ಮುಕ್ಕೋಟಿ ದೇವರನ್ನು ಪೂಜಿಸುವ ನಾಡು ಭಾರತ: ಹಲವು ರಹಸ್ಯಗಳನ್ನೊಳಗೊಂಡ 12 ದೇವಾಲಯಗಳ ಮಾಹಿತಿ ಇಲ್ಲಿದೆ, ಈ ದೇಗುಲಗಳ ಬಗ್ಗೆ ನಿಮಗೆಷ್ಟು ಗೊತ್ತು?
Oct 03, 2024 12:43 PM IST
ಭಾರತದ ಹಲವು ರಹಸ್ಯಗಳನ್ನೊಳಗೊಂಡ 12 ದೇವಾಲಯಗಳ ಮಾಹಿತಿ ಇಲ್ಲಿದೆ, ಈ ದೇಗುಲಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತದಲ್ಲಿ ಮುಕ್ಕೋಟಿ ದೇವರನ್ನು ಪೂಜಿಸಲಾಗುತ್ತದೆ. ಅಲ್ಲದೆ, ಭಾರತವು ಅಸಂಖ್ಯಾತ ದೇವಾಲಯಗಳ ನೆಲೆಬೀಡಾಗಿದೆ. ಪ್ರತಿಯೊಂದು ದೇವಾಲಯಗಳು ತನ್ನದೇ ಆದ ಇತಿಹಾಸ, ರಹಸ್ಯಗಳನ್ನೊಳಗೊಂಡಿದೆ. ಅಂತಹ 12 ಜನಪ್ರಿಯ ನಿಗೂಢ ದೇವಾಲಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತವನ್ನು 64 ಕೋಟಿ ದೇವರು ಮತ್ತು ದೇವತೆಗಳ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿನ ದೇವಾಲಯಗಳು ವೈವಿಧ್ಯಮಯ, ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ವಾಸ್ತುಶಿಲ್ಪದ ಶೈಲಿಗಳನ್ನು ಪ್ರತಿಬಿಂಬಿಸುತ್ತದೆ. ಈ ಪವಿತ್ರ ಸ್ಥಳಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಸಂಸ್ಕೃತಿ, ಇತಿಹಾಸ ಮತ್ತು ಸಮುದಾಯದ ಕೇಂದ್ರಗಳಾಗಿವೆ. ಅಜಂತಾ ಮತ್ತು ಎಲ್ಲೋರಾದ ಪ್ರಾಚೀನ ರಾಕ್-ಕಟ್ ಗುಹೆಗಳಿಂದ ಖಜುರಾಹೊದ ಅಲಂಕೃತ ಕೆತ್ತನೆಗಳವರೆಗೆ, ಭಾರತದಲ್ಲಿನ ದೇವಾಲಯಗಳು ಕಲಾತ್ಮಕ ಅಭಿವ್ಯಕ್ತಿಗಳು ಮತ್ತು ಧಾರ್ಮಿಕ ನಂಬಿಕೆಗಳ ವ್ಯಾಪ್ತಿಯನ್ನು ಪ್ರದರ್ಶಿಸುತ್ತವೆ. ಪ್ರಸಿದ್ಧ ದೇವಾಲಯಗಳ ಬಗ್ಗೆ ನಿಮಗೆ ತಿಳಿದಿರಬಹುದು ಅಥವಾ ನೀವು ನೋಡಿರಬಹುದು. ಭಾರತವು ಅಸಂಖ್ಯಾತ ದೇವಾಲಯಗಳ ನೆಲೆಬೀಡಾಗಿದೆ. ಪ್ರತಿಯೊಂದು ದೇವಾಲಯಗಳು ತನ್ನದೇ ಆದ ಇತಿಹಾಸ, ರಹಸ್ಯಗಳನ್ನೊಳಗೊಂಡಿದೆ. ಅಂತಹ 12 ಜನಪ್ರಿಯ ನಿಗೂಢ ದೇವಾಲಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ತಾಜಾ ಫೋಟೊಗಳು
ಭಾರತದಲ್ಲಿನ 12 ಜನಪ್ರಿಯ ರಹಸ್ಯ ದೇವಾಲಯಗಳು
ಕಾಮಾಖ್ಯ ದೇವಿ ದೇವಸ್ಥಾನ: ಅಸ್ಸಾಂನ ಗುವಾಹಟಿಯ ನೀಲಾಚಲ ಹಿರ್‌ನ ಮೇಲ್ಭಾಗದಲ್ಲಿರುವ ಕಾಮಾಖ್ಯ ದೇವಿ ದೇವಸ್ಥಾನವು ಭಾರತದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಶಕ್ತಿ ಪೀಠ ಎಂದು ಪರಿಗಣಿಸಲಾಗಿದ್ದು, ಇದು ಅತ್ಯಂತ ಹಳೆಯ ದೇವಾಲಯವಾಗಿದೆ. ಶಿವನ ಪತ್ನಿ ಪಾರ್ವತಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಪ್ರತಿ ವರ್ಷ, ಮಳೆಗಾಲದಲ್ಲಿ ದೇವಿಯು ಋತುಮತಿಯಾಗುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ದೇವಾಲಯವನ್ನು ಸುಮಾರು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಈ ವೇಳೆ ಅಂಬುಬಾಚಿ ಮೇಳವನ್ನು ಆಚರಿಸಲಾಗುತ್ತದೆ. ದೇವಾಲಯದ ಗರ್ಭಗುಡಿಯಲ್ಲಿ ಹರಿಯುವ ಭೂಗತ ಚಿಲುಮೆಯು ಈ ಮೂರು ದಿನಗಳಲ್ಲಿ ಕೆಂಪು ಬಣ್ಣಕ್ಕೆ ಬದಲಾಗುತ್ತದೆ ಎಂದು ನಂಬಲಾಗಿದೆ. ಜೂನ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಮೆಹಂದಿಪುರ ಬಾಲಾಜಿ ದೇವಸ್ಥಾನ: ರಾಜಸ್ಥಾನದಲ್ಲಿರುವ ಈ ದೇವಾಲಯವು ಭಾರತದ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ದುಷ್ಟಶಕ್ತಿಗಳನ್ನು ತೊಡೆದುಹಾಕಲು ಭಕ್ತರು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ವಿಶಿಷ್ಠ ದೇವಾಲಯವಾಗಿದೆ, ಈ ದೇವಾಲಯದಲ್ಲಿ ಯಾವುದೇ ಪ್ರಸಾದ, ನೈವೇದ್ಯಗಳನ್ನು ನೀಡಲಾಗುವುದಿಲ್ಲ. ದೇವಾಲಯದಿಂದ ಹೊರಬಂದ ನಂತರ ಹಿಂತಿರುಗಿ ನೋಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಏಕೆಂದರೆ ದುಷ್ಟಶಕ್ತಿಯು ಇದನ್ನು ಆಹ್ವಾನವಾಗಿ ತೆಗೆದುಕೊಳ್ಳುತ್ತದೆ ಎಂದು ನಂಬಲಾಗಿದೆ.
ಸ್ತಂಭೇಶ್ವರ ಮಹಾದೇವ್, ಗುಜರಾತ್: ದಿನವಿಡೀ ಕಾಣಿಸಿಕೊಳ್ಳುವ ಮತ್ತು ಕಣ್ಮರೆಯಾಗುವ ಭಾರತದ ಅತ್ಯಂತ ನಿಗೂಢ ದೇವಾಲಯಗಳಲ್ಲಿ ಇದು ಒಂದಾಗಿದೆ. ವಿಚಿತ್ರ ಎನಿಸಿದರೂ ಸತ್ಯ. ಅರಬ್ಬೀ ಸಮುದ್ರ ತೀರದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಈಶ್ವರನನ್ನು ಪೂಜಿಸಲಾಗುತ್ತದೆ. ಉಬ್ಬರವಿಳಿತದ ಸಂದರ್ಭದಲ್ಲಿ ದೇವಾಲಯವನ್ನು ಸಮುದ್ರ ಆವರಿಸುತ್ತದೆ. ನೀರು ಕಡಿಮೆಯಾಗುತ್ತಿದ್ದಂತೆ ದೇವಾಲಯವು ಗೋಚರಿಸುತ್ತದೆ. ಡಿಸೆಂಬರ್‌ನಿಂದ ಫೆಬ್ರವರಿಯಲ್ಲಿ ಈ ದೇವಾಲಯವನ್ನು ನೋಡಬಹುದು.
ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶ: ವೆಂಕಟೇಶ್ವರ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಭಕ್ತರು ತಮ್ಮ ಕೂದಲನ್ನು ದಾನ ಮಾಡುತ್ತಾರೆ. ಪ್ರತಿದಿನ ಟನ್‍ಗಳಷ್ಟು ಕೂದಲು ಇಲ್ಲಿ ಸಂಗ್ರಹವಾಗುತ್ತದೆ. ಇಟಾಲಿಯನ್ ವಿಗ್ ತಯಾರಕರು ಮತ್ತು ಚೀನಿಯರು ಈ ಕೂದಲನ್ನು ಮಾರಾಟ ಮಾಡುತ್ತಾರೆ.
ಕಾಲಭೈರವನಾಥ ದೇವಾಲಯ, ವಾರಣಾಸಿ: ಇಲ್ಲಿನ ವಿಶಿಷ್ಟವೆಂದರೆ, ಭಕ್ತರು ದೇವರಿಗೆ ಹೂವುಗಳು, ಸಿಹಿತಿಂಡಿಗಳು ಮದ್ಯವನ್ನು ಅರ್ಪಿಸುತ್ತಾರೆ. ದೇವಸ್ಥಾನಕ್ಕೆ ವೈನ್ ಮತ್ತು ವಿಸ್ಕಿ ಅಥವಾ ಯಾವುದೇ ಮದ್ಯವನ್ನು ಸಮರ್ಪಿಸಬಹುದು. ಅಲ್ಲದೆ, ಇಲ್ಲಿ ಮದ್ಯವನ್ನು ವಿಗ್ರಹಕ್ಕೆ ಸುರಿಯಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ಇದನ್ನು ನೀಡಲಾಗುತ್ತದೆ.
ಕೊಡುಂಗಲ್ಲೂರು ಭಗವತಿ ದೇವಸ್ಥಾನ, ಕೇರಳ: ಈ ದೇವಾಲಯವು ಭದ್ರಕಾಳಿ ದೇವಿಯ ನೆಲೆಯಾಗಿದೆ. ಈ ದೇವಸ್ಥಾನದಲ್ಲಿ ಏಳು ದಿನಗಳ ವಾರ್ಷಿಕ ಉತ್ಸವವನ್ನು ಆಚರಿಸಲಾಗುತ್ತದೆ. ಇದು ಭರಣಿ ಉತ್ಸವ ಎಂದು ಜನಪ್ರಿಯವಾಗಿದೆ. ಕೆಂಪು ವಸ್ತ್ರವನ್ನು ಧರಿಸಿರುವ ಮತ್ತು ಕತ್ತಿಗಳನ್ನು ಹೊತ್ತಿರುವ ಪುರುಷರು ಮತ್ತು ಮಹಿಳೆಯರು ಈ ದೇವಾಲಯವನ್ನು ಸುತ್ತುತ್ತಾರೆ. ತಮ್ಮನ್ನು ತಾವೇ ಹೊಡೆದುಕೊಳ್ಳುತ್ತಾರೆ. ರಕ್ತವು ಅನಿಯಂತ್ರಿತವಾಗಿ ಸುರಿಯುತ್ತದೆ.
ದೇವ್ಜಿ ಮಹಾರಾಜ್ ಮಂದಿರ, ಮಧ್ಯಪ್ರದೇಶ: ಪ್ರೇತಭಾದೆ ನಿವಾರಣೆಗೆ ಹೆಸರುವಾಸಿಯಾಗಿರುವ ದೇವಾಲಯವಿದು. ಪ್ರತಿ ತಿಂಗಳ ಹುಣ್ಣಿಮೆಯ ಸಮಯದಲ್ಲಿ, ಮಧ್ಯಪ್ರದೇಶದ ದೇವ್‌ಜಿ ಮಹಾರಾಜ ಮಂದಿರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ದುಷ್ಟಶಕ್ತಿ ಅಥವಾ ಪ್ರೇತ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.
ದೇವರಗಟ್ಟು ದೇವಸ್ಥಾನ, ಆಂಧ್ರಪ್ರದೇಶ: ಇದು ಕೂಡ ಅತ್ಯಂತ ರಹಸ್ಯ ದೇವಸ್ಥಾನಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದಸರಾದಂದು ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರುತ್ತಾರೆ. ಸುಮಾರು 100 ವರ್ಷಗಳಷ್ಟು ಹಳೆಯದಾದ ಆಚರಣೆಯನ್ನು ಇಲ್ಲಿ ಆಚರಿಸಲಾಗುತ್ತದೆ.
ಜಗನ್ನಾಥ ದೇವಾಲಯ, ಒಡಿಶಾ: ಜಗನ್ನಾಥ ದೇವಾಲಯವು ಒಡಿಶಾದ ಪುರಿಯಲ್ಲಿರುವ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯವು ರಥಯಾತ್ರೆಗೆ ಪ್ರಸಿದ್ಧವಾಗಿದೆ. ಮೇಲ್ಭಾಗದಲ್ಲಿ ಇರಿಸಲಾದ ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ. ಎಲ್ಲಾ ಅರ್ಚಕರು ಯಾವುದೇ ತೊಂದರೆಯಿಲ್ಲದೆ ಪ್ರತಿದಿನ ಧ್ವಜವನ್ನು ಬದಲಾಯಿಸಲು ಸುಮಾರು 20 ಅಡಿ ಎತ್ತರವನ್ನು ಏರುತ್ತಾರೆ. ಒಂದು ದಿನ ಈ ಆಚರಣೆಯನ್ನು ಮಾಡಲಿಲ್ಲ ಎಂದಾದರೆ,ಸುಮಾರು 18 ವರ್ಷಗಳ ಕಾಲ ದೇವಾಲಯವು ಮುಚ್ಚಲ್ಪಡುತ್ತದೆ.
ನಿಧಿವನ್ ದೇವಸ್ಥಾನ, ಉತ್ತರ ಪ್ರದೇಶ: ಶ್ರೀಕೃಷ್ಣನ ದೇವಾಲಯವಾಗಿರುವ ಇದು ಬಹಳ ಸುಂದರವಾಗಿದ್ದು, ನಿಬ್ಬೆರಗಾಗಿಸುತ್ತದೆ. ಇಲ್ಲಿನ ವಿಚಿತ್ರ ಮರಗಳು ಬಹಳ ನೋಡಲು ಆಕರ್ಷಣೀಯವಾಗಿದೆ. ಮರಗಳು ತುಂಬಾ ಎತ್ತರವಾಗಿಲ್ಲ, ಈ ಮರಗಳ ಬೇರುಗಳು ಮತ್ತು ಕಾಂಡಗಳು ಟೊಳ್ಳಾಗಿರುತ್ತವೆ. ಇದು ತುಂಬಾ ವಿಚಿತ್ರವಾಗಿ. ಹಗಲಿನಲ್ಲಿ ಸಂಪೂರ್ಣವಾಗಿ ಮಂಗಗಳಿಂದ ತುಂಬಿರುತ್ತದೆ. ಸಂಜೆಯ ವೇಳೆಗೆ ಮಂಗಗಳು ಜಾಗ ಖಾಲಿ ಮಾಡುತ್ತವೆ ಎಂದು ಹೇಳಲಾಗಿದೆ.
ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ: ಇದು ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿದೆ. ಇಲ್ಲಿ ನಿಗೂಢ ಸುರಂಗಗಳು, ಕೋಣೆಗಳಿವೆ. ಒಮ್ಮೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇದನ್ನು ತೆರೆಯಲಾಯಿತು. 7 ರಲ್ಲಿ ಸುಮಾರು ಆರು ಕೋಣೆಗಳನ್ನು ತೆರೆಯಲಾಯಿತು. ಆದರೆ ಏಳನೇ ಕೋಣೆಯನ್ನು ಮಾತ್ರ ತೆರೆಯಲಾಗಿಲ್ಲ. ಇದೊಂದು ರಹಸ್ಯ ಕೊಠಡಿಯಾಗಿ ಉಳಿದಿದ್ದು, ಇದರಲ್ಲಿ ನಿಧಿಗಳಿವೆ ಎಂದು ನಂಬಲಾಗಿದೆ. ಈ ನಿಧಿಯನ್ನು ಸರ್ಪಗಳು ಕಾಯುತ್ತವೆ ಎಂದು ನಂಬಲಾಗಿದೆ. ಬಾಗಿಲು ತೆರೆದರೆ, ಅದು ಅನಾಹುತಕ್ಕೆ ಕಾರಣವಾಗಬಹುದು ಎಂದು ಕೂಡ ನಂಬಲಾಗಿದೆ.
ಮೀನಾಕ್ಷಿ ಅಮ್ಮನ್ ದೇವಸ್ಥಾನ, ಮಧುರೈ, ತಮಿಳುನಾಡು: ಪೌರಾಣಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ, ಮೀನಾಕ್ಷಿ ಅಮ್ಮನ್ ದೇವಾಲಯವು ಭಾರತದ ಅತ್ಯಂತ ನಿಗೂಢ ದೇವಾಲಯಗಳಲ್ಲಿ ಒಂದಾಗಿದೆ. ಮೀನಾಕ್ಷಿ ದೇವಿಯನ್ನು ಮದುವೆಯಾಗಲು ಶಿವನು ಸುಂದರೇಶ್ವರನಾಗಿ ಬದಲಾದ ಸ್ಥಳ ಇದು ಎಂದು ನಂಬಲಾಗಿದೆ. ನಗುಮುಖದಿಂದ ಶಿವನನ್ನು ಕಾಣುವ ಭಾರತದ ಏಕೈಕ ಸ್ಥಳ ಇದಾಗಿದೆ. ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ಮೀನಾಕ್ಷಿ ಅಮ್ಮನ್ ದೇವಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ.