ಭಗವದ್ಗೀತೆ: ನೀವು ಹೀಗೆ ಮಾಡಿದರೆ ನಿಮ್ಮನ್ನು ಪಾಪಗಳಿಂದ ಮುಕ್ತರನ್ನಾಗಿ ಮಾಡುತ್ತೇನೆ; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ
Sep 26, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಬೇರೆ ಬೇರೆ ಧರ್ಮಗಳನ್ನು ಪರಿತ್ಯಜಿಸು, ಕೇವಲ ನನಗೆ ಶರಣಾಗತನಾಗು. ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ, ಹೆದರಬೇಡ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ಗೀತೆಯಲ್ಲಿನ ಈ ಮಾತಿನ ಅರ್ಥವನ್ನು ತಿಳಿಯಿರಿ.
ಭಗವಂತನು ಮುಂದುವರಿದು ಹೇಳುತ್ತಾನೆ - (ಗೀತಾ 9.32-33)
ತಾಜಾ ಫೋಟೊಗಳು
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೋಪಿ ಸ್ಯುಃ ಪಾಪಯೋನಯಃ |
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾನ್ತಿ ಪರಾಂ ಗತಿಮ್ ||
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ |
ಅನಿತ್ಯಮಸುಖಂ ಲೋಕಮ್ ಇಮಂ ಪ್ರಾಪ್ಯ ಭಜಸ್ವ ಮಾಮ್ ||
ವರ್ತಕನಾಗಲಿ, ಪತಿತ ಸ್ರೀಯಾಗಲಿ, ಅಥವಾ ಶ್ರಮಜೀವಿಯಾಗಲಿ, ಇಲ್ಲವೇ ಬದುಕಿನ ಅತ್ಯಂತ ಕೆಳಸ್ತರದ ಮನುಷ್ಯರಾಗಲಿ ಪರಾತ್ಪರವನ್ನು ಸೇರಲು ಸಾಧ್ಯ ಎಂದು ಭಗವಂತನು ಹೇಳುತ್ತಾನೆ. ಇದಕ್ಕೆ ಮಹಾಬುದ್ಧಿಯ ಅಗತ್ಯವಿಲ್ಲ. ಭಕ್ತಿಯೋಗದ ತತ್ವವನ್ನು ಒಪ್ಪಿಕೊಂಡು ಭಗವಂತನನ್ನೇ ಬದುಕಿನ ಪರಮ ಶ್ರೇಯಸ್ಸು, ಪರಮ ಗುರಿ ಎಂದು ಸ್ವೀಕರಿಸುವ ಯಾರೇ ಆಗಲಿ ಆಧ್ಯಾತ್ಮಿಕ ವ್ಯೋಮದಲ್ಲಿ ಭಗವಂತನ ಬಳಿಸಾರಬಹುದು. ಭಗವದ್ಗೀತೆಯಲ್ಲಿ ಹೇಳಿರುವ ತತ್ವಗಳನ್ನು ಅನುಷ್ಥಾನಕ್ಕೆ ತರುವ ಮನುಷ್ಯನು ತನ್ನ ಬದುಕನ್ನು ಪರಿಪೂರ್ಣ ಮಾಡಿಕೊಳ್ಳಬಹುದು ಮತ್ತು ಬದುಕಿನ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪಡೆಯಬಹುದು. ಇದೇ ಇಡೀ ಭಗವದ್ಗೀತೆಯ ಸಾರ ಸರ್ವಸ್ವ.
ಕಡೆಯಲ್ಲಿ ಹೇಳಬೇಕಾದ ಮಾತೆಂದರೆ ಭಗವದ್ಗೀತೆಯು ಅತ್ಯಂತ ಎಚ್ಚರಿಕೆಯಿಂದ ಓದಬೇಕಾದ ಆಧ್ಯಾತ್ಮಿಕ ಕೃತಿ. ಗೀತಾ ಶಾಸ್ತ್ರಮಿದಂ ಪುಣ್ಯಂ ಯಃ ಪಠೇತ್ ಪ್ರಯತಃ ಪುಮಾನ್. ಭಗವದ್ಗೀತೆಯ ಉಪದೇಶವನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರೆ ಮನುಷ್ಯನು ಬದುಕಿನ ಎಲ್ಲ ದುಃಖಗಳಿಂದ ಮತ್ತು ಆತಂಕಗಳಿಂದ ಮುಕ್ತನಾಗಬಹುದು. ಭಯಶೋಕಾದಿವರ್ಜಿತಃ ಎಂದರೆ ವ್ಯಕ್ತಿಯು ಈ ಬದುಕಿನಲ್ಲಿ ಎಲ್ಲ ಭಯಗಳಿಂದ ಬಿಡುಗಡೆ ಹೊಂದಬಹುದು ಮತ್ತು ಅಂತಹವನ ಮುಂದಿನ ಬದುಕು ಆಧ್ಯಾತ್ಮಿಕ ಬದುಕಾಗುತ್ತದೆ. (ಗೀತಾ ಮಹಾತ್ಮ್ಯ 1)
ಇದರಿಂದ ಇನ್ನೂ ಫಲಿವಿದೆ -
ಗೀತಾಧ್ಯಾಯನಶೀಲಸ್ಯ ಪ್ರಾಣಾಯಾಮಪರಸ್ಯ ಚ |
ನೈವ ಸನ್ತಿ ಹಿ ಪಾಪಾನಿ ಪೂರ್ಜಜನ್ಮಕೃತಾನಿ ಚ ||
"ಭಗವದ್ಗೀತೆಯನ್ನು ಶ್ರದ್ಧೆಯಿಂದ, ಅತ್ಯಂತ ಪ್ರಮಾಣಿಕತೆಯಿಂದ ಅಧ್ಯಯನ ಮಾಡಿದರೆ ಭಗವಂತನ ಕೃಪೆಯಿಂದ ಅಂತಹ ಮನುಷ್ಯನ ಹಿಂದಿನ ಪಾಪಕರ್ಮಗಳು ಅವನ ಮೇಲೆ ಪರಿಣಾಮ ಮಾಡಲಾರವು" (ಗೀತಾಮಹಾತ್ಮ್ಯ 2). ಭಗವದ್ಗೀತೆಯ ಕಡೆಯ ಭಾಗದಲ್ಲಿ ಭಗವಂತನು (18.66) ಉಚ್ಚಸ್ವರಪದಲ್ಲಿ ಹೀಗೆ ಹೇಳುತ್ತಾನೆ.
ಸರ್ವಧರ್ಮಾನ್ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ |
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
“ಬೇರೆ ಬೇರೆ ಧರ್ಮಗಳನ್ನು ಪರಿತ್ಯಜಿಸು, ಕೇವಲ ನನಗೆ ಶರಣಾಗತನಾಗು. ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ, ಹೆದರಬೇಡ”. ಹೀಗೆ ಭಗವಂತನು ತನಗೆ ಶರಣಾಗತನಾದವನ ವಿಷಯದಲ್ಲಿ ಎಲ್ಲ ಹೊಣೆಯನ್ನೂ ವಹಿಸಿಕೊಳ್ಳುತ್ತಾನೆ ಮತ್ತು ಅಂತಹ ಮನುಷ್ಯನಿಗೆ ಎಲ್ಲ ಪಾಪಕರ್ಮಗಳ ಫಲದಿಂದ ರಕ್ಷಣೆಯನ್ನು ಕೊಡುತ್ತಾನೆ.
ಮಲಿನೇ ಮೋಚನಂ ಪುಂಸಾಂ ಜಲಸ್ನಾನಂ ದಿನೇ ದನಿನೇ |
ಸಕೃದ್ಗೀತಾಮೃತಸ್ನಾನಂ ಸಂಸಾರಮಲನಾಶನಮ್ ||
“ಒಬ್ಬ ಮನುಷ್ಯನು ಪ್ರತಿನಿತ್ಯವೂ ನೀರಿನಲ್ಲಿ ಸ್ನಾನಮಾಡಿ ತನ್ನನ್ನು ಶುದ್ಧಿಗೊಳಿಸಿಕೊಳ್ಳಬಹುದು. ಆದರೆ ಭಗವದ್ಗೀತೆಯನ್ನು ಪವಿತ್ರ ಗಂಗಾಜಲದಲ್ಲಿ ಒಮ್ಮೆ ಯಾದರೂ ಸ್ನಾನಮಾಡಿದರೆ ಅಂತಹವನ ಐಹಿಕ ಜೀವನದ ಕೊಳೆಯೆಲ್ಲ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ”. (ಗೀತಾಮಹಾತ್ಮ್ಯ 3)
ಭಗವದ್ಗೀತೆಯನ್ನು ದೇವೋತ್ತಮ ಪರಮ ಪುರುಷನೇ ಹೇಳಿರುವುದರಿಂದ ಬೇರೆ ಯಾವುದೇ ವೈದಿಕೆ ರಚನೆಯನ್ನು ಓದುವ ಅಗತ್ಯವಿಲ್ಲ. ಗಮನವಿಟ್ಟು ಸದಾ ಭಗವದ್ಗೀತೆಯನ್ನು ಕೇಳಿದರೆ ಮತ್ತು ಓದಿದರೆ ಸಾಕು. ಇಂದಿನ ಯುಗದಲ್ಲಿ ಜನರು ಪ್ರಾಪಂಚಿಕ ಚಟುವಟಿಕೆಗಳಲ್ಲಿ ಎಷ್ಟರ ಮಟ್ಟಿಗೆ ತಲ್ಲೀನರಾಗಿದ್ದಾರೆ ಎಂದರೆ ಅವರಿಗೆ ಎಲ್ಲ ವೈದಿಕ ಸಾಹಿತ್ಯವನ್ನು ಓದುವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಅಗತ್ಯವಿಲ್ಲ. ಈ ಒಂದು ಕೃತಿ, ಭಗವದ್ಗೀತೆ, ಸಾಕು; ಏಕೆಂದರೆ ಅದು ಎಲ್ಲ ವೈದಿಕ ಸಾಹಿತ್ಯದ ಸಾರ; ವಿಶೇಷವಾದ ಕಾರಣವೆಂದರೆ ಅದನ್ನು ದೇವೋತ್ತಮ ಪರಮ ಪುರುಷನೇ ಹೇಳಿದ್ದಾನೆ (ಗೀತಾಮಹಾತ್ಮ್ಯ 4). ಕೃಪೆ-ಭಗವದ್ಗೀತಾ ಯಥಾರೂಪ.