ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಚಪ್ಪಲಿಗೂ ಬಾಬರ್ ಸಮನಲ್ಲ; ಭಾರತ ವಿರುದ್ಧವೂ ಪಾಕಿಸ್ತಾನ ಹೀನಾಯವಾಗಿ ಸೋಲುತ್ತೆ ಎಂದ ಪಾಕ್‌ ಮಾಜಿ ಕ್ರಿಕೆಟಿಗ

ವಿರಾಟ್ ಕೊಹ್ಲಿ ಚಪ್ಪಲಿಗೂ ಬಾಬರ್ ಸಮನಲ್ಲ; ಭಾರತ ವಿರುದ್ಧವೂ ಪಾಕಿಸ್ತಾನ ಹೀನಾಯವಾಗಿ ಸೋಲುತ್ತೆ ಎಂದ ಪಾಕ್‌ ಮಾಜಿ ಕ್ರಿಕೆಟಿಗ

Babar Azam vs Virat Kohli: ಪಾಕಿಸ್ತಾನ ಆಟಗಾರರು ಭಾರತ ಅಥವಾ ಬೇರೆ ತಂಡಗಳನ್ನು ಟೀಕಿಸುವುದು ಸಾಮಾನ್ಯ. ಇಲ್ಲಿ ಪಾಕ್‌ನ ಮಾಜಿ ಕ್ರಿಕೆಟಿಗರೊಬ್ಬರು ಪಾಕ್‌ ತಂಡ ಹಾಗೂ ನಾಯಕ ಬಾಬರ್‌ ಅಜಮ್‌ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಪಾಕ್‌ ಹೀನಾಯವಾಗಿ ಸೋಲುತ್ತೆ ಎಂದು ಹೇಳಿದ್ದಾರೆ.

ಭಾರತ ವಿರುದ್ಧವೂ ಪಾಕಿಸ್ತಾನ ಹೀನಾಯವಾಗಿ ಸೋಲುತ್ತೆ ಎಂದ ಪಾಕ್‌ ಮಾಜಿ ಕ್ರಿಕೆಟಿಗ
ಭಾರತ ವಿರುದ್ಧವೂ ಪಾಕಿಸ್ತಾನ ಹೀನಾಯವಾಗಿ ಸೋಲುತ್ತೆ ಎಂದ ಪಾಕ್‌ ಮಾಜಿ ಕ್ರಿಕೆಟಿಗ

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯವೆಂದರೆ ಅಲ್ಲಿ ರೋಚಕತೆ ದುಪ್ಪಟ್ಟು. ಈ ಎರಡು ದೇಶಗಳಲ್ಲದೆ ಜಗತ್ತೇ ಇಂಡೋ-ಪಾಕ್‌ ಕದನಕ್ಕೆ ಕಾತರದಿಂದ ಕಾಯುತ್ತದೆ. ಉಭಯ ತಂಡಗಳ ನಡುವಿನ ಪೈಪೋಟಿಗೆ ಸುದೀರ್ಘ ವರ್ಷಗಳ ಇತಿಹಾಸವಿದೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ (ICC Mens T20 World Cup 2024) ಪಂದ್ಯಾವಳಿಯಲ್ಲಿ ಇಂದು (ಜೂನ್‌ 9) ಈ ಎರಡು ತಂಡಗಳ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯುತ್ತಿದೆ. ನ್ಯೂಯಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಕುರಿತು ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಈ ನಡುವೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ನಡುವೆ ಬಗೆಬಗೆಯ ಹೇಳಿಕೆಗಳು ಹೊರಬರುತ್ತಿವೆ. ಅಚ್ಚರಿಯೆಂದರೆ, ಪಾಕಿಸ್ತಾನ ತಂಡದ ಮಾಜಿ ಆಟಗಾರರೊಬ್ಬರು, ತಮ್ಮದೇ ತಂಡ ಹಾಗೂ ಆಟಗಾರರನ್ನು ಕಟುವಾಗಿ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂಡೋ - ಪಾಕ್‌ ಪಂದ್ಯವೆಂದು ಬಂದಾಗ ಹಲವಾರು ಹೋಲಿಕೆಗಳು ನಡೆಯುತ್ತವೆ. ಯಾರು ಬಲಿಷ್ಠರು ಎಂಬ ಚರ್ಚೆ ನಡೆಯುತ್ತದೆ. ಇದರ ನಡುವೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಡುವೆ ಯಾರು ಉತ್ತಮ ಬ್ಯಾಟರ್‌ ಎಂಬುದು ಸಾಮಾನ್ಯ ಚರ್ಚೆ. ಇದೀಗ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ಉಭಯ ತಂಡಗಳ ನಡುವಿನ ಬಹುನಿರೀಕ್ಷಿತ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಯಾರು ಉತ್ತಮ ಆಟಗಾರ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮೊದಲು ಸುದ್ದಿಸಂಸ್ಥೆ ಐಎಎನ್‌ಎಸ್‌ ಜೊತೆಗೆ ಮಾತನಾಡಿದ ಕನೇರಿಯಾ, ಬಾಬರ್‌ ಅವರು ವಿರಾಟ್‌ ಕೊಹ್ಲಿಯ ಚಪ್ಪಲಿಗೂ ಸಮ ಅಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. "ಮುಂದೆ ಬಾಬರ್ ಅಜಮ್ ಶತಕ ಗಳಿಸಿದ ತಕ್ಷಣ, ನೀವು ಆತನನ್ನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆ ಮಾಡುತ್ತೀರಿ. ಆದರೆ ಆತ ವಿರಾಟ್‌ ಕೊಹ್ಲಿ ಶೂ/ಚಪ್ಪಲಿಗೂ ಸಮನಲ್ಲ. (ವಿರಾಟ್ ಕೆ ಜೂಟ್ ಕೆ ಬರಾಬರ್ ಭಿ ನಹೀ ಹೈ)" ಎಂದು ಕನೇರಿಯಾ ಹೇಳಿದ್ದಾರೆ.

“ಯುಎಸ್‌ಎ ಬೌಲರ್‌ಗಳು ಆತನನ್ನು ಆಡಲು ಬಿಡಲಿಲ್ಲ. 40 ದಾಟುತ್ತಿದ್ದಂತೆಯೇ ಔಟಾದ. ಆತ ಇದ್ದು ತಂಡವನ್ನು ಗೆಲ್ಲಿಸಬೇಕಿತ್ತು. ಪಾಕಿಸ್ತಾನವು ಆ ಪಂದ್ಯವನ್ನು ಏಕಪಕ್ಷೀಯವಾಗಿ ಗೆಲ್ಲಬೇಕಿತ್ತು” ಎಂದು ಕನೇರಿಯಾ ಹೇಳಿಕೊಂಡಿದ್ದಾರೆ.

ಭಾರತದ ವಿರುದ್ಧ ಪಾಕ್‌ ಹೀನಾಯವಾಗಿ ಸೋಲುತ್ತೆ

“ಭಾರತ ಕೂಡಾ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸುತ್ತದೆ. ಅವರಿಗೆ ಭಾರತವನ್ನು ಸೋಲಿಸುವ ಸಾಮರ್ಥ್ಯ ಇಲ್ಲ. ಪಾಕಿಸ್ತಾನವು ವಿಶ್ವಕಪ್‌ಗೆ ಕಾಲಿಟ್ಟಾಗೆಲ್ಲಾ ಅವರು ತಮ್ಮ ಬೌಲಿಂಗ್ ಅನ್ನು ಹಾಡಿ ಹೊಗಳುತ್ತಾರೆ. ಅಲ್ಲದೆ ಬೌಲಿಂಗ್‌ನಿಂದ ಪಂದ್ಯವನ್ನು ಗೆಲ್ಲಬಹುದು ಎಂದು ಹೇಳುತ್ತಾರೆ. ಆದರೆ ಅದೇ ಬೌಲಿಂಗ್‌ನಿಂದ ಅವರು ತಮ್ಮ ಮೊದಲ ಪಂದ್ಯದಲ್ಲಿ ಸೋತರು,” ಎಂದು ಕನೇರಿಯಾ ಕಟುವಾಗಿ ಟೀಕಿಸಿದ್ದಾರೆ.

“ಪಾಕಿಸ್ತಾನ ಕ್ರಿಕೆಟ್ ತಂಡವು ಒಂದು ತಮಾಷೆಯಾಗಿದೆ. ಅವರು ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಕುಟುಂಬದೊಂದಿಗೆ ಯುಎಸ್‌ನಲ್ಲಿ ರಜೆಯನ್ನು ಸವಿಯಲು ಹೋಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024