ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿ; ವಿರಾಟ್ ಕೊಹ್ಲಿ ಸತತ ವೈಫಲ್ಯದ ಬೆನ್ನಲ್ಲೇ ಮಾಜಿ ಕ್ರಿಕೆಟರ್ಸ್ ಒತ್ತಾಯ
Jun 10, 2024 06:00 AM IST
ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿ; ಮಾಜಿ ಕ್ರಿಕೆಟರ್ಸ್ ಒತ್ತಾಯ
- T20 World Cup 2024: ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಮಾಜಿ ಕ್ರಿಕೆಟರ್ಗಳು ಸಲಹೆ ನೀಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ದೊಡ್ಡ ತಪ್ಪು ಮಾಡುತ್ತಿದೆಯೇ? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ತಂಡದ ಪ್ಲೇಯಿಂಗ್ ಆಯ್ಕೆ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಪ್ರಮಾದ ಎಸಗುತ್ತಿದೆ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟರ್ಗಳಿಂದಲೂ ಆರೋಪ ಬರುತ್ತಿದೆ. ಯಶಸ್ವಿ ಜೈಸ್ವಾಲ್ ಅವರನ್ನು 2ನೇ ಪಂದ್ಯಕ್ಕೂ ಕೈಬಿಟ್ಟಿರುವುದು ಆಕ್ರೋಶ ವ್ಯಕ್ತವಾಗಿದೆ.
ಮತ್ತೆ ವಿರಾಟ್ ಕೊಹ್ಲಿ ಆರಂಭಿಕ, ಮತ್ತೆ ವೈಫಲ್ಯ
ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರು ತಂಡದಲ್ಲಿದ್ದರೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅವರನ್ನು ಬೆಂಚ್ಗೆ ಸೀಮಿತ ಮಾಡಲಾಗಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಅವಕಾಶ ಪಡೆಯದ ಜೈಸ್ವಾಲ್ ಅವರನ್ನು ಮುಂದಿನ ಪಂದ್ಯದಲ್ಲಿ ಆಡಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಎರಡು ಪಂದ್ಯಗಳಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದು, ರನ್ ಗಳಿಸಲು ವಿಫಲಗೊಂಡಿದ್ದಾರೆ.
ಐರ್ಲೆಂಡ್-ಪಾಕಿಸ್ತಾನ ವಿರುದ್ಧ ಕೊಹ್ಲಿ ಫೇಲ್
ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯುದ್ಭುತ ಪ್ರದರ್ಶನ ನೀಡಿದ್ದ ಕಾರಣ ಟಿ20 ವಿಶ್ವಕಪ್ನಲ್ಲೂ ಆರಂಭಿಕರನ್ನಾಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಅವರು ರನ್ ಗಳಿಸಲು ವಿಫಲರಾಗುತ್ತಿದ್ದಾರೆ. ಐರ್ಲೆಂಡ್ ವಿರುದ್ಧ 5 ಎಸೆತಗಳಲ್ಲಿ 1 ರನ್ ಗಳಿಸಿದ್ದ ಕೊಹ್ಲಿ, ಪಾಕಿಸ್ತಾನ ವಿರುದ್ಧ 3 ಬಾಲ್ಗಳಲ್ಲಿ 4 ರನ್ ಗಳಿಸಿದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.
ಐಪಿಎಲ್ನಲ್ಲಿ ಅಬ್ಬರಿಸಿದ್ದ ಕೊಹ್ಲಿ
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. 15 ಪಂದ್ಯಗಳಲ್ಲಿ 741 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. 61.75ರ ಬ್ಯಾಟಿಂಗ್ ಸರಾಸರಿ ಹೊಂದಿದ್ದರು. 5 ಅರ್ಧಶತಕ, 1 ಶತಕ ಸಿಡಿಸಿ ಮಿಂಚಿದ್ದರು. ಕೊಹ್ಲಿ ಅಬ್ಬರದ ಪ್ರದರ್ಶನದಿಂದ ಆರ್ಸಿಬಿ ಪ್ಲೇಆಫ್ಗೂ ಪ್ರವೇಶಿಸಿತ್ತು. ಆದರೆ ಪ್ಲೇಆಫ್ನಲ್ಲಿ ಆರ್ಸಿಬಿ ಸೋತಿತ್ತು. ಇದೇ ಕಾರಣಕ್ಕಾಗಿ ಟಿ20 ವಿಶ್ವಕಪ್ನಲ್ಲೂ ಕೊಹ್ಲಿ ಆರಂಭಿಕರಾಗಿದ್ದಾರೆ.
ನ್ಯೂಯಾರ್ಕ್ನಲ್ಲಿ ಸ್ಲೋ ಪಿಚ್ಗಳು
ಅಮೆರಿಕ ಟಿ20 ವಿಶ್ವಕಪ್ಗೆ ಆತಿಥ್ಯ ವಹಿಸಿದ್ದು, ಟೂರ್ನಿಗಾಗಿ ತಾತ್ಕಾಲಿಕ ಪಿಚ್ಗಳನ್ನು ನಿರ್ಮಿಸಿವೆ. ಆದರೆ, ಈ ಪಿಚ್ಗಳಲ್ಲಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಟರ್ಗಳು ದೊಡ್ಡ ಮೊತ್ತ ಸ್ಕೋರ್ ಮಾಡಲು ವಿಫಲರಾಗುತ್ತಿದ್ದಾರೆ. ಪಿಚ್ ಮರ್ಮ ಅರಿಯುವಲ್ಲಿ ಆಟಗಾರರು ವಿಫಲರಾಗುತ್ತಿದ್ದಾರೆ. ಆದರೆ, ಬೌಲರ್ಗಳು ಹೆಚ್ಚು ಮೇಲುಗೈ ಸಾಧಿಸುತ್ತಿದ್ದಾರೆ. ಘಟಾನುಘಟಿ ಆಟಗಾರರೇ ಅನಾನುಭವಿ ಬೌಲರ್ಗಳ ಎದುರು ರನ್ ಗಳಿಸಲು ಪರದಾಡುತ್ತಿದ್ದಾರೆ.
ಜೈಸ್ವಾಲ್ಗೆ ಅವಕಾಶ ನೀಡಲು ಒತ್ತಾಯ
ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಸಹ ಆತಿಥೇಯ ಅಮೆರಿಕ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಬೇಕು. ವಿರಾಟ್ ತನ್ನ 3ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಲಿ ಎಂದು ಹೇಳಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಬೆಂಚ್ಗೆ ಸೀಮಿತಗೊಳಿಸಲಿ ಎಂದು ಕೆಲ ಮಾಜಿ ಕ್ರಿಕೆಟರ್ಗಳು ಹೇಳಿದ್ದಾರೆ.