ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಉಗ್ರರಿಗೆ ಆರ್ಥಿಕ ನೆರವು; ಯಾಸಿನ್‌ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

ಉಗ್ರರಿಗೆ ಆರ್ಥಿಕ ನೆರವು; ಯಾಸಿನ್‌ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

ಯಾಸಿನ್​ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಎನ್​ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್ ಸಿಂಗ್​ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್‌ ಶಿಕ್ಷೆಯನ್ನು ತಗ್ಗಿಸಿದ್ದು, ಜೀವಾವಧಿ ಶಿಕ್ಷೆ ನೀಡಿದೆ.

ಶಿಕ್ಷೆಗೊಳಗಾದ ಯಾಸಿನ್‌ ಮಲಿಕ್
ಶಿಕ್ಷೆಗೊಳಗಾದ ಯಾಸಿನ್‌ ಮಲಿಕ್

ನವದೆಹಲಿ: ಉಗ್ರರಿಗೆ ಆರ್ಥಿಕ ನೆರವು ಮತ್ತು ಭಯೋತ್ಪಾದಕ ಚಟುವಟಿಕೆಗೆ ಉತ್ತೇಜನ ನೀಡಿರುವ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸಿನ್ ಮಲಿಕ್‌ಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಮುಖ್ಯಸ್ಥನೂ ಆಗಿರುವ ಯಾಸಿನ್ ಮಲಿಕ್, ಕಳೆದ ವಾರ ತಪ್ಪೊಪ್ಪಿಕೊಂಡಿದ್ದ. ಇದಾದ ಬಳಿಕ ಪ್ರಕರಣದಲ್ಲಿ ಈತನನ್ನು ​ದೋಷಿ ಎಂದು ದೆಹಲಿಯ ಎನ್​ಐಎ ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು. ಇಂದು ತೀರ್ಪು ಪ್ರಕಟಿಸಿರುವ ಕೋರ್ಟ್‌, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಯಾಸಿನ್​ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಎನ್​ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್ ಸಿಂಗ್​ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್‌ ಶಿಕ್ಷೆಯನ್ನು ತಗ್ಗಿಸಿದ್ದು, ಜೀವನ ಪರ್ಯಂತ ಈತ ಜೈಲಿನಲ್ಲೇ ಕಂಬಿ ಎಣಿಸುವಂತೆ ಆಗಿದೆ.

ಇದೇ ಪ್ರಕರಣದ ಉಳಿದ ಆರೋಪಿಗಳು ತಪ್ಪೊಪ್ಪಿಕೊಂಡಿಲ್ಲ. ಹೀಗಾಗಿ ಅವರ ವಿಚಾರಣೆ ಮುಂದುವರಿಯಲಿದೆ. ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್‌ರನ್ನು ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 1987ರ ಚುನಾವಣೆಯಲ್ಲಿ ಮಲಿಕ್, ಸಲಾವುದ್ದೀನ್ ಎಂಬಾತನ ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡಿದ್ದ. ವಂಚನೆ ಮೂಲಕ ಚುನಾವಣೆಯನ್ನು ಹಾಳು ಮಾಡಿ, ಈ ಪ್ರದೇಶದಲ್ಲಿ ದಂಗೆ ಸೃಷ್ಟಿಯಾಗಲು ಕಾರಣನಾದ ಆರೋಪ ಈತನ ಮೇಲಿತ್ತು. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯು 1980ರ ದಶಕದ ಅಂತ್ಯದಲ್ಲಿ ಕಣಿವೆ ನಾಡಿನಲ್ಲಿ ದಂಗೆಯನ್ನು ಮುನ್ನಡೆಸಿದವು. 1990ರ ದಶಕದ ಮಧ್ಯಭಾಗದಲ್ಲಿ ಹಿಂಸಾಚಾರ ನಿಂತ ಬಳಿಕ ಮಲಿಕ್‌ನನ್ನು ಜೈಲಿಗೆ ಅಟ್ಟಲಾಯಿತು. ಮಹಾಪಧಮನಿಯ ಕವಾಟದ ಬದಲಾವಣೆಗೆ ಒಳಗಾಗಿದ್ದ ಮಲಿಕ್, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ. 1990ರಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈತ, ಐದನೇ ಮಹಡಿಯ ಕಿಟಕಿಯಿಂದ ಜಿಗಿದಿದ್ದ. ಹೀಗಾಗಿ ಒಂದು ಕಿವಿಯ ಶ್ರವಣ ಶಕ್ತಿ ಕಳೆದುಕೊಂಡು, ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ.

2019ರಿಂದಲೂ ಯಾಸಿನ್ ಮಲಿಕ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಈತನ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ, ಭಯೋತ್ಪಾದನಾ ಕೃತ್ಯ ಎಸಗಲು ಸಂಚು ಮತ್ತು ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಶ್ರೀನಗರದ ಯಾಸಿನ್ ನಿವಾಸದೆದುರು ಹಿಂಸಾಚಾರ

ದೆಹಲಿ ನ್ಯಾಯಾಲಯದಿಂದ ತೀರ್ಪು ಹೊರಬೀಳುವುದಕ್ಕೂ ಮುನ್ನ, ಶ್ರೀನಗರದ ಆತನ ನಿವಾಸದ ಎದುರು ಪ್ರತಿಭಟನೆ ನಡೆದಿದೆ. ಈ ನಡುವೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ಸಹ ನಡೆಸಿದ್ದಾರೆ. ಶ್ರೀನಗರದಲ್ಲಿ ಬಂದ್ ವಾತಾವರಣ ನಿರ್ಮಾಣಗೊಂಡಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಈ ನಡುವೆ ಉದ್ರಿಕ್ತರ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ