ಸಂಖ್ಯಾಶಾಸ್ತ್ರ ಸಂಖ್ಯೆ 8: ಪ್ರೀತಿಪಾತ್ರರಿಗೆ ಸಮಯ ಕೊಡದಿದ್ದರೆ ಬಿರುಕು ಉಂಟಾಗುವ ಸಾಧ್ಯತೆ, ದುಂದುವೆಚ್ಚದಿಂದ ಆರ್ಥಿಕ ಸಮಸ್ಯೆ; 2025 ಭವಿಷ್ಯ
Nov 28, 2024 05:52 PM IST
ರಾಡಿಕ್ಸ್ ಸಂಖ್ಯೆ 8 ಸಂಖ್ಯಾಶಾಸ್ತ್ರ ಭವಿಷ್ಯ 2025
Numerology Horoscope 2025: ಜನ್ಮ ದಿನಾಂಕ ಆಧರಿಸಿ ಭವಿಷ್ಯ, ದೋಷ, ಪರಿಹಾರದ ಬಗ್ಗೆ ಹೇಳುವಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಜನ್ಮದಿನಾಂಕವನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 1 ರಿಂದ 9 ವರೆಗೆ ವಿವಿಧ ರಾಡಿಕ್ಸ್‌ಗೆ ಸೇರಿದ ಜನರು 2025ರಲ್ಲಿ ಯಾವ ರೀತಿ ಫಲಗಳನ್ನು ಪಡೆಯುತ್ತಾರೆ? ರಾಡಿಕ್ಸ್ ನಂಬರ್ 8ರ ಮುಂದಿನ ವರ್ಷದ ಭವಿಷ್ಯ ಹೇಗಿದೆ ನೋಡೋಣ.
ಸಂಖ್ಯಾಶಾಸ್ತ್ರ ಸಂಖ್ಯೆ 8: ವರ್ಷ ಮುಗಿಯುತ್ತಾ ಬಂತು. ಮೊನ್ನೆ ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಿದಂತೆ ಇದೆ. ಇನ್ನು 1 ತಿಂಗಳು ಕಳೆದರೆ ಮತ್ತೊಂದು ವರ್ಷಕ್ಕೆ ಕಾಲಿಡುತ್ತೇವೆ. ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಕಾಡತೊಡಗುತ್ತವೆ. ಈ ವರ್ಷ ನಮಗೆ ಸುಖವೋ, ದುಃಖವೋ ಅಥವಾ ಸಾಮಾನ್ಯವಾಗಿರುವುದಾ? ಏನೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಈಗ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೋ ಇಲ್ಲವೋ? ಉದ್ಯೋಗ, ವೃತ್ತಿ, ಹಣಕಾಸು, ಸಂಬಂಧ, ಆರೋಗ್ಯ ಹೇಗಿರುತ್ತದೆ? ಈ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ. 2025 ರಲ್ಲಿ ರಾಡಿಕ್ಸ್ ನಂಬರ್ 8 ಜನರ ಭವಿಷ್ಯ ಈ ರೀತಿ ಇದೆ.
ತಾಜಾ ಫೋಟೊಗಳು
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಒಟ್ಟುಗೂಡಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಇದನ್ನು ರಾಡಿಕ್ಸ್ ನಂಬರ್ ಎಂದು ಕರೆಯಲಾಗುತ್ತದೆ.
ಶನಿಗೆ ಸಂಬಂಧಿಸಿದ ರಾಡಿಕ್ಸ್ ನಂಬರ್ 8
ನೀವು ಯಾವುದೇ ತಿಂಗಳ 8, 17 ಅಥವಾ 26 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 8 ಆಗಿರುತ್ತದೆ. ಸಂಖ್ಯೆ 8 ಶನಿಯನ್ನು ಪ್ರತಿನಿಧಿಸುತ್ತದೆ. ಶನಿಯು ನಿಮ್ಮ ಮೇಲೆ ನಿರ್ದಿಷ್ಟ ಪ್ರಭಾವ ಬೀರುತ್ತಾನೆ. ಪರಿಣಾಮವಾಗಿ, ಇದರಿಂದ ನಿಮಗೆ ಬಹಳ ತಾಳ್ಮೆ ಇರುತ್ತದೆ. ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ ಈ ರಾಡಿಕ್ಸ್ ನಂಬರ್ ಜನರು ಸ್ವಲ್ಪ ಸೋಮಾರಿತನ ಹೊಂದಿರುತ್ತಾರೆ. ಕೆಲವರು ಸ್ವಭಾವತಃ ಚಂಚಲರಾಗಿರಬಹುದು, ಆದರೆ ಸಾಮಾನ್ಯವಾಗಿ ನೀವು ತಾಳ್ಮೆ, ಗಂಭೀರ ವ್ಯಕ್ತಿಗಳಾಗಿರುತ್ತೀರಿ.
ಯಾವುದೇ ಕೆಲಸ ಮಾಡುವ ಮುನ್ನ ನೀವು ಅದರ ಬಗ್ಗೆ ಬಹಳ ಆಳವಾಗಿ ಯೋಚಿಸುತ್ತೀರಿ. ನೀವು ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಹಾಗೂ ಪ್ರಾಮಾಣಿಕತೆಯಿಂದ ಇರುತ್ತೀರಿ, ನಿಮ್ಮ ಈ ಗುಣ ಇತರರಿಗೆ ಕಿರಿಕಿರಿ ಎನಿಸಬಹುದು, ಆದ್ದರಿಂದಲೇ ನೀವು ಸಮಸ್ಯೆ ಎದುರಿಸಬಹುದು. ದುಂದು ವೆಚ್ಚ ಮಾಡುವ ನಿಮ್ಮ ಸ್ವಭಾವದಿಂದ ನೀವು ಆರ್ಥಿಕವಾಗಿ ಹಿಂದುಳಿಯಬಹುದು. ಆದ್ದರಿಂದ ಹಣ ಉಳಿತಾಯದತ್ತ ಹೆಚ್ಚಿನ ಗಮನ ಕೊಡಿ. ಜೀವನದಲ್ಲಿ ಯಶಸ್ಸು ಗಳಿಸಿದರೂ ಅದಕ್ಕಾಗಿ ಸಾಕಷ್ಟು ಶ್ರಮ ಬೇಕಾಗುತ್ತದೆ. ಎಚ್ಚರಿಕೆ, ತಾಳ್ಮೆಯಿಂದ ಇದ್ದಷ್ಟೂ ನಿಮಗೆ ಹೆಚ್ಚಿನದು ದೊರೆಯುತ್ತದೆ.
ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಎಲ್ಲಾ ಕಡೆ ಧನಾತ್ಮಕ ಫಲಿತಾಂಶ
ಮುಂದಿನ ವರ್ಷ 8, 9, 1, 7 ಮತ್ತು 5 ಸಂಖ್ಯೆಗಳು ನಿಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಈ ವರ್ಷ ಸಂಖ್ಯೆ 1 ರ ಪ್ರಭಾವದಿಂದ ನೀವು ಪ್ರತಿಕೂಲ ಫಲಿತಾಂಶಗಳನ್ನು ಪಡೆಯಬಹುದು. ಸಂಖ್ಯೆ 8 ನೀವು ಊಹಿಸಲೂ ಸಾಧ್ಯವಿಲ್ಲದಷ್ಟು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಉಳಿದ ಅಂಕಿಗಳು ನಿಮಗೆ ಸಾಧಾರಣ ಫಲಿತಾಂಶಗಳನ್ನು ನೀಡುತ್ತದೆ. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳ ಹೊರತಾಗಿಯೂ ಮುಂದಿನ ವರ್ಷ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ.
ಈ ವರ್ಷ ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು, ಆದರೆ ನಿಮ್ಮ ಪ್ರಯತ್ನಗಳು ನಂಬಲಾಗದಷ್ಟು ನಿಮಗೆ ಒಳಿತು ಮಾಡುತ್ತದೆ. ಆರ್ಥಿಕವಾಗಿ ನೀವು ಇನ್ನಷ್ಟು ಬಲ ಪಡೆಯಲಿದ್ದೀರಿ. ನಿಮ್ಮ ಕಂಪನಿ ಅಥವಾ ಕೆಲಸದ ಸ್ಥಳದಲ್ಲಿರುವರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೂ ಕ್ರಮೇಣ ಎಲ್ಲವೂ ಸುಧಾರಿಸುತ್ತದೆ. ಹೊಸ ಯೋಜನೆಯನ್ನು ಪ್ರಾರಂಭಿಸಲು ಉತ್ತಮ ಸಮಯ. ಇದರಿಂದ ನಿಮಗೆ ಬಹಳ ಅನುಕೂಲವಿದೆ. ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳು ಸಾಮಾನ್ಯವಾಗಿ ಈ ವರ್ಷದಿಂದ ಹೆಚ್ಚಿನ ಲಾಭವನ್ನು ತಂದುಕೊಡಬಹುದು. ಉದ್ಯೋಗದಲ್ಲಿರುವವರು ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚು. 8ನೇ ಸಂಖ್ಯೆಯ ಪರಿಣಾಮದಿಂದಾಗಿ ಸಂಬಂಧಗಳು ಮತ್ತು ವೈಯಕ್ತಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸುವ ಸಾಧ್ಯತೆ ಇದೆ. ನೀವು ಪ್ರೀತಿಯಲ್ಲಿದ್ದರೆ ನಿಮ್ಮವರಿಗಾಗಿ ಸಮಯ ಕೊಡಿ, ಅವರ ಬೇಕು, ಬೇಡಗಳನ್ನು ಪೂರೈಸಿ, ವೈವಾಹಿಕ ಜೀವನದಲ್ಲಿ ಕೂಡಾ ಹೊಂದಾಣಿಕೆ ಬಹಳ ಅಗತ್ಯವಾಗಿದೆ.
ಪರಿಹಾರ: ನಿತ್ಯವೂ ಶಿವನ ಆರಾಧನೆ ಮಾಡಿ. ಪ್ರತಿನಿತ್ಯ ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ಕುಂಕುಮ ಮಿಶ್ರಿತ ನೀರನ್ನು ಅರ್ಪಿಸಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ.