನ್ನು ಹೊಂದಿವೆ" ಎಂದು ವಕ್ತಾರರು ವಿವರಿಸಿದ್ದಾಗಿ ವರದಿ ಹೇಳಿದೆ.
ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೊ ಎಲ್ಲಿದೆ
ಫ್ಲೋರಿಡಾದ ಪಾಮ್ ಬೀಚ್ನಲ್ಲಿರುವ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ನಿವಾಸವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಕೇಂದ್ರ ಬಿಂದುವಾಗಿದೆ. ಚುನಾಯಿತ ಅಧ್ಯಕ್ಷರ ನಿವಾಸವಾಗಿರುವ ಕಾರಣ ಈಗ ಈ ಮನೆಯ ಸುತ್ತ ಭದ್ರತೆ ಹೆಚ್ಚಾಗಿದೆ. ಈ ರೋಬೋಟ್ ನಾಯಿಗಳು ಎಷ್ಟು ಸಮಯ ಇಲ್ಲಿ ಪಹರೆ ನಡೆಸಲಿದೆ ಎಂಬುದರ ವಿವರ ಇಲ್ಲ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಹೈಟೆಕ್ ಭದ್ರತಾ ವ್ಯವಸ್ಥೆ ಡೊನಾಲ್ಡ್ ಟ್ರಂಪ್ ಅವರಿಗೆ ಅವರ ಅಧಿಕಾರಾವಧಿಯಲ್ಲಿ ಸಿಗುತ್ತಲೇ ಇರಲಿದೆ ಎಂದು ವರದಿ ಹೇಳಿದೆ.
ಸುರಕ್ಷತಾ ಏಜೆನ್ಸಿಗಳಲ್ಲಿ ರೋಬೋಟ್ ನಾಯಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ತುರ್ತು ಪ್ರತಿಕ್ರಿಯೆ ನೀಡುವವರು ಮತ್ತು ಕಾನೂನು ಜಾರಿ ಅಧಿಕಾರಿಗಳನ್ನು ಸುರಕ್ಷಿತವಾಗಿಡಲು ಅವುಗಳನ್ನು ಬಳಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಎರಡು ಸಲ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು. ಅದಾದ ಬಳಿಕ ಅವರ ಭದ್ರತೆ ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಮಾಡುವುದಕ್ಕೆ ಇರಾನ್ ಮೂಲದವರು ಪ್ರಯತ್ನಿಸುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ. ಈಗ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಕಂಡಿರುವ ಕಾರಣ ಅವರ ಭದ್ರತೆ ಈಗ ಅಮೆರಿಕ ಸರ್ಕಾರದ ಹೊಣೆಗಾರಿಕೆಯಾಗಿದೆ.