ಅಮೆರಿಕದಲ್ಲಿ ಅರಳಲಿಲ್ಲ ಕಮಲಾ, ಟ್ರಂಪ್ ನಾಗಾಲೋಟಕ್ಕೆ ಬೆರಗಾದ ಜಗತ್ತು: ಇಸ್ರೇಲ್ , ರಷ್ಯಾ ರಣೋತ್ಸಾಹಕ್ಕೆ ಇನ್ನಾದರೂ ಬಿದ್ದೀತೆ ಕಡಿವಾಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಅರಳಲಿಲ್ಲ ಕಮಲಾ, ಟ್ರಂಪ್ ನಾಗಾಲೋಟಕ್ಕೆ ಬೆರಗಾದ ಜಗತ್ತು: ಇಸ್ರೇಲ್ , ರಷ್ಯಾ ರಣೋತ್ಸಾಹಕ್ಕೆ ಇನ್ನಾದರೂ ಬಿದ್ದೀತೆ ಕಡಿವಾಣ

ಅಮೆರಿಕದಲ್ಲಿ ಅರಳಲಿಲ್ಲ ಕಮಲಾ, ಟ್ರಂಪ್ ನಾಗಾಲೋಟಕ್ಕೆ ಬೆರಗಾದ ಜಗತ್ತು: ಇಸ್ರೇಲ್ , ರಷ್ಯಾ ರಣೋತ್ಸಾಹಕ್ಕೆ ಇನ್ನಾದರೂ ಬಿದ್ದೀತೆ ಕಡಿವಾಣ

ಜಗತ್ತಿನ ಗಮನ ಸೆಳೆದಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆದಿದೆ. ಇದು ಬರೀ ಆ ದೇಶದ ಚುನಾವಣೆಯಲ್ಲ.ಜಗತ್ತಿನ ಹಲವು ದೇಶಗಳ ಸಂಬಂಧಗಳ ಒಳಸುಳಿ ಇರುವ ಚುನಾವಣೆಯೂ ಹೌದು. ಬೈಡನ್‌ ಹೋದರು. ಟ್ರಂಪ್‌ ಬಂದರು ಎಂದು ಒಂದು ಸಾಲಿನ ಹಿಂದೆ ಇರುವ ಲೆಕ್ಕಾಚಾರಗಳ ನೋಟ ಇಲ್ಲಿದೆ.

ಅಮೆರಿಕಾದ ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಭಾರೀ ವಿಶ್ವಾಸದೊಂದಿಗೆ ಅಧಿಕಾರಕ್ಕೆ ಮರಳಿದ್ದಾರೆ. ಕಮಲಾ ಹ್ಯಾರಿಸ್‌ ಕಮಾಲ್‌ ನಡೆಯದೇ ಇನ್ನೂ ನಾಲ್ಕು ವರ್ಷ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕಾದ ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಭಾರೀ ವಿಶ್ವಾಸದೊಂದಿಗೆ ಅಧಿಕಾರಕ್ಕೆ ಮರಳಿದ್ದಾರೆ. ಕಮಲಾ ಹ್ಯಾರಿಸ್‌ ಕಮಾಲ್‌ ನಡೆಯದೇ ಇನ್ನೂ ನಾಲ್ಕು ವರ್ಷ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

us election results 2024: ಡಾ.ಶ್ರೀಹರ್ಷ ಮೂಲತಃ ಆಂಧ್ರದವರಾದರೂ ಅಮೆರಿಕಾದಲ್ಲಿಯೇ ಶಿಕ್ಷಣ ಪಡೆದು ಅಲ್ಲಿಯೇ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಪತ್ನಿ ಡಾ.ಧಾರಿಣಿ ಶ್ರೀಹರ್ಷ ಕೂಡ ಅಲ್ಲಿಯೇ ವೈದ್ಯೆ. ಶ್ರೀಹರ್ಷ ಅವರು ಅಲ್ಲಿಯ ಮತದಾರರು. ಕಳೇದ ತಿಂಗಳು ಬೆಂಗಳೂರಿಗೆ ಬಿಡುವಿಗೆಂದು ಬಂದಿದ್ದರು. ಹೇಗಿದೆ ಅಮೆರಿಕಾ ಚುನಾವಣೆ ಎನ್ನುವ ಪ್ರಶ್ನೆ ಅವರಿಗೆ ಎದುರಾಗಿತ್ತು. ಕಮಲಾ ಹ್ಯಾರಿಸ್‌ ಭಾರತೀಯ ಹಿನ್ನೆಲೆಯವರೇ. ಆದರೆ ಭಾರತೀಯರಿಗೇನೂ ಉಪಯೋಗವಾಗುವ ನೀತಿಗಳು ಇದ್ದಂತೆ ಕಾಣುತ್ತಿಲ್ಲ. ಅವರು ಬಂದರೆ ಅಮೆರಿಕಾದಲ್ಲಿರುವ ಭಾರತೀಯರಿಗೂ ಏನೂ ಆಗದು. ಭಾರತದೊಂದಿಗೆ ಉತ್ತಮ ಬಾಂಧವ್ಯ ಇರುವ ಟ್ರಂಪ್‌ ಬಂದರೆ ನಮಗೆಷ್ಟೇ ಅಲ್ಲ. ಇಡೀ ಅಮೆರಿಕಾಕ್ಕೆ ಒಳ್ಳೆಯದಾಗಬಹುದೇನೋ. ನೋಡಬೇಕು ಎಂದು ಅಲ್ಲಿನ ಕಣ ಚಿತ್ರಣ ವಿವರಿಸಿದ್ದರು. ಅದಾಗಿ ಮೂರು ವಾರದಲ್ಲಿ ಚುನಾವಣೆಯೂ ಮುಗಿದಿದೆ. ಫಲಿತಾಂಶವೂ ಬಂದಿದೆ. ಡಾ.ಶ್ರೀಹರ್ಷ ಅವರು ಹೇಳಿದಂತೆ ಬಹುಮತ ಸಿಕ್ಕಿರುವುದು ಟ್ರಂಪ್‌ಗೆ. ಅವರು ಹೇಳಿದಂತೆಯೇ ಆಗಿದೆ.

ಭಾರತೀಯರ ಭಾವನೆ

ಇಂತಹ ಭಾವನೆ ಇದ್ದುದು ಬರೀ ಶ್ರೀಹರ್ಷ ಅವರಲ್ಲಿ ಮಾತ್ರವಲ್ಲ. ಬಹುತೇಕ ಭಾರತೀಯರಲ್ಲಿ. ಅಮೆರಿಕಾದವರಲ್ಲೂ ಕೂಡ. ಜೋಬೈಡನ್‌ ಅಧ್ಯಕ್ಷರಾದ ಮೇಲೆ ಅಲ್ಲಿ ಅಂತಹ ಬದಲಾವಣೆ ಕಾಣಲಿಲ್ಲ. ನೀತಿಗಳು ಸ್ಪಷ್ಟವಾಗಿರಲಿಲ್ಲ. ಹಲವಾರು ದೇಶಗಳಲ್ಲಿ ತ್ವೇಷಮಯ ವಾತಾವರಣ ಹೆಚ್ಚಿ ಯುದ್ದಗಳು ಶುರುವಾಗಿವೆ. ರಷ್ಯಾ ಉಕ್ರೇನ್‌ ಯುದ್ದ ಇನ್ನೂ ನಿಂತಿಲ್ಲ. ಇಸ್ರೇಲ್‌ ಇರಾನ್‌ ಕದನ ವಿರಾಮ ಘೋಷಣೆಯಾಗಿಲ್ಲ. ಇದರ ಹಿಂದೆ ಜೋ ಬೈಡನ್‌ ಪ್ರಭಾವವೂ ಇರಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಚುನಾವಣಾ ಕಣದಲ್ಲಿ

ಈ ಬಾರಿಯೂ ಅಮೆರಿಕಾದಲ್ಲಿ ಡೆಮಾಕ್ರಟಿಕ್‌ ಪಕ್ಷವೇ ಅಧಿಕಾರ ಹಿಡಿಯಬೇಕು ಎನ್ನುವ ಕಾರಣದಿಂದ ಜೋಬೈಡನ್‌ ಮತ್ತವರ ತಂಡ, ಹಿಂದಿನ ಕೆಲ ಅಧ್ಯಕ್ಷರು ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್‌ ಅವರನ್ನು ಕಣಕ್ಕಿಳಿಸಿದ್ದರು. ಡೆಮಾಕ್ರಟಿಕ್‌ ಪಕ್ಷದ ಮತ ಬ್ಯಾಂಕ್‌ ಜತೆಗೆ ಅಮೆರಿಕಾದಲ್ಲಿಯೇ ನೆಲೆಸಿರುವ 40 ಲಕ್ಷದಷ್ಟು ಭಾರತೀಯರು ಹಾಗೂ ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಕಮಲಾ ಅವರನ್ನು ಕಣಕ್ಕಿಳಿಸಲಾಯಿತು. 

ಕಣದಲ್ಲೂ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಹಲವಾರು ವಿಷಯಗಳೂ ಚುನಾವಣೆ ವಿಷಯಗಳಾದವು. ಮತ್ತೊಂದೆಡೆ ವಿವಾದಿತ ವ್ಯಕ್ತಿತ್ವರಾದ ಡೊನಾಲ್ಡ್‌ ಟ್ರಂಪ್‌ ಅವರ ವಿರೋಧಿ ಅಲೆಯೂ ನಮಗೆ ವರದಾನವಾಗಬಹುದು ಎಂದು ಡೆಮಾಕ್ರಟಿಕ್‌ ಪಕ್ಷ ಲೆಕ್ಕಾಚಾರ ಹಾಕಿತು. ಇದರ ಪರಿಣಾಮವಾಗಿಯೇ ಬೈಡನ್‌ ಅವರೊಂದಿಗೆ ಉಪಾಧ್ಯಕ್ಷರಾಗಿದ್ದ ಕಮಲಾ ಅವರಿಗೆ ಅವಕಾಶ ಸಿಕ್ಕಿತು. 

ಬೈಡನ್‌ ವೈಫಲ್ಯದ ಫಲ

ಆದರೆ ಎಲ್ಲಾ ಲೆಕ್ಕಾಚಾರಗಳು ಕೈ ಹಿಡಿಯಲಿಲ್ಲ. ಭಾರತೀಯರಂತೂ ಕಮಲಾ ಅವರನ್ನು ಸಂಪೂರ್ಣ ಒಪ್ಪಲಿಲ್ಲ. ಅಲ್ಲಿ ನೆಲೆಸಿರುವ ಭಾರತೀಯರಲ್ಲಿ ಬಹುತೇಕರು ಮೋದಿ ಅಭಿಮಾನಿಗಳು. ರಿಪಬ್ಲಿಕ್‌ ಪಕ್ಷದ ಚಿಂತನೆಗಳಿಗ ಹತ್ತಿರವಾಗಿರುವ ಮೋದಿ ಕಾರ್ಯಸೂಚಿ, ಇದನ್ನೇ ಒಪ್ಪುವ ಭಾರತೀಯರಲ್ಲಿ ಹೆಚ್ಚಿನವರು ಕಮಲಾ ಅವರನ್ನು ಭಾರತದ ಲೆಕ್ಕದಲ್ಲಿ ಕೈ ಹಿಡಿಯಲಿಲ್ಲ. 

ಬೈಡನ್‌ ಅವರ ಹಿಂದಿನ ನಾಲ್ಕು ವರ್ಷದ ಆಡಳಿತವೂ ಫಲ ಕೊಡದೇ ಕಮಲ ಅಮೆರಿಕಾದಲ್ಲಿ ಅರಳಲಿಲ್ಲ.ಬದಲಿಗೆ ಭಾರತದ ಸಂಪರ್ಕ,ಮೋದಿ ಒಡನಾಟದೊಂದಿಗೆ ಟ್ರಂಪ್‌ ಗೆದ್ದರೆ ಹೊರತು ಕಮಲಾ ಮನಸು ಗೆಲ್ಲಲು ವಿಫಲರಾದರು. ಈಗಿನ್ನೂ 60 ವರ್ಷದವರಾದ ಕಮಲಾ ಮುಂದಿನ ಅವಧಿಗೆ ಕಾಯಬಹುದು ಡೆಮಾಕ್ರಟಿಕ್‌ ಆಡಳಿತ ಸರದಿಗಾಗಿ.

ಒಂದು ಸಾಲಿನ ಟ್ರಂಪ್‌ ಕಾರ್ಡ್‌ 

ಟ್ರಂಪ್‌ ಹಲವಾರು ವಿವಾದಗಳ ಕೇಂದ್ರ ಬಿಂದು. ನಾಲ್ಕು ವರ್ಷ ಅಧ್ಯಕ್ಷರಾಗಿದ್ದಾಗ, ಸೋತ ನಂತರದ ನಾಲ್ಕು ವರ್ಷಗಳ ಅವರ ನಡೆ ನುಡಿ, ಜನ ಸಂಪರ್ಕ ಎಲ್ಲವೂ ಅವರ ಪರವಾಗಿ ಗಟ್ಟಿಯಾಗಿ ಇಲ್ಲ ಎನ್ನುವ ಅಭಿಪ್ರಾಯವಿದ್ದವು. ಅಮೆರಿಕಾವು ಡೆಮಾಕ್ರಟಿಕ್‌ ಚಿಂತನೆಯ ಸರ್ಕಾರವನ್ನೇ ಬಯಸುತ್ತಿದ್ದ ಎನ್ನುವ ಚರ್ಚೆಗಳಿದ್ದವು. ಟ್ರಂಪ್‌ ಬಂದರೆ ಇನ್ನೇನೋ ಎನ್ನುವ ಭಾವನೆಗಳು ಇದ್ದರೂ ಅದು ಮತವಾಗಿ ಬದಲಾಗಲಿಲ್ಲ.

 ತಮ್ಮ ವಿರುದ್ದ ನಡೆದ ಪಿತೂರಿಗಳು, ಜೈಲಿಗೆ ಅಟ್ಟಲು ಯತ್ನಿಸಿದ ಕಾರ್ಯಸೂಚಿಗಳು, ಜೀವಹರಣದಂತಹ ಪ್ರಯತ್ನಗಳನ್ನೇ ಅವರು ಟ್ರಂಪ್‌ ಕಾರ್ಡ್‌ ಮಾಡಿಕೊಂಡರು. ಅದು ಅವರಿಗೆ ಫಲವನ್ನೂ ನೀಡಿತು. 

ರಿಪಬ್ಲಿಕನ್‌ ಭದ್ರಕೋಟೆಗಳನ್ನು ಬಿಗಿ ಮಾಡಿಕೊಂಡರು. ಡೆಮಾಕ್ರಟಿಕ್‌ ಪಕ್ಷದ ಮೂಲಗಳಿಗೂ ಕೈ ಹಾಕಿ ಅಲ್ಲಿಯೂ ಬದಲಾವಣೆ ಮಾಡಿದರು. ಇದರಿಂದ ಟ್ರಂಪ್‌ ಸೋಲುತ್ತಾರೆ ಎನ್ನುವಂತ ಅಲೆ ಬದಲಾಗಿ ಹೋಯಿತು. ಟ್ರಂಪ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಬೈಡನ್‌ ಹಾಗೂ ಕಮಲಾರಂತಹ ನಾಯಕರು ಹಾಗೂ ಅವರಿಗೆ ಬೆಂಬಲವಾಗಿ ನಿಂತ ಬರಾಕ್‌ ಒಬಾಮ ಸಹಿತ ಹಲವರಿಗೂ ಸಾಧ್ಯವಾಗಲೇ ಇಲ್ಲ. ಮತ್ತೆ ಅಮೆರಿಕಾವನ್ನು ಮುಂಚೂಣಿಗೆ ತನ್ನಿ( Make america Great again) ಎನ್ನುವ ಒಂದು ಸಾಲಿನ ಹೋರಾಟದೊಂದಿಗೆ ಟ್ರಂಪ್‌ ಗೆದ್ದೇ ಬಿಟ್ಟರು.

ಯುದ್ದೋನ್ಮಾದ ನಿಲ್ಲಲಿ

ಜಾಗತಿಕ ಮಟ್ಟದಲ್ಲಿ ಯುದ್ದೋನ್ಮಾದ ಕ್ಷಣಗಳು ಯಾವುದೇ ಮಾನವ ಸಂಕುಲಕ್ಕೆ ಒಳ್ಳೆಯದಲ್ಲ. ಇದರಿಂದ ಜೀವ ಹಾನಿ ಜತೆಗೆ ಬದುಕೇ ಮೂರಾಬಟ್ಟೆಯಾಗುವ, ಅತ್ಯಾಧುನಿಕ ಕ್ಷಿಪಣಿಗಳನ್ನು ಬಳಸಿ ಸರ್ವನಾಶಕ್ಕೆ ದೊಡ್ಡ ಗುಂಡಿ ತೋಡುವ ಸನ್ನಿವೇಶಗಳ ಬಗ್ಗೆ ಜನರಿಗೂ ಬೇಸರವೇ ಇದೆ. ಯುದ್ದ ನಿಲ್ಲಲಿ ಎಂದು ಬಯಸುವವರೇ ಅಧಿಕ. 

ಈ ನಿಟ್ಟಿನಲ್ಲಿ ಬೈಡನ್‌ ಅವರ ನೀತಿಗಳು ಯುದ್ದ ತಡೆಯಲು ವಿಫಲವೂ ಆದವು. ಡೊನಾಲ್ಡ್‌ ಟ್ರಂಪ್‌ ಅವರಿಂದಾದರೂ ದೇಶ ದೇಶಗಳ ನಡುವೆ ಸ್ನೇಹ ಸೌಹಾರ್ದಗಳು ನೆಲೆಗೊಳ್ಳಲಿ ಎನ್ನುವ ಕಾರಣವೂ ಅವರಿಗೆ ಮತ್ತೊಂದು ಅವಕಾಶ ನೀಡಿರುವ ಹಿಂದಿನ ಸಂದೇಶವೂ ಇರಬಹುದು. 

ಎರಡು ವರ್ಷದಿಂದ ನಲುಗಿರುವ ಉಕ್ರೇನ್‌, ವರ್ಷದಲ್ಲಿ ಇರಾನ್‌ ಹಾಳಾದ ರೀತಿ, ಇದರಿಂದ ರಷ್ಯಾ, ಇಸ್ರೇಲ್‌ ಕೂಡ ಅನುಭವಿಸಿದ ಹೊಡೆತ ಕೂಡ ಜನರಿಗೆ ಬೇಡವೇ ಆಗಿದೆ. ಟ್ರಂಪ್‌ ಆಗಮನದಿಂದ ಯುದ್ದೋನ್ಮಾನ ತಗ್ಗುವುದೇ, ಶಾಂತಿ ನೆಲೆಸುವುದೇ ಎನ್ನುವ ನಿರೀಕ್ಷೆಗಳಂತೂ ಜನರಲ್ಲಿದೆ. ಇದಕ್ಕೆ 2025ರ ಕೆಲ ಸಮಯವಾದರೂ ಬೇಕಾಗಬಹುದು.

ಅಮೆರಿಕಾದಲ್ಲಿ ನೆಲೆಸಿರುವ ಡಾ.ಶ್ರೀಹರ್ಷ ಹಾಗೂ ಡಾ.ಧಾರಿಣಿ ದಂಪತಿ. ಡಾ.ಶ್ರೀಹರ್ಷ ಅಮೆರಿಕಾ ಚುನಾವಣೆ ಕುರಿತು ಮೂರು ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಮಾತನಾಡಿದ್ದರು.
ಅಮೆರಿಕಾದಲ್ಲಿ ನೆಲೆಸಿರುವ ಡಾ.ಶ್ರೀಹರ್ಷ ಹಾಗೂ ಡಾ.ಧಾರಿಣಿ ದಂಪತಿ. ಡಾ.ಶ್ರೀಹರ್ಷ ಅಮೆರಿಕಾ ಚುನಾವಣೆ ಕುರಿತು ಮೂರು ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಮಾತನಾಡಿದ್ದರು.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.