ಟಿ20 ಕ್ರಿಕೆಟ್ ಮೊದಲ ಪಂದ್ಯದಲ್ಲಿ ಹರಿಣಗಳನ್ನು ಸದೆ ಬಡಿದ ಭಾರತ; ಸಂಜು ಸ್ಯಾಮ್ಸನ್ ಶತಕದ ಸೊಬಗು, ವರುಣ್- ಬಿಷ್ಣೋಯ್ ಜೋಡಿ ಸ್ಪಿನ್ ಮೋಡಿ
Nov 09, 2024 01:08 AM IST
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭರ್ಜರಿ ಶತಕ ದಾಖಲಿಸಿ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್.
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಮೊದಲ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ತಂಡ ಭರ್ಜರಿ ಜಯಭೇರಿಯನ್ನು ಬಾರಿಸಿ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಡರ್ಬನ್( ದಕ್ಷಿಣ ಆಫ್ರಿಕಾ): ಭಾರತದ ತಂಡದ ಸಂಜು ಸಾಮ್ಸನ್ ಸೊಗಸಾದ ಶತಕ, ವರುಣ್ ಚಕ್ರವರ್ತಿ ಹಾಗೂ ರವಿಬಿಷ್ಣೋಯ್ ಅವರ ಸ್ಪಿನ್ ಮೋಡಿಗೆ ಆತಿಥೇಯ ದಕ್ಷಿಣ ಆಫ್ರಿಕಾ 61 ರನ್ ಗಳಿಂದ ಸೋಲು ಅನುಭವಿಸಿತು. ದಕ್ಷಿಣ ಆಫ್ರಿಕಾದ ಡರ್ಬನ್ ಕಿಂಗ್ಸ್ ಮೇಡ್‌ನಲ್ಲಿ ಶುಕ್ರವಾರ ನಡೆದ ಟಿ20 ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ನಡುವೆ ಪಂದ್ಯದಲ್ಲಿ ಭಾರತ ಸಾಂಘಿಕ ಹೋರಾಟದಿಂದ ಭಾರೀ ಜಯವನ್ನೇ ದಾಖಲಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ದಕ್ಷಿಣ ಆಫ್ರಿಕಾ ವಿಫಲತೆ ಕಂಡಿತು. ಇದರಿಂದ ಭಾರತದ ಅಬ್ಬರದ ಆಟದ ಮುಂದೆ ಹರಿಣಗಳ ಪ್ರಯತ್ನ ಫಲಿಸಲೇ ಇಲ್ಲ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪ್ರವಾಸಿ ಭಾರತ ಕಾಯ್ದುಕೊಂಡಿತು.
ಭಾರತ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 202 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ತಂಡವು 17. 5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು141 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಭಾರತದ ಬೌಲರ್‌ಗಳ ಅಬ್ಬರ
ಭಾರತ ನೀಡಿದ 203 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ನಾಯಕ ಐಡೆನ್ ಮಾರ್ಕರಮ್(8) ಅವರು ಬೇಗನೇ ಪೆವಿಲಿಯನ್‌ಗೆ ಮರಳಿದರು. 8 ರನ್ ಆಗುವಷ್ಟರಲ್ಲೇ ಆರಂಭಿಕ ಜೋಡಿಯನ್ನು ಮುರಿದರು ಆರ್ಷದೀಪ್ ಸಿಂಗ್. ನಂತರ ತ್ರಿಷ್ಟನ್ ಸ್ಟಬ್ಸ್(11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಉತ್ತಮವಾಗಿ ಆಡಿ ನಿರೀಕ್ಷೆ ಮೂಡಿಸಿದ್ದ ರಿಯಾನ್ ರೆಕೆಲ್ಟನ್( 21) ವರುಣ್ ಚಕ್ರವರ್ತಿ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಬಲ ಮುರಿದ ವರುಣ್, ಬಿಷ್ಣೋಯ್
ಆನಂತರ ಹೆನ್ರಿಚ್ ಕ್ಲಾಸೆನ್(25) ಕೊಂಚ ವಿಶ್ವಾಸ ಮೂಡಿಸಿದರು. ಇವರಿಗೆ ಡೇವಿಡ್ ಮಿಲ್ಲರ್(18) ಸಾಥ್ ನೀಡಿದರು. ಆದರೆ ಈ ಜೋಡಿಯನ್ನು ವರುಣ್ ಚಕ್ರವರ್ತಿ ಮುರಿದರು. ಅಲ್ಲದೇ ಮಿಲ್ಲರ್ ವಿಕೆಟ್ ಕಬಳಿಸಿ ಮಧ್ಯಮ ಕ್ರಮಾಂಕದಲ್ಲಿ ಹರಿಣಗಳ ಬಲವನ್ನೇ ಮುರಿದರು. ಆನಂತರ ಬಂದ ಪ್ಯಾಟ್ರಿಕ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಂಡಿಲೇ ಸಿಮೆಲೇನ್, ಮಾರ್ಕೋ ಜಾನ್ಸನ್ ಕೂಡ ನಿರ್ಗಮಿಸಿದರು. ಈ ಮೂರೂ ವಿಕೆಟ್‌ಗಳನ್ನು ಕಬಳಿಸಿದ್ದು ರವಿ ಬಿಷ್ಣೋಯ್. 93 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ದಕ್ಷಿಣ ಆಫ್ರಿಕಾ ಸೋಲಿನ ದವಡೆಗೆ ಸಿಲುಕಿತು. ನಂತರ ಬಂದವರಲ್ಲಿ ಕೋಟ್ಜೆ(22) ಕೊಂಚ ಪ್ರಯತ್ನಿಸಿದರೂ ಅನಗತ್ಯ ರನ್ ಗೆ ಓಡಿ ರನೌಟ್ ಆಗುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಆಗಲಿಲ್ಲ.
ಸಂಜು ಶತಕದ ಸೊಬಗು
ಇದಕ್ಕೂ ಮೊದಲು ಟಾಸ್ ಸೋತ ಭಾರತ ಬ್ಯಾಟಿಂಗ್‌ಗೆ ದೂಡಲ್ಪಟ್ಟಿತು. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮ ಜೋಡಿ ಇನ್ನಿಂಗ್ಸ್ ಆರಂಭಿಸಿತು ಹೆಚ್ಚು ಹೊತ್ತು ನಿಲ್ಲ. ಶರ್ಮ ಬೇಗನೇ ನಿರ್ಗಮಿಸಿದರು. ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತುಕೊಂಡ ಸಂಜು ಸ್ಯಾಮ್ಸನ್ ರನ್‌ಗಳ ಸುರಿಮಳೆಗೈದರು.
50 ಎಸೆತಗಳಲ್ಲಿ ಭರ್ಜರಿ ಶತಕವನ್ನು ದಾಖಲಿಸಿದರು. 7 ಬೌಂಡರಿ ಹಾಗೂ 10 ಸಿಕ್ಸರ್‌ಗಳ ಪ್ರದರ್ಶನ ಅದರಲ್ಲಿತ್ತು. ಹನ್ನೊಂದು ಓವರ್‌ಗಳಲ್ಲಿ ಮೊದಲ ನೂರು ರನ್ ಗಳಿಸಿದ ಭಾರತ ಉಳಿದ ನೂರು ರನ್ ಗಳನ್ನು ಒಂಬತ್ತು ಓವರ್‌ಗಳಲ್ಲಿಯೇ ಗಳಿಸಿತು.
ಇದರಲ್ಲಿ ಸಂಜು ಸ್ಯಾಮ್ಸನ್ ಬರೀ 47 ಎಸೆತಗಳಲ್ಲಿಯೇ ಶತಕ ದಾಖಲಿಸಿದರು ಸಂಜು. ಇದು ಅವರ ಟಿ20 ಪಂದ್ಯಗಳಲ್ಲಿ ಎರಡನೇ ಶತಕ. ಸಂಜುಗೆ ಪಂದ್ಯ ಪುರುಷೋತ್ತಮ ಗೌರವ ಲಭಿಸಿತು.
ಜತೆ ಗೂಡಿದ ನಾಯಕ
ಇವರೊಟ್ಟಿಗೆ ನಾಯಕ ಸೂರ್ಯಕುಮಾರ್ ಯಾದವ್(21), ತಿಲಕ್ ವರ್ಮ(33) ಎರಡು ಹಾಗೂ ಮೂರನೇ ವಿಕೆಟ್‌ಗೆ ಸಾಥ್ ನೀಡಿ ಭಾರತ ಉತ್ತಮ ಮೊತ್ತ ಪೇರಿಸಲು ನೆರವಾದರು.
ನಂತರ ರಿಂಕು ಸಿಂಗ್, ಅಕ್ಸರ್ ಪಟೇಲ್ ಅವರೊಂದಿಗೆ ಭಾರತ 200 ರನ್‌ಗಳ ಗಡಿ ದಾಟಿತು. 20 ಓವರ್‌ಗಳಲ್ಲಿ ಭಾರತ ತಂಡ ಎಂಟು ವಿಕೆಟ್‌ಗೆ 202 ರನ್ ಗಳಿಸಲು ಶಕ್ತವಾಯಿತು.
ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜೆ ಅವರು ಮೂರು ವಿಕೆಟ್ ಪಡೆದರೆ, ಮಾರ್ಕೋ ಜಾನ್ಸೆನ್, ಕೇಶವ್ ಮಹರಾಜ್, ಪ್ಯಾಟ್ರಿಕ್ ಕ್ರುಗೆರ್, ಪೀಟರ್ ತಲಾ ಒಂದು ವಿಕೆಟ್ ಪಡೆದರು.