Viral Video: ವಿಮಾನ ಏರಿದ ತಾಯಿಗೆ ಸಪ್ರೈಸ್ ಕೊಟ್ಟ ಪೈಲಟ್; ಅಮ್ಮನಿಗೆ ಸಾರ್ಥಕತೆಯ ಭಾವ ಮೂಡಿದ ಕ್ಷಣವಿದು
Pilot surprises mother:ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, “ಹೆಮ್ಮೆಯ ತಾಯಿ-ಮಗ” ಎಂದು ಒಬ್ಬರು, “ಎಂತಹ ಅದ್ಭುತ ಕ್ಷಣ” ಎಂದು ಮತ್ತೊಬ್ಬರು, “ಇಂತಹ ಅಮೂಲ್ಯ ಕ್ಷಣವನ್ನು ಫ್ರೇಮ್ ಹಾಕಿಸಿ ಇಟ್ಟುಕೊಳ್ಳಿ” ಎಂದು ಇನ್ನೊಬ್ಬರು ಬರೆದಿದ್ದಾರೆ.
ತಮ್ಮ ಆಸೆಗಳನ್ನು ತ್ಯಾಗ ಮಾಡಿ ಮಕ್ಕಳ ಸಂತೋಷಕ್ಕಾಗಿ ಹೆತ್ತವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ಮಕ್ಕಳು ಉತ್ತಮ ವಿದ್ಯಾಭ್ಯಾಸದೊಂದಿಗೆ ದೊಡ್ಡವರಾಗಿ ಒಳ್ಳೆಯ ಹೆಸರು, ಸ್ಥಾನಮಾನ ಗಳಿಸಿದರೆ ಅದಕ್ಕಿಂತ ಸಂತೋಷ ಅವರಿಗೆ ಬೇರೊಂದು ಇರುವುದಿಲ್ಲ. ಮಕ್ಕಳ ಸಾಧನೆಯನ್ನು ಕಂಡು ಪೋಷಕರಲ್ಲಿ ಮೂಡುವ ಸಾರ್ಥಕತೆಯ ಕ್ಷಣ ಎಂದಿಗೂ ಅವಿಸ್ಮರಣೀಯ. ಅಂತಹದ್ದೇ ವಿಡಿಯೋ ಇಲ್ಲಿದೆ ನೋಡಿ.
ಭಾರತೀಯ ಪೈಲಟ್ ಆಗಿರುವ ವಿಮಲ್ ಶಶಿಧರನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಮಲ್ ಶಶಿಧರನ್ ಅವರು ವಿಮಾನದೊಳಗೆ ತಮ್ಮ ತಾಯಿಗೆ ಸಪ್ರೈಸ್ ಕೊಟ್ಟ ವಿಡಿಯೋ ಇದಾಗಿದೆ.
ತಮ್ಮ ಮಗ ಪೈಲಟ್ ಎಂಬುದು ಆ ತಾಯಿಗೆ ಗೊತ್ತು, ಆದರೆ ಆತ ಯಾವ ದಿನ ಯಾವ ವಿಮಾನದಲ್ಲಿರುತ್ತಾನೆ ಎಂಬುದು ಆಕೆಗೆ ತಿಳಿದಿರುವುದಿಲ್ಲ. ಇತ್ತೀಚೆಗಷ್ಟೇ ವಿಮಲ್ ಶಶಿಧರನ್ ಅವರ ತಾಯಿ ವಿಮಾನವೊಂದನ್ನು ಹತ್ತಿದ್ದಾರೆ. ಆವರು ವಿಮಾನದೊಳಗೆ ಬರುತ್ತಿದ್ದಂತೆಯೇ ಫ್ಲೈಟ್ ಸಿಬ್ಬಂದಿ ಅವರನ್ನು ಬರಮಾಡಿಕೊಂಡಿದ್ದಾರೆ. ಆದರೆ ಅದೇ ವಿಮಾನದೊಳಗೆ ತನ್ನ ಮಗ ಇರುವುದನ್ನು ಕಂಡ ತಾಯಿ ಮಗನನ್ನು ಬಿಗಿದಪ್ಪಿ ಭಾವುಕರಾಗಿದ್ದಾರೆ.
iflya320 ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ವಿಮಲ್ ಶಶಿಧರನ್ ಈ ವಿಡಿಯೋ ಶೇರ್ ಮಾಡಿದ್ದು, “ಆಕೆಯ ಕಣ್ಣೀರ ಹನಿಗಳೇ ಎಲ್ಲವನ್ನೂ ಹೇಳುತ್ತದೆ. ಇಂತಹ ಕ್ಷಣಗಳೇ ಜೀವನವನ್ನು ಅಸಾಧಾರಣವಾಗಿಸುತ್ತದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.
ಒಂದು ಮಿಲಿಯನ್ಗೂ ಹೆಚ್ಚು ವ್ಯೂವ್ಸ್ ಪಡೆದ ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, “ಹೆಮ್ಮೆಯ ತಾಯಿ-ಮಗ” ಎಂದು ಒಬ್ಬರು, “ಎಂತಹ ಅದ್ಭುತ ಕ್ಷಣ” ಎಂದು ಮತ್ತೊಬ್ಬರು, “ಇಂತಹ ಅಮೂಲ್ಯ ಕ್ಷಣವನ್ನು ಫ್ರೇಮ್ ಹಾಕಿಸಿ ಇಟ್ಟುಕೊಳ್ಳಿ” ಎಂದು ಇನ್ನೊಬ್ಬರು ಬರೆದಿದ್ದಾರೆ.