Tirumala Brahmotsavam 2024: ತಿರುಪತಿ ತಿರುಮಲದಲ್ಲಿ ಅಕ್ಟೋಬರ್ 12ರವರೆಗೆ ಬ್ರಹ್ಮೋತ್ಸವ ಸಡಗರ, ಲಕ್ಷಾಂತರ ಭಕ್ತರ ಸಮಾಗಮ
Oct 10, 2024 10:03 AM IST
ತಿರುಪತಿ ತಿರುಮಲದಲ್ಲಿ ಈಗ ಬ್ರಹ್ಮೋತ್ಸವ ಸಡಗರ,ನಿತ್ಯ ಪೂಜೆ, ಮೆರಣಿಗೆಯ ವೈಭವ.
- Tirumala Brahmotsavam 2024 ತಿರುಪತಿ ತಿರುಮಲದಲ್ಲಿ ಒಂದು ವಾರದಿಂದ ಬ್ರಹ್ಮೋತ್ಸವದ ಧಾರ್ಮಿಕ ಚಟುವಟಿಕೆಗಳು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿವೆ. ಇನ್ನೂ ಮೂರು ದಿನ ಕಾರ್ಯಕ್ರಮಗಳು ಇರಲಿವೆ. ಈ ವರ್ಷದ ಉತ್ಸವ ಹೇಗಿದೆ. ಇಲ್ಲಿದೆ ವಿವರ.
ತಿರುಪತಿ: ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಹಾಗೂ ಅತ್ಯಂತ ಶ್ರೀಮಂತ ದೇವರು ಎಂದೆ ಹೆಸರುವಾಸಿಯಾಗಿರುವ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರನ ಬ್ರಹ್ಮೋತ್ಸವದ ಸಡಗರ, ಭಕ್ತರ ಸಮಾಗಮ. ಏಳು ದಿನಗಳಿಂದ 2024ನೇ ಸಾಲಿನ ಬ್ರಹ್ಮೋತ್ಸವದ ಭಾಗವಾಗಿ ನಡೆದಿರುವ ನಾನಾ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ. ಗುರುವಾರವೂ ನಾನಾ ಉತ್ಸವಗಳು ಬೆಳಿಗ್ಗೆಯಿಂದಲೇ ಶುರುವಾದವು. ಕರ್ನಾಟಕ ಸೇರಿದಂತೆ ಹಲವು ಭಾಗಗಳಿಂದ ಬ್ರಹ್ಮೋತ್ಸವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತ ಗಣ ತಿರುಪತಿಯಲ್ಲಿ ಬೀಡು ಬಿಟ್ಟಿದೆ.
ತಾಜಾ ಫೋಟೊಗಳು
ಬ್ರಹ್ಮೋತ್ಸವವು ಪ್ರತಿ ವರ್ಷ ಪ್ರಸಿದ್ಧ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಉತ್ಸಾಹದಿಂದ ಆಚರಿಸಲಾಗುವ ಒಂಬತ್ತು ದಿನಗಳ ಭವ್ಯ ಉತ್ಸವ. ಈ ಉತ್ಸವವನ್ನುಬ್ರಹ್ಮನ ಹಿನ್ನೆಲೆಯನ್ನು ಹೊಂದಿದೆ. ತಿರುಪತಿ ದೇವಸ್ಥಾನದಲ್ಲಿ ಬ್ರಹ್ಮನೇ ಬ್ರಹ್ಮೋತ್ಸವ ಆರಂಭಿಸಿದ ಎನ್ನುವ ನಂಬಿಕೆಯಿದೆ. ಇದರಿಂದ ಬ್ರಹ್ಮೋತ್ಸವಂ ಅಥವಾ ಬ್ರಹ್ಮನ ಉತ್ಸವ ಎಂದು ಕರೆಯಲಾಗುತ್ತದೆ. ತಿರುಮಲದಲ್ಲಿನ ಎಲ್ಲಾ ಹಬ್ಬಗಳಲ್ಲಿ ಇದು ಅತ್ಯಂತ ಪವಿತ್ರ ಹಾಗೂ ಪ್ರಮುಖ ಉತ್ಸವ ಎಂದೇ ಪರಿಗಣಿಸಲಾಗಿದೆ. ಈ ವರ್ಷದ ಬ್ರಹ್ಮೋತ್ಸವವು ಅಕ್ಟೋಬರ್ 4ರಂದು ಆರಂಭಗೊಂಡಿದ್ದು,12ರವರೆಗೆ ಮುಂದುವರಿಯಲಿದೆ. ಈ ವೇಳೆ ದೇವಸ್ಥಾನಕ್ಕೆ ಪ್ರತಿ ನಿತ್ಯ 2 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭೇಟಿ ನೀಡುತ್ತಾರೆ.
ಬ್ರಹ್ಮದೇವನು ಪುಷ್ಕರಿಣಿ ನದಿಯ ಪವಿತ್ರ ದಡದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶ್ರೀ ಬಾಲಾಜಿಯನ್ನು ಪೂಜಿಸಿದ. ಮನುಕುಲದ ದೇವತೆಯ ರಕ್ಷಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಎನ್ನುವ ನಂಬಿಕೆಯಿದೆ. ಈ ಕಾರಣದಿಂದ ವೆಂಕಟೇಶ್ವರ ದೇವರಿಗೆ ಬ್ರಹ್ಮೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈಗಲೂ ಬ್ರಹ್ಮನೇ ಈ ಉತ್ಸವ ಆಚರಿಸುತ್ತಾನೆ ಎನ್ನುವ ನಂಬಿಕೆಯಿದೆ.
ಬ್ರಹ್ಮೋತ್ಸವದ ಎಲ್ಲಾ ದಿನಗಳಲ್ಲಿ ವಿಶೇಷ ಮೆರವಣಿಗೆ, ಪೂಜೆಗಳು ನೆರವೇರಲಿವೆ. ಭಕ್ತರು ಪ್ರತಿದಿನ ಧಾರ್ಮಿಕ ಮೆರವಣಿಗೆಗಳಿಗೆ ಸಾಕ್ಷಿಯಾಗುತ್ತಾರೆ. ಅಲ್ಲಿ ಬಾಲಾಜಿ ಎಂದೂ ಕರೆಯಲ್ಪಡುವ ಶ್ರೀ ವೆಂಕಟೇಶ್ವರನ ವಿಗ್ರಹವನ್ನು ವಿವಿಧ ರಥಗಳಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಪ್ರತಿ ದಿನ ವೆಂಕಟೇಶ್ವರರನ್ನು ವಿವಿಧ ಅಲಂಕಾರದಿಂದ ಆರಾಧಿಸುವುದು ವಿಶೇಷ.
ತಿರುಪತಿ ದೇವಸ್ಥಾನದ ಬ್ರಹ್ಮೋತ್ಸವಂ ಪಾಲ್ಗೊಳ್ಳುವಾಗ ಅಪರಮಿತ ಆನಂದ ಅನುಭವಿಸುತ್ತಾರೆ ಭಕ್ತರು. ಹಲವರಿಗೆ ಇದು ವೈಕುಂಠ ಅನುಭವ ಎಂಬ ಅನುಭವವನ್ನು ನೀಡುತ್ತದೆ. ಒಂಬತ್ತು ದಿನಗಳಲ್ಲಿ ಹಲವಾರು ಆಚರಣೆಗಳನ್ನು ನಡೆಸಿದರೂ ಅವುಗಳಲ್ಲಿ ಅಂಕುರಾರ್ಪಣ ಮುಖ್ಯವಾದದ್ದು. ಉತ್ಸವದ ಆರಂಭದ ಮುನ್ನಾದಿನ ಮಣ್ಣಿನ ಮಡಕೆಗಳಲ್ಲಿ ನವಧಾನ್ಯಗಳನ್ನು ಬಿತ್ತಿ ಅಂಕುರಾಪರ್ಣೆ ಮಾಡಲಾಗುತ್ತದೆ. ಸಮೃದ್ಧಿ, ಫಲವತ್ತತೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.
ಅಕ್ಟೋಬರ್ 10ರ ಗುರುವಾರ ಬೆಳಗ್ಗೆ 8 ರಿಂದ 10ರವರೆಗೆ ಸೂರ್ಯಪ್ರಭ ಸಂಜೆ 7 ರಿಂದ 10 ಚಂದ್ರಪ್ರಭ ಸೇವೆ ಹಾಗೂ ಮೆರವಣಿಗೆ, ಅಕ್ಟೋಬರ್ 11 ಶುಕ್ರವಾರ ಬೆಳಗ್ಗೆ 7 ರಿಂದ ರಥೋತ್ಸವ ಸಂಜೆ 7 ರಿಂದ 9 ಅಶ್ವ ವಾಹನ ಸೇವೆ, ಅಕ್ಟೋಬರ್ 12 ಶನಿವಾರ ಬೆಳಗ್ಗೆ 6 ರಿಂದ 9 ಚಕ್ರ ಸ್ನಾನ ಸಂಜೆ 8.30 ರಿಂದ 10.30 ಧ್ವಜಾರೋಹಣದೊಂದಿಗೆ ಬ್ರಹ್ಮೋತ್ಸವಕ್ಕೆ ತೆರೆ ಬೀಳಲಿದೆ
ಪ್ರತಿ ವರ್ಷದಂತೆ ಈ ಬಾರಿಯೂ ಬ್ರಹ್ಮೋತ್ಸವ ಸಡಗರದಿಂದ ಆರಂಭಗೊಂಡು ಲಕ್ಷಾಂತರ ಭಕ್ತರು ತಿರುಪತಿ ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲವು ಸೇವೆಗಳು, ಅಂಗ ಪ್ರದಕ್ಷಿಣೆ ಹಾಗೂ ವಿಐಪಿ ದರ್ಶನ ವ್ಯವಸ್ಥೆ ರದ್ದುಪಡಿಸಲಾಗಿದೆ. ಈಗಾಗಲೇ ಹೆಚ್ಚುವರಿಯಾಗಿ 7 ಲಕ್ಷ ಲಾಡುಗಳನ್ನುತಯಾರಿಸಿ ನಿತ್ಯ ವಿತರಣೆಯೂ ನಡೆದಿದೆ. ಭಕ್ತರ ನೆರವಿಗಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 11.5 ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆಯಿದೆ. ಸುಮಾರು 45,000 ಭಕ್ತರಿಗೆ ತಿರುಮಲದಲ್ಲಿ ತಂಗಲು ವ್ಯವಸ್ಥೆಯನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಡಿದೆ ಎನ್ನುವುದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲ ರಾವ್ ನೀಡುವ ವಿವರಣೆ.