ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿ ಎಲ್ಲಿ ಇಡಬೇಕು? ಮನೆಯ ಅದೃಷ್ಟ ಹೆಚ್ಚಿಸಲು ಈ ಅಂಶಗಳು ನಿಮಗೆ ತಿಳಿದಿರಲಿ
Jul 06, 2024 08:30 PM IST
ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿ ಎಲ್ಲಿ ಇಡಬೇಕು; ಮನೆ ಅದೃಷ್ಟ ಹೆಚ್ಚಿಸುವುದು ಹೇಗೆ?
- ಕನ್ನಡಿಗಳು ನಿಮ್ಮ ರೂಪವನ್ನು ಪ್ರತಿಬಿಂಬಿಸುವುದು ಮಾತ್ರವಲ್ಲದೆ ನಿಮ್ಮ ಖುಷಿಯ ಭಾವನೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಮನೆಯಲ್ಲಿ ಕನ್ನಡಿ ಇಡುವುದಕ್ಕೂ ಕೆಲವೊಂದು ಕ್ರಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಯನ್ನು ಸೂಕ್ತ ಸ್ಥಳದಲ್ಲಿ ಇಟ್ಟರೆ ಮನೆಯ ಅದೃಷ್ಟ ಹೆಚ್ಚುತ್ತದೆ.
ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇದ್ದೇ ಇರುತ್ತದೆ. ನಿತ್ಯ ಕನ್ನಡಿ ಮುಂದೆ ನಿಂತು ಮುಖ ನೋಡಿಕೊಳ್ಳದಿದ್ದರೆ, ಸಮಾಧಾನ ಇಲ್ಲ. ಮನೆಯಿಂದ ಹೊರಹೋಗುವ ಮುನ್ನ ರೆಡಿಯಾಗಿ ಕನ್ನಡಿ ಮುಂದೆ ಒಂದಷ್ಟು ಹೊತ್ತು ನೋಡಿಕೊಳ್ಳುವುದು ಪ್ರತಿಯೊಬ್ಬರ ಅಭ್ಯಾಸ. ಹೀಗಾಗಿ ಮನೆಯಲ್ಲಿ ಕನ್ನಡಿ ಬೇಕೇ ಬೇಕು. ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ವಿಶೇಷ ಮಹತ್ವವಿದೆ. ವಾಸ್ತು ನಿಯಮಗಳಿಗೆ ಅನುಗುಣವಾಗಿ ಮನೆಯಲ್ಲಿ ಸೂಕ್ತ ಸ್ಥಳದಲ್ಲಿ ಕನ್ನಡಿ ಇಟ್ಟರೆ ಎಲ್ಲಾ ರೀತಿಯಿಂದಲೂ ಒಳ್ಳೆಯದು. ವಾಸ್ತು ಸರಿಯಿದ್ದರೆ ಮನೆಯಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ. ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಮನೆಯಲ್ಲಿ ಕನ್ನಡಿಗಳನ್ನು ಇರಿಸಲು ಕೆಲವೊಂದು ಕ್ರಮಗಳಿವೆ. ಇದು ಸರಿಹೊಂದಿದರೆ ಮಾತ್ರ ಮನೆಯಲಲಿ ಅದೃಷ್ಟ ಹೆಚ್ಚುತ್ತದೆ. ಹಾಗಿದ್ದರೆ ಕನ್ನಡಿಗಳನ್ನು ಇಡಲು ಸರಿಯಾದ ಕ್ರಮವೇನು ಎಂಬುದನ್ನು ನೋಡೋಣ.
ತಾಜಾ ಫೋಟೊಗಳು
ವಾಸ್ತು ಪ್ರಕಾರ ಕನ್ನಡಿ ಇಡುವುದು ಹೇಗೆ?
ಮನೆಯಲ್ಲಿ ಕನ್ನಡಿ ಇಡುವ ಸ್ಥಳದಲ್ಲಿ ವ್ಯತ್ಯಾಸವಾದರೆ, ಮನೆಗೆಲ್ಲಾ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ವಾಸ್ತು ಹೇಳುತ್ತದೆ. ಇದೇ ವೇಳೆ ಕನ್ನಡಿಯು ನೆಲದಿಂದ ನಾಲ್ಕು ಅಥವಾ ಐದು ಅಡಿ ಎತ್ತರದಲ್ಲಿಡುವುದು ಸರಿಯಾದ ಕ್ರಮ. ಮಲಗುವ ಹಾಸಿಗೆಯ ಪಕ್ಕದಲ್ಲಿ ದೊಡ್ಡ ಡ್ರೆಸಿಂಗ್ ಟೇಬಲ್ ಅಥವಾ ಸೈಡ್ ಟೇಬಲ್ ಇಟ್ಟರೆ ಅದೃಷ್ಟ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಅಂದರೆ, ಮಲಗಿದಾಗ ಕನ್ನಡಿಯಲ್ಲಿ ದೇಹದ ಯಾವುದೇ ಭಾಗವು ಕಾಣಿಸದಂತೆ ಇರಬೇಕು. ಕನ್ನಡಿಯನ್ನು ಇಡುವಾಗ ಎರಡು ಕನ್ನಡಿಗಳು ಒಂದಕ್ಕೊಂದು ಅಡ್ಡಲಾಗಿ ಇರದಂತೆ ನೋಡಿಕೊಳ್ಳಿ. ಹೀಗಿಟ್ಟರೆ ನಿಮ್ಮ ಮನೆಯಲ್ಲಿ ದುಷ್ಠ ಶಕ್ತಿ ವ್ಯಾಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಕನ್ನಡಿಯ ಪ್ರತಿಬಿಂಬ
ಮನೆಯ ಕಿಟಕಿಯ ಹೊರಗೆ ಸುಂದರ ದೃಶ್ಯವಿದ್ದರೆ ಅಲ್ಲಿ ಕನ್ನಡಿಯನ್ನು ಇರಿಸಬೇಕು. ಇದರಿಂದ ಆಕರ್ಷಕ ದೃಶ್ಯವು ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತದೆ. ಇದು ಸಂತೋಷದ ನೋಟವನ್ನು ಹೊರಸೂಸುತ್ತದೆ. ಇದು ಮನಸ್ಸಿನ ಮೇಲೆ ಧನಾತ್ಮಕ ಶಕ್ತಿ ಹರಡುತ್ತದೆ. ಜೊತೆಗೆ ಮನೆಗೆ ಆಶಾವಾದವನ್ನು ತರುತ್ತದೆ. ಒಂದು ವೇಳೆ ಮನೆ ಸುತ್ತಮುತ್ತ ಕೊಳಕಾಗಿದ್ದರೆ ಕನ್ನಡಿ ಕೂಡಾ ಅದನ್ನೇ ಪ್ರತಿಬಿಂಬಿಸುತ್ತದೆ. ಮನೆಯ ಮುಖ್ಯ ದ್ವಾರದ ಮುಂದೆ ಕನ್ನಡಿ ಅಥವಾ ಇನ್ನಾವುದೇ ಗಾಜಿನ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ.
ಕನ್ನಡಿಗಳ ಗಾತ್ರ ಅಥವಾ ಆಕಾರ ಹೇಗಿರಬೇಕು?
ದುಂಡಗಿನ ಕನ್ನಡಿ ಅಥವಾ ಇತರ ಯಾವುದೇ ಆಕಾರದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಚೌಕ ಅಥವಾ ಆಯತದಂತಹ ಕನ್ನಡಿ ಮನೆಗೆ ಒಳ್ಳೆಯದು. ಅಂದರೆ ಅದರಲ್ಲಿ ನಾಲ್ಕು ಮೂಲೆಗಳು ಇರಬೇಕು. ಆಯತ ಮತ್ತು ಚೌಕ ವಾಸ್ತು ಪ್ರಕಾರ ಅದೃಷ್ಟದ ಆಕಾರಗಳಾಗಿವೆ. ಕನ್ನಡಿ ಗಾತ್ರದ ಬಗ್ಗೆ ಯಾವುದೇ ವ್ಯತ್ಯಾಸಗಳಿಲ್ಲ. ಯಾವುದೇ ಗಾತ್ರದ ಕನ್ನಡಿಯನ್ನು ಮನೆಯಲ್ಲಿಡಬಹುದು.
ಈ ಅಂಶಗಳು ಮನೆಯಲ್ಲಿರಲಿ
- ಮನೆಯ ಈಶಾನ್ಯ ಅಥವಾ ಉತ್ತರ ಮೂಲೆಯಲ್ಲಿ ಕನ್ನಡಿ ಅಥವಾ ಯಾವುದೇ ಗಾಜಿನ ವಸ್ತುಗಳನ್ನು ಇರಿಸಿ.
- ಮನೆಯಲ್ಲಿರುವ ಕನ್ನಡಿಗಳ ಎತ್ತರ ನಾಲ್ಕು ಅಥವಾ ಐದು ಅಡಿ ಇರುವಂತೆ ನೋಡಿಕೊಳ್ಳಿ.
- ಕನ್ನಡಿಗಳು ಮಕ್ಕಳ ಗಮನವನ್ನು ಬೇರೆಡೆ ಸೆಳೆಯಬಹುದು. ಹೀಗಾಗಿ ಮಕ್ಕಳ ಓದುವ ಕೋಣೆಯಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಿ.
- ಕನ್ನಡಿಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ. ಕನ್ನಡಿಯಲ್ಲಿ ಸ್ಪಷ್ಟವಾದ ಚಿತ್ರ ಕಾಣುವುದನ್ನು ಖಚಿತಪಡಿಸಿಕೊಳ್ಳಿ.
ಇನ್ನಷ್ಟು ರಾಶಿಭವಿಷ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕೈ, ಕಾಲುಗಳಲ್ಲಿ 6 ಬೆರಳುಗಳು ಇದ್ದರೆ ಶುಭವೋ? ಸಮಸ್ಯೆಯೋ?; ಹಸ್ತ ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ?