ವನಿತೆಯರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಅಕ್ಟೋಬರ್ 6ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ
May 05, 2024 03:53 PM IST
ವನಿತೆಯರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ
- ವನಿತೆಯರ ಟಿ20 ವಿಶ್ವಕಪ್ ಪಂದ್ಯಾವಳಿ 2024ರ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತವು ಅಕ್ಟೋಬರ್ 4ರಂದು ನ್ಯೂಜಿಲೆಂಡ್ ವಿರುದ್ಧ ಅಭಿಯಾನ ಆರಂಭಿಸಲಿದ್ದು, 6ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.
ಪ್ರಸಕ್ತ ವರ್ಷ ಕ್ರಿಕೆಟ್ ಅಭಿಮಾನಿಗಳಿಗೆ ಮೇಲಿಂದ ಮೇಲೆ ಪಂದ್ಯಗಳನ್ನು ವೀಕ್ಷಿಸುವ ಸೌಭಾಗ್ಯ. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ವನಿತೆಯರ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಅಕ್ಟೋಬರ್ 3ರಿಂದ 20ರವರೆಗೆ ಬಾಂಗ್ಲಾದೇಶದಲ್ಲಿ ಪಂದ್ಯಾವಳಿ ನಡೆಯಲಿದೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತಿಥೇಯ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಕ್ವಾಲಿಫೈಯರ್ 2 ತಂಡಗಳು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿವೆ.
ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಗುಂಪು ಹಂತದ ಎಲ್ಲಾ ಪಂದ್ಯಗಳು ನಡೆಯಲಿವೆ. ಭಾರತ ವನಿತೆಯರ ತಂಡವು ಅಕ್ಟೋಬರ್ 4ರಂದು ನ್ಯೂಜಿಲ್ಯಾಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ಹೈವೋಲ್ಟೇಜ್ ಕದನದಲ್ಲಿ ಅಕ್ಟೋಬರ್ 6ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಅಕ್ಟೋಬರ್ 9ರಂದು ನಡೆಯಲಿರುವ ಪಂದ್ಯದಲ್ಲಿ ಭಾರತದ ಎದುರಾಳಿ ತಂಡ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡದ ವಿರುದ್ಧ ಭಾರತ ಸೆಣಸಲಿದೆ. ಅಕ್ಟೋಬರ್ 13ರಂದು ಭಾರತಕ್ಕೆ ಅತಿ ದೊಡ್ಡ ಸವಾಲು ಎದುರಾಗಲಲಿದ್ದು, ಆರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹತ್ವದ ಪಂದ್ಯ ಆಡಲಿದೆ.
ಇದನ್ನೂ ಓದಿ | ಜಿಟಿ ವಿರುದ್ಧ ಗೆದ್ದ ಆರ್‌ಸಿಬಿ ಭಾರಿ ಜಿಗಿತ; 10ನೇ ಸ್ಥಾನಕ್ಕೆ ಜಾರಿದ ಮುಂಬೈ ಇಂಡಿಯನ್ಸ್- ಹೀಗಿದೆ ಐಪಿಎಲ್ ಅಂಕಪಟ್ಟಿ
ಅಕ್ಟೋಬರ್ 20ರಂದು ಢಾಕಾದಲ್ಲಿ ಫೈನಲ್
“ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿ ತಂಡವು ಗುಂಪು ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಅಕ್ಟೋಬರ್ 17 ಮತ್ತು 18ರಂದು ನಡೆಯಲಿರುವ ಸೆಮಿಫೈನಲ್ ಪ್ರವೇಶಿಸುತ್ತವೆ. ಅಕ್ಟೋಬರ್ 20ರಂದು ಢಾಕಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ” ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ರಿಸರ್ವ್ ಡೇ
ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಸಿಲ್ಹೆಟ್‌ನಲ್ಲಿ ಒಟ್ಟು 19 ದಿನಗಳಲ್ಲಿ 23 ಪಂದ್ಯಗಳು ನಡೆಯಲಿವೆ. ಇದರಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳು ಕೂಡಾ ಇರಲಿವೆ ಎಂದು ಐಸಿಸಿ ತಿಳಿಸಿದೆ.
ಎರಡು ಸ್ಥಾನಕ್ಕೆ ನಾಲ್ಕು ತಂಡಗಳ ಪೈಪೋಟಿ
ಸದ್ಯ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಅದರಲ್ಲಿ ಫೈನಲ್‌ಗೆ ಲಗ್ಗೆ ಹಾಕುವ ಅಗ್ರ ಎರಡು ತಂಡಗಳು ಮುಖ್ಯ ಪಂದ್ಯಾವಳಿಗೆ ಪ್ರವೇಶಿಸುತ್ತವೆ. ಈ ಎರಡು ಸ್ಥಾನಕ್ಕಾಗಿ ಸದ್ಯ ಐರ್ಲೆಂಡ್, ಯುಎಇ, ಶ್ರೀಲಂಕಾ ಮತ್ತು ಸ್ಕಾಟ್ಲೆಂಡ್ ತಂಡಗಳು ಕಾದಾಡಲಿವೆ. ಇಂದು ನಡೆಯುತ್ತಿರುವ ಮೊದಲ ಸೆಮಿಫೈನಲ್‌ನಲ್ಲಿ ಐರ್ಲೆಂಡ್ ತಂಡವ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ. ಯುಎಇ ತಂಡವು ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ಇಂದು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೇ 7ರಂದು ಫೈನಲ್ ಪಂದ್ಯ ನಡೆಯುತ್ತಿದೆ.