ಭಗವದ್ಗೀತೆ: ಈ 4 ವಿಭಾಗಗಳನ್ನು ಸೃಷ್ಟಿಸಿದರೂ ಶ್ರೀಕೃಷ್ಟ ಇವುಗಳಲ್ಲಿ ಯಾವ ವಿಭಾಗಕ್ಕೂ ಸೇರಿದವನಲ್ಲ; ಗೀತೆಯ ಅರ್ಥ ಹೀಗಿದೆ
Jan 07, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಈ 4 ವಿಭಾಗ ಸೃಷ್ಟಿಸಿದರೂ ಶ್ರೀಕೃಷ್ಟ ಇವುಗಳಲ್ಲಿ ಯಾವ ವಿಭಾಗಕ್ಕೂ ಸೇರಿದವನಲ್ಲ ಎಂಬುದರ ಅರ್ಥ ತಿಳಿಯಿರಿ.
ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||13||
ಐಹಿಕ ನಿಸರ್ಗದ ಗುಣತ್ರಯಗಳಿಗೆ ಅನುಗುಣವಾಗಿ ಮತ್ತು ಅವುಗಳ ಕರ್ಮಗಳಿಗೆ ಅನುಸಾರವಾಗಿ ಮನುಷ್ಯ ಸಮಾಜದ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದೆ. ಈ ವ್ಯವಸ್ಥೆಯನ್ನು ನಾನು ಸೃಷ್ಟಿಸಿದ್ದರೂ ನಾನು ಬದಲಾವಣೆಯಿಲ್ಲದವನು, ಅವ್ಯಯನು. ಆದುದರಿಂದ ನಾನು ಕರ್ತಾರನಲ್ಲ ಎಂದು ತಿಳಿ.
ತಾಜಾ ಫೋಟೊಗಳು
ಎಲ್ಲವನ್ನೂ ಸೃಷ್ಟಿಸಿದವನು ಭಗವಂತ. ಎಲ್ಲವೂ ಅವನಿಂದ ಜನಿಸಿದ್ದು, ಅವನೇ ಎಲ್ಲಕ್ಕೂ ಆಧಾರ, ಮತ್ತು ಪ್ರಳಯದನಂತರ ಎಲ್ಲವೂ ಅವನ್ನಲ್ಲೇ ಉಳಿಯುತ್ತದೆ. ಆದುದರಿಂದ ಸಾಮಾಜಿಕ ವ್ಯವಸ್ಥೆಯ ನಾಲ್ಕು ವಿಭಾಗಗಳನ್ನು ಸೃಷ್ಟಿಸಿದವನು ಅವನೇ. ಬುದ್ಧಿಶಾಲಿಗಳ ವರ್ಗವಾದ ಮೊದಲ ವಿಭಾಗವನ್ನು ಪಾರಿಭಾಷಿಕವಾಗಿ ಬ್ರಾಹ್ಮಣರು ಎಂದು ಕರೆಯಲಾಗಿದೆ. ಇವರು ಸಾತ್ವಿಕ ಗುಣದವರಾದುದರಿಂದ ಈ ಹೆಸರು. ಅವರ ನಂತರದ ವಿಭಾಗದವರು ಆಡಳಿತಗಾರರು. ಇವರಿಗೆ ಪಾರಿಭಾಷಿಕವಾಗಿ ಕ್ಷತ್ರಿಯವರು ಎಂದು ಹೆಸರು. ಇವರು ರಜೋಗುಣದವರು. ವೈಶ್ಯರು ಎಂದು ಕರೆಯುವ ವರ್ಕರಲ್ಲಿ ರಜೋಗುಣ, ತಮೋಗುಣಗಳು ಬೆರೆತಿರುತ್ತವೆ.
ಶೂದ್ರು ಅಥವಾ ಕಾರ್ಮಿಕ ವರ್ಗದವರು ಐಹಿಕ ನಿಸರ್ಗದ ತಮೋಗುಣದವರು. ಮನುಷ್ಯ ಸಮಾಜದಲ್ಲಿ ಈ ನಾಲ್ಕು ವಿಭಾಗಗಳನ್ನು ಸೃಷ್ಟಿಸಿದರೂ ಶ್ರೀಕೃಷ್ಟನು ಇವುಗಳಲ್ಲಿ ಯಾವ ವಿಭಾಗಕ್ಕೂ ಸೇರಿದವನಲ್ಲ. ಏಕೆಂದರೆ ಮನುಷ್ಯರು ಸಮಾಜದಲ್ಲಿ ಬದ್ಧಜೀವಿಗಳ ಒಂದು ಭಾಗವಾಗಿದ್ದಾರೆ. ಆದರೆ ಕೃಷ್ಣನು ಬದ್ಧಜೀವಿಯಲ್ಲ. ಮನುಷ್ಯ ಸಮಾಜವು ಬೇರೆ ಯಾವುದೇ ಪ್ರಾಣಿ ಸಮಾಜದಂತೆಯೇ ಇದೆ. ಆದರೆ ಮನುಷ್ಯನನ್ನು ಪ್ರಾಣಿಗಳ ಅಂತಸ್ತಿನಿಂದ ಮೇಲಕ್ಕೆತ್ತಲು, ಕೃಷ್ಣಪ್ರಜ್ಞೆಯ ವ್ಯವಸ್ಥಿತ ಬೆಳವಣಿಗೆಗಾಗಿ ಭಗವಂತನು ಮೇಲೆ ಹೇಳಿದ ವಿಭಾಗಗಳನ್ನು ಸೃಷ್ಟಿಸಿದ. ಯಾವುದೇ ಮನುಷ್ಯನಿಗೆ ಕರ್ಮದ ವಿಷಯದಲ್ಲಿ ಇರುವ ಪ್ರವೃತ್ತಿಯು ಅವನು ಗಳಿಸಿಕೊಂಡ ಐಹಿಕ ಪ್ರಕೃತಿಯ ಗುಣಗಳನ್ನು ಅವಲಂಭಿಸುತ್ತದೆ.
ಐಹಿಕ ಪ್ರಕೃತಿಯ ಬೇರೆಬೇರೆ ಗುಣಗಳಿಗೆ ಅನುಸಾರವಾಗಿ ಬದುಕಿನ ಲಕ್ಷಣಗಳನ್ನು ಈ ಗ್ರಂಥದ ಹದಿನೆಂಟನೆಯ ಅಧ್ಯಾಯದಲ್ಲಿ ವರ್ಣಿಸಿದೆ. ಆದರೆ ಕೃಷ್ಣಪ್ರಜ್ಞೆಯಲ್ಲಿರುವವನು ಬ್ರಾಹ್ಮಣರಿಗಿಂತ ಉತ್ತಮನು. ಗುಣಕ್ಕೆ ಅನುಸಾರವಾಗಿ ಬ್ರಾಹ್ಮಣರಿಗೆ ಪರಮ ಸತ್ಯವಾದ ಬ್ರಹ್ಮನ ಅರಿವಿರುತ್ತದೆ ಎಂದು ನಿರೀಕ್ಷಿಸಬಹುದು. ಆದರೆ ಅವರಲ್ಲಿ ಬಹುಮಂದಿ ಶ್ರೀಕೃಷ್ಣನ ನಿರಾಕಾರ ಬ್ರಹ್ಮಲಕ್ಷಣದ ಬಳಿಗೇ ಹೋಗುತ್ತಾರೆ. ಬ್ರಾಹ್ಮಣನ ಮಿತವಾದ ಜ್ಞಾನವನ್ನು ಮೀರಿ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನನ್ನು ತಿಳಿದುಕೊಂಡವನು ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯ, ಅಥವಾ ವೈಷ್ಣವ ಆಗುತ್ತಾನೆ.
ಕೃಷ್ಣಪ್ರಜ್ಞೆಯು ರಾಮ, ನರಸಿಂಹ, ವರಾಹ ಮೊದಲಾದ ಕೃಷ್ಣನ ಎಲ್ಲ ಸ್ವಾಂಶ ವಿಸ್ತರಣೆಗಳನ್ನೂ ಒಳಗೊಳ್ಳುತ್ತದೆ. ಮಾನವ ಸಮಾಜದ ಈ ನಾಲ್ಕು ವಿಭಾಗಗಳ ವ್ಯವಸ್ಥೆಗೆ ಕೃಷ್ಣನು ಅತೀತನಾದದ್ದರಿಂದ ಕೃಷ್ಣಪ್ರಜ್ಞೆ ಇರುವ ಮನುಷ್ಯನು ಮಾನವ ಸಮಾಜದ ಎಲ್ಲ ವಿಭಜನೆಗಳಿಗೆ - ಸಮುದಾಯ, ರಾಷ್ಟ್ರ, ಜೀವಿವರ್ಗ ಯಾವುದನ್ನೇ ಪರಿಗಣಿಸಿದರೂ - ಅತೀತನು.