logo
ಕನ್ನಡ ಸುದ್ದಿ  /  ಕ್ರೀಡೆ  /  India Vs Pakistan: ಇಂಡೋ-ಪಾಕ್ ವಿಶ್ವಕಪ್​ ಪಂದ್ಯಕ್ಕೆ ಮಿತಿಮೀರಿದ ಒತ್ತಡ; ಮನಃಶಾಸ್ತ್ರಜ್ಞರ ಮೊರೆ ಹೋದ ಪಾಕಿಸ್ತಾನ ತಂಡ

India vs Pakistan: ಇಂಡೋ-ಪಾಕ್ ವಿಶ್ವಕಪ್​ ಪಂದ್ಯಕ್ಕೆ ಮಿತಿಮೀರಿದ ಒತ್ತಡ; ಮನಃಶಾಸ್ತ್ರಜ್ಞರ ಮೊರೆ ಹೋದ ಪಾಕಿಸ್ತಾನ ತಂಡ

Prasanna Kumar P N HT Kannada

Aug 08, 2023 03:34 PM IST

google News

ಪಾಕಿಸ್ತಾನ ಕ್ರಿಕೆಟ್ ತಂಡ.

    • India vs Pakistan: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡದ ಕಾವು ದಿನೆದಿನೇ ಹೆಚ್ಚಾಗುತ್ತಿದೆ. ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಎದುರು ನೋಡುತ್ತಿದೆ. ಆದರೆ ಪಂದ್ಯಕ್ಕೂ ಮೊದಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮನಃಶಾಸ್ತ್ರಜ್ಞರನ್ನು ನೇಮಿಸಲು ಚಿಂತನೆ ನಡೆಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡ.
ಪಾಕಿಸ್ತಾನ ಕ್ರಿಕೆಟ್ ತಂಡ.

ಕ್ರಿಕೆಟ್​ ದುನಿಯಾದ ಅತಿ ದೊಡ್ಡ ಕಾಳಗ ಅಂದರೆ, ಅದು ಭಾರತ-ಪಾಕಿಸ್ತಾನ (India vs Pakistan) ನಡುವಿನ ಕಾದಾಟ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಸಾಂಪ್ರದಾಯಿಕ ಎದುರಾಳಿಗಳ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇಂಡೋ-ಪಾಕ್​​ ದಂಗಲ್​​​ಗೆ ದಿನಗಣನೆ ಶುರುವಾಗುತ್ತಿದ್ದು, ಉಭಯ ತಂಡಗಳು ಸಮರಕ್ಕೆ ಶಸ್ತ್ರಾಭ್ಯಾಸಕ್ಕೆ ಸಿದ್ಧವಾಗಿವೆ. ಆದರೆ ಪಂದ್ಯ ಆರಂಭಕ್ಕೆ ಇನ್ನೂ ಎರಡು ತಿಂಗಳಿರುವಾಗಲೇ, ಬದ್ಧವೈರಿ ಪಾಕ್​ ಪಾಳೆಯದಲ್ಲಿ ನಡುಕ ಶುರುವಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರೋಚಕತೆ ಅಷ್ಟೆ ಅಲ್ಲ, ಜಿದ್ದಾಜಿದ್ದಿನ ಹೋರಾಟಕ್ಕೂ ಸಾಕ್ಷಿ. ಮೈದಾನದಲ್ಲಿ ಅಭಿಮಾನಿಗಳ ಜೊತೆಗೆ ಆಡುವ ಆಟಗಾರರಿಗೂ ಒತ್ತಡ ಅತಿಯಾಗಿ ಕಾಡುತ್ತದೆ. ಏಕೆಂದರೆ, ಉಭಯ ದೇಶಗಳಿಗೂ ಇದು ಪ್ರತಿಷ್ಠೆಯ ಕದನವಾಗಿರುತ್ತದೆ. ವಿಶ್ವಕಪ್​​ ಗೆಲ್ಲದಿದ್ದರೂ ಪರವಾಗಿಲ್ಲ, ಈ ಪಂದ್ಯದಲ್ಲಿ ದಿಗ್ವಿಜಯ ಸಾಧಿಸಲೇಬೇಕು ಎಂಬುದು ಉಭಯ ತಂಡಗಳ ಕನಸು. ಇದೇ ಕಾರಣಕ್ಕೆ ಮಿನಿ ಯುದ್ಧದಂತೆ ಭಾಸವಾಗುವ ಈ ಪಂದ್ಯಕ್ಕೆ ಜಗತ್ತೇ ಕಾಯುವುದು.

ಮನಃಶಾಸ್ತ್ರಜ್ಞರ ನೇಮಕಕ್ಕೆ ಮುಂದಾದ ಪಾಕ್

ಪಂದ್ಯಕ್ಕೆ ಇನ್ನೂ ಎರಡು ತಿಂಗಳ ಕಾಲ ಸಮಯವಿದೆ. ಅದಕ್ಕೂ ಮೊದಲೇ ಪಾಕಿಸ್ತಾನ ಒತ್ತಡಕ್ಕೆ ಒಳಗಾಗಿದೆಯಂತೆ. ಅದರಲ್ಲೂ ಭಾರತದಲ್ಲಿ ಪಂದ್ಯ ನಡೆಯುವ ಕಾರಣ, ಅಭಿಮಾನಿಗಳು, ಮಾಧ್ಯಮಗಳು ಸೇರಿದಂತೆ ಎಲ್ಲೆಡೆಯಿಂದಲೂ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಇದೆಲ್ಲವನ್ನೂ ಹೇಗೆ ನಿಭಾಯಿಸಬೇಕು? ಭಯ, ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎನ್ನುವ ಕಾರಣಕ್ಕೆ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಚಿಂತನೆ ನಡೆಸಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ ಎಂದು ಇನ್​ಸೈಡ್​ ಸ್ಪೋರ್ಟ್ಸ್​ ಪ್ರಕಟಿಸಿದೆ.

ಏಕದಿನ ವಿಶ್ವಕಪ್​​ನಲ್ಲಿ ಅಕ್ಟೋಬರ್​ 15ರಂದು (ದಿನಾಂಕ ಬದಲಾವಣೆ ಸಾಧ್ಯತೆ ಇದೆ. ಅಕ್ಟೋಬರ್​ 14ರಂದು ಪಂದ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ದಿನಾಂಕ ಅಧಿಕೃತವಾಗಿ ಘೋಷಣೆಯಾಗಿಲ್ಲ​) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವ ದಾಖಲೆಯ ಪ್ರೇಕ್ಷಕರ ಮುಂದೆ ಪಂದ್ಯವನ್ನಾಡಲು ಬಾಬರ್ ಅಜಮ್ ಬಳಗ ಸಜ್ಜಾಗಿದೆ. ಹೀಗಾಗಿ ತಂಡವು ಒತ್ತಡ ನಿಭಾಯಿಸಲು ಪಿಸಿಬಿ ಕ್ರೀಡಾ ಮನಶ್ಶಾಸ್ತ್ರಜ್ಞರ ಹುಡುಕಾಟ ನಡೆಸಲು ಯತ್ನಿಸುತ್ತಿದೆ.

ಭಾರತದಲ್ಲಿ ಒತ್ತಡ ದುಪ್ಪಟ್ಟು

ಭಾರತದಲ್ಲಿ ಭಾರತದ ಅಭಿಮಾನಿಗಳ ಮುಂದೆ ಭಾರತ ತಂಡವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ದೊಡ್ಡ ಸವಾಲೇ ಸರಿ. ಹಾಗಾಗಿ ಈ ನಿರ್ಧಾರಕ್ಕೆ ಪಾಕ್ ಮುಂದಾಗಿದೆ. ನಾಯಕ ಬಾಬರ್ ಅಜಮ್ ಸೇರಿದಂತೆ ಪಾಕಿಸ್ತಾನದ ಹೆಚ್ಚಿನ ಆಟಗಾರರು ಭಾರತದಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಆದ್ದರಿಂದ, ಭಾರತದಲ್ಲಿ ಅಭಿಮಾನಿಗಳ ಭಾರಿ ಒತ್ತಡದ ಬಗ್ಗೆ ತಂಡಕ್ಕೆ ತಿಳಿದಿಲ್ಲ. ಈಗಾಗಲೇ ಈ ಆಟಗಾರರು, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​​ನಲ್ಲಿ ನಡೆದ ಟಿ20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನವು ಒತ್ತಡ ಹೇಗಿರುತ್ತದೆ ಎಂಬುದನ್ನು ಅರಿತಿದೆ. ಆದರೆ, ಭಾರತದಲ್ಲಿ ಆ ಒತ್ತಡವು ದುಪ್ಪಟ್ಟಾಗಿರುತ್ತದೆ.

2012ರಲ್ಲೂ ಮನಃಶಾಸ್ತ್ರಜ್ಞರನ್ನು ಕಳುಹಿಸಿತ್ತು!

ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್, ತಂಡದೊಂದಿಗೆ ಮನಶ್ಶಾಸ್ತ್ರಜ್ಞರನ್ನೂ ಭಾರತಕ್ಕೆ ಕಳುಹಿಸಲು ಯೋಜನೆ ಹಾಕಿಕೊಂಡಿದ್ದಾರೆ. ಈ ಹಿಂದೆಯೂ ಪಾಕ್ ಜೊತೆಗೆ ಮನಃಶಾಸ್ತ್ರಜ್ಞರನ್ನು ಕಳುಹಿಸಿತ್ತು. 2012ರಲ್ಲಿ ಪಾಕಿಸ್ತಾನವು ಸೀಮಿತ ಓವರ್‌ಗಳ ಸರಣಿಗಾಗಿ (3 ಏಕದಿನ ಮತ್ತು 5 ಟಿ20) ಭಾರತಕ್ಕೆ ಭೇಟಿ ನೀಡಿದಾಗ, ಪಾಕ್ ತನ್ನ ತಂಡದೊಂದಿಗೆ ಮನಃಶ್ಶಾಸ್ತ್ರಜ್ಞರನ್ನು ಕಳುಹಿಸಿತು. ಝಾಕಾ ಅಶ್ರಫ್ ಆಗಲೂ ಪಿಸಿಬಿ ಅಧ್ಯಕ್ಷರಾಗಿದ್ದರು.

ಭಾರತಕ್ಕೆ ಸೇವೆ ಸಲ್ಲಿಸಿದವರ ಮೇಲೆ ಪಾಕ್ ಕಣ್ಣು

ಮನಃಶಾಸ್ತ್ರಜ್ಞರನ್ನಾಗಿ ಯಾರನ್ನು ಸಂಪರ್ಕಿಸಿದೆ? ಯಾರನ್ನು ನೇಮಿಸಲು ಮುಂದಾಗಿದೆ ಎಂಬುದರ ಕುರಿತು ಇನ್ನೂ ಅಂತಿಮಗೊಳಿಸಿಲ್ಲ. ಮೆಂಟಲ್ ಕಂಡೀಷನಿಂಗ್ ಕೋಚ್​ ಆಗಿ ಪ್ಯಾಡಿ ಆಪ್ಟನ್​ ಅವರನ್ನು ನೇಮಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅವರು ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್​​ನಲ್ಲಿ ಲಾಹೋರ್​​ ಖಲಂದರ್ಸ್​​ ತಂಡದ ಜೊತೆ ಕೆಲಸ ಮಾಡಿದ್ದರು. ಅಲ್ಲದೆ, 2022ರ ವಿಶ್ವಕಪ್​​ಗೂ ಮುನ್ನ ಭಾರತ ತಂಡದ ಪರವೂ ಕೆಲಸ ಮಾಡಿದ್ದರು. 2011ರ ಏಕದಿನ ವಿಶ್ವಕಪ್​​ ಗೆದ್ದ ಭಾರತ ತಂಡದ ಸಹಾಯಕ ಸಿಬ್ಬಂದಿಯೂ ಆಗಿದ್ದರು. ಅಲ್ಲದೆ, ಭಾರತ ಹಾಕಿ ತಂಡಕ್ಕೂ ಅವರೇ ಮೆಂಟಲ್ ಕಂಡೀಷನಿಂಗ್ ಕೋಚ್​ ಆಗಿದ್ದರು ಎಂಬುದು ವಿಶೇಷ.

ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ