ನನ್ನ ವೃತ್ತಿಜೀವನ ಹಾಳಾಗಿದ್ದೇ ಧೋನಿಯಿಂದ, ಚೆನ್ನಾಗಿ ಆಡಿದ್ರೂ ಅವಕಾಶ ಕೊಡ್ಲಿಲ್ಲ; ಸಿಎಸ್ಕೆ ಮಾಜಿ ಕ್ರಿಕೆಟಿಗ ಗಂಭೀರ ಆರೋಪ
Ishwar Pandey on MS Dhoni: ಎಂಎಸ್ ಧೋನಿ, ನನಗೆ ಸರಿಯಾದ ಅವಕಾಶ ನೀಡಿದ್ದರೆ, ನನ್ನ ಕರಿಯರ್ ಬೇರೆಯಾಗುತ್ತಿತ್ತು. ಆದರೆ ಧೋನಿ ಭಾಯ್ ನನಗೆ ಅವಕಾಶ ನೀಡಲಿಲ್ಲ. ಇದರಿಂದ ನನ್ನ ವೃತ್ತಿಜೀವನ ಹಳ್ಳ ಹಿಡಿಯಿತು ಎಂದು ಮಾಜಿ ಕ್ರಿಕೆಟಿಗ ಈಶ್ವರ್ ಪಾಂಡೆ ಹೇಳಿದ್ದಾರೆ.
ಟೀಮ್ ಇಂಡಿಯಾ ದಿಗ್ಗಜ ಮತ್ತು ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಅವರು ಅದೆಷ್ಟೋ ಕ್ರೀಡಾಪಟುಗಳು ಸ್ಫೂರ್ತಿ. ಭಾರತ ತಂಡಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಧೋನಿ ಅವರನ್ನು ಈಗಲೂ ಪ್ರೀತಿಸುವ ಮಂದಿ ಅದೆಷ್ಟೋ. ಸಾವಿರಾರು ಕ್ರಿಕೆಟಿಗರ ಬಾಳಿಗೆ ಬೆಳಕಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಸೇರಿದಂತೆ ಘಟಾನುಘಟಿ ಆಟಗಾರರು ಬೆಳೆದಿದ್ದೇ ಮಾಹಿ ಗರಡಿಯಲ್ಲಿ. ಈ ಮಾಜಿ ಕ್ರಿಕೆಟಿಗ ನನ್ನ ಕರಿಯರ್ ಹಾಳಾಗಿದ್ದೇ ಧೋನಿಯಿಂದ ಎಂದು ಈ ಹಿಂದೆ ಹೇಳಿದ್ದರು.
ಈಶ್ವರ್ ಪಾಂಡೆ.. ಧೋನಿ ವಿರುದ್ಧ ಗಂಭೀರ ಆರೋಪ ಮಾಡಿರುವ ಆಟಗಾರ. ತಾನು 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ವಿದಾಯ ಹೇಳಿದ್ದರ ನಡುವೆಯೇ ವೇಗದ ಬೌಲರ್ ಈಶ್ವರ್, ಹೊಸ ಬಾಂಬೊಂದನ್ನು ಸಿಡಿಸಿ ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದರು. ಮಧ್ಯಪ್ರದೇಶದ ವೇಗಿ ಕ್ರಿಕೆಟ್ಗೆ ಎಂಟ್ರಿಕೊಟ್ಟ ಕೆಲವೇ ದಿನಗಳಲ್ಲಿ, ಸಂಚಲನ ಸೃಷ್ಟಿಸಿದ್ದರು. ಹಲವು ದಾಖಲೆಗಳ ಒಡೆಯ ಕೂಡ ಆಗಿದ್ದಾರೆ. ಅದ್ಭುತ ಪ್ರದರ್ಶನದಿಂದ, 2014ರಲ್ಲಿ ನ್ಯೂಜಿಲೆಂಡ್ ಸರಣಿಗೆ ಸೆಲೆಕ್ಟ್ ಆಗಿದ್ದರು. ಆದರೆ ಒಂದೇ ಒಂದು ಅವಕಾಶ ಪಡೆಯದ ಈ ನತದೃಷ್ಟ ಆಟಗಾರ, ಹೆಚ್ಚು ಫೇಮಸ್ ಆಗಿದ್ದು, ಐಪಿಎಲ್-ದೇಶಿ ಕ್ರಿಕೆಟ್ನಲ್ಲಿ ಮಾತ್ರ!
ಈಶ್ವರ್ ಕರಿಯರ್ ಹಾಳು ಮಾಡಿಬಿಟ್ರಾ ಸಿಎಸ್ಕೆ ನಾಯಕ?
2022ರಲ್ಲಿ ಕ್ರಿಕೆಟ್ಗೆ ಗುಡ್ಬೈ ಹೇಳಿದ ಈಶ್ವರ್, ಸಂಚಲನ ಹೇಳಿಕೆ ನೀಡಿದ್ದರು. ಅದು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮೇಲೆ. ಧೋನಿ ನೇತೃತ್ವದಲ್ಲೇ ಸಿಎಸ್ಕೆ ವಿರುದ್ಧವೇ ಆಡಿದ್ದ ಈಶ್ವರ್ ಪಾಂಡೆ, ಅವರ ವಿರುದ್ಧ ಗಂಭೀರ ಆರೋಪ ಮಾಡಿ ಅಚ್ಚರಿ ಮೂಡಿಸಿದ್ದರು. 2013ರಿಂದ ಮೂರು ಸೀಸನ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಧೋನಿ ನಾಯಕನಾದ ನಂತರ ಟೀಮ್ ಇಂಡಿಯಾ ಆಟಗಾರರ ಭವಿಷ್ಯಕ್ಕೆ ಕುತ್ತು ತಂದಂತೆ, ಈಶ್ವರ್ ಕರಿಯರ್ಗೆ ಅನ್ಯಾಯ ಮಾಡಿದ್ದರಂತೆ. ತಮ್ಮ ವೃತ್ತಿಜೀವನ ಹಾಳಾಗಲು ಧೋನಿಯೇ ಕಾರಣ. ಅವಕಾಶ ನೀಡಿದ್ದರೆ, ನನ್ನ ವೃತ್ತಿಜೀವನ ಬೇರೆಯಾಗುತ್ತಿತ್ತು ಎಂದು ಪಾಂಡೆ ನೋವು ವ್ಯಕ್ತಪಡಿಸಿದ್ದರು.
ಧೋನಿ ಚಾನ್ಸ್ ನೀಡಲಿಲ್ಲ ಎಂದಿದ್ದ ಈಶ್ವರ್
ಎಂಎಸ್ ಧೋನಿ, ನನಗೆ ಸರಿಯಾದ ಅವಕಾಶ ನೀಡಿದ್ದರೆ, ನನ್ನ ವೃತ್ತಿ ಬದುಕೇ ಬೇರೆಯಾಗುತ್ತಿತ್ತು. ಆಗ ನನಗೆ 23 ರಿಂದ 24 ವರ್ಷ ವಯಸ್ಸಾಗಿತ್ತು. ಫಿಟ್‌ನೆಸ್ ಕೂಡ ಚೆನ್ನಾಗಿತ್ತು. ಅದ್ಭುತ ಪ್ರದರ್ಶನ ಕೂಡ ನೀಡುತ್ತಿದ್ದೆ. ಇದರಿಂದ ನಾನು ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೆ. ಆದರೆ ಧೋನಿ ಭಾಯ್ ನನಗೆ ಅವಕಾಶ ನೀಡಲಿಲ್ಲ. ನಾಯಕನಾಗಿದ್ದ 2014ರಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ಕರೆದುಕೊಂಡು ಹೋದರು. ಆದರೆ ನನ್ನ ಬೆಂಚ್ಗೆ ಸೀಮಿತ ಮಾಡಿ ಬಿಟ್ಟರು. ಇದೇ ಕಾರಣಕ್ಕೆ ನನ್ನ ವೃತ್ತಿಜೀವನ ಹಳ್ಳ ಹಿಡಿಯಿತು ಎಂದು ನೇರವಾಗಿಯೇ ಈಶ್ವರ್ ಪಾಂಡೆ ಅವರು ಧೋನಿ ವಿರುದ್ಧ ಹೇಳಿಕೆ ನೀಡಿದ್ದರು.
ಎಬಿಡಿಯನ್ನು ಔಟ್ ಮಾಡಿದ್ರು ಬೈದಿದ್ರು ಎಂದ ಈಶ್ವರ್
ತನಗೆ ಅವಕಾಶ ನೀಡದಿರುವ ಕುರಿತು ಮಾತನಾಡಿದ ಈಶ್ವರ್, ಧೋನಿ ಬೈದಿದ್ದ ಘಟನೆಯನ್ನೂ ಇದೇ ವೇಳೆ ಬಹಿರಂಗಪಡಿಸಿದ್ದಾರೆ. ಒಮ್ಮೆ ನಾವು ಬೆಂಗಳೂರಿನಲ್ಲಿ ಆರ್ಸಿಬಿ ವಿರುದ್ಧ ಪಂದ್ಯ ಆಡುತ್ತಿದ್ದೆವು. ಎಬಿ ಡಿವಿಲಿಯರ್ಸ್ ಬ್ಯಾಟಿಂಗ್‌ಗೆ ಬಂದಾಗ, ಧೋನಿ ಭಾಯ್ ನನಗೆ ಬೌಲಿಂಗ್ ನೀಡಿದ್ದರು. ಯಾರ್ಕರ್ ಹಾಕಬೇಡಿ, ಚೆನ್ನಾಗಿ ಬೌಲ್ ಮಾಡಿ ಎಂದಿದ್ದರು. ನಾನು ಡಿವಿಲಿಯರ್ಸ್ ಅವರಿಗೆ 4 ಎಸೆತಗಳನ್ನು ಡಾಟ್ ಮಾಡಿದ್ದೆ. ಆದರೆ 5ನೇ ಎಸೆತದಲ್ಲಿ ಬೌಂಡರಿ ಹೊಡೆಸಿಕೊಂಡೆ. ಇನ್ನು ಒಂದು ಬಾಲ್ ಬಾಕಿ ಇದ್ದುದರಿಂದ ಯಾರ್ಕರ್ ಹಾಕಲು ಯತ್ನಿಸಿದೆ. ಆದರೆ ಅದು ಲೋ ಫುಲ್ ಟಾಸ್ ಆಗಿ ಡಿವಿಲಿಯರ್ಸ್ ಅದೇ ಎಸೆತದಲ್ಲಿ ಔಟಾಗಿದ್ದರು. ಆದರೂ ವಿಕೆಟ್ ಪಡೆದ ನಂತರ ಧೋನಿ, ನನ್ನನ್ನ ನಿಂದಿಸಿದ್ದರು. ಯಾರ್ಕರ್ ಹಾಕ್ಬೇಡ ಎಂದಿದ್ದೆ ತಾನೇ, ಮತ್ತೆ ಅದಕ್ಕೆ ಪ್ರಯತ್ನಿಸಿದ್ದು ಯಾಕೆ ಅಂತ ಪ್ರಶ್ನಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಹೇಳಿದ್ದರು.
ಸೆಹ್ವಾಗ್, ಗಂಭೀರ್, ಇರ್ಫಾನ್ಗೆ ಆದಂತೆ ಈಶ್ವರ್ಗೂ ಆಯ್ತಾ ಮೋಸ?
ಭಾರತ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಪರ್ವ ಆರಂಭಿಸಿದ್ದು, ಧೋನಿಯೇ. ಇದರಿಂದ ಆಡೋದಕ್ಕೆ ಫಿಟ್ ಇದ್ದರೂ ಸೀನಿಯರ್ ಆಟಗಾರರಿಗೆ ತಂಡದಿಂದ ಕೊಕ್ ನೀಡುತ್ತಿದ್ದರು. ಇರ್ಫಾನ್ ಪಠಾಣ್, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ, ಹಲವರ ಕರಿಯರ್ ಹಾಳು ಮಾಡಿರುವ ಆರೋಪ, ಧೋನಿ ಮೇಲೆ ಈಗಲೂ ಇದೆ. ಈಗ ಈಶ್ವರ್ ವಿಚಾರದಲ್ಲೂ ಹೀಗೆ ನಡೆಯಿತೇ ಎಂದು ಹೇಳಲಾಗಿತ್ತು.
ದೇಶೀ ಕ್ರಿಕೆಟ್ನಲ್ಲಿ ಈಶ್ವರ್ ಪಾಂಡೆ ವಿಕೆಟ್ ಬೇಟೆ
6 ಅಡಿ 2 ಇಂಚಿನ ಎತ್ತರದ ಈಶ್ವರ್, 2022ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ ತಂಡದ ಭಾಗವಾಗಿದ್ದರಿ. ರೇವಂಚಲ್ ಎಕ್ಸ್‌ಪ್ರೆಸ್ ಎಂದು ಪ್ರಸಿದ್ಧಿ ಪಡೆದಿರುವ ಪಾಂಡೆ, ಫಸ್ಟ್ ಕ್ಲಾಸ್ ಕ್ರಿಕೆಟ್ 75 ಪಂದ್ಯಗಳಲ್ಲಿ 263 ವಿಕೆಟ್ ಪಡೆದಿದ್ದಾರೆ. ಲೀಸ್ಟ್ ಎನಲ್ಲಿ 63, ಐಪಿಎಲ್ ಸೇರಿ ಒಟ್ಟಾರೆ ಟಿ20ಯಲ್ಲಿ 68 ವಿಕೆಟ್ ಉರುಳಿಸಿದ್ದಾರೆ. 2022ರಲ್ಲಿ ಈ ಹೇಳಿಕೆ ನೀಡಿದ್ದರೂ ಈಗಲೂ ಚರ್ಚೆ ಆಗುತ್ತಿದೆ. ಅವರಿಗೆ ಅವಕಾಶ ನೀಡಬೇಕಿತ್ತು ಎಂದು ಹಲವರು ಈಶ್ವರ್ಗೆ ಈಗಲೂ ಬೆಂಬಲ ನೀಡುತ್ತಿದ್ದಾರೆ.