ಭಗವದ್ಗೀತೆ: ಆಧ್ಯಾತ್ಮಿಕ ಮತ್ತು ದೇವಸಮ್ಮತ ಬದುಕಿನ ರೀತಿ ಹೇಗಿರುತ್ತದೆ; ಮನುಷ್ಯನ ಜೀವನ ಕುರಿತ ಗೀತೆಯಲ್ಲಿನ ಅರ್ಥ ಹೀಗಿದೆ
Nov 30, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ |
ಸ್ಥಿತ್ವಾಸ್ಯಾಮನ್ತ ಕಾಲೇಪಿ ಬ್ರಹ್ಮನಿರ್ವಾಣಮೃಚ್ಛಿತಿ ||72||
ಇದು ಆಧ್ಯಾತ್ಮಿಕ ಮತ್ತು ದೇವಸಮ್ಮತ ಬದುಕಿನ ರೀತಿ. ಇದನ್ನು ಸಾಧಿಸಿದ ಅನಂತರ ಮನುಷ್ಯನು ಭ್ರಮೆಗೆ ಒಳಗಾಗುವುದಿಲ್ಲ. ಸಾವಿನ ಗಳಿಗೆಯಲ್ಲೂ ಮನುಷ್ಯನು ಈ ಸ್ಥಿತಿಯಲ್ಲಿದ್ದರೆ ಭಗವದ್ಧಾಮವನ್ನು ಪ್ರವೇಶಿಸುತ್ತಾನೆ.
ತಾಜಾ ಫೋಟೊಗಳು
ಮನುಷ್ಯನು ಕೃಷ್ಣಪ್ರಜ್ಞೆಯನ್ನು ಅಥವಾ ದೈವೀ ಬದುಕನ್ನು ಕೂಡಲೇ ಒಂದೇ ಕ್ಷಣದಲ್ಲಿ ಪಡೆಯಬಹುದು ಅಥವಾ ಲಕ್ಷಾಂತರ ಜನ್ಮಗಳ ಅನಂತರವೂ ಇಂತಹ ಜೀವಾವಸ್ಥೆಯನ್ನು ಮುಟ್ಟದೆ ಹೋಗಬಹುದು. ಇದು ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳುವುದನ್ನು ಅವಲಂಬಿಸಿದೆ. ಖಟ್ವಾಂಗ ಮಹಾರಾಜನು ಸಾಯುವುದಕ್ಕೆ ಕೆಲವೇ ನಿಮಿಷಗಳ ಮೊದಲು ಕೃಷ್ಣನಿಗೆ ಶರಣಾಗತನಾಗಿ ಈ ಸ್ಥಿತಿಯನ್ನು ಸಾಧಿಸಿದನು.
ಐಹಿಕ ಬದುಕಿನಾಚೆ ಇನ್ನೊಂದು ಬದುಕಿದೆ
ನಿರ್ವಾಣ ಎಂದರೆ ಐಹಿಕ ಬದುಕಿನ ಪ್ರಕ್ರಿಯೆಯನ್ನು ಕೊನೆಗಾಣಿಸುವುದು. ಬೌದ್ಧಸಿದ್ಧಾಂತದ ಪ್ರಕಾರ ಐಹಿಕ ಬದುಕು ಮುಗಿದ ಅನಂತರ ಶೂನ್ಯ ಮಾತ್ರವೇ ಇರುತ್ತದೆ. ಆದರೆ ಭಗವದ್ಗೀತೆಯ ಉಪದೇಶ ಭಿನ್ನವಾಗಿದೆ. ಈ ಐಹಿಕ ಬದುಕು ಕೊನೆಗೂಂಡ ಮೇಲೆ ವಾಸ್ತವ ಬದುಕು ಪ್ರಾರಂಭವಾಗುತ್ತದೆ. ಜಡ ಐಹಿಕವಾದಿಗೆ ಈ ಬದುಕಿನ ಐಹಿಕ ರೀತಿಯನ್ನು ಕೊನೆಗಾಣಿಸಬೇಕು ಎಂದು ತಿಳಿದರೆ ಸಾಕು. ಆದರೆ ಆಧ್ಯಾತ್ಮಿಕವಾಗಿ ಮುಂದುವರಿದವರಿದವರಿಗೆ ಈ ಐಹಿಕ ಬದುಕಿನಾಚೆ ಇನ್ನೊಂದು ಬದುಕಿದೆ.
ಈ ಬದುಕನ್ನು ಕೊನೆಗಾಣಿಸುವ ಮೊದಲು ಮನುಷ್ಯನು ಕೃಷ್ಣಪ್ರಜ್ಞೆಯನ್ನು ಪಡೆಯುವಷ್ಟು ಭಾಗ್ಯಶಾಲಿಯಾದರೆ ಆತನು ಕೂಡಲೇ ಬ್ರಹ್ಮನಿರ್ವಾಣದ ಹಂತವನ್ನು ಪಡೆಯುತ್ತಾನೆ. ಭಗವಂತನ ರಾಜ್ಯಕ್ಕೂ, ಭಗವಂತನ ಭಕ್ತಿಪೂರ್ವಕ ಸೇವೆಗೂ ವ್ಯತ್ಯಾಸವಿಲ್ಲ. ಅವೆರಡೂ ಪರಾತ್ಪರ ನೆಲೆಯಲ್ಲಿರುವುದರಿಂದ ಭಗವಂತನ ಪ್ರೇಮಪೂರ್ವಕ ಆಧ್ಯಾತ್ಮಿಕ ಸೇವೆಯಲ್ಲಿ ನಿರತನಾಗಿರುವುದೆಂದರೆ ಆಧ್ಯಾತ್ಮಿಕ ರಾಜ್ಯವನ್ನು ಸಾಧಿಸಿದಂತೆ.
ಆಧ್ಯಾತ್ಮಿಕ ಜಗತ್ತಿನಲ್ಲಿ ಏನು ಇರುತ್ತದೆ?
ಐಹಿಕ ಜಗತ್ತಿನಲ್ಲಿ ಇಂದ್ರಿಯ ತೃಪ್ತಿಯ ಚಟುವಟಿಕೆಗಳಿರುತ್ತವೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಕೃಷ್ಣಪ್ರಜ್ಞೆಯ ಚಟುವಟಿಕೆಗಳಿರುತ್ತವೆ. ಈ ಬದುಕಿನಲ್ಲೇ ಕೃಷ್ಣಪ್ರಜ್ಞೆಯನ್ನು ಸಾಧಿಸುವುದೆಂದರೆ ಬ್ರಹ್ಮನ್ನನ್ನು ಕೂಡಲೇ ಸಾಧಿಸಿದಂತೆ. ಕೃಷ್ಣಪ್ರಜ್ಞೆಯಲ್ಲಿ ಸ್ಥಿರವಾಗಿರುವವನು ಆಗಲೇ ಭಗವಂತನ ರಾಜ್ಯವನ್ನು ಪ್ರವೇಶಿಸಿರುತ್ತಾನೆ.
ಬ್ರಹ್ಮನ್ ಎಂದರೆ ಜಡಕ್ಕೆ ವಿರುದ್ಧವಾದದ್ದು. ಆದುದರಿಂದ ಬ್ರಾಹ್ಮೀಸ್ಥಿತಿ ಎಂದರೆ ಐಹಿಕ ಚಟುವಟಿಕೆಗಳ ನೆಲೆಯಲ್ಲಿ ಇಲ್ಲದಿರುವುದು. ಭಗವದ್ಗೀತೆಯು ಭಗವಂತನ ಭಕ್ತಿಪೂರ್ವಕ ಸೇವೆಯನ್ನು ಮುಕ್ತಿಪಡೆದ ಸ್ಥಿತಿ ಎಂದು ಪರಿಗಣಿಸುತ್ತದೆ. (ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮ ಭೂಯಾಯ ಕಲ್ಪತೇ) ಆದುದರಿಂದ ಐಹಿಕ ಬಂಧನದಿಂದ ಬಿಡುಗಡೆಯೇ ಬ್ರಾಹ್ಮೀಸ್ಥಿತಿ.
ಭಗವದ್ಗೀತೆಯ ವಸ್ತುಗಳು ಯಾವುವು?
ಶ್ರೀಲ ಭಕ್ತಿವಿನೋದ ಠಾಕೂರರು ಭಗವದ್ಗೀತೆಯ ಎರಡನೆಯ ಅಧ್ಯಾಯವು ಇಡೀ ಗ್ರಂಥದಲ್ಲಿರುವುದೆನ್ನೆಲ್ಲ ಹೇಳುತ್ತದೆ ಎಂದು ಸಂಕ್ಷೇಪವಾಗಿ ಹೇಳಿದ್ದಾರೆ. ಭಗವದ್ಗೀತೆಯ ವಸ್ತುಗಳು ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗ. ಎರಡನೆಯ ಅಧ್ಯಾಯದಲ್ಲಿ ಇಡೀ ಗ್ರಂಥದ ತಿರುಳಾಗಿ ಕರ್ಮಯೋಗ ಮತ್ತು ಜ್ಞಾನಯೋಗಗಳನ್ನು ಸ್ಪಷ್ಟವಾಗಿ ಚರ್ಚಿಸಿದೆ ಮತ್ತು ಭಕ್ತಿಯೋಗದ ಕ್ಷಣನೋಟವನ್ನು ನೀಡಿದೆ. ಇಲ್ಲಿಗೆಶ್ರೀಮದ್ಭಗವದ್ಗೀತೆಯ ಗೀತಾಸಾರ ಸಂಗ್ರಹ ಎಂಬ ಎರಡನೇ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.