MS Dhoni Record: ಚಾಂಪಿಯನ್ ಪಟ್ಟ ಅಲಂಕರಿಸಿ ಐಪಿಎಲ್ನಲ್ಲಿ ಚರಿತ್ರೆ ಸೃಷ್ಟಿಸಿದ ಎಂಎಸ್ ಧೋನಿ; ಈಗ ಹಲವು ದಾಖಲೆಗಳ ಒಡೆಯ ಚೆನ್ನೈ ನಾಯಕ
16ನೇ ಆವೃತ್ತಿಯ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಕಣಕ್ಕಿಳಿಯುವ ಮೂಲಕ ಎಂಎಸ್ ಧೋನಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆ ದಾಖಲೆಗಳು ಯಾವುದು ಎಂಬುದನ್ನು ಈ ಮುಂದೆ ನೋಡೋಣ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ (MS Dhoni), ಯಾರೂ ಮಾಡದ ದಾಖಲೆ ಬರೆದಿದ್ದಾರೆ. ಮೇ 29ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium, Ahmedabad) ನಡೆದ 16ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ನಿರ್ಮಿಸಿದೆ. 5ನೇ ಬಾರಿ ಎಂಎಸ್ ಧೋನಿ ನಾಯಕತ್ವದಲ್ಲಿ ಟ್ರೋಫಿ ಒಲಿದು ಬಂದಿದೆ. ಈ ಪಂದ್ಯದಲ್ಲಿ ಧೋನಿ ಹಲವು ವಿಶೇಷ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಅವುಗಳನ್ನು ಈ ಮುಂದೆ ನೋಡೋಣ.
ಮುಂಬೈ ದಾಖಲೆ ಸರಿಗಟ್ಟಿದ ಸಿಎಸ್ಕೆ
ಮೇ 29ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ ಫೈನಲ್ನಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆ ಮೂಲಕ ಈಗಾಗಲೇ 5 ಸಲ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ದಾಖಲೆ ಸಮಗೊಳಿಸಿದೆ.
5ನೇ ಟ್ರೋಫಿ ಗೆದ್ದ ಧೋನಿ
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ನಲ್ಲಿ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ, ಕಿರನ್ ಪೊಲಾರ್ಡ್ ಕೂಡ 5 ಬಾರಿ ಟ್ರೋಫಿ ಗೆದ್ದಿದ್ದಾರೆ. ಇದೀಗ ಇವರ ಸಾಲಿಗೆ ಧೋನಿ ಸೇರಿದ್ದಾರೆ. ರೋಹಿತ್ ಶರ್ಮಾ ಮತ್ತು ಅಂಬಟಿ ರಾಯಡು ತಲಾ 6 ಬಾರಿ ಫೈನಲ್ ಗೆದ್ದ ತಂಡದ ಭಾಗವಾಗಿದ್ದಾರೆ.
ದಾಖಲೆಯ 250ನೇ ಪಂದ್ಯ
ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮೈದಾನಕ್ಕೆ ಬರುತ್ತಿದ್ದಂತೆ ಚರಿತ್ರೆ ಬರೆದರು. ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು. ರೋಹಿತ್ ಶರ್ಮಾ 243 ಪಂದ್ಯಗಳು, ದಿನೇಶ್ ಕಾರ್ತಿಕ್ 242 ಪಂದ್ಯದಲ್ಲಿ ಕಣಕ್ಕಿಳಿದು ಧೋನಿ ನಂತರದ ಸ್ಥಾನದಲ್ಲಿದ್ದಾರೆ. 237 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ (226) 5ನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಫೈನಲ್ ಪಂದ್ಯಗಳು
ಗುಜರಾತ್ ವಿರುದ್ಧ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಮತ್ತೊಂದು ದಾಖಲೆ ಕೂಡ ಬರೆದರು. ಅತಿಹೆಚ್ಚು ಐಪಿಎಲ್ ಫೈನಲ್ ಪಂದ್ಯಗಳನ್ನಾಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಒಟ್ಟು 10 ಫೈನಲ್ ಪಂದ್ಯಗಳನ್ನಾಡಿರುವ ಧೋನಿ, ರೈಸಿಂಗ್ ಪುಣೆ ಜೈಂಟ್ಸ್ ಪರವೂ ಒಂದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.
ಅತಿ ಹೆಚ್ಚು ಪ್ಲೇ ಆಫ್ ಪಂದ್ಯಗಳು
ಕೇವಲ ಐಪಿಎಲ್ ಫೈನಲ್ಗಳಲ್ಲಿ ಮಾತ್ರವಲ್ಲ ಪ್ಲೇ ಆಫ್ ಪಂದ್ಯಗಳಲ್ಲೂ ಎಂಎಸ್ ಧೋನಿ ದಾಖಲೆ ಬರೆದಿದ್ದಾರೆ. ಧೋನಿ ಈವರೆಗೂ ಒಟ್ಟು 28 ಪ್ಲೇ ಆಫ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 2ನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದಾರೆ. ಅವರು 24 ಪ್ಲೇ ಆಫ್ ಪಂದ್ಯಗಳನ್ನು ಆಡಿದ್ದಾರೆ.
ನಾಯಕನಾಗಿ 10 ಫೈನಲ್ ಆಡಿದ ದಾಖಲೆ
16 ಸೀಸನ್ಗಳ ಐಪಿಎಲ್ ಚರಿತ್ರೆಯಲ್ಲಿ ಅಧಿ ಬಾರಿ ಫೈನಲ್ ಆಡಿದ ನಾಯಕ ಎಂಬ ಎಂಬ ರೆಕಾರ್ಡ್ ಅನ್ನೂ ಧೋನಿ ಸ್ವಂತ ಮಾಡಿಕೊಂಡಿದ್ದಾರೆ. ಎಂಎಸ್ಡಿ ಒಟ್ಟು 10 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ ಎಂಬ ದಾಖಲೆ ಬರೆದಿದ್ದಾರೆ.
ವಿಕೆಟ್ ಹಿಂದೆ ಅತಿ ಹೆಚ್ಚು ಬಲಿ
ಇನ್ನು ಟಿ20 ಕ್ರಿಕೆಟ್ನಲ್ಲಿ ವಿಕೆಟ್ ಹಿಂದೆ ನಿಂತು ಅತಿ ಹೆಚ್ಚು ಬಲಿ ಪಡೆದ ಆಟಗಾರ ಎಂಬ ದಾಖಲೆಯನ್ನೂ ಧೋನಿ ತಮ್ಮದಾಗಿಸಿಕೊಂಡಿದ್ದಾರೆ. ಶುಭ್ಮನ್ ಗಿಲ್ ಅವರನ್ನು ಸ್ಟಂಪ್ ಮಾಡಿದ ಬಳಿಕ ಈ ಸಾಧನೆ ಮಾಡಿದರು. ಈವರೆಗೂ 301 ಬಲಿ ಪಡೆದಿದ್ದಾರೆ. ಅದರಲ್ಲಿ 214 ಕ್ಯಾಚ್ಗಳು ಮತ್ತು 87 ಸ್ಟಂಪ್ಸ್ಗಳು ದಾಖಲಾಗಿವೆ. ಇನ್ನು ಐಪಿಎಲ್ನಲ್ಲಿ 243 ಇನ್ನಿಂಗ್ಸ್ಗಳಲ್ಲಿ 180 ಮಂದಿಯನ್ನು ವಿಕೆಟ್ ಹಿಂದೆ ನಿಂತು ಔಟ್ ಮಾಡಿದ್ದಾರೆ. ಅದರಲ್ಲಿ 138 ಕ್ಯಾಚ್ಗಳು, 42 ಸ್ಟಂಪ್ಗಳಿವೆ. ಫೈನಲ್ನಲ್ಲಿ ಸ್ಟಂಪ್ ಜೊತೆ ಒಂದು ಕ್ಯಾಚ್ ಅನ್ನು ಪಡೆದರು ಧೋನಿ.
ವಿಭಾಗ